ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು | 12-2-2021

>> ಚಂದಾ ಕೊಚ್ಚಾರ್‌ಗೆ ಜಾಮೀನು >> ಬಿಜೆಪಿ ರಥಯಾತ್ರೆ ಪ್ರಶ್ನಿಸಿದ್ದ ಅರ್ಜಿ ವಜಾ >> ವಿದ್ಯಾವಂತರು ಬಾಳ ಸಂಗಾತಿ ