ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು |12-3-2021

>> ಪೂರ್ಣಪ್ರಮಾಣದ ಸಿಬಿಐ ನಿರ್ದೇಶಕರ ನೇಮಕಾತಿ ವಿಚಾರ >> ಭ್ರೂಣದ ವೈದ್ಯಕೀಯ ಗರ್ಭಪಾತಕ್ಕೆ ಕೋರಿದ್ದ ಮನವಿ ಹಿಂಪಡೆದ 14 ವರ್ಷದ ಅಪ್ರಾಪ್ತೆ >> 31 ವರ್ಷಗಳಿಂದ ವಿಚಾರಣೆಗೆ ಒಳಪಡದ ಮನವಿ!
ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು |12-3-2021
Published on

ಪೂರ್ಣಪ್ರಮಾಣದ ಸಿಬಿಐ ನಿರ್ದೇಶಕರ ನೇಮಕಾತಿ: ಕೇಂದ್ರ ಸರ್ಕಾರದ ಪ್ರತಿಕ್ರಿಯೆ ಬಯಸಿದ ಸುಪ್ರೀಂ ಕೋರ್ಟ್‌

ಪೂರ್ಣಪ್ರಮಾಣದ ಕೇಂದ್ರೀಯ ತನಿಖಾ ದಳದ (ಸಿಬಿಐ) ನಿರ್ದೇಶಕರನ್ನು ನೇಮಿಸುವ ಸಂಬಂಧ ಸರ್ಕಾರೇತರ ಸಂಸ್ಥೆ ಕಾಮನ್‌ ಕಾಸ್‌ ಸಲ್ಲಿಸಿದ್ದ ಮನವಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಶುಕ್ರವಾರ ಕೇಂದ್ರ ಸರ್ಕಾರಕ್ಕೆ ನೋಟಿಸ್‌ ಜಾರಿಗೊಳಿಸಿದ್ದು, ಪ್ರತಿಕ್ರಿಯೆ ಬಯಸಿದೆ. ನೋಟಿಸ್‌ ಜಾರಿಗೊಳಿಸಿರುವ ನ್ಯಾಯಮೂರ್ತಿಗಳಾದ ಎಲ್‌ ನಾಗೇಶ್ವರ್‌ ರಾವ್‌ ಮತ್ತು ಎಸ್‌ ರವೀಂದ್ರ ಭಟ್‌ ಅವರಿದ್ದ ವಿಭಾಗೀಯ ಪೀಠವು ವಿಚಾರಣೆಯನ್ನು ಎರಡು ವಾರಗಳ ಕಾಲ ಮುಂದೂಡಿದೆ.

CBI
CBI

ದೆಹಲಿ ವಿಶೇಷ ಪೊಲೀಸ್‌ ಸ್ಥಾಪನಾ (ಡಿಎಸ್‌ಪಿಇ) ಕಾಯಿದೆ 1946ರ ಸೆಕ್ಷನ್‌ 4ಎ ಅಡಿ ಹಿಂದಿನ ನಿರ್ದೇಶಕರಾದ ರಿಶಿ ಕುಮಾರ್‌ ಶುಕ್ಲಾ ಅವರ ಅವಧಿಯು ಫೆಬ್ರವರಿ 2ರಂದು ಮುಗಿದ ತಕ್ಷಣ ನಿರ್ದೇಶಕರನ್ನು ನೇಮಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಹಿರಿಯ ವಕೀಲ ಪ್ರಶಾಂತ್‌ ಭೂಷಣ್‌ ಅವರ ಮೂಲಕ ಸಲ್ಲಿಸಲಾಗಿರುವ ಮನವಿಯಲ್ಲಿ ತಿಳಿಸಲಾಗಿದೆ. ನೂತನ ಸಿಬಿಐ ನಿರ್ದೇಶಕರನ್ನು ನೇಮಿಸುವವರೆಗೆ ಪ್ರವೀಣ್‌ ಸಿನ್ಹಾ ಅವರನ್ನು ಹಂಗಾಮಿ ಸಿಬಿಐ ನಿರ್ದೇಶಕರನ್ನಾಗಿ ನಿಯುಕ್ತಿ ಮಾಡಲಾಗಿದೆ.

