ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು |09-4-2021

>> ಮಮತಾ ಕಾಲಿಗೆ ಗಾಯ ಪ್ರಕರಣ ಸಿಬಿಐಗೆ ವಹಿಸಲು ನಕಾರ >> ₹10 ಕೋಟಿ ಪಾವತಿ ಬಳಿಕ ಇಟಲಿ ನಾವಿಕರ ವಿರುದ್ಧದ ಪ್ರಕರಣ ವಜಾ >> ಸಚಿನ್‌ ವಜೆ ಹೇಳಿಕೆ ಮಾಧ್ಯಮಗಳಿಗೆ ಸೋರಿಕೆ: ವಕೀಲರನ್ನು ತರಾಟೆಗೆ ತೆಗೆದುಕೊಂಡ ನ್ಯಾಯಾಲಯ
ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು |09-4-2021

ಮಮತಾ ಕಾಲಿಗೆ ಗಾಯ ಪ್ರಕರಣವನ್ನು ಸಿಬಿಐಗೆ ವಹಿಸಲು ಕೋರಿದ್ದ ಮನವಿ ವಿಚಾರಣೆಗೆ ಸುಪ್ರೀಂ ನಕಾರ; ಕಲ್ಕತ್ತಾ ನ್ಯಾಯಾಲಯ ಮೆಟ್ಟಿಲೇರಲು ಸೂಚನೆ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಕಾಲಿಗೆ ಗಾಯವಾಗಿರುವ ಪ್ರಕರಣದ ತನಿಖೆಯನ್ನು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ವಹಿಸುವಂತೆ ಕೋರಿದ್ದ ಸಾರ್ವಜನಿಕ ಹಿತಾಸಕ್ತಿ ಮನವಿ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್‌ ಶುಕ್ರವಾರ ನಿರಾಕರಿಸಿದೆ. ಸದರಿ ಮನವಿಯನ್ನು ಕಲ್ಕತ್ತಾ ಹೈಕೋರ್ಟ್‌ನಲ್ಲಿ ಸಲ್ಲಿಸುವ ಸ್ವಾತಂತ್ರ್ಯವನ್ನು ಅರ್ಜಿದಾರರಿಗೆ ಮುಖ್ಯ ನ್ಯಾಯಮೂರ್ತಿ ಎಸ್‌ ಎ ಬೊಬ್ಡೆ ಅವರ ನೇತೃತ್ವದ ಪೀಠ ನೀಡಿದ ಹಿನ್ನೆಲೆಯಲ್ಲಿ ಮನವಿದಾರರು ಅರ್ಜಿ ಹಿಂಪಡೆದರು.

cbi mamata
cbi mamata

“ಮಮತಾ ಬ್ಯಾನರ್ಜಿ ಅವರ ಕಾಲಿನ ಗಾಯವು ವ್ಯವಸ್ಥಿತವಾಗಿರುವ ಸಾಧ್ಯತೆ ಇದೆ. ಅವರು ತಮ್ಮ ಕಾಲುಗಳನ್ನು ಅಲುಗಾಡಿಸುತ್ತಾರೆ” ಎಂದು ಅರ್ಜಿದಾರರನ್ನು ಪ್ರತಿನಿಧಿಸುತ್ತಿರುವ ವಕೀಲ ವಿವೇಕ್‌ ನಾರಾಯಣ್‌ ಶರ್ಮಾ ಹೇಳಿದ್ದಾರೆ. “ನೀವು ಕಲ್ಕತ್ತಾ ಹೈಕೋರ್ಟ್‌ಗೆ ಹೋಗಿ. ಅಲ್ಲಿಗೆ ತೆರಳುವ ಸಂಬಂಧ ನಿಮ್ಮ ಮನವಿಯನ್ನು ಹಿಂಪಡೆಯುವ ಸ್ವಾತಂತ್ರ್ಯ ಕಲ್ಪಿಸಿದ್ದೇವೆ” ಎಂದು ಸಿಜೆಐ ಬೊಬ್ಡೆ ಹೇಳಿದ್ದಾರೆ. ಇಂಥ ಚುನಾವಣಾ ದಾಳಿಯ ಘಟನೆಗಳು ಚುನಾವಣಾ ಆಯೋಗದ ಹಿರಿಯ ಅಧಿಕಾರಿಗಳ ವಿರುದ್ಧದ ವ್ಯವಸ್ಥಿತ ಅಪಪ್ರಚಾರಕ್ಕೆ ಕಾರಣವಾಗುತ್ತದೆ. ಈ ಕಾರಣಕ್ಕಾಗಿ ಸ್ವತಂತ್ರ ತನಿಖೆ ನಡೆಸುವುದರ ಜೊತೆಗೆ ಮುಂದಿನ ದಿನಗಳಲ್ಲಿ ಇಂಥ ಘಟನೆಗಳನ್ನು ನಿಯಂತ್ರಿಸಲು ಸರಿಯಾದ ಮಾರ್ಗಸೂಚಿಗಳನ್ನು ರೂಪಿಸಬೇಕಿದೆ ಎಂದು ಮೂವರು ವೃತ್ತಿನಿರತ ವಕೀಲರು ಮನವಿಯಲ್ಲಿ ತಿಳಿಸಿದ್ದಾರೆ.

ಇಟಲಿಯಿಂದ ಸುಪ್ರೀಂ ಕೋರ್ಟ್‌ ಖಾತೆಗೆ ₹10 ಕೋಟಿ ಪಾವತಿಯಾದ ಬಳಿಕ ಇಟಲಿ ನಾವಿಕರ ವಿರುದ್ಧದ ಪ್ರಕರಣ ವಜಾ

ಕೇರಳದ ಕರಾವಳಿಯಲ್ಲಿ ಇಬ್ಬರು ಭಾರತೀಯ ಮೀನುಗಾರರನ್ನು ಇಟಲಿಯ ನಾವಿಕರು ಕಡಲ್ಗಳ್ಳರು ಎಂದು ಭಾವಿಸಿ ಕೊಂದಿದ್ದಕ್ಕೆ ಸಂಬಂಧಿಸಿದಂತೆ ₹10 ಕೋಟಿಯನ್ನು ಭಾರತ ಸರ್ಕಾರಕ್ಕೆ ಇಟಲಿ ವರ್ಗಾಯಿಸಬೇಕು. ಬಳಿಕ ಆ ಹಣವನ್ನು ಭಾರತ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ವರ್ಗಾಯಿಸಬೇಕು ಎಂದು ಶುಕ್ರವಾರ ಸರ್ವೋಚ್ಚ ನ್ಯಾಯಾಲಯ ಹೇಳಿದೆ. ಸುಪ್ರೀಂ ಕೋರ್ಟ್‌ ಖಾತೆಗೆ ಹಣ ಜಮೆಯಾದ ಬಳಿಕ ಪ್ರಕರಣವನ್ನು ಅಂತ್ಯಗೊಳಿಸಲಾಗುವುದು ನ್ಯಾಯಾಲಯವು ತಿಳಿಸಿದೆ.

The two Italian marines accused of killing Indian fishermen in the Enrica Lexie case
The two Italian marines accused of killing Indian fishermen in the Enrica Lexie caseTwitter

