ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು | 26-2-2021

>> ನಳಿನ್‌ ಯಾದವ್‌, ಸದಾಕತ್ ಖಾನ್‌ಗೆ ಜಾಮೀನು >> ಭೌತಿಕ ವರ್ಸಸ್‌ ಹೈಬ್ರಿಡ್‌ ಕಲಾಪ >> ಕನ್ನಡಕ ಧರಿಸಿ ಕರ್ತವ್ಯ ನಿರ್ವಹಿಸುವವರನ್ನು ಕೆಲಸದಿಂದ ವಜಾ ಮಾಡಲಾಗದು ಎಂದ ಮದ್ರಾಸ್‌ ಹೈಕೋರ್ಟ್ >> ಮಾಹಿತಿ ತಂತ್ರಜ್ಞಾನ ನಿಯಮ ಅಧಿಸೂಚನೆ ಪ್ರಕಟ
ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು | 26-2-2021

[ಫಾರೂಕಿ ಪ್ರಕರಣ]  ಸದಾಕತ್‌‌, ನಳಿನ್‌ಗೆ ಮಧ್ಯಂತರ ಜಾಮೀನು

ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡಿದ್ದಾರೆ ಎಂದು ಆರೋಪಿಸಿ ಮಧ್ಯಪ್ರದೇಶ ಪೊಲೀಸರು ಹಾಸ್ಯ ಕಲಾವಿದ ಮುನಾವರ್‌ ಫಾರೂಖಿ ಜೊತೆಗೆ ಸಹ ಆರೋಪಿಗಳಾಗಿ ಪ್ರಕರಣ ದಾಖಲಿಸಿದ್ದ ನಳಿನ್‌ ಯಾದವ್‌ ಮತ್ತು ಸದಾಕತ್‌ ಖಾನ್‌ ಅವರಿಗೆ ಮಧ್ಯಪ್ರದೇಶ ಹೈಕೋರ್ಟ್‌ ಶುಕ್ರವಾರ ಜಾಮೀನು ಮಂಜೂರು ಮಾಡಿದೆ.

Madhya Pradesh High Court
Madhya Pradesh High Court

ಫೆಬ್ರುವರಿ 5ರಂದು ಫಾರೂಖಿ ಅವರಿಗೆ ಸುಪ್ರೀಂ ಕೋರ್ಟ್‌ ಜಾಮೀನು ಮಂಜೂರು ಮಾಡಿದ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ರೋಹಿತ್‌ ಆರ್ಯ ಅವರು ಯಾದವ್‌ ಮತ್ತು ಸದಾಕತ್‌ ಖಾನ್‌ಗೆ ಜಾಮೀನು ನೀಡಿದ್ದಾರೆ. ಖಾನ್‌ ಪರವಾಗಿ ಅಸ್ಹಾರ್‌ ವಾರ್ಸಿ ವಾದಿಸಿದರು. ಖಾನ್‌ ಅವರು ಜನವರಿ 1ರಿಂದಲೂ ಜೈಲಿನಲ್ಲಿದ್ದು, ಫೆಬ್ರುವರಿ 9ರಂದು ಅವರಿಗೆ ಜಾಮೀನು ನಿರಾಕರಿಸಲಾಗಿತ್ತು.

[ಭೌತಿಕ ವರ್ಸಸ್‌ ಹೈಬ್ರಿಡ್ ಕಲಾಪ‌] ವಕೀಲರ ಸಂಘವು ಏಕಮತದಲ್ಲಿ ಮಾತನಾಡಲಿ: ದೆಹಲಿ ಹೈಕೋರ್ಟ್‌

ಮಾರ್ಚ್‌ 15ರ ನಂತರ ಭೌತಿಕ ವಿಚಾರಣೆ ನಡೆಸುವುದಕ್ಕೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಯಾವ ರೀತಿಯ ವಿಚಾರಣೆ ಅಗತ್ಯ ಎಂಬುದರ ಬಗ್ಗೆ ಸ್ಪಷ್ಟ ನಿಲುವು ತಳೆಯುವಂತೆ ದೆಹಲಿ ಹೈಕೋರ್ಟ್‌ ವಕೀಲರ ಪರಿಷತ್‌ಗೆ (ಡಿಎಚ್‌ಸಿಬಿಎ) ದೆಹಲಿ ಹೈಕೋರ್ಟ್‌ ಶುಕ್ರವಾರ ಆದೇಶಿಸಿದೆ. “ವಕೀಲರು ಏಕಮತದಲ್ಲಿ ಮಾತನಾಡಬೇಕು. ವಕೀಲರ ಪರಿಷತ್ತು ಒಂದೇ ಧ್ವನಿಯಲ್ಲಿ ಮಾತನಾಡಬೇಕು” ಎಂದು ನ್ಯಾಯಮೂರ್ತಿ ಪ್ರತಿಭಾ ಎಂ ಸಿಂಗ್‌ ಅವರು ಹೇಳಿದ್ದಾರೆ.

