ಆಂಧ್ರಪ್ರದೇಶದ ಶಾಸನಸಭೆ, ಸರ್ಕಾರ, ಮುಖ್ಯಮಂತ್ರಿ ಮತ್ತು ರಾಜ್ಯ ಸರ್ಕಾರವನ್ನು ಪ್ರತಿನಿಧಿಸುವ ವಕೀಲರ ಬುದ್ದಿಮತ್ತೆ ಪ್ರಶ್ನಿಸಿರುವ ಆಂಧ್ರಪ್ರದೇಶ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ಬುಧವಾರ ತಡೆಯಾಜ್ಞೆ ವಿಧಿಸಿದೆ. ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಸಜ್ಜನ್ ಪೂವಯ್ಯ ಅವರ ವಾದವನ್ನು ಆಲಿಸಿದ ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ, ನ್ಯಾಯಮೂರ್ತಿಗಳಾದ ಎ ಎಸ್ ಬೋಪಣ್ಣ ಮತ್ತು ವಿ ರಾಮಸುಬ್ರಮಣಿಯನ್ ಅವರಿದ್ದ ಪೀಠವು ಹೈಕೋರ್ಟ್ ಆದೇಶಕ್ಕೆ ತಡೆ ವಿಧಿಸಿದೆ.
ರಾಜ್ಯ ಸರ್ಕಾರದ ವಾದವನ್ನು ಆಲಿಸುವುದಕ್ಕೂ ಮುನ್ನವೇ ನ್ಯಾಯಾಧೀಶರು ಪೂರ್ವಾಗ್ರಹ ಪೀಡಿತವಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸದರಿ ಪ್ರಕರಣದ ವಿಚಾರಣೆಯಿಂದ ನ್ಯಾಯಮೂರ್ತಿಗಳು ಹಿಂದೆ ಸರಿಯಬೇಕು ಎಂದು ಕೋರಿ ವೈ ಎಸ್ ಜಗನ್ ಮೋಹನ್ ರೆಡ್ಡಿ ನೇತೃತ್ವದ ಸರ್ಕಾರ ಮನವಿ ಸಲ್ಲಿಸಿದ ಬಳಿಕ ಕಳೆದ ವರ್ಷದ ಡಿಸೆಂಬರ್ 30ರಂದು ಆಂಧ್ರಪ್ರದೇಶ ಹೈಕೋರ್ಟ್ ಆದೇಶ ಮಾಡಿತ್ತು. “ಸರ್ಕಾರವು ತನ್ನ ಆಸ್ತಿಯನ್ನು ಹರಾಜಿಗೆ ಹೇಗೆ ಇಡುತ್ತದೆ. ಸರ್ಕಾರದ ಆಸ್ತಿಯನ್ನು ಹರಾಜಿಗೆ ಇಡುವಷ್ಟರ ಮಟ್ಟಿಗೆ ಸರ್ಕಾರ ದಿವಾಳಿಯಾಗಿದೆಯೇ, ರಾಜ್ಯದಲ್ಲಿ ಸಾಂವಿಧಾನಿಕ ವ್ಯವಸ್ಥೆ ಕುಸಿದು ಬಿದ್ದಿದೆ ಎಂದು ಹೇಳಿ ಆಡಳಿತದ ಚುಕ್ಕಾಣಿಯನ್ನು ಕೇಂದ್ರ ಸರ್ಕಾರಕ್ಕೆ ವರ್ಗಾಯಿಸುತ್ತೇವೆ,” ಎಂದು ಆಂಧ್ರ ಪ್ರದೇಶ ಹೈಕೋರ್ಟ್ ಮೌಖಿಕವಾಗಿ ಹೇಳಿದ ಹಿನ್ನೆಲೆಯಲ್ಲಿ ಸರ್ಕಾರ ಮನವಿ ಸಲ್ಲಿಸಿತ್ತು. ನ್ಯಾಯಮೂರ್ತಿಗಳು ಪ್ರಕರಣದ ವಿಚಾರಣೆ ನಡೆಸುವುದಕ್ಕೂ ಮುನ್ನವೇ ಈ ತೆರನಾದ ಅಭಿಪ್ರಾಯ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ನ್ಯಾಯಾಧೀಶರು ಪ್ರಕರಣದಿಂದ ಹಿಂದೆ ಸರಿಯುವಂತೆ ಮನವಿ ಸಲ್ಲಿಸಬೇಕಾಯಿತು ಎಂದು ಜಗನ್ ಸರ್ಕಾರವು ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿರುವ ಮನವಿಯಲ್ಲಿ ವಿವರಿಸಿದೆ.
ಟೆಲಿವಿಷನ್ ರೇಟಿಂಗ್ ಪಾಯಿಂಗ್ (ಟಿಆರ್‌ಪಿ) ಹಗರಣಕ್ಕೆ ಸಂಬಂಧಿಸಿದಂತೆ ರಿಪಬ್ಲಿಕ್ ಟಿವಿ ಮತ್ತು ಅದರ ಪ್ರಧಾನ ಸಂಪಾದಕ ಅರ್ನಾಬ್ ಗೋಸ್ವಾಮಿ ಸಿಬ್ಬಂದಿ ವಿರುದ್ಧ ಮುಂಬೈ ಪೊಲೀಸರು ಸಲ್ಲಿಸಿರುವ ಆರೋಪಪಟ್ಟಿಯಲ್ಲಿ ಸಾಬೀತುಪಡಿಸುವ ಲವಲೇಷದಷ್ಟು ಸಾಕ್ಷ್ಯಗಳಿಲ್ಲ ಎಂದು ರಿಪಬ್ಲಿಕ್ ಟಿವಿಯ ಮಾತೃ ಸಂಸ್ಥೆಯಾದ ಎಆರ್‌ಜಿ ಔಟ್ಲಯರ್ ಮೀಡಿಯಾ ಲಿಮಿಟೆಡ್ ಬಾಂಬೆ ಹೈಕೋರ್ಟ್‌ಗೆ ತಿಳಿಸಿದೆ.
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಮತ್ತು ಪಾಲ್ಗಾರ್ ದೊಂಬಿ ಹತ್ಯೆ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಮಹಾರಾಷ್ಟ್ರ ಪೊಲೀಸರ ಕಾರ್ಯಚಟುವಟಿಕೆಯ ಕುರಿತು ನಿರ್ಭೀತಿಯಿಂದ ವರದಿ ಮಾಡಿದ್ದಕ್ಕೆ ರಿಪಬ್ಲಿಕ್ ಟಿವಿಯನ್ನು ಗುರಿಯಾಗಿಸಲಾಗಿದ್ದು, ಇದೇ ಕಾರಣಕ್ಕೆ ಟಿಆರ್‌ಪಿ ಹಗರಣದಲ್ಲಿ ಸಿಲುಕಿಸಲಾಗಿದೆ ಎಂದು ಎಆರ್‌ಜಿ ಔಟ್ಲಯರ್ ಬಾಂಬೆ ಹೈಕೋರ್ಟ್‌ಗೆ ಸಲ್ಲಿಸಿರುವ ಪ್ರತ್ಯುತ್ತರ ಅಫಿಡವಿಟ್‌ನಲ್ಲಿ ತಿಳಿಸಿದೆ. “ಅರ್ಜಿದಾರರ ವಿರುದ್ಧದ ಆರೋಪಟ್ಟಿಯು ಬೃಹತ್ ಗಾತ್ರದಲ್ಲಿದ್ದು, ಸಾಕ್ಷ್ಯ ಕೊರತೆ ಎದುರಿಸುತ್ತಿದೆ. ಕಾನೂನು ಮತ್ತು ಸುವ್ಯವಸ್ಥೆ ಹೊಣೆ ನಿಭಾಯಿಸುವ ಅಧಿಕಾರಿಗಳು ಆರೋಪಪಟ್ಟಿಯಲ್ಲಿ ಉಲ್ಲೇಖಿಸಿರುವ ಕಂಪೆನಿಯ ವಿರುದ್ಧ ಒಂದೇ ಒಂದು ಸಾಕ್ಷ್ಯದ ತುಣುಕು ಸಂಗ್ರಹಿಸಲು ವಿಫಲರಾಗಿದ್ದಾರೆ” ಎಂದು ಉಲ್ಲೇಖಿಸಲಾಗಿದೆ. ತಮ್ಮ ಚಾನೆಲ್ ಮತ್ತು ಸಿಬ್ಬಂದಿ ವಿರುದ್ಧದ ಕ್ರಿಮಿನಲ್ ಪ್ರಕ್ರಿಯೆ ಪ್ರಶ್ನಿಸಿ ಎಆರ್‌ಜಿ ಸಲ್ಲಿಸಿರುವ ಮನವಿಗೆ ಮುಂಬೈ ಪೊಲೀಸರು ಸಲ್ಲಿಸಿರುವ ಪ್ರತಿಕ್ರಿಯೆಗೆ ಸಂಬಂಧಿಸಿದಂತೆ ಅಫಿಡವಿಟ್ ಸಲ್ಲಿಸಲಾಗಿದೆ.
ನಿಷ್ಕ್ರಿಯಗೊಂಡಿರುವ ಐಎನ್‌ಎಸ್ ವಿರಾಟ್ ವಿಮಾನ ವಾಹಕವನ್ನು ಧ್ವಂಸ ಮಾಡುವ ವಿಚಾರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸುಪ್ರೀಂ ಕೋರ್ಟ್ ಬುಧವಾರ ಆದೇಶ ಮಾಡಿದೆ.
ಎನ್ವಿಟೆಕ್ ಮ್ಯಾರೀನ್ ಕನ್ಸಲ್ಟೆಂಟ್ ಪ್ರೈವೇಟ್ ಲಿಮಿಟೆಡ್ ಸಲ್ಲಿಸಿದ್ದ ಮನವಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎಸ್ ವಿ ಬೊಬ್ಡೆ, ನ್ಯಾಯಮೂರ್ತಿಗಳಾದ ಎ ಎಸ್ ಬೋಪಣ್ಣ ಮತ್ತು ವಿ ರಾಮಸುಬ್ರಮಣಿಯನ್ ಅವರಿದ್ದ ತ್ರಿಸದಸ್ಯ ಪೀಠವು ಆದೇಶ ಹೊರಡಿಸಿದೆ.
ಬಾಲಿವುಡ್ ನಟಿ ಕಂಗನಾ ರನೌತ್‌ಗೆ ಸೇರಿರುವ ಮುಂಬೈನ ಖಾರ್ ಪ್ರದೇಶದಲ್ಲಿರುವ ಬಂಗಲೆಯ ಒಂದು ಭಾಗವನ್ನು ಬೃಹನ್‌ಮುಂಬೈ ಮಹಾನಗರ ಪಾಲಿಕೆಯು (ಬಿಎಂಸಿ) ಅನಧಿಕೃತ ಎಂದಿದ್ದನ್ನು ಕ್ರಮಬದ್ಧಗೊಳಿಸಿಕೊಳ್ಳುವ ಸಂಬಂಧ ಅರ್ಜಿ ಸಲ್ಲಿಸಲು ಅವರಿಗೆ ಬಾಂಬೈ ಕೋರ್ಟ್ ಸೋಮವಾರ ನಾಲ್ಕು ವಾರಗಳ ಕಾಲಾವಕಾಶ ನೀಡಿದೆ.
ದಿಂಡೋಶಿಯಲ್ಲಿರುವ ಮುಂಬೈ ನಗರ ಸಿವಿಲ್ ನ್ಯಾಯಾಲಯದಲ್ಲಿ ದಾಖಲಿಸಿರುವ ಪ್ರಕರಣವನ್ನು ನಾಲ್ಕು ದಿನಗಳ ಒಳಗೆ ಹಿಂಪಡೆಯುವುದಾಗಿ ಕಂಗನಾ ಪರ ಹಿರಿಯ ವಕೀಲ ಬೀರೇಂದ್ರ ಸರಾಫ್ ನ್ಯಾಯಾಲಯಕ್ಕೆ ವಿವರಿಸಿದರು. ಈ ಹೇಳಿಕೆಯನ್ನು ನ್ಯಾಯಮೂರ್ತಿ ಪಿ ಕೆ ಚೌಹಾಣ್ ಅವರಿದ್ದ ಪೀಠವು ದಾಖಲಿಸಿಕೊಂಡಿತು. ತನ್ನ ಆಸ್ತಿಯಲ್ಲಿ ಅನಧಿಕೃತವಾಗಿ ಕಟ್ಟಡ ನಿರ್ಮಾಣ ಮಾಡಿರುವುದಕ್ಕೆ ಸಂಬಂಧಿಸಿದಂತೆ ಬಿಎಂಸಿ ಕಂಗನಾಗೆ ನೋಟಿಸ್ ನೀಡಿತ್ತು. ಇದನ್ನು ಪ್ರಶ್ನಿಸಿ ಕಂಗನಾ ಪ್ರಸ್ತಾವನಾ ನೋಟಿಸ್ ಅನ್ನು ಕೆಳಹಂತದ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಇದನ್ನು ಅಧೀನ ನ್ಯಾಯಾಲಯ ವಜಾಗೊಳಿಸಿದ್ದನ್ನು ಪ್ರಶ್ನಿಸಿ ರನೌತ್ ಅವರು ಬಾಂಬೆ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಬಿಎಂಸಿಯಿಂದ ಅನಧಿಕೃತವೆಂದು ಘೋಷಿಸಲ್ಪಟ್ಟ ತನ್ನ ಕಟ್ಟಡದ ನಿರ್ಮಾಣದ ಭಾಗವನ್ನು ಕ್ರಮಬದ್ಧಗೊಳಿಸಲು ಅರ್ಜಿ ಸಲ್ಲಿಸಲು ತಾವು ಸಿದ್ಧರಿದ್ದಾರೋ, ಇಲ್ಲವೋ ಎಂಬುದನ್ನು ನ್ಯಾಯಾಲಯಕ್ಕೆ ತಿಳಿಸುವಂತೆ ರನೌತ್‌ಗೆ ಹಿಂದಿನ ವಿಚಾರಣೆಯ ಸಮಯದಲ್ಲಿ ಪೀಠ ಸೂಚಿಸಿತ್ತು.
ಆರೋಪಿ ತನ್ನ ವಿರುದ್ಧದ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ಪ್ರತಿ ಪಡೆಯುವ ಹಕ್ಕು ಹೊಂದಿದ್ದಾನೆ ಎಂಬುದಕ್ಕೆ ಮುದ್ರೆ ಒತ್ತಿರುವ ದೆಹಲಿ ಹೈಕೋರ್ಟ್, ಜನವರಿ 26ರಂದು ರೈತರ ಟ್ರ್ಯಾಕ್ಟರ್ ರ್ಯಾಲಿಯ ಸಂದರ್ಭದಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ದಾಖಲಿಸಲಾದ ದೂರುಗಳ ಎಫ್‌ಐಆರ್‌ಗಳನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆಯೇ ಎಂದು ಸ್ಪಷ್ಟಪಡಿಸುವಂತೆ ದೆಹಲಿ ಪೊಲೀಸರಿಗೆ ಸೂಚಿಸಿದೆ.
ತೀಸ್ ಹಜಾರಿ ನ್ಯಾಯಾಲಯದ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಅಭಿನವ್ ಪಾಂಡೆ ಅವರು ಆರೋಪಿಯೊಬ್ಬರು ಎಫ್‌ಐಆರ್ ಕಾಪಿ ಕೊಡಿಸುವಂತೆ ಕೋರಿ ಸಲ್ಲಿಸಿದ್ದ ಮನವಿ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯಕ್ಕೆ ಕಾರಣ ನೀಡಿದ ಪ್ರಕರಣಗಳನ್ನು ಹೊರತುಪಡಿಸಿ ಉಳಿದ ಪ್ರಕರಣಗಳಲ್ಲಿ ಎಫ್‌ಐಆರ್ ಪ್ರತಿಯನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಬೇಕು ಎಂದಿತು. ಬಂಧನ ಮೆಮೊ, ವಶಕ್ಕೆ ಪಡೆಯುವ ಆದೇಶ ಮತ್ತು ವಶದ ಮನವಿಯನ್ನು ಕೊಡಿಸುವಂತೆ ಕೋರಿದ್ದ ಆರೋಪಿಯ ಮನವಿಯನ್ನು ನ್ಯಾಯಾಲಯವು ತಳ್ಳಿಹಾಕಿದೆ.
ಉಭಯ ಪಕ್ಷಕಾರರು ಲಿಖಿತ ವಾದ ಸಲ್ಲಿಸುವುದು ತಡವಾದ ಹಿನ್ನೆಲೆಯಲ್ಲಿ ಪತ್ರಕರ್ತೆ ಪ್ರಿಯಾ ರಮಣಿ ವಿರುದ್ಧ ಪತ್ರಕರ್ತ ಹಾಗೂ ಮಾಜಿ ಕೇಂದ್ರ ಸಚಿವ ಎಂ ಜೆ ಅಕ್ಬರ್ ಅವರು ದಾಖಲಿಸಿದ್ದ ಮಾನಹಾನಿ ಪ್ರಕರಣದ ತೀರ್ಪು ಪ್ರಕಟಣೆಯನ್ನು ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ರವೀಂದ್ರ ಕುಮಾರ್ ಪಾಂಡೆ ಅವರು ಫೆಬ್ರವರಿ 17ಕ್ಕೆ ಮುಂದೂಡಿದ್ದಾರೆ.
ಎಂ ಜೆ ಅಕ್ಬರ್ ತಮಗೆ ಲೈಂಗಿಕ ಕಿರುಕುಳ ನೀಡಿದ್ದರು ಎಂದು ಪ್ರಿಯಾ ರಮಣಿ ಅವರು ಟ್ವಿಟರ್ ಮೂಲಕ ಆರೋಪ ಮಾಡಿದ್ದರು. ಇದನ್ನು ಪ್ರಶ್ನಿಸಿ 2018ರ ಅಕ್ಟೋಬರ್‌ನಲ್ಲಿ ಪ್ರಿಯಾ ವಿರುದ್ಧ ಅಕ್ಬರ್ ಕ್ರಿಮಿನಲ್ ಮಾನಹಾನಿ ಮೊಕದ್ದಮೆ ಹೂಡಿದ್ದರು. ಎರಡು ವರ್ಷಗಳ ಸತತ ವಿಚಾರಣೆಯ ಬಳಿಕ ಫೆಬ್ರವರಿ 1ರಂದು ನ್ಯಾಯಾಲಯವು ತೀರ್ಪು ಕಾಯ್ದಿರಿಸಿತ್ತು.