“ಸುಪ್ರೀಂ ಕೋರ್ಟ್‌ ಖಾತೆಗೆ ಹಣ ವರ್ಗಾವಣೆಯಾಗಬೇಕು. ಆಗ ಮಾತ್ರ ಪ್ರಕರಣದ ವಿಚಾರಣೆಯನ್ನು ಮುಕ್ತಾಯಗೊಳಿಸುತ್ತೇವೆ” ಎಂದು ಸಿಜೆಐ ಎಸ್‌ ಎ ಬೊಬ್ಡೆ ಹೇಳಿದ್ದಾರೆ. ಅಂತಾರಾಷ್ಟ್ರೀಯ ನ್ಯಾಯಾಧಿಕರಣವು ₹10 ಕೋಟಿ ಪಾವತಿಸುವಂತೆ ಆದೇಶಿಸಿದೆ ಎಂದು ಸರ್ಕಾರವು ನ್ಯಾಯಾಲಯಕ್ಕೆ ತಿಳಿಸಿದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್‌ ನಿರ್ದೇಶನ ನೀಡಿದೆ. ಏಪ್ರಿಲ್‌ 19ಕ್ಕೆ ವಿಚಾರಣೆ ಮುಂದೂಡಲಾಗಿದೆ. “ಇಟಲಿಯು ₹10 ಕೋಟಿ ಹೆಚ್ಚಾಗಿ ಪಾವತಿಸಿದೆ. ಸಂತ್ರಸ್ತರು ಈಗ ಅದನ್ನು ಒಪ್ಪಿಕೊಂಡಿದ್ದಾರೆ” ಎಂದು ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಹೇಳಿದರು. ಇಟಲಿಯ ನಾವಿಕರಾದ ಸಾಲ್ವತೋರ್‌ ಜಿರೋನ್‌ ಮತ್ತು ಮಸ್ಸಿಮಿಲಿಯಾನೊ ಲಟೊರೆ ಅವರನ್ನು ಅವರ ತವರು ಇಟಲಿಯಲ್ಲಿ ವಿಚಾರಣೆಗೆ ಒಳಪಡಿಸುವ ಸಂಬಂಧದ ಅಂತಾರಾಷ್ಟ್ರೀಯ ನ್ಯಾಯಾಧಿಕರಣದ ತೀರ್ಮಾನಕ್ಕೆ ಬದ್ಧವಾಗಿರುವುದಾಗಿ ಎಂಟು ತಿಂಗಳ ಹಿಂದೆ ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ತಿಳಿಸಿತ್ತು. ಎನ್ರಿಕಾ ಲೆಕ್ಸಿ ಹಡಗಿನಲ್ಲಿದ್ದ ಜಿರೋನ್‌ ಮತ್ತು ಲಟೊರೆ ಅವರು ಕಡಲ್ಗಳ್ಳರು ಎಂದು ಭಾವಿಸಿ ಇಬ್ಬರು ಭಾರತೀಯ ಮೀನುಗಾರರನ್ನು ಗುಂಡಿಕ್ಕಿ ಕೊಂದಿದ್ದರು.

ವಜೆ ಹೇಳಿಕೆ ಮಾಧ್ಯಮಗಳಿಗೆ ಸೋರಿಕೆ: “ಇದು ಮತ್ತೊಮ್ಮೆ ಘಟಿಸಬಾರದು” ಎಂದು ವಕೀಲರನ್ನು ತರಾಟೆಗೆ ತೆಗೆದುಕೊಂಡ ಎನ್‌ಐಎ ನ್ಯಾಯಾಲಯ

ಅಮಾನತುಗೊಂಡಿರುವ ಮುಂಬೈ ಪೊಲೀಸ್‌ ಅಧಿಕಾರಿ ಸಚಿನ್‌ ವಜೆ ಅವರ ಹೇಳಿಕೆ ಮಾಧ್ಯಮಗಳಿಗೆ ಸೋರಿಕೆಯಾಗಿರುವ ಸಂಬಂಧ ಎನ್‌ಐಎ ವಿಶೇಷ ನ್ಯಾಯಾಲಯವು ವಜೆ ಪರ ವಕೀಲರನ್ನು ಶುಕ್ರವಾರ ತರಾಟೆಗೆ ತೆಗೆದುಕೊಂಡಿದೆ. ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಎನ್‌ಸಿಪಿಯ ಅನಿಲ್‌ ದೇಶಮುಖ್‌ ಮತ್ತು ಶಿವಸೇನಾ ಪಕ್ಷದಿಂದ ಮಂತ್ರಿಯಾಗಿರುವ ಅನಿಲ್‌ ಪರಬ್‌ ಅವರು ಮುಂಬೈನ ಬಾರ್‌ಗಳು ಮತ್ತು ರೆಸ್ಟೋರೆಂಟ್‌ಗಳಿಂದ 100 ಕೋಟಿ ರೂಪಾಯಿ ಸಂಗ್ರಹಿಸಿ ನೀಡುವಂತೆ ಸೂಚಿಸಿದ್ದರು ಎಂದು ಆರೋಪಿಸಿದ್ದ ಮುಂಬೈ ಮಾಜಿ ಪೊಲೀಸ್‌ ಅಧಿಕಾರಿ ಸಚಿನ್‌ ವಜೆ ಅವರ ಹೇಳಿಕೆ ಬುಧವಾರ ಮಾಧ್ಯಮಗಳಿಗೆ ಸೋರಿಕೆಯಾಗಿತ್ತು.

