ಧಾರ್ಮಿಕ ನಂಬಿಕೆ, ವೈಯಕ್ತಿಕ ಕಾನೂನು, ಜಾತಿ ಮತ ಇತ್ಯಾದಿಗಳನ್ನು ಲೆಕ್ಕಿಸದೆ ದೇಶದಲ್ಲಿ ಏಕರೂಪದ ವಿಚ್ಛೇದನ ಕಾನೂನು ಜಾರಿಗೆ ತರುವುದನ್ನು ವಿರೋಧಿಸಿ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಎಐಎಂಪಿಎಲ್‌ಬಿ ಸುಪ್ರೀಂ ಕೋರ್ಟ್ ಮೊರೆ ಹೋಗಿದೆ. ಸಂವಿಧಾನದ 14, 15, 21 ಮತ್ತು 44ನೇ ವಿಧಿಗಳಲ್ಲಿ ವೈಯಕ್ತಿಕ ಕಾನೂನುಗಳನ್ನು ಪರೀಕ್ಷಿಸಲು ಸಾಧ್ಯವಿಲ್ಲ ಎಂದು ಕೂಡ ಅದು ಹೇಳಿದ್ದು ಬಿಜೆಪಿ ವಕ್ತಾರ ಮತ್ತು ನ್ಯಾಯವಾದಿ ಅಶ್ವಿನ್ ಕುಮಾರ್ ಉಪಾಧ್ಯಾಯ ಅವರು ಸಲ್ಲಿಸಿರುವ ಅರ್ಜಿಯಲ್ಲಿ ತನ್ನನ್ನೂ ಪಕ್ಷಕಾರನನ್ನಾಗಿ ಮಾಡಿಕೊಳ್ಳುವಂತೆ ಅದು ಪ್ರಾರ್ಥಿಸಿದೆ.
ಪಕ್ಷಕಾರರನ್ನಾಗಿಸುವಂತೆ ಕೋರಿ ವಕೀಲ ಎಂ ಆರ್ ಶಂಶಾದ್ ಅವರ ಮೂಲಕ ಸಲ್ಲಿಸಿರುವ ಅರ್ಜಿಯಲ್ಲಿ ಮುಸ್ಲಿಂ ಹಕ್ಕುಗಳ ಮಂಡಳಿಯ ಅನುಷ್ಠಾನ ಅರ್ಜಿಯು ಸಂವಿಧಾನದ 13 ನೇ ವಿಧಿಯಲ್ಲಿರುವ ಆಚರಣೆ ಮತ್ತು ಬಳಕೆ ಪರಿಕಲ್ಪನೆ ವೈಯಕ್ತಿಕ ಕಾನೂನುಗಳಲ್ಲಿ ಹುದುಗಿರುವ ಧಾರ್ಮಿಕ ಪಂಗಡದ ನಂಬಿಕೆಯನ್ನು ಒಳಗೊಂಡಿಲ್ಲ ಎಂದು ಹೇಳಲಾಗಿದೆ. ಹಿಂದೂಗಳ ನಡುವಣ ಮದುವೆ ಮತ್ತು ವಿಚ್ಛೇದನಕ್ಕೆ ಸಂಬಂಧಿಸಿದ ಕಾನೂನುಗಳು ಸ್ವತಃ ಏಕರೂಪವಾಗಿಲ್ಲ. ಜೊತೆಗೆ ಹಿಂದೂ ವಿವಾಹ ಕಾಯಿದೆಯ ಸೆಕ್ಷನ್ 29 (2)ರಲ್ಲಿ ಸೇರಿಸುವ ಮೂಲಕ ಆಚರಣೆ ಮತ್ತು ಪದ್ದತಿಗಳಿಗೆ ರಕ್ಷಣೆ ನೀಡಲಾಗಿದೆ ಎಂದು ಕೂಡ ಎಐಎಂಪಿಎಲ್‌ಬಿ ಹೇಳಿದೆ. ಕಳೆದ ಡಿಸೆಂಬರ್‌ನಲ್ಲಿ ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ಅವರ ನೇತೃತ್ವದ ಪೀಠ ಈ ಸಂಬಂಧ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿತ್ತು. ಅದಾದ ಬಳಿಕ ದೇಶಾದ್ಯಂತ ಈ ಕುರಿತು ಪರ- ವಿರೋಧದ ಚರ್ಚೆಗಳು ಕೇಳಿಬಂದಿದ್ದವು.
