ಬೆಂಗಳೂರು ವಕೀಲರ ಸಂಘದ ಆಶ್ರಯದಲ್ಲಿ ದೇಶದಲ್ಲಿ ಸದ್ಯ ಬಹು ಚರ್ಚೆಗೆ ಒಳಗಾಗಿರುವ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಕಾಯಿದೆಗಳ ಕುರಿತು ಶುಕ್ರವಾರ ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿದೆ.
ಬೆಂಗಳೂರಿನ ನಗರ ಸಿವಿಲ್ ನ್ಯಾಯಾಲಯ ಆವರಣದಲ್ಲಿರುವ ವಕೀಲರ ಭವನದ ನಗರ ವಿಭಾಗದಲ್ಲಿ ಮಧ್ಯಾಹ್ನ 1.45ಕ್ಕೆ ಕಾರ್ಯಕ್ರಮ ಆಯೋಜಿಸಲಾಗಿದೆ. “ಅಸಮಾನತೆ, ಕೃಷಿಗೆ ಎದುರಾಗಿರುವ ಗಂಡಾಂತರ ಮತ್ತು ಹೊಸದಾಗಿ ಜಾರಿಗೊಳಿಸಲು ಉದ್ದೇಶಿಸಿರುವ ಕೃಷಿ ಕಾಯಿದೆಗಳು” ಎಂಬ ವಿಚಾರದ ಮೇಲೆ ಹಿರಿಯ ಪತ್ರಕರ್ತ ಪಿ ಸಾಯಿನಾಥ್ ಬೆಳಕು ಚೆಲ್ಲಲಿದ್ದಾರೆ.
ಹರಿಯಾಣ ರಾಜ್ಯದ ಖಾಸಗಿ ಉದ್ಯಮಗಳಲ್ಲಿ ಗರಿಷ್ಠ ರೂ. 50 ಸಾವಿರ ಹಾಗೂ ಅದಕ್ಕಿಂತ ಕಡಿಮೆ ವೇತನದ ಹುದ್ದೆಗಳಲ್ಲಿ ಸ್ಥಳೀಯರಿಗೆ ಶೇ. 75ರಷ್ಟು ಮೀಸಲಾತಿ ಕಲ್ಪಿಸುವ 'ಹರಿಯಾಣ ರಾಜ್ಯ ಸ್ಥಳೀಯ ಅಭ್ಯರ್ಥಿಗಳ ಔದ್ಯೋಗಿಕ ಮಸೂದೆ 2020'ಕ್ಕೆ ರಾಜ್ಯಪಾಲ ಸತ್ಯದಿಯೋ ನರೈನ್ ಆರ್ಯ ಅವರು ಮಂಗಳವಾರ ಸಹಿ ಹಾಕಿದ್ದಾರೆ. ಕಳೆದ ವರ್ಷ ರಾಜ್ಯ ವಿಧಾನಸಭೆಯಲ್ಲಿ ಮಸೂದೆ ಮಂಡಿಸಿ ಒಪ್ಪಿಗೆ ಪಡೆಯಲಾಗಿತ್ತು.
ನೂತನ ಕಾನೂನಿನ ಅನ್ವಯ ಎಲ್ಲಾ ಉದ್ಯೋಗದಾತರು ಸ್ಥಳೀಯ ನಿವಾಸಿಗಳಿಗೆ ಶೇ. 75ರಷ್ಟು ಉದ್ಯೋಗ ಸೌಲಭ್ಯ ಕಲ್ಪಿಸಬೇಕಿದೆ. ದೊಡ್ಡ ಮಟ್ಟದಲ್ಲಿ ವಲಸಿಗರು ಕಡಿಮೆ ವೇತನ ಪಡೆಯುವ ಉದ್ಯೋಗಗಳಿಗೆ ಸ್ಪರ್ಧೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಈ ಕಾಯಿದೆ ಜಾರಿಗೊಳಿಸಬೇಕಾಯಿತು ಎಂದು ಸರ್ಕಾರ ಹೇಳಿದೆ.
ಸ್ಥಳೀಯ ಸಂಸ್ಥೆಗಳಲ್ಲಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳು (ಎಸ್‌ಸಿ/ಎಸ್‌ಟಿ) ಮತ್ತು ಇತರೆ ಹಿಂದುಳಿದ ವರ್ಗಗಳಿಗೆ (ಒಬಿಸಿ) ನಿಗದಿಗೊಳಿಸಲಾಗಿರುವ ಮೀಸಲು ಸ್ಥಾನಗಳ ಪ್ರಮಾಣವು ಶೇ. 50 ಅನ್ನು ಮೀರುವಂತಿಲ್ಲ ಎಂದು ಗುರುವಾರ ಸುಪ್ರೀಂ ಕೋರ್ಟ್ ಆದೇಶಿಸಿದೆ. ಮಹಾರಾಷ್ಟ್ರ ಜಿಲ್ಲಾ ಪರಿಷತ್ ಮತ್ತು ಪಂಚಾಯ್ತಿ ಸಮಿತಿ ಕಾಯಿದೆ 1961ರ ಸೆಕ್ಷನ್ 12(2)(ಸಿ) ನಲ್ಲಿ ಒಬಿಸಿ ಸಮುದಾಯಗಳಿಗೆ ರಾಜ್ಯ ಸರ್ಕಾರವು ಶೇ. 27ರಷ್ಟು ಮೀಸಲಾತಿ ನೀಡಬೇಕು ಎನ್ನುವ ನಿಯಮದ ಅರ್ಥವ್ಯಾಪ್ತಿಯನ್ನು ನ್ಯಾಯಮೂರ್ತಿಗಳಾದ ಎ ಎಂ ಖಾನ್ವಿಲ್ಕರ್, ಇಂದೂ ಮಲ್ಹೋತ್ರಾ ಮತ್ತು ಅಜಯ್ ರಸ್ತೋಗಿ ಅವರಿದ್ದ ತ್ರಿಸದಸ್ಯ ಪೀಠ ಕುಗ್ಗಿಸಿದೆ.
