ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು |28-3-2021

>> ನ್ಯಾಯಾಂಗ ವೇತನ ಆಯೋಗ ಸದಸ್ಯರ ಅಧಿಕಾರಾವಧಿ ವಿಸ್ತರಣೆ >> ಕೋವಿಡ್‌ ಹೆಚ್ಚಳ ಹಿನ್ನೆಲೆಯಲ್ಲಿ ಹೈಬ್ರಿಡ್‌ ವಿಚಾರಣೆ ಕೋರಿದ ಬಿಬಿಎ
ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು |28-3-2021

ಎರಡನೇ ರಾಷ್ಟ್ರೀಯ ನ್ಯಾಯಾಂಗ ವೇತನ ಆಯೋಗದ ಸದಸ್ಯರ ಅಧಿಕಾರಾವಧಿಯನ್ನು ಏಪ್ರಿಲ್ 30ರವರೆಗೆ ವಿಸ್ತರಿಸಿದ ಸುಪ್ರೀಂ ಕೋರ್ಟ್

ರಾಷ್ಟ್ರೀಯ ನ್ಯಾಯಾಂಗ ವೇತನ ಆಯೋಗದ ಸದಸ್ಯರಾದ, ನಿವೃತ್ತ ನ್ಯಾಯಮೂರ್ತಿಗಳಾದ ಪಿ ವಿ ರೆಡ್ಡಿ ಮತ್ತು ಆರ್ ಬಸಂತ್ ಅವರ ಅಧಿಕಾರಾವಧಿಯನ್ನು ಏಪ್ರಿಲ್ 30ರವರೆಗೆ ವಿಸ್ತರಿಸಿ ಸುಪ್ರೀಂ ಕೋರ್ಟ್ ಶುಕ್ರವಾರ ಆದೇಶ ಹೊರಡಿಸಿದೆ. ಅಲ್ಲದೆ ಕರ್ತವ್ಯಕ್ಕೆ ಹಾಜರಾಗಲು ಅನುಕೂಲವಾಗುವಂತೆ ಸದಸ್ಯ ಕಾರ್ಯದರ್ಶಿಯ ಅಧಿಕಾರಾವಧಿಯನ್ನೂ ಏಪ್ರಿಲ್ 30ರವರೆಗೆ ವಿಸ್ತರಿಸುವಂತೆ ಸೂಚಿಸಲಾಗಿದೆ.

ಆಯೋಗದ ಅವಧಿ ಮಾರ್ಚ್ 31 ಕ್ಕೆ ಕೊನೆಗೊಳ್ಳುತ್ತಿತ್ತು. ಮೂರನೇ ಅವಧಿಗೆ ಸಂಬಂಧಿಸಿದಂತೆ ವರದಿ ಸಲ್ಲಿಸಲು ಆಯೋಗಕ್ಕೆ ಇನ್ನೂ ಒಂದು ತಿಂಗಳ ಕಾಲಾವಕಾಶ ಬೇಕಾಗುತ್ತದೆ ಎಂದು ಅಮಿಕಸ್‌ ಕ್ಯೂರಿ ಕೆ ಪರಮೇಶ್ವರ್‌ ಅವರು ಸುಪ್ರೀಂಕೋರ್ಟ್‌ ಪ್ರಧಾನ ಕಾರ್ಯದರ್ಶಿ ಅವರಿಗೆ ಪತ್ರ ಬರೆದ ಹಿನ್ನೆಲೆಯಲ್ಲಿ ಈ ಆದೇಶ ನೀಡಲಾಗಿದೆ. 'ಅಖಿಲ ಭಾರತ ನ್ಯಾಯಾಧೀಶರ ಸಂಘ ಪ್ರಕರಣ'ದಲ್ಲಿ ಸುಪ್ರೀಂ ಕೋರ್ಟ್‌ನ ಆದೇಶದ ಅನುಸಾರವಾಗಿ ರಚಿಸಲಾದ ಈ ಆಯೋಗ 2020ರ ಜನವರಿ 29ರಂದು ತನ್ನ ಅಂತಿಮ ವರದಿಯನ್ನು ಸಲ್ಲಿಸಿ ನ್ಯಾಯಾಂಗ ಅಧಿಕಾರಿಗಳ ವೇತನ, ಪಿಂಚಣಿ ಮತ್ತು ಭತ್ಯೆಗಳನ್ನು ಹೆಚ್ಚಿಸಲು ಶಿಫಾರಸು ಮಾಡಿತ್ತು.