Antilia case
Antilia case

ಉದ್ಯಮಿ ಮುಕೇಶ್‌ ಅಂಬಾನಿ ನಿವಾಸದ ಮುಂದೆ ಸ್ಫೋಟಕಗಳನ್ನು ತುಂಬಿದ್ದ ಎಸ್‌ಯುವಿ ಪತ್ತೆಯಾದ ಪ್ರಕರಣದ ಕುರಿತ ವಿಚಾರಣೆಯನ್ನು ನ್ಯಾಯಾಲಯ ನಡೆಸಿತು. “ಹೇಳಿಕೆಯ ದಾಖಲೆ ಸಲ್ಲಿಸಬೇಡಿ ಎಂದು ನಾನು ಹೇಳಿಲ್ಲ. ಸಿಆರ್‌ಪಿಸಿ ಅಡಿ ಸರಿಯಾದ ಪ್ರಕ್ರಿಯೆ ಪಾಲಿಸಬೇಕು ಎಂದಷ್ಟೇ ನಾನು ಹೇಳಿದ್ದೇನೆ. ಈ ಸೋರಿಕೆ ನಡೆಯಬಾರದಿತ್ತು. ಮುಂದೆ ಇದು ಘಟಿಸಬಾರದು. ಅವರಿಗೆ (ವಜೆಗೆ) ಅದು ತಿಳಿದಿಲ್ಲ. ಆದರೆ, ನೀವು ಅವರ ವಕೀಲರು, ನಿಮಗೆ ಪ್ರಕ್ರಿಯೆ ಬಗ್ಗೆ ತಿಳಿದಿರಬೇಕು” ಎಂದು ಹೆಚ್ಚುವರಿ ಸೆಷನ್ಸ್‌ ನ್ಯಾಯಾಧೀಶ ಪಿ ಆರ್‌ ಸಿತ್ರೆ ಅವರು ವಜೆ ಪರ ಹಿರಿಯ ವಕೀಲ ಅಬಾದ್‌ ಪಾಂಡಾ ಅವರನ್ನು ತರಾಟೆಗೆ ತೆಗೆದುಕೊಂಡರು. ಪತ್ರವು ಹೇಗೆ ಮಾಧ್ಯಮಗಳಿಗೆ ಸೋರಿಕೆಯಾಯಿತು ಎಂಬುದು ನನಗೂ ತಿಳಿದಿಲ್ಲ. ನಾನು ಇಂಥ ಚಟುವಟಿಕೆಗಳ ವಿರೋಧಿ ಎಂದು ಪಾಂಡಾ ಹೇಳಿದ್ದಾರೆ. ವಜೆ ಅವರ ನ್ಯಾಯಾಂಗ ಬಂಧನವನ್ನು ವಿಸ್ತರಿಸುವಂತೆ ಕೋರಿ ಎನ್‌ಐಎ ಮನವಿ ಸಲ್ಲಿಸಿತ್ತು. ಇದಕ್ಕೆ ಸಮ್ಮತಿಸಿದ ನ್ಯಾಯಾಲಯವು ಏಪ್ರಿಲ್‌ 23ರವರೆಗೆ ಅವರ ಬಂಧನ ವಿಸ್ತರಿಸಿದೆ.

Related Stories

No stories found.
Kannada Bar & Bench
kannada.barandbench.com