ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು |16-4-2021

>> ವಾಟ್ಸಾಪ್‌, ಈಮೇಲ್‌, ಫ್ಯಾಕ್ಸ್‌ ಮೂಲಕ ನೋಟಿಸ್‌, ಸಮನ್ಸ್‌ಗೆ ಅನುಮತಿ >> ಜಾರಿ ನಿರ್ದೇಶನಾಲಯದ ಅಧಿಕಾರಿಗಳ ವಿರುದ್ಧದ ಎಫ್ಐಆರ್ ರದ್ದು >> ಸಿಆರ್‌ಪಿಸಿ ಸೆಕ್ಷನ್‌ 138ರ ಪ್ರಕ್ರಿಯೆಗೆ ಸೆಕ್ಷನ್‌ 258 ಅನ್ವಯಿಸದು ಎಂದ ಸಾಂವಿಧಾನಿಕ ಪೀಠ
ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು |16-4-2021

ವಾಟ್ಸಾಪ್‌, ಈಮೇಲ್‌, ಫ್ಯಾಕ್ಸ್‌ ಮೂಲಕ ನೋಟಿಸ್‌, ಸಮನ್ಸ್‌ ರವಾನಿಸಲು ದೆಹಲಿ ಹೈಕೋರ್ಟ್‌ ಅಸ್ತು

ಕೋವಿಡ್‌ ಸಂಖ್ಯೆ ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ದೆಹಲಿ ಹೈಕೋರ್ಟ್‌ ನೋಟಿಸ್‌/ಸಮನ್ಸ್‌ಗಳನ್ನು ಈಮೇಲ್‌, ಫ್ಯಾಕ್ಸ್‌ ಅಥವಾ ವಾಟ್ಸಾಪ್‌ ಮೂಲಕ ಕಳುಹಿಸಲು ಅನುಮತಿಸಿದೆ. ನ್ಯಾಯಾಲಯದ ವಿಶೇಷ ಆದೇಶಗಳನ್ನು ಹೊರತುಪಡಿಸಿ ಭೌತಿಕ ಸೇವೆಗಳನ್ನು ನಿರ್ಬಂಧಿಸಲಾಗಿದೆ ಎಂದು ಸುತ್ತೋಲೆಯಲ್ಲಿ ಹೈಕೋರ್ಟ್‌ ತಿಳಿಸಿದೆ.

Delhi high Court, WhatsApp, service of summons
Delhi high Court, WhatsApp, service of summons

“ಪರಿಸ್ಥಿತಿಯು ಸಾಮಾನ್ಯ ಸ್ಥಿತಿಗೆ ಮರಳಿದ ಬಳಿಕ ಸಾಂಪ್ರದಾಯಿಕವಾದ ಭೌತಿಕ ವಿತರಣೆ ವ್ಯವಸ್ಥೆ ಮುಂದುವರಿಯಲಿದೆ” ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ. ವರ್ಚುವಲ್‌ ಸೇವೆ ಪಡೆಯಲು ಇಚ್ಛಿಸುವವರು ಅಗತ್ಯವಾದ ಈಮೇಲ್‌ ಐಡಿ ಮತ್ತು ಇತರೆ ಮಾಹಿತಿ ನೀಡತಕ್ಕದ್ದು ಎಂದು ಹೈಕೋರ್ಟ್‌ ಹೇಳಿದೆ. “ತಾವಿರುವ ಸ್ಥಳದಿಂದಲೇ ಸಂಬಂಧಪಟ್ಟ ನ್ಯಾಯಿಕ ವಿಭಾಗ ಮತ್ತು ಮಾಹಿತಿ ತಂತ್ರಜ್ಞಾನ ವಿಭಾಗದ ಸಹಕಾರದೊಂದಿಗೆ ದಾಖಲೆಗಳು/ಸಮನ್ಸ್‌ ಅನ್ನು ರವಾನಿಸುವ ಕೆಲಸವನ್ನು ಹಂಚಿಕೆ ವಿಭಾಗ/ಸೇವಾ ಪ್ರಕ್ರಿಯೆ ಏಜೆನ್ಸಿ ಮುಂದುವರಿಸಲಿದೆ” ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಚಿನ್ನ ಕಳ್ಳಸಾಗಣೆ: ಜಾರಿ ನಿರ್ದೇಶನಾಲಯದ ಅಧಿಕಾರಿಗಳ ವಿರುದ್ಧದ ಎಫ್ಐಆರ್ ರದ್ದತಿ

ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿರುದ್ಧ ಹೇಳಿಕೆ ನೀಡುವಂತೆ ಚಿನ್ನ ಕಳ್ಳಸಾಗಣೆ ಪ್ರಕರಣದ ಆರೋಪಿಗಳಾದ ಸ್ವಪ್ನಾ ಸುರೇಶ್ ಮತ್ತು ಸಂದೀಪ್ ನಾಯರ್ ಅವರನ್ನು ಬಲವಂತವಾಗಿ ಒತ್ತಾಯಿಸಿದ ಆರೋಪದ ಮೇಲೆ ಕೇರಳ ಪೊಲೀಸರು ಜಾರಿ ನಿರ್ದೇಶನಾಲಯದ ಅನಾಮಿಕ ಅಧಿಕಾರಿಗಳ ವಿರುದ್ಧ ದಾಖಲಿಸಿದ್ದ ಎಫ್ಐಆರ್ ಅನ್ನು ಶುಕ್ರವಾರ ಕೇರಳ ಹೈಕೋರ್ಟ್ ರದ್ದುಪಡಿಸಿದೆ.

