ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು | 8-3-2021

>> ಗಡುವು ವಿಸ್ತರಣೆ ಅಂತ್ಯಗೊಳಿಸಿದ ಸುಪ್ರೀಂ >> ಎಐಎಲ್‌ಯುವಿನಿಂದ ನಾಳೆ ಉಪನ್ಯಾಸ ಕಾರ್ಯಕ್ರಮ >> ನ್ಯಾಯಾಂಗ ಅಧಿಕಾರಿ ಲಂಚ ಸ್ವೀಕರಿಸಿದ ಪ್ರಕರಣ >> ʼಎಸ್‌ಸಿಬಿಎ ಸಲಹೆ ಪರಿಗಣಿಸದ ಸುಪ್ರೀಂʼ
ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು | 8-3-2021

ಕೋವಿಡ್‌ ಕಾರಣಕ್ಕಾಗಿ ನೀಡಲಾಗಿದ್ದ ಪರಿಮಿತ ಕಾಲಾವಧಿಯ ವಿಸ್ತರಣೆಗೆ ಅಂತ್ಯ ಹಾಡಿದ ಸುಪ್ರೀಂಕೋರ್ಟ್‌

ಕೋವಿಡ್‌- 19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ವಿವಿಧ ಕಾನೂನುಗಳಡಿ ಒದಗಿಸಲಾಗಿದ್ದ ಪರಿಮಿತ ಕಾಲಾವಧಿಯ ವಿಸ್ತರಣೆಗೆ ಸುಪ್ರೀಂಕೋರ್ಟ್‌ ಅಂತ್ಯ ಹಾಡಿದೆ. ಪರಿಮಿತ ಅವಧಿಯ ಲೆಕ್ಕಾಚಾರಕ್ಕೆ ಸಂಬಂಧಿಸಿದಂತೆ ಅಟಾರ್ನಿ ಜನರಲ್‌ ಕೆ ಕೆ ವೇಣುಗೋಪಾಲ್‌ ಅವರು ನೀಡಿದ್ದ ಸಲಹೆಗಳನ್ನು ಪರಿಗಣಿಸಿದ ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಾಮೂರ್ತಿ ಎಸ್‌ ಎ ಬೊಬ್ಡೆ, ನ್ಯಾಯಮೂರ್ತಿಗಳಾದ ಎಲ್ ನಾಗೇಶ್ವರ ರಾವ್ ಮತ್ತು ರವೀಂದ್ರ ಭಟ್‌ ಅವರಿದ್ದ ತ್ರಿಸದಸ್ಯ ಪೀಠ ಈ ನಿರ್ಧಾರ ಕೈಗೊಂಡಿತು.