delhi high court physical hearing
delhi high court physical hearing

ವಕೀಲರ ಪರಿಷತ್ತಿನ ಒತ್ತಾಯದ ಮೇರೆಗೆ ಭೌತಿಕ ವಿಚಾರಣೆಯ ಪುನಾರಂಭದ ಕುರಿತು ಸಂಪೂರ್ಣ ನ್ಯಾಯಾಲಯದ ಆದೇಶವನ್ನು ಪಾಸು ಮಾಡಲಾಗಿದೆ. ಸಾವಿರಕ್ಕೂ ಹೆಚ್ಚು ವಕೀಲರು ಹೈಬ್ರಿಡ್‌ ವಿಚಾರಣೆ ಕೋರಿದ್ದ ಮನವಿಗೆ ಸಹಿ ಮಾಡಿದ್ದಾರೆ ಎಂಬುದನ್ನು ನ್ಯಾಯಾಲಯ ಪರಿಗಣಿಸಿದೆ. ಸಂಪೂರ್ಣ ಭೌತಿಕ ನ್ಯಾಯಾಲಯದ ಕಲಾಪಕ್ಕೆ ಸಂಬಂಧಿಸಿದಂತೆ ಮೂವರು ಹಿರಿಯ ವಕೀಲರು ಮತ್ತು ಕನಿಷ್ಠ 2-3 ಮಹಿಳಾ ವಕೀಲರನ್ನು ಒಳಗೊಂಡ ಸಮಿತಿ ರಚಿಸುವಂತೆ ಡಿಎಚ್‌ಸಿಬಿಎ ಕಾರ್ಯಕಾರಿ ಸಮಿತಿಗೆ ನ್ಯಾಯಾಲಯ ಆದೇಶಿಸಿದೆ.

ಕನ್ನಡಕ ಧರಿಸಿ ಕರ್ತವ್ಯ ನಿರ್ವಹಿಸುವವರನ್ನು ಕೆಲಸದಿಂದ ವಜಾ ಮಾಡಲಾಗದು: ಮದ್ರಾಸ್‌ ಹೈಕೋರ್ಟ್‌

ವೃತ್ತಿ ವಿವರಣೆಯಲಿ ದೃಷ್ಟಿಯ ಮಾನದಂಡದ ಬಗ್ಗೆ ವಿವರಣೆ ನೀಡದೇ ಇರುವುದರಿಂದ ದೃಷ್ಟಿದೋಷವಿದ್ದರೆ ಕನ್ನಡಕ ಧರಿಸಿ ಕರ್ತವ್ಯ ನಿರ್ವಹಿಸುವವರನ್ನು ಕೆಲಸದಿಂದ ಅನರ್ಹಗೊಳಿಸಲಾಗದು. ಕನ್ನಡಕ ಧರಿಸಿ ಕರ್ತವ್ಯ ನಿರ್ವಹಿಸಬಹುದಾಗಿದೆ ಎಂದು ಈಚೆಗೆ ಮದ್ರಾಸ್‌ ಹೈಕೋರ್ಟ್‌ ಆದೇಶಿಸಿದೆ.

