ಕೋವಿಡ್ ಎರಡನೇ ಅಲೆಯಿಂದಾಗಿ ರಾಜ್ಯದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿನ ವಕೀಲರ ಸಮುದಾಯ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಹೀಗಾಗಿ ಸೋಂಕಿಗೆ ತುತ್ತಾದ ವಕೀಲರಿಗೆ ಒಂದು ಲಕ್ಷ ರೂಪಾಯಿ ಪರಿಹಾರ ನೀಡುವಂತೆ ರಾಜ್ಯ ವಕೀಲರ ಪರಿಷತ್‌ಗೆ (ಕೆಎಸ್‌ಬಿಸಿ) ಬೆಂಗಳೂರು ವಕೀಲರ ಸಂಘದ (ಎಎಬಿ) ಅಧ್ಯಕ್ಷ ಎ ಪಿ ರಂಗನಾಥ್ ಮನವಿ ಮಾಡಿದ್ದಾರೆ.
ಕಷ್ಟದ ಸಂದರ್ಭದಲ್ಲಿ ವಕೀಲರ ನೆರವಿಗೆ ನೀಲ್ಲಬೇಕಾಗಿರುವುದು ಕೆಎಸ್‌ಬಿಸಿ ಕರ್ತವ್ಯವಾಗಿದೆ. ಸಾಕಷ್ಟು ವಕೀಲರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಕೆಲವರು ಆಸ್ಪತ್ರೆಯ ವೆಚ್ಚ ಭರಿಸಲಾಗದೆ ತೀವ್ರ ಸಮಸ್ಯೆಗೆ ಸಿಲುಕಿಕೊಂಡಿದ್ದಾರೆ. ಹೀಗಾಗಿ ಅವರ ನೆರವಾಗುವಂತೆ ಎಎಬಿ ಮನವಿ ಮಾಡಿದೆ.
ಐವರನ್ನು ಕೊಲೆ ಮಾಡಿದ್ದ ಆರು ಮಂದಿ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿದ್ದ ಗುಜರಾತ್ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್ ಮಂಗಳವಾರ ಬದಿಗೆ ಸರಿಸಿದೆ. "ಆಪಾದಿತ ಅಪರಾಧಗಳ ಸ್ವರೂಪ ಮತ್ತು ಗುರುತ್ವವನ್ನು ಹಾಗೂ ಒಂದೊಮ್ಮೆ ಅಪರಾಧ ಸಾಬೀತಾದರೆ ವಿಧಿಸಬಹುದಾದ ಶಿಕ್ಷೆಯ ತೀವ್ರತೆಯನ್ನು ಹೈಕೋರ್ಟ್ ಮರೆತಿರುವಂತಿದೆ, ಮುಗ್ಧತೆಯಿಂದ ಕೂಡಿರುವಂತಿದೆ" ಎಂದು ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್ ಮತ್ತು ಎಂ ಆರ್ ಶಾ ಅವರಿದ್ದ ಪೀಠವು ಹೇಳಿದೆ.
“ಸಿಆರ್‌ಪಿಸಿಯ ಸೆಕ್ಷನ್ 439ರ ಅಡಿಯಲ್ಲಿ ಜಾಮೀನು ನೀಡುವುದು ನ್ಯಾಯಾಂಗದ ವಿವೇಚನೆಗೆ ಬಿಟ್ಟ ವಿಚಾರವಾಗಿದೆ. ಜಾಮೀನು ನೀಡುವುದು ಅಥವಾ ನಿರಾಕರಿಸುವುದು ನ್ಯಾಯಾಂಗದ ವಿವೇಚನೆಯಾಗಿದ್ದು, ಜಾಮೀನು ನೀಡುವಾಗ ಕಾರಣಗಳನ್ನು ದಾಖಲಿಸುವುದು ನ್ಯಾಯಾಲಯದ ಮಹತ್ವದ ಕರ್ತವ್ಯವಾಗಿದೆ. ಅದು ನ್ಯಾಯಾಲಯಕ್ಕೆ ವಹಿಸಿಕೊಟ್ಟಿರುವ ವಿವೇಚನೆಯನ್ನು ನ್ಯಾಯಯುತವಾಗಿ ನಿರ್ವಹಿಸುತ್ತದೆ ಎಂಬುದನ್ನು ಖಾತರಿಗೊಳಿಸುತ್ತದೆ” ಎಂದು ತೀರ್ಪಿನಲ್ಲಿ ಹೇಳಲಾಗಿದೆ.
ಏಷ್ಯಾಡ್ ಸರ್ಕಸ್ ಭಾಗವಾಗಿದ್ದ ನೀರಾನೆ ಚೋಟುವಿನ ಜೀವನ ಪೂರ್ತಿ ಜವಾಬ್ದಾರಿಯನ್ನು ಈಚೆಗೆ ದೆಹಲಿ ಹೈಕೋರ್ಟ್ ರಾಧೆ ಕೃಷ್ಣ ದೇವಾಲಯದ ಆನೆ ಕಲ್ಯಾಣ ಟ್ರಸ್ಟ್‌ಗೆ ವರ್ಗಾಯಿಸಿದೆ.
“ಚೋಟು ಎಂದೇ ಪ್ರಸಿದ್ಧಿಯಾದ ನೀರಾನೆ ಪ್ರಯಾಣವು ಅಂತಿಮವಾಗಿ ಸುಖಕರವಾದ ದಿಕ್ಕಿಗೆ ಸಾಗಿದೆ” ಎಂದು ನ್ಯಾಯಮೂರ್ತಿ ಪ್ರತಿಭಾ ಎಂ ಸಿಂಗ್ ಅವರಿದ್ದ ಏಕಸದಸ್ಯ ಪೀಠವು ಹೇಳಿದೆ. ಏಷ್ಯಾಡ್ ಸರ್ಕಸ್ ಪರವಾನಗಿಯನ್ನು ವಜಾಗೊಳಿಸಿದ್ದರೂ ಕಾನೂನುಬಾಹಿರವಾಗಿ ಚೋಟುವನ್ನು ಇಟ್ಟುಕೊಳ್ಳಲಾಗಿದೆ. ತಕ್ಷಣ ಅದನ್ನು ವಶಕ್ಕೆ ಪಡೆಯಬೇಕು ಎಂದು ಹೈಕೋರ್ಟ್‌ಗೆ ಸಲ್ಲಿಸಿದ್ದ ಮನವಿಯಲ್ಲಿ ಪೇಟಾ ಹೇಳಿತ್ತು.
ಇದೇ ಏಪ್ರಿಲ್ 22ರಿಂದ ಸುಪ್ರೀಂ ಕೋರ್ಟ್ ತುರ್ತು ಪ್ರಕರಣಗಳ ವಿಚಾರಣೆ ಮಾತ್ರ ನಡೆಸಲಿದೆ. ಈ ಸಂಬಂಧ ಸುಪ್ರೀಂ ಕೋರ್ಟ್ ಸುತ್ತೋಲೆ ಹೊರಡಿಸಿದ್ದು, ಸಂಬಂಧಪಟ್ಟ ವಕೀಲರು ಅಥವಾ ಪಕ್ಷಕಾರರು ದಾಖಲೆಯಲ್ಲಿ ಪ್ರಕರಣದ ತೀವ್ರತೆ ಕುರಿತು ಒಂದು ಪುಟದ ಟಿಪ್ಪಣಿ ಸಲ್ಲಿಸಬೇಕು ಎಂದು ಹೇಳಿದೆ.
ಖಾಲಿ ಇರುವ ಪೀಠ ಮತ್ತು ಪ್ರಕರಣದ ಗಂಭೀರತೆಗೆ ಸಂಬಂಧಿಸಿದಂತೆ ಸಕ್ಷಮ ಅಧಿಕಾರಿಯು ಒಪ್ಪಿಗೆ ನೀಡಿದ ಬಳಿಕ ಮಾರನೇಯ ದಿನ ಪ್ರಕರಣವನ್ನು ವಿಚಾರಣೆಗೆ ಎತ್ತಿಕೊಳ್ಳಲಾಗುವುದು. ಹೇಬಿಯಸ್ ಕಾರ್ಪಸ್, ನಿರೀಕ್ಷಣಾ ಜಾಮೀನು ಅಥವಾ ಮರಣದಂಡನೆಗೆ ಸಂಬಂಧಿಸಿದಂತಹ ಪ್ರಕರಣಗಳ ತುರ್ತು ವಿಚಾರಣೆಗೆ ಒಳಪಡಿಸುವಂತಹವು ಎಂದು ಪೀಠ ಹೇಳಿದೆ. ಸಾಮಾನ್ಯ ಪೀಠಗಳು ಮತ್ತು ನ್ಯಾಯಾಲಯದ ರಿಜಿಸ್ಟ್ರಾರ್ ಅವರು ಏಪ್ರಿಲ್ 22ರಿಂದ ಮುಂದಿನ ಆದೇಶದವರೆಗೆ ಕಾರ್ಯನಿರ್ವಹಿಸುವುದಿಲ್ಲ. ಈ ಸಂಬಂಧ ಪ್ರತ್ಯೇಕ ಆದೇಶ ಹೊರಡಿಸಲಾಗುವುದು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.