ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು |19-4-2021

>> ʼವಿಶೇಷ ಚೇತನರಿಗೆ ಆದ್ಯತೆ ಮೇರೆಗೆ ಕೋವಿಡ್‌ ಲಸಿಕೆ ನೀಡಿʼ >> ಜೇನು ತುಪ್ಪ ಬ್ರಾಂಡ್‌ಗಳ ನೈಜತೆ ಕುರಿತ ಪ್ರಕರಣ >> ಚಿತ್ರ ವೀಕ್ಷಣೆಗೆ 3ಡಿ ಕನ್ನಡಕ ಉಚಿತವಾಗಿ ನೀಡಲು ಸೂಚಿಸಿದ ಕೇರಳ ಹೈಕೋರ್ಟ್‌ >> ದೆಹಲಿಯಲ್ಲಿ ಕರ್ಫ್ಯೂ
ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು |19-4-2021

ಕೋವಿಡ್‌ ಲಸಿಕೆ ನೀಡುವಾಗ ವಿಶೇಷ ಚೇತನರಿಗೆ ಆದ್ಯತೆ ಕಲ್ಪಿಸಲು ರಾಜ್ಯಕ್ಕೆ ನಿರ್ದೇಶಿಸಿದ ಮದ್ರಾಸ್‌ ಹೈಕೋರ್ಟ್‌

45 ವರ್ಷ ಆಗಿದೆಯೋ ಇಲ್ಲವೋ ಎಂಬುದನ್ನು ಪರಿಗಣಿಸದೆ ಕೋವಿಡ್‌ ಲಸಿಕೆ ನೀಡುವಾಗ ವಿಶೇಷ ಚೇತನರಿಗೆ ಆದ್ಯತೆ ಕಲ್ಪಿಸುವಂತೆ ತಮಿಳುನಾಡು ಸರ್ಕಾರಕ್ಕೆ ಮದ್ರಾಸ್‌ ಹೈಕೋರ್ಟ್‌ ಸೋಮವಾರ ನಿರ್ದೇಶನ ನೀಡಿದೆ.

OVID-19 vaccine
OVID-19 vaccine

ಅಗತ್ಯವಿದ್ದಲ್ಲಿ ಕೇಂದ್ರ ಸರ್ಕಾರದೊಂದಿಗೆ ಸಮಾಲೋಚಿಸಿದ ನಂತರ ಲಸಿಕೆ ಪಡೆಯಲು ಅರ್ಹರಾಗಿರುವ ವಿಶೇಷಚೇತನರ ಕನಿಷ್ಠ ವಯಸ್ಸಿನ ಮಿತಿಯ ಕುರಿತು ತಾರ್ಕಿಕ ನಿರ್ಧಾರ ಕೈಗೊಳ್ಳುವಂತೆ ಮುಖ್ಯ ನ್ಯಾಯಮೂರ್ತಿ ಸಂಜೀಬ್‌ ಬ್ಯಾನರ್ಜಿ ಹಾಗೂ ನ್ಯಾಯಮೂರ್ತಿ ಸೆಂಥಿಲ್‌ಕುಮಾರ್‌ ರಾಮಮೂರ್ತಿ ಅವರಿದ್ದ ವಿಭಾಗೀಯ ಪೀಠ ಹೇಳಿದೆ.

ಭಾರತೀಯ ಜೇನು ತುಪ್ಪ ಬ್ರಾಂಡ್‌ಗಳ ನೈಜತೆ ಪ್ರಶ್ನಿಸಿ ಅರ್ಜಿ: ಸುಪ್ರೀಂ ಕೋರ್ಟ್‌ನಿಂದ ನೋಟಿಸ್‌ ಜಾರಿ

ಭಾರತೀಯ ಮಾರುಕಟ್ಟೆಗಳಲ್ಲಿ ಜೇನುತುಪ್ಪದ ಉತ್ಪನ್ನಗಳ ಮಾರಾಟದ ಸತ್ಯಾಸತ್ಯತೆ ಖಚಿತಪಡಿಸಿಕೊಳ್ಳಲು ಕೇಂದ್ರಕ್ಕೆ ನಿರ್ದೇಶಿಸುವಂತೆ ಕೋರಿದ್ದ ಮನವಿ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಸೋಮವಾರ ಸಂಬಂಧಪಟ್ಟವರಿಗೆ ನೋಟಿಸ್ ನೀಡಿದೆ. ವಿವಿಧ ಜೇನು ಬ್ರಾಂಡ್‌ಗಳು ಅಥವಾ ಉತ್ಪನ್ನಗಳ ತನಿಖೆ ಅಥವಾ ಪರೀಕ್ಷಾ ವರದಿಗಳನ್ನು ಉನ್ನತ ನ್ಯಾಯಾಲಯದ ಮುಂದೆ ಸಲ್ಲಿಸುವಂತೆ ಕಂಪನಿಗಳಿಗೆ ನಿರ್ದೇಶನ ನೀಡುವಂತೆಯೂ ಮನವಿಯಲ್ಲಿ ಕೋರಲಾಗಿತ್ತು.

Honey
Honey

ಭಾರತೀಯ ಭ್ರಷ್ಟಾಚಾರ ವಿರೋಧಿ ಒಕ್ಕೂಟ ಟ್ರಸ್ಟ್‌ ಸಲ್ಲಿಸಿದ್ದ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಎಸ್‌ ಎ ಬೊಬ್ಡೆ, ನ್ಯಾಯಮೂರ್ತಿಗಳಾದ ಎ ಎಸ್‌ ಬೋಪಣ್ಣ ಮತ್ತು ವಿ ರಾಮಸುಬ್ರಮಣಿಯನ್‌ ಅವರಿದ್ದ ತ್ರಿಸದಸ್ಯ ಪೀಠ ವಿಚಾರಣೆ ನಡೆಸಿತು. ವಿಜ್ಞಾನ ಮತ್ತು ಪರಿಸರ ಕೇಂದ್ರದ (ಸಿಎಸ್ಇ) ಸಂಶೋಧಕರ ಪ್ರಕಾರ, ಭಾರತದ ಪ್ರಮುಖ ಜೇನುತುಪ್ಪ ಬ್ರಾಂಡ್‌ಗಳಲ್ಲಿ ಚೀನಾದಿಂದ ಮಾರ್ಪಡಿಸಿದ ಸಕ್ಕರೆ ಬೆರೆಸಲಾಗುತ್ತಿದೆ. ಕಲಬೆರಕೆ ಕಂಡುಹಿಡಿಯಲು ಬಳಸುವ ಕೆಲವು ಮೂಲಭೂತ ಪರೀಕ್ಷೆಗಳನ್ನು ತಪ್ಪಿಸಲಾಗುತ್ತಿದೆ” ಎಂದು ಮನವಿಯಲ್ಲಿ ದೂರಲಾಗಿದೆ.

3ಡಿ ಚಲನಚಿತ್ರಗಳನ್ನು ವೀಕ್ಷಿಸಲು 3ಡಿ ಕನ್ನಡಕವನ್ನು ಉಚಿತವಾಗಿ ಲಭ್ಯವಾಗುವಂತೆ ಮಾಡುವಂತೆ ಗ್ರಾಹಕರ ಆಯೋಗ ಆದೇಶ

ಚಿತ್ರಮಂದಿರಗಳಲ್ಲಿ 3ಡಿ ಚಲನಚಿತ್ರಗಳನ್ನು ವೀಕ್ಷಿಸಲು ಅಗತ್ಯವಾದ 3ಡಿ ಕನ್ನಡಕವನ್ನು ಉಚಿತವಾಗಿ ಲಭ್ಯವಾಗುವಂತೆ ಮಾಡಬೇಕು ಎಂದು ಕೇರಳದ ರಾಜ್ಯ ಗ್ರಾಹಕ ವಿವಾದ ಪರಿಹಾರ ಆಯೋಗ ತೀರ್ಪು ನೀಡಿದೆ.