ಸಾಂಕ್ರಾಮಿಕ ರೋಗ ಕೊನೆಗೊಂಡಿರುವುದು ನಮಗೆ ಕಾಣದಿದ್ದರೂ ಸಾಕಷ್ಟು ಸುಧಾರಣೆಯಾಗಿದೆ. ಲಾಕ್‌ಡೌನ್‌ ತೆಗೆದುಹಾಕಲಾಗಿದ್ದು ದೇಶ ಸಹಜ ಸ್ಥಿತಿಗೆ ಮರಳುತ್ತಿದೆ. ಬಹುತೇಕ ಎಲ್ಲಾ ನ್ಯಾಯಾಲಯಗಳು ಮತ್ತು ನ್ಯಾಯಮಂಡಳಿಗಳು ಭೌತಿಕವಾಗಿ ಮತ್ತು ವರ್ಚುವಲ್‌ ವಿಧಾನದಡಿ ಕಾರ್ಯ ನಿರ್ವಹಿಸುತ್ತಿವೆ. ಕಳೆದ ವರ್ಚ ಮಾರ್ಚ್‌ನಲ್ಲಿ ಹೊರಡಿಸಿದ್ದ ಆದೇಶ ತನ್ನ ಉದ್ದೇಶ ಪೂರೈಸಿದೆ. ಸಾಂಕ್ರಾಮಿಕಕ್ಕೆ ಸಂಬಂಧಿಸಿದ ಬದಲಾಗುತ್ತಿರುವ ಸನ್ನಿವೇಶವನ್ನು ಗಮನದಲ್ಲಿಟ್ಟುಕೊಂಡು ಪರಿಮಿತ ಕಾಲಾವಧಿ ವಿಸ್ತರಣೆಯನ್ನು ಅಂತ್ಯಗೊಳಿಸಲಾಗುತ್ತಿದೆ ಎಂದು ನ್ಯಾಯಾಲಯ ತಿಳಿಸಿತು. ದಾವೆದಾರರು ನ್ಯಾಯಾಲಯಕ್ಕೆ ಬರುವುದು ಕಷ್ಟವಾಗುತ್ತದೆ ಎಂಬ ಕಾರಣಕ್ಕೆ ಕಳೆದ ವರ್ಷ ನ್ಯಾಯಾಲಯ ಎಲ್ಲ ಬಗೆಯ ಸಾಮಾನ್ಯ ಮತ್ತು ವಿಶೇಷ ಕಾನೂನುಗಳಡಿ ನೀಡಲಾದ ಪರಿಮಿತ ಕಾಲಾವಧಿಯ ವಿಸ್ತರಣೆಗೆ ಆದೇಶಿಸಿತ್ತು.

ʼತೀರ್ಪು ಬರೆಯುವಿಕೆ ಮತ್ತು ಅನುವಾದʼ ಕುರಿತು ಎಐಎಲ್‌ಯುನಿಂದ ನಾಳೆ ಉಪನ್ಯಾಸ ಕಾರ್ಯಕ್ರಮ

ಸಿವಿಲ್‌ ನ್ಯಾಯಾಧೀಶರ ಹುದ್ದೆ ಆಕಾಂಕ್ಷಿಗಳಿಗಾಗಿ ಮತ್ತು ವಕೀಲರಿಗಾಗಿ ಅಖಿಲ ಭಾರತ ವಕೀಲರ ಸಂಘ ಕರ್ನಾಟಕ ರಾಜ್ಯ ಸಮಿತಿ (ಎಐಎಲ್‌ಯು ಕರ್ನಾಟಕ) ನಡೆಸಿಕೊಂಡು ಬಂದಿರುವ ಕಾನೂನು ಕಾರ್ಯಾಗಾರ ಸರಣಿಯ ಭಾಗವಾಗಿ ʼತೀರ್ಪು ಬರೆಯುವಿಕೆ ಮತ್ತು ಅನುವಾದʼ ಎಂಬ ವಿಷಯದ ಕುರಿತು ಮಾರ್ಚ್‌ 9ರ ಮಂಗಳವಾರ ಸಂಜೆ 6ಕ್ಕೆ ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಲಾಗಿದೆ. ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿ ವಿ ಶ್ರೀಶಾನಂದ ಅವರು ಉಪನ್ಯಾಸ ನೀಡಲಿದ್ದಾರೆ.

ಇದೊಂದು ವರ್ಚುವಲ್‌ ಕಾರ್ಯಕ್ರಮವಾಗಿದ್ದು ಝೂಂ ಐಡಿ: 599 267 2811 ಪಾಸ್‌ವರ್ಡ್‌ AILUKARNA3 ಬಳಸಿ ಪಾಲ್ಗೊಳ್ಳಬಹುದು. ಅಲ್ಲದೆ ಎಐಎಲ್‌ಯು ಕರ್ನಾಟಕದ ಫೇಸ್‌ಬುಕ್‌ ಪೇಜ್‌ ಮೂಲಕವೂ ಕಾರ್ಯಕ್ರಮದ ನೇರಪ್ರಸಾರ ವೀಕ್ಷಿಸಬಹುದು. ಹೆಚ್ಚಿನ ಮಾಹಿತಿಗಾಗಿ ಸಂಘದ ಪದಾಧಿಕಾರಿಗಳಾದ ಶ್ರೀನಿವಾಸ್‌ ಕುಮ್ಮಾರ್‌, ಕೆ ಎಚ್‌ ಪಾಟೀಲ್‌, ಬಿ ವಿ ಕೋರಿಮಠ್‌ ಎಸ್‌ ಕೆ ಮರದ್‌ ಅವರನ್ನು ಸಂಪರ್ಕಿಸಬಹುದಾಗಿದೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.