Justices MM Sundresh, S Ananthi
Justices MM Sundresh, S Ananthi

ಕನ್ನಡಕ ಧರಿಸಿಯೇ ಕರ್ತವ್ಯ ನಿರ್ವಹಿಸಬೇಕಾದ ಅನಿವಾರ್ಯತೆಯ ಹಿನ್ನೆಲೆಯಲ್ಲಿ ಕನ್ನಡಕ ಧರಿಸಿದ್ದ ಅಭ್ಯರ್ಥಿಗಳನ್ನು ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ (ತಾಂತ್ರಿಕ) ಮತ್ತು ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ (ಫಿಂಗರ್‌ ಪ್ರಿಂಟ್‌) ಹುದ್ದೆಗೆ ನೇಮಕ ಮಾಡದೇ ಅನರ್ಹಗೊಳಿಸಿದ್ದ ವಿವಾದವನ್ನು ಬಗೆಹರಿಸಿಕೊಳ್ಳುವಂತೆ ಮದ್ರಾಸ್‌ ಹೈಕೋರ್ಟ್‌ನ ಮದುರೈ ಪೀಠವು ಹೇಳಿತ್ತು. ನೇಮಕಾತಿ ಸಂಬಂಧ ಹೊರಡಿಸಲಾದ ಅಧಿಸೂಚನೆಯಲ್ಲಿ ದೃಷ್ಟಿ ಮಾನದಂಡದ ಬಗ್ಗೆ ಉಲ್ಲೇಖಿಸದ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು ಸಲ್ಲಿಸಿದ್ದ ರಿಟ್‌ ಮನವಿಯನ್ನು ವಿಚಾರಣೆ ನಡೆಸಲು ಏಕಸದಸ್ಯ ಪೀಠವು ಒಪ್ಪಿಕೊಂಡಿತ್ತು. ಇದನ್ನು ರಾಜ್ಯ ಸರ್ಕಾರವು ಪ್ರಶ್ನಿಸಿದ್ದ ಹಿನ್ನೆಲೆಯಲ್ಲಿ ನ್ಯಾಯಮೂರ್ತಿಗಳಾದ ಎಂ ಎಂ ಸುಂದರೇಶ್‌ ಮತ್ತು ಎಸ್‌ ಅನಂತಿ ಅವರಿದ್ದ ದ್ವಿಸದಸ್ಯ ಪೀಠವು ವಿಚಾರಣೆ ನಡೆಸಿತು.

ʼಗುರುತರ ಸಾಮಾಜಿಕ ಮಾಧ್ಯಮ ಮಧ್ಯವರ್ತಿʼ ಕುರಿತ ಅಧಿಸೂಚನೆ ಹೊರಡಿಸಿದ ಮಾಹಿತಿ ಇಲಾಖೆ

ಭಾರತದಲ್ಲಿ 50 ಲಕ್ಷಕ್ಕೂ ಹೆಚ್ಚು ನೋಂದಾಯಿತ ಬಳಕೆದಾರರನ್ನು ಹೊಂದಿರುವ ಸಾಮಾಜಿಕ ಮಾಧ್ಯಮ ಮಧ್ಯವರ್ತಿಗಳನ್ನು ಹೊಸದಾಗಿ ಅಧಿಸೂಚಿಸಲಾದ ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿಗಳಿಗೆ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ನೀತಿಸಂಹಿತೆ) ನಿಯಮಗಳು, 2021 ರ ಅಡಿಯಲ್ಲಿ "ಗುರುತರ ಸಾಮಾಜಿಕ ಮಾಧ್ಯಮ ಮಧ್ಯವರ್ತಿಗಳು" ಎಂದು ಪರಿಗಣಿಸಲಾಗುವುದು. ಈ ಸಂಬಂಧ ಕೇಂದ್ರ ಇಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆಯು ಗೆಜೆಟ್‌ ಅಧಿಸೂಚನೆ ಹೊರಡಿಸಿದೆ.

Social Media, intermediaries
Social Media, intermediaries

ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್‌ ಮಾಧ್ಯಮ ನೀತಿ ಸಂಹಿತೆ) ನಿಯಮಗಳು, 2021ರ ನಿಯಮ 2ರ ಉಪ-ನಿಯಮ (1)ರ ಷರತ್ತು (ಐದು) ನಿಂದ ನೀಡಲ್ಪಟ್ಟ ಅಧಿಕಾರದ ಅನ್ವಯ ಕೇಂದ್ರ ಸರ್ಕಾರವು ಭಾರತದಲ್ಲಿ ಐವತ್ತು ಲಕ್ಷ ನೋಂದಾಯಿತ ಬಳಕೆದಾರರನ್ನು ಹೊಂದಿರುವ ಸಾಮಾಜಿಕ ಮಾಧ್ಯಮ ಮಧ್ಯವರ್ತಿಯನ್ನು ಗುರುತರ ಸಾಮಾಜಿಕ ಮಾಧ್ಯಮ ಮಧ್ಯವರ್ತಿ ಎಂದು ಪರಿಗಣಿಸಲಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

Related Stories

No stories found.
Kannada Bar & Bench
kannada.barandbench.com