3D glasses
3D glassesImage for representational purposes

3ಡಿ ಕನ್ನಡಕ ನೀಡಲು ಅನುಮತಿಸಿದರೆ ಗ್ರಾಹಕರ ಸುಲಿಗೆಗೆ ಅವಕಾಶ ಮಾಡಿಕೊಟ್ಟಂತಾಗುತ್ತದೆ ಎಂದು ಆಯೋಗದ ಅಧ್ಯಕ್ಷ ಹಾಗೂ ನ್ಯಾಯಮೂರ್ತಿ ಕೆ ಸುರೇಂದ್ರ ಮೋಹನ್‌ ನೇತೃತ್ವದ ಸಮಿತಿ ಹೇಳಿದೆ. “3ಡಿ ಚಲನಚಿತ್ರ ವೀಕ್ಷಿಸಲು 3ಡಿ ಕನ್ನಡಕ ಅಗತ್ಯವಿದ್ದರೆ, ವೀಕ್ಷಕರ ಬಳಕೆಗಾಗಿ ಅಂತಹ ಕನ್ನಡಕಗಳನ್ನು ಉಚಿತವಾಗಿ ನೀಡುವುದು ಕಡ್ಡಾಯವಾಗಿದೆ. ಅದಕ್ಕೆ ಸಂಬಂಧಿಸಿದ ಮೊತ್ತವನ್ನು ಚಿತ್ರಮಂದಿರ ಮಾಲೀಕರು ಸ್ವಇಚ್ಛೆಯಿಂದ ನೀಡಬೇಕು. ಇದನ್ನು ಗ್ರಾಹಕರಿಂದ ಪಡೆಯಲು ಅನುಮತಿಸುವುದರಿಂದ ಅವರ ಶೋಷಣೆಗೆ ಅವಕಾಶ ನೀಡಿದಂತಾಗುತ್ತದೆ” ಎಂದು ಆದೇಶದಲ್ಲಿ ತಿಳಿಸಿದೆ.

ಕೋವಿಡ್‌ ಹಿನ್ನೆಲೆ: ಕರ್ಫ್ಯೂ ನಡುವೆ ದೆಹಲಿಯಲ್ಲಿ ನ್ಯಾಯಮೂರ್ತಿಗಳು ನ್ಯಾಯಾಲಯದ ಸಿಬ್ಬಂದಿಗೆ ವಿನಾಯಿತಿ

ಕೋವಿಡ್‌ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ದೆಹಲಿ ಸರ್ಕಾರ ಸೋಮವಾರ ರಾತ್ರಿ 10 ಗಂಟೆಯಿಂದ ಏಪ್ರಿಲ್‌ 26ರ ಬೆಳಿಗ್ಗೆ 5ರವರೆಗೆ ರಾಷ್ಟ್ರ ರಾಜಧಾನಿಯಲ್ಲಿ ಕರ್ಫ್ಯೂ ಜಾರಿ ಮಾಡಿದೆ. ಸುಪ್ರೀಂಕೋರ್ಟ್‌, ದೆಹಲಿ ಹೈಕೋರ್ಟ್‌, ಅಧೀನ ನ್ಯಾಯಾಲಯಗಳು ಮತ್ತು ನ್ಯಾಯಾಧಿಕರಣಗಳ ನ್ಯಾಯಮೂರ್ತಿಗಳು ಮತ್ತು ನ್ಯಾಯಾಲಯದ ಸಿಬ್ಬಂದಿಗೆ ಕರ್ಫ್ಯೂನಿಂದ ವಿನಾಯಿತಿ ನೀಡಲಾಗಿದೆ.

ಅಗತ್ಯ ಮತ್ತು ತುರ್ತು ಸೇವೆ ಕಲ್ಪಿಸುವ ಕೇಂದ್ರ ಮತ್ತು ದೆಹಲಿ ಸರ್ಕಾರದ ಅಧಿಕಾರಿಗಳು, ಖಾಸಗಿ ವೈದ್ಯಕೀಯ ಸಿಬ್ಬಂದಿ, ಗರ್ಭಿಣಿಯರು ಮತ್ತು ರೋಗಿಗಳು, ಕೋವಿಡ್‌ ಅಥವಾ ಲಸಿಕೆ ಪಡೆಯಲು ತೆರಳುವ ವ್ಯಕ್ತಿಗಳು, ರೈಲ್ವೆ ನಿಲ್ದಾಣ/ವಿಮಾನ ನಿಲ್ದಾಣಕ್ಕೆ ತೆರಳುವ ಮತ್ತು ಅಲ್ಲಿಂದ ಬರುವ ವ್ಯಕ್ತಿಗಳು. ವಿದ್ಯುನ್ಮಾನ ಮತ್ತು ಮುದ್ರಣ ಮಾಧ್ಯಮ, ಪರೀಕ್ಷೆಗೆ ಹಾಜರಾಗಬೇಕಾದ ವಿದ್ಯಾರ್ಥಿಗಳಿಗೆ ಕರ್ಫ್ಯೂನಿಂದ ವಿನಾಯಿತಿ ದೊರೆತಿದೆ.

Kannada Bar & Bench
kannada.barandbench.com