ಲಂಚ ಸ್ವೀಕಾರದ ಆರೋಪ ಎದುರಿಸುತ್ತಿದ್ದ ನ್ಯಾಯಾಧೀಶರೊಬ್ಬರಿಗೆ ನಿರೀಕ್ಷಣಾ ಜಾಮೀನು ನಿರಾಕರಿಸಿದ ಬಾಂಬೆ ಹೈಕೋರ್ಟ್‌

ಅನುಕೂಲಕರ ಆದೇಶ ನೀಡಿ ಲಂಚ ಪಡೆದ ಆರೋಪ ಎದುರಿಸುತ್ತಿರುವ ನ್ಯಾಯಾಂಗ ಅಧಿಕಾರಿಯೊಬ್ಬರಿಗೆ ನಿರೀಕ್ಷಣಾ ಜಾಮೀನು ನೀಡಲು ಬಾಂಬೆ ಹೈಕೋರ್ಟ್ ಇತ್ತೀಚೆಗೆ ನಿರಾಕರಿಸಿದೆ. ನ್ಯಾಯಮೂರ್ತಿಗಳಾದ ಸಾರಂಗ್‌ ವಿ ಕೊತ್ವಾಲ್‌ ಅವರು “ಪ್ರಕರಣದ ಗಂಭೀರತೆಯನ್ನು ಅರಿತು ಸಮಗ್ರ ತನಿಖೆ ನಡೆಸುವ ಅಗತ್ಯವಿರುತ್ತದೆ. ನ್ಯಾಯಾಂಗದ ಬಗ್ಗೆ ಸಮಾಜ ಇರಿಸಿರುವ ನಂಬಿಕೆಯನ್ನು ಇಂತಹ ಘಟನೆಗಳು ಅಲುಗಾಡಿಸಬಾರದು” ಎಂದು ಅಭಿಪ್ರಾಯಪಟ್ಟರು.

“ಅರ್ಜಿದಾರರು ಜವಾಬ್ದಾರಿಯುತ ಸ್ಥಾನದಲ್ಲಿದ್ದು ತನಿಖಾ ಸಂಸ್ಥೆ ಪ್ರಕರಣದ ಆಳಕ್ಕೆ ಇಳಿಯಬೇಕಿದೆ” ಎಂದ ನ್ಯಾಯಾಲಯ ಜಾಮೀನು ಕೋರಿಕೆಯನ್ನು ತಿರಸ್ಕರಿಸಿತು. ವಡಗಾಂವ್‌ ಮಾವಲ್‌ ನ್ಯಾಯಾಲಯದಲ್ಲಿ ಪ್ರಥಮ ದರ್ಜೆ ಜ್ಯುಡಷಿಯಲ್‌ ಮ್ಯಾಜಿಸ್ಟ್ರೇಟ್‌ ಆಗಿದ್ದ ಅರ್ಚನಾ ಜಟ್ಕರ್‌ ಅವರು ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಸ್ವಪ್ನಿಲ್‌ ಶೇವ್ಕರ್‌ ಎಂಬುವವರಿಗೆ ತಮ್ಮ ಸಹವರ್ತಿಯೊಬ್ಬರ ಮೂಲಕ ಅರ್ಚನಾ ಅವರು ಲಂಚಕ್ಕಾಗಿ ಬೇಡಿಕೆ ಇಟ್ಟ ಆರೋಪ ಎದುರಿಸುತ್ತಿದ್ದಾರೆ.

ಭೌತಿಕ ವಿಚಾರಣೆ ಹೈಬ್ರಿಡ್‌ ವಿಧಾನಕ್ಕೆ ಸೀಮಿತ: ಸುಪ್ರೀಂ ನಿರ್ಧಾರ ಪ್ರಶ್ನಿಸಿದ ಎಸ್‌ಸಿಬಿಎ

ಹೈಬ್ರಿಡ್‌ ವ್ಯವಸ್ಥೆಯನ್ನು ಜಾರಿಗೆ ತರುವ ಮೂಲಕ ಭೌತಿಕ ವಿಚಾರಣೆಯನ್ನು ಸೀಮಿತಗೊಳಿಸುವ ಸರ್ವೋಚ್ಚ ನ್ಯಾಯಾಲಯದ ನಿರ್ಧಾರವನ್ನು ಸುಪ್ರೀಂಕೋರ್ಟ್‌ ವಕೀಲರ ಸಂಘ (ಎಸ್‌ಸಿಬಿಎ) ಪ್ರಶ್ನಿಸಿದೆ. ವಕೀಲರು ವರ್ಚುವಲ್‌ ವಿಧಾನದಡಿ ಕೂಡ ನ್ಯಾಯಾಲಯ ಕಲಾಪದಲ್ಲಿ ಭಾಗವಹಿಸಲು ಅವಕಾಶ ಹೈಬ್ರಿಡ್‌ ವಿಧಾನ ಅವಕಾಶ ನೀಡುತ್ತದೆ. ಮಾರ್ಚ್ 5 ರಂದು ಸುಪ್ರೀಂಕೋರ್ಟ್‌ ಹೊರಡಿಸಿದ ಪ್ರಮಾಣಿತ ಕಾರ್ಯಾಚರಣಾ ವಿಧಾನವನ್ನು (ಎಸ್‌ಒಪಿ) ಪ್ರಶ್ನಿಸಿ ಸಂವಿಧಾನದ 32ನೇ ವಿಧಿಯಡಿ ಎಸ್‌ಸಿಬಿಎ ಅರ್ಜಿ ಸಲ್ಲಿಸಿದೆ.

ಭೌತಿಕ ವಿಚಾರಣೆ ಆರಂಭಿಸುವಂತೆ ಮಾರ್ಚ್‌ 2 ರಂದು ಎಸ್‌ಸಿಬಿಎ ಅಧ್ಯಕ್ಷರು ಪತ್ರ ಬರೆದಿದ್ದರು. ಆದರೆ ಅವರು ನೀಡಿದ ಸಲಹೆಗಳನ್ನು ಪರಿಗಣಿಸಿಲ್ಲ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ಸಂಘದ ಅಧ್ಯಕ್ಷ ವಿಕಾಸ್‌ ಸಿಂಗ್‌ ಅವರು ವಕೀಲ ರಾಹುಲ್‌ ಕೌಶಿಕ್‌ ಅವರ ಮೂಲಕ ಸಲ್ಲಿಸಿರುವ ಅರ್ಜಿಯಲ್ಲಿ “ನ್ಯಾಯದಾನ ವ್ಯವಸ್ಥೆಗೆ ವಕೀಲರು ಸಮಾನ ಕೊಡುಗೆ ನೀಡಿದರೂ ಆ ಸಮುದಾಯವನ್ನು ಕೇಳದೆ ಹೈಬ್ರಿಡ್‌ ಭೌತಿಕ ವಿಚಾರಣೆಗೆ ನ್ಯಾಯಾಲಯದ ರೆಜಿಸ್ಟ್ರಿ ಎಸ್‌ಒಪಿ ಹೊರಡಿಸಿದೆ ಎಂದು ವಿವರಿಸಲಾಗಿದೆ.

Related Stories

No stories found.
Kannada Bar & Bench
kannada.barandbench.com