ಚುನಾವಣಾ ವೆಚ್ಚ ಉಲ್ಲೇಖಿಸಿ ಹಣದ ಬೇಡಿಕೆ ಇಡುವುದು, ರಾಜಕೀಯ ಪಕ್ಷದ ಹೆಸರಲ್ಲಿ ಭೂ ಕಬಳಿಕೆ ಮಾಡುವುದು ಪ್ರಜಾಪ್ರಭುತ್ವಕ್ಕೆ ನೇರ ಸವಾಲಾಗಿದ್ದು ಅಂತಹ ಯತ್ನವನ್ನು ಕುಟ್ಟಿ ಪುಡಿಮಾಡಬೇಕು. ಯಾರೂ ಕಾನೂನಿಗಿಂತಲೂ ಮಿಗಿಲಲ್ಲ ಇದು ರಾಜಕೀಯ ಪಕ್ಷಗಳಿಗೂ ಅನ್ವಯಿಸುತ್ತದೆ ಎಂದು ಮದ್ರಾಸ್ ಹೈಕೋರ್ಟ್ ಶುಕ್ರವಾರ ಅಭಿಪ್ರಾಯಪಟ್ಟಿದೆ. (ಎಸ್ ಧನಶೇಖರೆನ್ ಮತ್ತು ಪೊಲೀಸ್ ಆಯುಕ್ತರ ನಡುವಣ ಪ್ರಕರಣ).
ರಾಜಕೀಯ ಪಕ್ಷದ ಹೆಸರುಗಳನ್ನು ಬಳಸಿ ಭೂಕಬಳಿಕೆ ಮಾಡುವವರ ವಿರುದ್ಧ ಸಾಕಷ್ಟು ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ಎನ್ ಆನಂದ್ ವೆಂಕಟೇಶ್ ಅವರಿದ್ದ ಪೀಠವು “ಪಕ್ಷದ ನಾಯಕರು ತಮ್ಮ ಕಾರ್ಯಕರ್ತರನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಮತ್ತು ಭೂಕಬಳಿಕೆಯಂತಹ ಚಟುವಟಿಕೆಗಳಿಂದ ಅವರನ್ನು ತಡೆಯುವ ಸಮಯ ಇದು” ಎಂದು ಹೇಳಿದೆ.
ನ್ಯಾಯಾಲಯದಲ್ಲಿ ಅರ್ಜಿದಾರರು ಜಮೀನೊಂದರಲ್ಲಿ ವಸತಿ ಯೋಜನೆ ಕಾಮಗಾರಿ ಕೈಗೊಳ್ಳಲು ವಿನಂತಿಸಿದ್ದರು. ಕೋವಿಡ್‌ನಿಂದಾಗಿ ಕೆಲಸ ಸ್ಥಗಿತಗೊಂಡಿತ್ತು. ಕಳೆದ ಆಗಸ್ಟ್‌ನಲ್ಲಿ ಕಾಮಗಾರಿ ಪುನರಾರಂಭಗೊಂಡಾಗ ಕೆಲ ವ್ಯಕ್ತಿಗಳು ಹಣಕ್ಕಾಗಿ ಬೇಡಿಕೆ ಇಟ್ಟು ಕಾಮಗಾರಿಗೆ ಅಡ್ಡಪಡಿಸಿದ್ದರು. ವಿದುತಲೈ ಸಿರುಥೈಗಲ್ ಎಂಬ ರಾಜಕೀಯ ಪಕ್ಷಕ್ಕೆ ಸೇರಿದವರು ಎಂದು ಹೇಳಿಕೊಂಡ ವ್ಯಕ್ತಿಗಳು ಸ್ಥಳದಲ್ಲಿ ಕೆಲಸಗಾರರಿಗೆ ಬೆದರಿಕೆ ಹಾಕಿದ್ದಾರೆ ಎಂದು ನ್ಯಾಯಾಲಯಕ್ಕೆ ವಿವರಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಸೂಕ್ತ ದಾಖಲೆಗಳೊಡನೆ ಹೊಸದಾಗಿ ಪೊಲೀಸ್ ಠಾಣೆಗೆ ದೂರು ನೀಡುವಂತೆ ಅರ್ಜಿದಾರರಿಗೆ ಪೀಠ ಸೂಚಿಸಿದೆ.
ಮಣಿಪುರ ಹೈಕೋರ್ಟ್‌ನ ನೂತನ ಮುಖ್ಯ ನ್ಯಾಯಮೂರ್ತಿಯಾಗಿ ಪುಲಿಗೋರು ವೆಂಕಟ ಸಂಜಯ್ ಕುಮಾರ್ ಅವರನ್ನು ಕೇಂದ್ರ ಸರ್ಕಾರ ನೇಮಕ ಮಾಡಿದೆ. ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ನ್ಯಾಯಮೂರ್ತಿಯಾಗಿದ್ದ ನ್ಯಾ. ಪಿ ವಿ ಸಂಜಯ ಕುಮಾರ್ ಅವರನ್ನು ಮಣಿಪುರ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ನೇಮಿಸಲಾಗಿದೆ ಎಂದು ಕಾನೂನು ಮತ್ತು ನ್ಯಾಯ ಸಚಿವಾಲಯದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಕುಮಾರ್ ಅವರನ್ನು ಮಣಿಪುರ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕ ಮಾಡುವಂತೆ ಸುಪ್ರೀಂಕೋರ್ಟ್ ಕೊಲಿಜಿಯಂ ಶಿಫಾರಸು ಮಾಡಿತ್ತು. ಕಾನೂನು ಮತ್ತು ನ್ಯಾಯ ಸಚಿವಾಲಯ ಈ ಕುರಿತು ಅಧಿಸೂಚನೆ ಹೊರಡಿಸಿದೆ. ಹಾಲಿ ಮುಖ್ಯ ನ್ಯಾಯಮೂರ್ತಿ ರಾಮಲಿಂಗಂ ಸುಧಾಕರ್ ಅವರಿಂದ ನ್ಯಾಯಮೂರ್ತಿ ಕುಮಾರ್ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಆಂಧ್ರಪ್ರದೇಶ ಹೈಕೋರ್ಟ್‌ನ ಸರ್ಕಾರಿ ವಕೀಲರಾಗಿ ಬಳಿಕ ಅದೇ ನ್ಯಾಯಾಲಯದ ನ್ಯಾಯಮೂರ್ತಿಯಾಗಿ, ಬಳಿಕ ತೆಲಂಗಾಣ ಹೈಕೋರ್ಟ್ ನ್ಯಾಯಮೂರ್ತಿಯಾಗಿ ಸಂಜಯ್ ಕುಮಾರ್ ಅವರು ಸೇವೆ ಸಲ್ಲಿಸಿದ್ದಾರೆ. ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್‌ನ ನ್ಯಾಯಮೂರ್ತಿಗಳನ್ನಾಗಿ ನೇಮಿಸಿ ವರ್ಗಾವಣೆ ಮಾಡಿದಾಗ ಅವರ ವರ್ಗಾವಣೆಯನ್ನು ನ್ಯಾಯವಾದಿ ಸಮುದಾಯ ವಿರೋಧಿಸಿತ್ತು.
