ವ್ಯಂಗ್ಯ ಚಿತ್ರಕಾರ್ತಿ ರಚಿತಾ ತನೇಜಾ ವಿರುದ್ಧ ಸುಪ್ರೀಂ ಕೋರ್ಟ್ ಆರಂಭಿಸಿರುವ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಆಕೆಯನ್ನು ಮಾಜಿ ಅಟಾರ್ನಿ ಜನರಲ್ ಹಾಗೂ ಹಿರಿಯ ವಕೀಲ ಮುಕುಲ್ ರೋಹಟ್ಗಿ ಪ್ರತಿನಿಧಿಸಿದ್ದಾರೆ. ನ್ಯಾಯಾಲಯವು ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳಬಾರದಿತ್ತು ಎಂದ ರೋಹಟ್ಗಿ ಅವರು “ನ್ಯಾಯಾಲಯವು ಇದನ್ನು ಗಂಭೀರವಾಗಿ ಏಕೆ ಪರಿಗಣಿಸಿದೆ? ನ್ಯಾಯಾಲಯದ ತಳಹದಿ ಭದ್ರವಾಗಿದೆ. ನ್ಯಾಯಾಲಯದ ಟೀಕೆಯು ನಿಂದನೆಯಾಗದು. ಆಕೆ (ತನೇಜಾ) 25 ವರ್ಷದ ಯುವತಿ” ಎಂದರು.
ದೀಪಾವಳಿ ಹಬ್ಬದ ರಜಾಕಾಲದಲ್ಲಿ ಪತ್ರಕರ್ತರ (ಅರ್ನಾಬ್ ಗೋಸ್ವಾಮಿ) ವಿರುದ್ಧದ ಪ್ರಕರಣದ ವಿಚಾರಣೆ ನಡೆಸಿದ್ದಕ್ಕೆ ವಿಭಿನ್ನವಾದ ಸಾರ್ವಜನಿಕ ಅಭಿಪ್ರಾಯ ವ್ಯಕ್ತವಾಗಿದೆ ಎಂದು ರೋಹಟ್ಗಿ ಹೇಳಿದರು. ವಿಶೇಷವೆಂದರೆ ಗೋಸ್ವಾಮಿ ಅವರನ್ನು ರೋಹಟ್ಗಿ ಪ್ರತಿನಿಧಿಸಿದ್ದರು. ನ್ಯಾಯಾಲಯದ ತಳಹದಿ ಭದ್ರವಾಗಿದೆ ಎಂಬುದನ್ನು ಒಪ್ಪಿದ್ದರೂ ನ್ಯಾಯಾಲಯದ ವಿರುದ್ಧ ಪದೇಪದೇ ಆರೋಪ ಮಾಡಲಾಗುತ್ತಿದೆ ಎಂದು ನ್ಯಾಯಮೂರ್ತಿ ಅಶೋಕ್ ಭೂಷಣ್ ಹೇಳಿದರು. “ನೀವು (ತನೇಜಾ) ಪ್ರತಿಕ್ರಿಯೆ ದಾಖಲಿಸಿ. ನೀವು ಪ್ರತಿಕ್ರಿಯೆ ಸಲ್ಲಿಸದೇ ಇದ್ದರೇ ನಾವು ಮುಂದುವರಿಯುತ್ತೇವೆ. ನೀವು ಪ್ರತಿಕ್ರಿಯೆ ಸಲ್ಲಿಸುವುದು ಉತ್ತಮ” ಎಂದು ನ್ಯಾ ಎಂ ಶಾ ಸೂಚಿಸಿದರು. ಇದಕ್ಕೆ ರೋಹಟ್ಗಿ ಒಪ್ಪಿದ ಹಿನ್ನೆಲೆಯಲ್ಲಿ ಪ್ರಕರಣವನ್ನೂ ಮೂರು ವಾರಗಳಿಗೆ ಮುಂದೂಡಲಾಯಿತು.
