ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು |26-4-2021

>> ಸಿಜೆಐ ನಕಲಿ ಟ್ವಿಟರ್‌ ಖಾತೆ ರದ್ದು >> ಕೊಲಿಜಿಯಂಗೆ ನ್ಯಾ. ಡಿ ವೈ ಚಂದ್ರಚೂಡ್ ಸೇರ್ಪಡೆ ಸಾಧ್ಯತೆ >> ನ್ಯಾ. ಶಾಂತನಗೌಡರ್ ನಿಧನಕ್ಕೆ ಹೊರಟ್ಟಿ ಸಂತಾಪ
ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು |26-4-2021

ಸಿಜೆಐ ಎನ್‌ ವಿ ರಮಣ ಅವರ ನಕಲಿ ಖಾತೆ ಅಳಿಸಿ ಹಾಕಿದ ಟ್ವಿಟರ್‌: ಪೊಲೀಸ್‌ ದೂರಿಗೆ ಚಿಂತನೆ

ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ ಅವರ ನಕಲಿ ಖಾತೆಯನ್ನು ಟ್ವಿಟರ್‌ ಸೋಮವಾರ ಅಳಿಸಿಹಾಕಿದೆ. ಸರ್ವೋಚ್ಛ ನ್ಯಾಯಾಲಯದ ರಿಜಿಸ್ಟ್ರಿ ಈ ಕುರಿತು ಟ್ವಿಟರ್‌ ಸಂಸ್ಥೆಯ ಗಮನಕ್ಕೆ ತಂದಿತ್ತು. ಇದೇ ವೇಳೆ ನ್ಯಾ. ರಮಣ ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಆದರೆ ಬಾರ್‌ ಅಂಡ್‌ ಬೆಂಚ್‌ಗೆ ಮೂಲಗಳು ವಿವರಿಸಿರುವ ಪ್ರಕಾರ ಪೊಲೀಸರಿಗೆ ದೂರು ನೀಡಲು ಚಿಂತನೆ ನಡೆದಿದೆ.

CJI Ramana fake Twitter Account
CJI Ramana fake Twitter Account

ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ ರಮಣ ಅವರು ಪ್ರಮಾಣ ವಚನ ಸ್ವೀಕರಿಸಿದ ಕೂಡಲೇ ಅವರ ಹೆಸರಿನಲ್ಲಿ ಟ್ವಿಟರ್‌ ಹ್ಯಾಂಡಲ್‌ ಅಸಿತ್ವಕ್ಕೆ ಬಂದಿತು ಎಂದು ಎನ್‌ಡಿಟಿವಿ ವರದಿ ಮಾಡಿತ್ತು. ನಕಲಿ ಟ್ವಿಟರ್‌ ಹ್ಯಾಂಡಲ್‌ ಬಳಸಿ “ಅಜಿತ್‌ ದೋವಲ್‌ ಅವರ ರಾಜತಾಂತ್ರಿಕತೆಯ ಕಾರಣದಿಂದಾಗಿ ಭಾರತಕ್ಕೆ ಕಚ್ಚಾವಸ್ತು ಸರಬರಾಜು ಮಾಡಲು ಅಮೆರಿಕ ನಿರ್ಧರಿಸಿದೆ. # ವ್ಯಾಕ್ಸಿನೇಷನ್ @ ಪಿಎಂಒಇಂಡಿಯಾ”ಎಂದು ಪ್ರಕಟಿಸಲಾಗಿತ್ತು.

ಸಿಜೆಐ ಎನ್‌ ವಿ ರಮಣ ನೇತೃತ್ವದ ಸುಪ್ರೀಂಕೋರ್ಟ್‌ ಕೊಲಿಜಿಯಂಗೆ ನ್ಯಾ. ಡಿ ವೈ ಚಂದ್ರಚೂಡ್‌

ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿದ್ದ ಎಸ್‌ ಎ ಬೊಬ್ಡೆ ಅವರ ನಿವೃತ್ತಿ ಹಾಗೂ ನ್ಯಾಯಮೂರ್ತಿ ಮೋಹನ್‌ ಎಂ ಶಾಂತನಗೌಡರ್‌ ಅವರ ನಿಧನದಿಂದಾಗಿ ಸರ್ವೋಚ್ಚ ನ್ಯಾಯಾಲಯದ ಕೊಲಿಜಿಯಂ ಅನೇಕ ಬದಲಾವಣೆಗಳಿಗೆ ಒಳಪಡಲಿದೆ. ಹಾಲಿ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ ಅವರ ನೇತೃತ್ವದ ಕೊಲಿಜಿಯಂಗೆ ನ್ಯಾ. ಡಿ ವೈ ಚಂದ್ರಚೂಡ್‌ ಹೊಸ ಸೇರ್ಪಡೆಯಾಗಿದ್ದಾರೆ.

Supreme Court Collegium
Supreme Court Collegium

ಮುಖ್ಯ ನ್ಯಾಯಮೂರ್ತಿ ರಮಣ, ನ್ಯಾಯಮೂರ್ತಿ ಚಂದ್ರಚೂಡ್‌ ಅವರಲ್ಲದೆ ನ್ಯಾಯಮೂರ್ತಿಗಳಾದ ರೋಹಿಂಟನ್‌ ನಾರಿಮನ್‌, ಯು ಯು ಲಲಿತ್‌ ಹಾಗೂ ಎ ಎಂ ಖಾನ್ವಿಲ್ಕರ್‌ ಅವರು ಕೂಡ ಏಪ್ರಿಲ್‌ 23ರಿಂದ ಜಾರಿಗೆ ಬರುವಂತೆ ಸುಪ್ರೀಂಕೋರ್ಟ್‌ ನೇಮಕಾತಿಗಳಿಗೆ ಜವಾಬ್ದಾರರಾಗಿರುತ್ತಾರೆ. ಕೊಲಿಜಿಯಂನಲ್ಲಿ ದಿವಂಗತ ನ್ಯಾ. ಶಾಂತನಗೌಡರ್‌ ಅವರ ಸ್ಥಾನವನ್ನು ಸೇವಾ ಹಿರಿತನದ ಆಧಾರದಲ್ಲಿ ನ್ಯಾ. ಅಬ್ದುಲ್‌ ಎಸ್‌ ನಜೀರ್‌ ಅಲಂಕರಿಸಲಿದ್ದಾರೆ. ಮುಂದಿನ ವರ್ಷ ನವೆಂಬರ್‌ನಲ್ಲಿ ನ್ಯಾ. ಯು ಯು ಲಲಿತ್‌ ಅವರು ಸಿಜೆಐ ಆಗಿ ನಿವೃತ್ತರಾದ ಬಳಿಕ ಚಂದ್ರಚೂಡ್‌ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರವಹಿಸಿಕೊಳ್ಳಲಿದ್ದಾರೆ. ಯು ಯು ಲಲಿತ್‌ ಅವರು ಅತಿ ಕಡಿಮೆ ಅವಧಿಗೆ ಸಿಜೆಐ ಹುದ್ದೆ (73 ದಿನಗಳು) ನಿಭಾಯಿಸಲಿದ್ದಾರೆ. ಅತಿಹೆಚ್ಚು ಅವಧಿಗೆ (ಎರಡು ವರ್ಷಗಳ ಕಾಲ) ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಲಿರುವ ಚಂದ್ರಚೂಡ್‌ ಅವರ ಕಾಲಾವಧಿಯಲ್ಲಿ ಕೊಲಿಜಿಯಂ ಅನೇಕ ಬದಲಾವಣೆಗಳನ್ನು ಕಾಣುವ ಸಾಧ್ಯತೆ ಇದೆ.

ದೇಶದ ಉನ್ನತ ನ್ಯಾಯಾಂಗದ ಬೆಳ್ಳಿತಾರೆ ಕಣ್ಮರೆ: ನ್ಯಾ. ಶಾಂತನಗೌಡರ್‌ ನಿಧನಕ್ಕೆ ವಿಧಾನಪರಿಷತ್‌ ಸಭಾಪತಿ ಹೊರಟ್ಟಿ ಸಂತಾಪ

ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ ಕನ್ನಡಿಗ ಮೋಹನ್‌ ಎಂ ಶಾಂತನಗೌಡರ್‌ ನಿಧನಕ್ಕೆ ವಿಧಾನಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಸಂತಾಪ ಸೂಚಿಸಿದ್ದಾರೆ. “ಅವರ ನಿಧನದಿಂದ ಭಾರತೀಯ ನ್ಯಾಯದಾನ ಕ್ಷೇತ್ರಕ್ಕೆ ಅಪಾರ ಹಾನಿ ಉಂಟಾಗಿದೆ. ದೇಶದ ಉನ್ನತ ನ್ಯಾಯಾಂಗದ ಬೆಳ್ಳಿತಾರೆಯೊಂದು ಮಾಯವಾದಂತಾಗಿದೆ. ಹಾವೇರಿ ಜಿಲ್ಲೆಯುವರಾದ ದಿವಂಗತರು ಕಿರಿಯ ವಕೀಲರನ್ನು ಪ್ರೋತ್ಸಾಹಿಸುತ್ತಿದ್ದರು. ಕೆಲಕಾಲದಲ್ಲೇ ವಕೀಲ ವೃಂದದಲ್ಲಿ ಜನಾನುರಾಗಿಯಾದರು” ಎಂದು ಹೊರಟ್ಟಿ ಸ್ಮರಿಸಿದ್ದಾರೆ.

Justice Shantanagoudar
Justice Shantanagoudar

ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿಯಾಗಿ, ಕೇರಳ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ ಹಾಗೂ ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಯಾಗಿ ಅವರು ಸಲ್ಲಿಸಿದ ಸೇವೆಯನ್ನು ಹೊರಟ್ಟಿ ತಮ್ಮ ಶೋಕ ಸಂದೇಶದಲ್ಲಿ ಶ್ಲಾಘಿಸಿದ್ದಾರೆ. ನ್ಯಾ. ಶಾಂತನಗೌಡರ್‌ ನಿಧನದ ದುಃಖ ಭರಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ ಹಾಗೂ ಅಪಾರ ಅಭಿಮಾನಿ ಬಳಗಕ್ಕೆ ಭಗವಂತ ನೀಡಲಿ ಎಂದು ಹೊರಟ್ಟಿ ಪ್ರಾರ್ಥಿಸಿದ್ದಾರೆ.

Related Stories

No stories found.
Kannada Bar & Bench
kannada.barandbench.com