ಹೈಬ್ರಿಡ್ ವಿಧಾನದಲ್ಲಿ ಶೀಘ್ರವೇ ಸುಪ್ರೀಂ ಕೋರ್ಟ್ ವಿಚಾರಣೆ ಆರಂಭಿಸಲಿದ್ದು ವಕೀಲರು ಭೌತಿಕವಾಗಿ ಅಥವಾ ವರ್ಚುವಲ್ ವಿಧಾನದ ಮೂಲಕ ಕಲಾಪಕ್ಕೆ ಹಾಜರಾಗಬಹುದು. ಯಾವ ವಿಧಾನದ ಮೂಲಕ ಕಲಾಪದಲ್ಲಿ ಪಾಲ್ಗೊಳ್ಳಬೇಕು ಎಂಬುದು ಕಕ್ಷೀದಾರರ ಆಯ್ಕೆಯಾಗಿರುತ್ತದೆ (ಎಒಆರ್/ಅಡ್ವೊಕೇಟ್/ಪಾರ್ಟಿ ಇನ್ ಪರ್ಸನ್). ಈ ಸಂಬಂಧ ಪ್ರಮಾಣಿತ ಕಾರ್ಯಾಚರಣಾ ವಿಧಾನ ಮತ್ತಿತರ ವಿವರಗಳನ್ನು ಶೀಘ್ರದಲ್ಲಿಯೇ ಬಿಡುಗಡೆ ಮಾಡಲಾಗುತ್ತದೆ.
ಜನವರಿ 13 ರಂದು ನಡೆದ ಸುಪ್ರೀಂ ಕೋರ್ಟ್ ಸಮನ್ವಯ ಸಮಿತಿಯ ಸಭೆಯಲ್ಲಿ ಸುಪ್ರೀಂ ಕೋರ್ಟ್ ಅಡ್ವೊಕೇಟ್ ಆನ್ ರೆಕಾರ್ಡ್ ಅಸೋಸಿಯೇಷನ್ ಮತ್ತು ಸುಪ್ರೀಂಕೋರ್ಟ್ ವಕೀಲರ ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಹೈಬ್ರಿಡ್ ಮಾದರಿಯಲ್ಲಿ ಕಲಾಪ ಆರಂಭಿಸುವುದಾಗಿ ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿತ್ತು. ಹೈಬ್ರಿಡ್ ವ್ಯವಸ್ಥೆಯಲ್ಲಿ, ಭೌತಿಕ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಲಿದ್ದು, ಕಕ್ಷೀದಾರರು ದೈಹಿಕವಾಗಿ ಅಥವಾ ವರ್ಚುವಲ್ ವಿಧಾನದಲ್ಲಿ ಈ ಎರಡರ ಮೂಲಕವೂ ಹಾಜರಾಗಬಹುದಾಗಿದೆ. ಬೇರೆ ರೀತಿಯಲ್ಲಿ ಹೇಳುವುದಾದರೆ ಭೌತಿಕ ನ್ಯಾಯಾಲಯದಲ್ಲಿ ಒಂದು ಪ್ರಕರಣದ ವಿಚಾರಣೆ ನಡೆಸಿದಾಗ ಒಬ್ಬ ಕಕ್ಷೀದಾರರು ಭೌತಿಕವಾಗಿ ಹಾಜರಾಗಬಹುದಾಗಿದ್ದು ಮತ್ತೊಬ್ಬ ಕಕ್ಷೀದಾರರು ವರ್ಚುವಲ್ ವಿಧಾನದಲ್ಲಿ ಪಾಲ್ಗೊಳ್ಳಬಹುದಾಗಿದೆ.