ಭ್ರೂಣದ ವೈದ್ಯಕೀಯ ಗರ್ಭಪಾತಕ್ಕೆ ಕೋರಿದ್ದ ಮನವಿ ಹಿಂಪಡೆದ 14 ವರ್ಷದ ಅಪ್ರಾಪ್ತೆ: ಇಂಥ ಪ್ರಕರಣ ಪರಿಶೀಲನೆಗೆ ವೈದ್ಯಕೀಯ ಮಂಡಳಿ ಹುಟ್ಟುಹಾಕುವ ಚರ್ಚೆ ನಡೆಸಿದ ಸುಪ್ರೀಂ

ಅತ್ಯಾಚಾರ ಸಂತ್ರಸ್ತರಿಗೆ ಆರಂಭದಲ್ಲೇ ಅನುಕೂಲ ಕಲ್ಪಿಸುವ ಉದ್ದೇಶದಿಂದ ಎಲ್ಲಾ ಜಿಲ್ಲೆಗಳಲ್ಲೂ ಸ್ತ್ರೀರೋಗ ತಜ್ಞರು ಮತ್ತು ಶಿಶು ತಜ್ಞರನ್ನು ಒಳಗೊಂಡ ವೈದ್ಯಕೀಯ ಮಂಡಳಿಗಳನ್ನು ಆರಂಭಿಸುವ ಸಂಬಂಧ ಸುಪ್ರೀಂ ಕೋರ್ಟ್‌ ಶುಕ್ರವಾರ ನೋಟಿಸ್‌ ಜಾರಿಗೊಳಿಸಿದೆ.

Pregnancy
Pregnancy

ಸೋದರ ಸಂಬಂಧಿಯಿಂದ ಅತ್ಯಾಚಾರಕ್ಕೆ ಒಳಗಾಗಿ ಗರ್ಭಧರಿಸಿದ್ದ ಹರಿಯಾಣದ 14 ವರ್ಷದ ಅಪ್ರಾಪ್ತೆಯು 26 ವಾರಗಳ ಭ್ರೂಣದ ವೈದ್ಯಕೀಯ ಗರ್ಭಪಾತಕ್ಕೆ ಅವಕಾಶ ನೀಡುವಂತೆ ಕೋರಿದ್ದ ಪ್ರಕರಣ ಇದಾಗಿತ್ತು. ಅರ್ಜಿಯ ವಿಚಾರಣೆ ನಡೆಸಿದ ಸಿಜೆಐ ಎಸ್ ಎ ಬೊಬ್ಡೆ ಮತ್ತು ನ್ಯಾಯಮೂರ್ತಿ ಎ ಎಸ್‌ ಬೋಪಣ್ಣ ಅವರಿದ್ದ ಪೀಠವು ನೋಟಿಸ್‌ ಜಾರಿ ಆದೇಶ ಹೊರಡಿಸಿದೆ. ಅರ್ಜಿದಾರರನ್ನು ಪ್ರತಿನಿಧಿಸಿದ್ದ ವಕೀಲ ವಿ ಕೆ ಬಿಜು ಅವರು ವೈದ್ಯಕೀಯ ಮಂಡಳಿ ವರದಿ ಪರಿಶೀಲಿಸಿದ ಬಳಿಕ ಗರ್ಭಪಾತ ಪ್ರಕರಣವನ್ನು ಮುಂದುವರೆಸುವುದಿಲ್ಲ ಎಂದರು. ಪ್ರಕರಣದ ವಿಚಾರಣೆಯು ನಾಲ್ಕು ವಾರಗಳ ಬಳಿಕ ನಡೆಯಲಿದೆ.