ಕೋವಿಡ್‌ ಹೆಚ್ಚಳ: ಹೈಬ್ರಿಡ್‌ ವಿಧಾನದಲ್ಲಿ ವಿಚಾರಣೆ ನಡೆಸುವಂತೆ ಕೋರಿದ ಬಾಂಬೆ ವಕೀಲರ ಸಂಘ

ಮುಂಬೈನಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಭೌತಿಕ ಮತ್ತು ವರ್ಚುವಲ್‌ ಕಲಾಪಗಳೆರಡಕ್ಕೂ ಅವಕಾಶ ಒದಗಿಸುವ ಹೈಬ್ರಿಡ್‌ ವಿಧಾನದಲ್ಲಿ ವಿಚಾರಣೆ ನಡೆಸುವಂತೆ ಬಾಂಬೆ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ದೀಪಂಕರ್ ದತ್ತಾ ಅವರಿಗೆ ಬಾಂಬೆ ವಕೀಲರ ಸಂಘ (ಬಿಬಿಎ) ಮನವಿ ಮಾಡಿದೆ. ವಕೀಲರನ್ನು ಮತ್ತು ಸಾರ್ವಜನಿಕರನ್ನು ರಕ್ಷಿಸುವ ಸಲುವಾಗಿ ವೀಡಿಯೊ ಕಾನ್ಫರೆನ್ಸ್‌ ಮೂಲಕ ನ್ಯಾಯಾಲಯ ಕಲಾಪದಲ್ಲಿ ಭಾಗಿಯಾಗಲು ಅವಕಾಶ ನೀಡಬೇಕು ಎಂದು ಶನಿವಾರ ಬರೆದ ಪತ್ರದಲ್ಲಿ ಕೋರಲಾಗಿದೆ.

ಕೋವಿಡ್‌ ಪ್ರಕರಣಗಳ ಸಂಖ್ಯೆ ಏರುತ್ತಿರುವ ಹಿನ್ನೆಲೆಯಲ್ಲಿ “ವರ್ಚುವಲ್ ಮತ್ತು ಭೌತಿಕ ನ್ಯಾಯಾಲಯದ ಕಾರ್ಯಸಾಧ್ಯತೆಯನ್ನು” ಪರಿಗಣಿಸಲು ಮಾರ್ಚ್‌ 19ರಂದು ನಡೆದ ಆಡಳಿತ ಸಮಿತಿ ಸಭೆಯಲ್ಲಿ ವಕೀಲ ಸಂಘದ ಸದಸ್ಯರು ಮನವಿ ಮಾಡಿದ್ದರು. ವಕೀಲರಿಗೆ ಸಮುದಾಯದಲ್ಲಿ ದೊಡ್ಡ ಪ್ರಮಾಣದಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ನ್ಯಾಯಾಲಯ ಸಿಬ್ಬಂದಿ ಮತ್ತು ಕೆಲ ನ್ಯಾಯಮೂರ್ತಿಗಳು ಕೂಡ ಸೋಂಕಿಗೆ ತುತ್ತಾಗಿದ್ದಾರೆ ಎಂದು ಪತ್ರದಲ್ಲಿ ವಿವರಿಸಲಾಗಿದೆ.

Kannada Bar & Bench
kannada.barandbench.com