Kerala High Court, ED and Kerala Police
Kerala High Court, ED and Kerala Police

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಅಕ್ರಮ ಹಣ ವರ್ಗಾವಣೆ ಪ್ರಕರಣಗಳ ವಿಶೇಷ ನ್ಯಾಯಾಲಯದ ಮೊರೆ ಹೋಗುವಂತೆ ಕೇರಳ ಪೊಲೀಸರಿಗೆ ನ್ಯಾಯಮೂರ್ತಿ ವಿ ಜಿ ಅರುಣ್ ಅವರಿದ್ದ ಪೀಠ ಸೂಚಿಸಿದೆ. ಕೇರಳ ಪೊಲೀಸರ ಎಫ್ಐಆರ್ ಪ್ರಶ್ನಿಸಿ ಜಾರಿ ನಿರ್ದೇಶನಾಲಯದ ಉಪ ನಿರ್ದೇಶಕ ಪಿ ರಾಧಾಕೃಷ್ಣನ್ ನ್ಯಾಯಾಲಯದ ಮೆಟ್ಟಿಲೇರಿದ್ದರು.

ಸಿಆರ್‌ಪಿಸಿ ಸೆಕ್ಷನ್‌ 138ರ ಪ್ರಕ್ರಿಯೆಗೆ ಸೆಕ್ಷನ್‌ 258 ಅನ್ವಯಿಸದು ಎಂದ ಸಾಂವಿಧಾನಿಕ ಪೀಠ

ಚೆಕ್‌ ಬೌನ್ಸ್‌ ಪ್ರಕರಣಗಳಿಗೆ ಸಂಬಂಧಿಸಿದಂತೆ ಮ್ಯಾಜಿಸ್ಟ್ರೇಟ್‌ ಅವರು ಪ್ರಕರಣದ ಪ್ರಕ್ರಿಯೆಗೆ ತಡೆ ನೀಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್‌ ಸಾಂವಿಧಾನಿಕ ಪೀಠ ಮಹತ್ವದ ತೀರ್ಪು ನೀಡಿದೆ. ಕೆಲ ಪ್ರಕರಣಗಳಲ್ಲಿ ಪ್ರಕ್ರಿಯೆ ನಿಲ್ಲಿಸಲು ಮ್ಯಾಜಿಸ್ಟ್ರೇಟ್ ಅವರಿಗೆ ಅಧಿಕಾರ ನೀಡುವ ಸಿಆರ್‌ಪಿಸಿಯ ಸೆಕ್ಷನ್‌ 258 ಅನ್ನು ವರ್ಗಾವಣೆಯ ಲಿಖಿತಗಳ ಅಧಿನಿಯಮ ಕಾಯಿದೆ 1881ರ ಸೆಕ್ಷನ್‌ 138ರ ಅಡಿ ಚೆಕ್‌ ಬೌನ್ಸ್‌ ಪ್ರಕರಣಗಳಿಗೆ ಅನ್ವಯಿಸಲಾಗದು ಎಂದು ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠ ಮಹತ್ವದ ತೀರ್ಪು ನೀಡಿದೆ.

Constitution Bench, Cheque Bouncing cases
Constitution Bench, Cheque Bouncing cases

ವರ್ಗಾವಣೆಯ ಲಿಖಿತಗಳ ಅಧಿನಿಯಮ ಕಾಯಿದೆ 1881ರ ಸೆಕ್ಷನ್‌ 138ರ ಅಡಿ ಚೆಕ್‌ ಬೌನ್ಸ್‌ ಪ್ರಕರಣಗಳ ತುರ್ತು ವಿಲೇವಾರಿ ಕುರಿತು ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿದ್ದ ಪ್ರಕರಣದ ಕುರಿತು ಮುಖ್ಯ ನ್ಯಾಯಮೂರ್ತಿ ಎಸ್‌ ಎ ಬೊಬ್ಡೆ, ನ್ಯಾಯಮೂರ್ತಿಗಳಾದ ಎಲ್‌ ನಾಗೇಶ್ವರ ರಾವ್‌, ಬಿ ಆರ್‌ ಗವಾಯಿ, ಎ ಎಸ್‌ ಬೋಪಣ್ಣ ಮತ್ತು ರವೀಂದ್ರ ಭಟ್‌ ಅವರಿದ್ದ ಸಾಂವಿಧಾನಿಕ ಪೀಠವು ತೀರ್ಪು ನೀಡಿದೆ. "ಕಾಯಿದೆಯ ಸೆಕ್ಷನ್ 138ರ ಅಡಿಯ ದೂರುಗಳಿಗೆ ಅಪರಾಧ ಸಂಹಿತೆಯ (ಕೋಡ್‌) ಸೆಕ್ಷನ್ 258 ಅನ್ವಯಿಸುವುದಿಲ್ಲ," ಎಂದು ಪೀಠವು ಹೇಳಿದೆ.

Related Stories

No stories found.