31 ವರ್ಷಗಳಿಂದ ವಿಚಾರಣೆಗೆ ಒಳಪಡದ 1990ರಲ್ಲಿ ಸಲ್ಲಿಸಲ್ಪಟ್ಟ ಮನವಿ! ನ್ಯಾಯ ವಿತರಣಾ ವ್ಯವಸ್ಥೆಯ ದುರಂತ ವ್ಯಾಖ್ಯಾನ ಎಂದ ಬಾಂಬೆ ಹೈಕೋರ್ಟ್‌

31 ವರ್ಷಗಳಿಂದ ವಿಚಾರಣೆಗೆ ಒಳಪಡದ 1990ರಲ್ಲಿ ಸಲ್ಲಿಸಲ್ಪಟ್ಟ ಮನವಿಯು ಬುಧವಾರ ಬಾಂಬೆ ಹೈಕೋರ್ಟ್‌ನಲ್ಲಿ ವಿಚಾರಣೆಗೆ ಒಳಪಟ್ಟಿದ್ದು, ನ್ಯಾಯಾಲಯವೇ ದಿಗ್ಭ್ರಾಂತಿಗೆ ಒಳಗಾಗಿದೆ. ಘಟನೆಯಿಂದ ನ್ಯಾಯಮೂರ್ತಿ ಗೌತಮ್‌ ಪಟೇಲ್‌ ಅವರು ತಮಗುಂಟಾದ ಅಚ್ಚರಿಯನ್ನು ಅದುಮಿಟ್ಟುಕೊಳ್ಳಲಿಲ್ಲ. ಅವರು ಅದನ್ನು ಆದೇಶದಲ್ಲಿ ದಾಖಲು ಮಾಡಿದರು. ಅಂದಹಾಗೆ, ಮನವಿಯಲ್ಲಿ ಮೊಹಮದೀಯ ಕಾನೂನಿನ ಪ್ರಕಾರ ವಿಲ್‌ ಒಂದಕ್ಕೆ ದೃಢೀಕರಣದ ಅಗತ್ಯವಿದೆಯೇ ಹಾಗೂ ವಿಲ್‌ ಲಿಖಿತ ರೂಪದಲ್ಲಿ ಇರಬೇಕೇ? ಎನ್ನುವ ಪ್ರಶ್ನೆಗಳಿಗೆ ಪರಿಹಾರವನ್ನು ಕೋರಲಾಗಿತ್ತು.

JUSTICE GAUTAM PATEL
JUSTICE GAUTAM PATEL

“ಇದು ನಮ್ಮ ನ್ಯಾಯ ವಿತರಣಾ ವ್ಯವಸ್ಥೆಯ ದುರಂತ ಮತ್ತು ಭಯಾನಕ ವ್ಯಾಖ್ಯಾನವಾಗಿದ್ದು, ವಿವರಣೆಗೆ ನಿಲುಕದ್ದಾಗಿದೆ. ಸದರಿ ಪ್ರಕರಣವು ಕಳೆದ ಮೂವತ್ತೊಂದು ವರ್ಷಗಳಿಂದ ವಿಚಾರಣೆಗೆ ಒಳಪಡದೆ ಉಳಿದಿದೆ. ನಿಜಕ್ಕೂ ಪ್ರಕರಣದಲ್ಲಿ ಕಾನೂನಿನ ವಿಚಾರವಿದೆ. ಇದಕ್ಕೆ ಉತ್ತರ ಸಂಕೀರ್ಣವೇನಲ್ಲ, ಹೊಸದೂ ಅಲ್ಲ. ಈ ಮನವಿಗಿಂತ ಬಹಳ ಹಿಂದೆಯೇ ಇದಕ್ಕೆ (ಅರ್ಜಿದಾರರು ಕೋರಿರುವ ಪರಿಹಾರಕ್ಕೆ) ಉತ್ತರ ದೊರೆತಿದೆ. ಇದಕ್ಕೆ 1905ರಿಂದಲೂ ಪರಿಹಾರವಿದೆ. ಮನವಿಗೆ ಇದಾಗಲೇ ಉತ್ತರ ದೊರೆಯಬೇಕಿತ್ತು. ಅಂತೂ ಇಂದು ಸುದೀರ್ಘ ಕಾಯುವಿಕೆ ಅಂತ್ಯಗೊಂಡಿದೆ” ಎಂದು ನ್ಯಾ. ಗೌತಮ್‌ ಪಟೇಲ್‌ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.

Kannada Bar & Bench
kannada.barandbench.com