ಯುಎಪಿಎ ಕಾಯಿದೆಯ ಸೆಕ್ಷನ್ 15 (1) (iiiಎ) ಅಡಿ ಚಿನ್ನ ಕಳ್ಳಸಾಗಣೆ ಎಂಬುದು ʼಭಯೋತ್ಪದನಾ ಚಟುವಟಿಕೆʼ ಎನಿಸಿಕೊಳ್ಳುತ್ತದೆಯೇ ಎಂಬ ಬಗ್ಗೆ ಸುಪ್ರೀಂಕೋರ್ಟ್ ಪರಿಶೀಲನೆ ನಡೆಸಲು ನಿರ್ಧರಿಸಿದೆ. ಸೆಕ್ಷನ್ 15 (1) (iii a) ಪ್ರಕಾರ, ಭಯೋತ್ಪಾದನಾ ಕೃತ್ಯ ಎಂಬುದು ದೇಶದ ವಿತ್ತೀಯ ಸ್ಥಿರತೆಗೆ ಯಾವುದೇ ಹಾನಿ ಉಂಟುಮಾಡುವ ಅಥವಾ ಅಂತಹ ಯಾವುದೇ ವಿಧಾನದಡಿ ಕಾಗದದ ಕರೆನ್ಸಿ, ನಾಣ್ಯ ಅಥವಾ ಇನ್ನಾವುದೇ ವಸ್ತುಗಳ ಉತ್ಪಾದನೆ ಅಥವಾ ಕಳ್ಳಸಾಗಣೆ ಅಥವಾ ಚಲಾವಣೆಯ ಮೂಲಕ ದೇಶದ ಭದ್ರತೆ ಮತ್ತು ಸಮಗ್ರತೆಗೆ ಬೆದರಿಕೆಯೊಡ್ಡುವ ಯಾವುದೇ ಕ್ರಿಯೆಯನ್ನು ಒಳಗೊಂಡಿದೆ.
ಚಿನ್ನಕಳ್ಳಸಾಗಣೆ ಆರೋಪಿ ಮೊಹಮದ್ ಅಸ್ಲಂ ಎಂಬುವವರ ವಿರುದ್ಧ ಯುಎಪಿಎ ಕಾಯಿದೆಯಡಿ ಎಫ್‌ಐಆರ್ ದಾಖಲಾಗಿತ್ತು. ಯುಎಪಿಎಯಡಿ ಎಫ್‌ಐಆರ್ ದಾಖಲಿಸಿರುವುದನ್ನು ಪ್ರಶ್ನಿಸಿ ಅವರು ರಾಜಸ್ತಾನ ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಅಸ್ಲಂ ಅವರ ಮನವಿಯನ್ನು ಹೈಕೋರ್ಟ್ ಪುರಸ್ಕರಿಸಿರಲಿಲ್ಲ. ಬಳಿಕ ಅವರು ಸುಪ್ರೀಂಕೋರ್ಟ್ ಕದ ತಟ್ಟಿದ್ದರು. ಈ ಕುರಿತು ವಿಚಾರಣೆ ನಡೆಸಿದ ಸರ್ವೋಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳಾದ ರೋಹಿಂಟನ್ ಫಾಲಿ ನಾರಿಮನ್ ಮತ್ತು ಬಿ ಆರ್ ಗವಾಯಿ ಅವರಿದ್ದ ವಿಭಾಗೀಯ ಪೀಠ ಸಂಬಂಧಪಟ್ಟವರಿಗೆ ನೋಟಿಸ್ ನೀಡಿದೆ.
ಕೊಲ್ಕತ್ತಾ- ನವದೆಹಲಿ ನಡುವೆ ಸಂಚರಿಸುತ್ತಿದ್ದ ವಿಮಾನದಲ್ಲಿ ಸಹ ಪ್ರಯಾಣಿಕರು ಮುಖಗವಸು ಧರಿಸಲು ನಿರಾಕರಿಸಿರುವುದು ಮತ್ತು ಡಿಜಿಸಿಎಯ ನಿರ್ಲಕ್ಷ್ಯದ ವಿರುದ್ಧ ದೆಹಲಿ ಹೈಕೋರ್ಟ್ ನ್ಯಾಯಮೂರ್ತಿಯೊಬ್ಬರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ವಿಮಾನಯಾನದ ವೇಲೆ ನ್ಯಾ. ಹರಿ ಶಂಕರ್ ಅವರು ಪದೇ ಪದೇ ವಿನಂತಿಸಿದರೂ ಆರೋಪಿ ಪ್ರಯಾಣಿಕರು ಸೂಕ್ತ ರೀತಿಯಲ್ಲಿ ಮುಖಗವಸು ಧರಿಸಲು ನಿರಾಕರಿಸಿದ್ದರು.
"ಎಲ್ಲಾ ಪ್ರಯಾಣಿಕರು ಮುಖಗವಸುಗಳನ್ನು ಧರಿಸಿದ್ದರೂ, ಅನೇಕರು ತಮ್ಮ ಗಲ್ಲದ ಕೆಳಗೆ ಅವುಗಳನ್ನು ಇರಿಸಿಕೊಂಡಿದ್ದು ಮತ್ತು ತಮ್ಮ ಮುಖಗವಸು ಸರಿಯಾಗಿ ಧರಿಸಲು ಮೊಂಡು ಹಿಂಜರಿಕೆ ಪ್ರದರ್ಶಿಸುತ್ತಿದ್ದಾರೆ" ಎಂದು ನ್ಯಾಯಾಲಯ ತಿಳಿಸಿದೆ. ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯದ ಜಾಲತಾಣದಲ್ಲಿ ನ್ಯಾಯಾಲಯ ನೀಡಿದ್ದ ನೂತನ ಮಾರ್ಗಸೂಚಿಗಳನ್ನು ವಿವರಿಸಿಲ್ಲ ಎಂದು ಕೂಡ ಪೀಠ ಅಸಮಾಧಾನ ವ್ಯಕ್ತಪಡಿಸಿದೆ. ಪ್ರಕರಣದ ಮುಂದಿನ ವಿಚಾರಣೆ ಮಾರ್ಚ್ 17ರಂದು ನಡೆಯಲಿದೆ.
ಜಾರಿ ನಿರ್ದೇಶನಾಲಯ ಕೆಲ ದಿನಗಳ ಹಿಂದೆ ನೀಡಿದ್ದ ಸಮನ್ಸ್ ರದ್ದುಗೊಳಿಸುವಂತೆ ಕೋರಿ ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೆ ಮತ್ತು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿಅವರು ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದಾರೆ. 2002ರ ಅಕ್ರಮ ಹಣ ವರ್ಗಾವಣೆ ಕಾಯಿದೆಯ (ಪಿಎಂಎಲ್‌ಎ)ಸೆಕ್ಷನ್ 50 ರ ಸಾಂವಿಧಾನಿಕ ಸಿಂಧುತ್ವವನ್ನು ಕೂಡ ಅವರು ಪ್ರಶ್ನಿಸಿದ್ದಾರೆ. ಯಾವುದೇ ವ್ಯಕ್ತಿಯಿಂದ ಸಾಕ್ಷ್ಯ ಅಥವಾ ದಾಖಲೆ ಪಡೆಯಲು ಕರೆಸಿಕೊಳ್ಳಲು ಪಿಎಂಎಲ್‌ಎಯ ಸೆಕ್ಷನ್ 50 ಇಡಿ ಅಧಿಕಾರಿಗಳಿಗೆ ಅಧಿಕಾರ ನೀಡುತ್ತದೆ.
ಯಾವುದೇ ವ್ಯಕ್ತಿಯಿಂದ ಸಾಕ್ಷ್ಯ ಅಥವಾ ದಾಖಲೆ ಪಡೆಯಲು ಕರೆಸಿಕೊಳ್ಳಲು ಪಿಎಂಎಲ್‌ಎಯ ಸೆಕ್ಷನ್ 50 ಇಡಿ ಅಧಿಕಾರಿಗಳಿಗೆ ಅಧಿಕಾರ ನೀಡುತ್ತದೆ. ಇತ್ತ “ತನ್ನನ್ನು ತನಿಖೆ ಒಳಗೊಂಡಿಲ್ಲ ಅಥವಾ ಯಾವುದೇ ನಿರ್ದಿಷ್ಟ ಅಪರಾಧದಲ್ಲಿ ತಾನು ಆರೋಪಿಯಲ್ಲ. ಅಲ್ಲದೆ ತಮಗೆ ಸಮ್ಸನ್ಸ್ ನೀಡಿರುವುದು ಆರೋಪಿ ಎಂದೋ ಅಥವಾ ಸಾಕ್ಷಿಯೆಂದೋ ಎಂಬುದನ್ನು ಕೂಡ ತಿಳಿಸಿಲ್ಲ” ಎಂದು ಮುಫ್ತಿ ವಾದಿಸಿದ್ದಾರೆ.