ಇಪ್ಪತ್ತರ ಹರೆಯದ ಯುವಕನು ಹದಿಹರೆಯದ ಯುವತಿಯ ಜೊತೆ ನಾಪತ್ತೆಯಾಗಿ ವಿವಾಹವಾಗಿದ್ದನ್ನು ಪ್ರಶ್ನಿಸಿ ಯುವಕನ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ಕಾಯಿದೆ (ಪೋಕ್ಸೊ) ಅಡಿ ದಾಖಲಿಸಲಾಗಿದ್ದ ಪ್ರಕರಣವನ್ನು ಈಚೆಗೆ ಮದ್ರಾಸ್ ಹೈಕೋರ್ಟ್ ವಜಾಗೊಳಿಸಿದ್ದು, ಪ್ರಣಯ ಸಂಬಂಧ ಹೊಂದಿರುವ ಹದಿಹರೆಯದವರನ್ನು ಪೋಕ್ಸೊ ವ್ಯಾಪ್ತಿಗೆ ತರುವ ಉದ್ದೇಶವನ್ನು ಕಾಯಿದೆ ಹೊಂದಿಲ್ಲ ಎಂದು ಹೇಳಿದೆ. ಸದರಿ ಪ್ರಕರಣದಲ್ಲಿ ಆರೋಪಿಯ ವಿರುದ್ಧ ಪೋಕ್ಸೊ ಕಾಯಿದೆ ಮತ್ತು ಬಾಲ್ಯ ವಿವಾಹ ನಿಷೇಧ ಕಾಯಿದೆ -2006 ಅಡಿ ದೂರು ದಾಖಲಿಸಲಾಗಿತ್ತು. ಸಂತ್ರಸ್ತ ಯುವತಿ ಮತ್ತು ವಾಸ್ತವದಲ್ಲಿ ದೂರುದಾರರು ಜಂಟಿಯಾಗಿ ಅಪರಾಧ ದಂಡ ಪ್ರಕ್ರಿಯಾ ಸಂಹಿತೆಯ (ಸಿಆರ್‌ಪಿಸಿ) ಸೆಕ್ಷನ್ 482ರ ಅಡಿ ಸಲ್ಲಿಸಿದ್ದ ದಾವೆಯನ್ನು ನ್ಯಾಯಮೂರ್ತಿ ಎನ್ ಆನಂದ್ ವೆಂಕಟೇಶ್ ಅವರಿದ್ದ ಪೀಠವು ವಜಾಗೊಳಿಸಿತು. ಪ್ರಣಯ ಸಂಬಂಧದಲ್ಲಿರುವ ಹದಿಹರೆಯದವರು ಮತ್ತು ಅಪ್ರಾಪ್ತರ ಕುಟುಂಬಸ್ಥರು ಪೋಕ್ಸೊ ಕಾಯಿದೆ ಅಡಿ ಹಲವು ಪ್ರಕರಣಗಳನ್ನು ದಾಖಲಿಸುತ್ತಿದ್ದಾರೆ ಎಂದು ನ್ಯಾ. ವೆಂಕಟೇಶ್ ಹೇಳಿದ್ದಾರೆ.
ಅಪ್ರಾಪ್ತೆಯ ಜೊತೆ ಪ್ರಣಯ ಸಂಬಂಧ ಬೆಳೆಸಿದ ಹದಿಹರೆಯದ ಯುವಕನನ್ನು ಅಪರಾಧಿ ಎಂದು ಶಿಕ್ಷಿಸುವುದು ಪೋಕ್ಸೊ ಕಾಯಿದೆಯ ಉದ್ದೇಶವಲ್ಲ ಎಂದು ಪೀಠ ಹೇಳಿದೆ. ಪೊಕ್ಸೊ ಕಾಯಿದೆ ಅಡಿ ಅಪರಾಧಗಳು ಗಂಭೀರ ಸ್ವರೂಪದ್ದಾಗಿವೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ಕೆಲವರು ಕಾನೂನನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ನ್ಯಾ. ವೆಂಕಟೇಶ್ ಹೇಳಿದ್ದಾರೆ. ಪೋಕ್ಸೊ ಕಾಯಿದೆ ಅಡಿ ಕ್ರಿಮಿನಲ್ ಪ್ರಕರಣ ದಾಖಲಿಸಿದ ತಕ್ಷಣ ಯುವಕನ್ನು ಬಂಧಿಸಲಾಗುತ್ತದೆ. ಆತನ ಯೌವ್ವನದ ಬದುಕು ನಾಶವಾಗುತ್ತದೆ ಎಂದು ಪೀಠ ಹೇಳಿದೆ. ಪ್ರಸಕ್ತ ಪ್ರಕರಣದಲ್ಲಿ ಯುವಕನ ಜೊತೆ ನಾಪತ್ತೆಯಾಗಿದ್ದ ಅಪ್ರಾಪ್ತೆಯು ತಾವಿಬ್ಬರೂ ಒಬ್ಬರನ್ನೊಬ್ಬರು ಪ್ರೀತಿಸುತ್ತಿರುವುದಾಗಿ ಸಂತ್ರಸ್ತ ಯುವತಿಯು ಹೇಳಿದ್ದನ್ನು ನ್ಯಾಯಾಲಯವು ಪರಿಗಣಿಸಿತು. ಇದೇ ವೇಳೆ ಎರಡೂ ಕುಟುಂಬದ ಹಿರಿಯರು ಕ್ರಿಮಿನಲ್ ಪ್ರಕರಣವನ್ನು ಮುಂದುವರೆಸಲು ಇಚ್ಛಿಸದ ಕಾರಣ ಪ್ರಕರಣವನ್ನು ಮುಂದುವರೆಸುವುದರಿಂದ ಯಾವುದೇ ಉತ್ತಮ ಉದ್ದೇಶವು ಈಡೇರದು ಎಂದ ಪೀಠವು ಪ್ರಕರಣವನ್ನು ವಜಾಗೊಳಿಸಿತು.
ಮಧ್ಯಪ್ರದೇಶ ಹೈಕೋರ್ಟ್‌ನ ನ್ಯಾಯಮೂರ್ತಿ ಸುನಿಲ್ ಕುಮಾರ್ ಅವಸ್ಥಿ ಅವರು ಜನವರಿ 2 ರಿಂದ ಪೂರ್ವಾನ್ವಯವಾಗುವಂತೆ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ. ಸಂವಿಧಾನದ 217(1)(ಎ) ವಿಧಿಯ ಅನ್ವಯ ನ್ಯಾಯಮೂರ್ತಿ ಅವಸ್ಥಿ ಅವರು ರಾಜೀನಾಮೆ ನೀಡಿದ್ದಾರೆ ಎಂದು ಕಾನೂನು ಇಲಾಖೆಯು ಅಧಿಸೂಚನೆ ಹೊರಡಿಸಿದೆ.
1985ರಲ್ಲಿ ನ್ಯಾಯಮೂರ್ತಿ ಅವಸ್ಥಿ ಅವರು ಎರಡನೇ ದರ್ಜೆಯ ಸಿವಿಲ್ ನ್ಯಾಯಮೂರ್ತಿಯಾಗಿ ನ್ಯಾಯಾಂಗ ಸೇವೆ ಆರಂಭಿಸಿದ್ದು, ಹಲವು ಕಡೆ ನ್ಯಾಯಿಕ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. 2016ರಲ್ಲಿ ಹೈಕೋರ್ಟ್ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕವಾದ ಅವರನ್ನು 2018ರ ಮಾರ್ಚ್‌ನಲ್ಲಿ ಕಾಯಂ ನ್ಯಾಯಮೂರ್ತಿಯಾಗಿ ನೇಮಿಸಲಾಗಿತ್ತು.