“ಎಸ್‌ಸಿ / ಎಸ್‌ಟಿ / ಒಬಿಸಿಗಳ ಪರವಾಗಿ ಕಾಯ್ದಿರಿಸಲಾಗಿರುವ ಒಟ್ಟು ಸೀಟುಗಳಲ್ಲಿ ಒಟ್ಟು ಶೇ. 50 ರಷ್ಟು ಮೀರದಂತೆ ಸಂಬಂಧಪಟ್ಟ ಸ್ಥಳೀಯ ಸಂಸ್ಥೆಗಳಲ್ಲಿ ಒಬಿಸಿಯ ಶೇ.27ರ ಮೀಸಲಾತಿಯನ್ನು ನೀಡಬೇಕು ಎನ್ನುವ ಅರ್ಥದಲ್ಲಿ ನಿಯಮವನ್ನು ವ್ಯಾಖ್ಯಾನಿಸಬೇಕು ಎಂದು ಪೀಠವು ಹೇಳಿದೆ.
ವರ್ಗಾವಣೀಯ ಲಿಖಿತಗಳ ಅಧಿನಿಯಮ ಕಾಯಿದೆ ಅಡಿ ಹೆಚ್ಚುತ್ತಿರುವ ಪ್ರಕರಣಗಳನ್ನು ಬಗೆಹರಿಸುವ ಸಂಬಂಧ ಹೆಚ್ಚುವರಿ ನ್ಯಾಯಾಲಯಗಳನ್ನು ಸ್ಥಾಪಿಸುವ ಪ್ರಸ್ತಾವಕ್ಕೆ ಬುಧವಾರ ಸುಪ್ರೀಂ ಕೋರ್ಟ್ ಒತ್ತು ನೀಡಿದೆ. ಈ ವೇಳೆ ಪೀಠವು ವಿಚಾರಣಾಧೀನ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳಲ್ಲಿ ಶೇ. 30 ರಿಂದ 40ರಷ್ಟು ಪ್ರಕರಣಗಳು ಮೇಲಿನ ಕಾಯಿದೆಯಡಿ ಬರುವ ಪ್ರಕರಣಗಳೇ ಆಗಿವೆ. ಹೈಕೋರ್ಟ್‌ನಲ್ಲಿಯೂ ಈ ಪ್ರಕರಣಗಳ ಸಂಖ್ಯೆ ಗಣನೀಯಾಗಿದೆ ಎನ್ನುವ ಅಂಶವನ್ನು ತಿಳಿಸಿತು. ಚೆಕ್‌ಬೌನ್ಸ್ ಪ್ರಕರಣಗಳು ಇದರಡಿ ವ್ಯಾಪಕವಾಗಿವೆ. ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ, ನ್ಯಾಯಮೂರ್ತಿಗಳಾದ ಎ ಎಸ್ ಬೋಪಣ್ಣ ಮತ್ತು ವಿ ರಾಮಸುಬ್ರಮಣಿಯನ್ ಅವರಿದ್ದ ತ್ರಿಸದಸ್ಯ ಪೀಠವು ಪ್ರಕರಣದ ವಿಚಾರಣೆ ನಡೆಸಿತ್ತು.
“ಈ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ಭಾರತ ಸಂವಿಧಾನದ 247ನೇ ವಿಧಿಯ ಅನ್ವಯ ವರ್ಗಾವಣೀಯ ಲಿಖಿತಗಳ ಅಧಿನಿಯಮ ಕಾಯಿದೆ 1881 ಅಡಿ ಹೆಚ್ಚುವರಿ ನ್ಯಾಯಾಲಯಗಳನ್ನು ಕಲ್ಪಿಸುವಂತೆ ಭಾರತ ಸರ್ಕಾರಕ್ಕೆ ನಾವು ಸಲಹೆ ನೀಡಿದ್ದೇವೆ” ಎಂದು ಬುಧವಾರ ಹೊರಡಿಸಲಾದ ಆದೇಶದಲ್ಲಿ ಪೀಠವು ತಿಳಿಸಿದೆ. ವರ್ಗಾವಣೀಯ ಲಿಖಿತ ಅಧಿನಿಯಮಗಳ ಕಾಯಿದೆಯ ಸೆಕ್ಷನ್ 138ರ ಅಡಿ ತುರ್ತಾಗಿ ಪ್ರಕರಣಗಳ ವಿಚಾರಣೆ ನಡೆಸುವ ಉದ್ದೇಶದಿಂದ ನ್ಯಾಯಾಲಯ ದಾಖಲಿಸಿಕೊಂಡಿರುವ ಸ್ವಯಂಪ್ರೇರಿತ ಪ್ರಕರಣದ ವಿಚಾರಣೆ ಇದಾಗಿದೆ.