ತಮಗೆ ಪಾಸ್‌ಪೋರ್ಟ್ ಒದಗಿಸಲು ನಿರ್ದೇಶಿಸುವಂತೆ ಕೋರಿ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮತ್ತು ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಅವರು ಸಲ್ಲಿಸಿದ್ದ ಅರ್ಜಿಯ ಸಂಬಂಧ ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್ ಕೇಂದ್ರ ಸರ್ಕಾರ ಮತ್ತು ಅಲ್ಲಿನ ಕೇಂದ್ರಾಡಳಿತ ಪ್ರದೇಶದ ಆಡಳಿತಾರೂಢರಿಗೆ ಪ್ರತಿಕ್ರಿಯೆ ನೀಡುವಂತೆ ಸೋಮವಾರ ಸೂಚಿಸಿದೆ.
ಮುಫ್ತಿಯವರ ಪಾಸ್‌ಪೋರ್ಟ್ 2019ರ ಮೇ 31ರಂದು ಮುಕ್ತಾಯಗೊಂಡಿದ್ದು, 2020ರ ಡಿಸೆಂಬರ್‌ನಲ್ಲಿ ಪಾಸ್‌ಪೋರ್ಟ್ ನವೀಕರಣಕ್ಕಾಗಿ ಅರ್ಜಿ ಸಲ್ಲಿಸಿದ್ದರು ಆದರೆ ಈವರೆಗೂ ಪಾಸ್‌ಪೋರ್ಟ್ ಒದಗಿಸಿರಲಿಲ್ಲ. ನಿಗದಿತ ಗಡುವಿನೊಳಗೆ ತನ್ನ ಪಾಸ್‌ಪೋರ್ಟ್ ಅರ್ಜಿಯ ಪೊಲೀಸ್ ಪರಿಶೀಲನೆ ನಡೆಸಲು ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಅರ್ಜಿಯಲ್ಲಿ ಆರೋಪಿಸಿದ್ದರು. ನ್ಯಾಯಮೂರ್ತಿ ಅಲಿ ಮೊಹಮ್ಮದ್ ಮ್ಯಾಗ್ರೆ ಅವರಿದ್ದ ಏಕಸದಸ್ಯ ಪೀಠ (ಮುಫ್ತಿ ವಿರುದ್ಧ) ರಿಟ್ ಅರ್ಜಿ ಇರುವುದರಿಂದ ಪೊಲೀಸ್ ಪರಿಶೀಲನೆಗೆ ಅಡ್ಡಿಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಪ್ರಕರಣದ ಮುಂದಿನ ವಿಚಾರಣೆ ಮಾರ್ಚ್ 23ಕ್ಕೆ ನಿಗದಿಯಾಗಿದೆ.
ನ್ಯಾಯವಾದಿಗಳ ಮೇಲೆ ಹಲ್ಲೆ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಕೀಲರ ರಕ್ಷಣಾ ಕಾಯಿದೆಯನ್ನು ಕೂಡಲೇ ಜಾರಿಗೆ ತರುವಂತೆ ಒತ್ತಾಯಿಸಿ ಬಳ್ಳಾರಿಯಲ್ಲಿ ವಕೀಲ ಸಮುದಾಯ ಬೃಹತ್ ಪ್ರತಿಭಟನೆ ನಡೆಸಿತು. ರಾಜ್ಯದ ಹೊಸಪೇಟೆಯಲ್ಲಿ ವಕೀಲರೊಬ್ಬರ ಕೊಲೆ, ತೆಲಂಗಾಣದ ವಕೀಲ ದಂಪತಿ ಹತ್ಯೆ ಸೇರಿದಂತೆ ದೇಶದ ವಿವಿಧೆಡೆ ಇತ್ತೀಚೆಗೆ ನಡೆದ ದಾಳಿಗಳ ಹಿನ್ನೆಲೆಯಲ್ಲಿ ವಕೀಲರಿಗೆ ರಕ್ಷಣೆ ಒದಗಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಹಿರಿಯ ವಕೀಲ ಕೆ ಕೋಟೇಶ್ವರ ರಾವ್ ಅವರು “ಕೆಎಸ್‌ಬಿಸಿ ವತಿಯಿಂದ ಕಳೆದ ವರ್ಷವೇ ಕಾಯಿದೆಯ ಕರಡನ್ನು ಸರ್ಕಾರಕ್ಕೆ ಸಲ್ಲಿಸಲಾಗಿದ್ದರೂ ಇದುವರೆಗೆ ಯಾವುದೇ ಕ್ರಮಕೈಗೊಂಡಿಲ್ಲ. ಸರ್ಕಾರದ ಧೋರಣೆ ಖಂಡನೀಯ” ಎಂದರು. ಜಿಲ್ಲಾ ನ್ಯಾಯಾಲಯದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಮೆರವಣಿಗೆ ನಡೆಸಿದ ವಕೀಲರು ಬಳಿಕ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಿದರು.