ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು |22-4-2021

>> ಮಾಜಿ ಸಚಿವ ವಿನಯ್‌ ಕುಲಕರ್ಣಿ ಜಾಮೀನು ಆದೇಶ ಕಾಯ್ದಿರಿಸಿದ ಹೈಕೋರ್ಟ್‌ >> ವಿಶ್ವಂಸ್ಥೆಯ ಒಪ್ಪಂದ ಆಧರಿಸಿ ಜಾಮೀನು ಕೋರಿದ ಕ್ರಿಶ್ಚಿಯನ್‌ ಮಿಶೆಲ್ ‌
ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು |22-4-2021
Published on

ಯೋಗೀಶ್‌ ಗೌಡ ಹತ್ಯೆ ಪ್ರಕರಣ: ಮಾಜಿ ಸಚಿವ ವಿನಯ್‌ ಕುಲಕರ್ಣಿ ಜಾಮೀನು ಆದೇಶ ಕಾಯ್ದಿರಿಸಿದ ಹೈಕೋರ್ಟ್‌

ಧಾರವಾಡ ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೀಶ್‌ ಗೌಡ ಅವರ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿ ಐದು ತಿಂಗಳಿಗೂ ಹೆಚ್ಚು ಕಾಲದಿಂದ ಜೈಲಿನಲ್ಲಿರುವ ಮಾಜಿ ಸಚಿವ ವಿನಯ್‌ ಕುಲಕರ್ಣಿ ಅವರ ಜಾಮೀನು ಮನವಿಗೆ ಸಂಬಂಧಿಸಿದ ತೀರ್ಪನ್ನು ಕರ್ನಾಟಕ ಹೈಕೋರ್ಟ್‌ ಗುರುವಾರ ಕಾಯ್ದಿರಿಸಿದೆ.

Vinay Kulkarni
Vinay Kulkarni

ನ್ಯಾಯಮೂರ್ತಿ ಕೆ ನಟರಾಜ್‌ ಅವರಿದ್ದ ಏಕಸದಸ್ಯ ಪೀಠವು ಕಳೆದ ಹತ್ತು ದಿನಗಳಲ್ಲಿ ನಾಲ್ಕು ಬಾರಿ ವಿನಯ್‌ ಕುಲಕರ್ಣಿ ಅವರ ಜಾಮೀನು ಮನವಿಯ ವಿಚಾರಣೆ ನಡೆಸಿದೆ. ಕುಲಕರ್ಣಿ ಪರ ಶಶಿಕಿರಣ ಶೆಟ್ಟಿ ವಾದಿಸಿದರು. ಸದ್ಯ ವಿನಯ್‌ ಕುಲಕರ್ಣಿ ಅವರು ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿದ್ದಾರೆ.

ಆಗಸ್ಟಾ ವೆಸ್ಟ್‌ಲ್ಯಾಂಡ್‌ ಆರೋಪಿ ಜಾಮೀನು ಅರ್ಜಿ: ಸಿಬಿಐ, ಇಡಿ ಪ್ರತಿಕ್ರಿಯೆ ಕೇಳಿದ ದೆಹಲಿ ನ್ಯಾಯಾಲಯ

ತನ್ನ ಬಂಧನ, ಗಡಿಪಾರು ಹಾಗೂ ವಶದಲ್ಲಿಟ್ಟುಕೊಂಡಿರುವುದು ಕಾನೂನುಬಾಹಿರ. ಇಟಲಿಯ ನ್ಯಾಯಾಲಯಗಳು ಇಂಥದ್ದೇ ಪ್ರಕರಣದಲ್ಲಿ ತನ್ನನ್ನು ಖುಲಾಸೆಗೊಳಿಸಿವೆ ಎಂದು ತಿಳಿಸಿರುವ ಆಗಸ್ಟಾ ವೆಸ್ಟ್‌ಲ್ಯಾಂಡ್‌ ಹೆಲಿಕಾಪ್ಟರ್‌ ಹಗರಣದ ಆರೋಪಿ ಕ್ರಿಶ್ಚಿಯಾನ್‌ ಮಿಶೆಲ್ ತನಗೆ ಜಾಮೀನು ನೀಡುವಂತೆ ಕೋರಿ ದೆಹಲಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಈ ಸಂಬಂಧ ಪ್ರತಿಕ್ರಿಯೆ ನೀಡುವಂತೆ ಸಿಬಿಐ ಹಾಗೂ ಜಾರಿ ನಿರ್ದೇಶನಾಲಯವನ್ನು ರೂಸ್‌ ಅವೆನ್ಯೂ ನ್ಯಾಯಾಲಯದ ನ್ಯಾಯಾಧೀಶ ಅರವಿಂದ್‌ ಕುಮಾರ್‌ ಕೇಳಿದ್ದಾರೆ.

Christian Michel
Christian Michel

ಸಂವಿಧಾನದ 20 (2) ನೇ ವಿಧಿ ಪ್ರಕಾರ ಒಂದೇ ಅಪರಾಧಕ್ಕೆ ಒಂದಕ್ಕಿಂತ ಹೆಚ್ಚು ಬಾರಿ ಯಾರನ್ನೂ ವಿಚಾರಣೆಗೆ ಒಳಪಡಿಸಬಾರದು ಮತ್ತು ಶಿಕ್ಷಿಸುವಂತಿಲ್ಲ. ಈ ವಿಧಿಯೊಂದಿಗೆ ವಿಶ್ವಂಸ್ಥೆಯ ಒಪ್ಪಂದವನ್ನು ಒಟ್ಟಿಗೆ ಓದಿದಾಗ ಕಾನೂನಿನ ದೃಷ್ಟಿಯಲ್ಲಿ ತಮ್ಮನ್ನು ಬಂಧಿಸಿಡುವುದು ಅಕ್ರಮವಾಗುತ್ತದೆ ಎಂದು ಮಿಶೆಲ್ ಹೇಳಿದ್ದಾರೆ. ವಿಶ್ವಸಂಸ್ಥೆ ಮಾನವ ಹಕ್ಕುಗಳ ಮಂಡಳಿಯ ಎದರು ತನ್ನ ಅಕ್ರಮ ಬಂಧನದ ವಿಚಾರವನ್ನು ಪ್ರಸ್ತಾಪಿಸಿದಾಗ ಅದು ಜಾಗತಿಕ ಮಾನವ ಹಕ್ಕುಗಳ ಘೋಷಣೆ, ಹಾಗೂ ನಾಗರಿಕ ಮತ್ತು ರಾಜಕೀಯ ಹಕ್ಕುಗಳ ಅಂತಾರಾಷ್ಟ್ರೀಯ ಒಪ್ಪಂದದ ವಿವಿಧ ನಿಯಮಗಳ ಉಲ್ಲಂಘನೆಯಾಗುತ್ತದೆ ಎಂಬುದಾಗಿ ಮಿಶೆಲ್‌ ನ್ಯಾಯಾಲಯಕ್ಕೆ ವಿವರಿಸಿದ್ದಾರೆ. ಪ್ರಕರಣದ ಮುಂದಿನ ವಿಚಾರಣೆಯನ್ನು ಮೇ 6ಕ್ಕೆ ನಿಗದಿಪಡಿಸಲಾಗಿದೆ.

Kannada Bar & Bench
kannada.barandbench.com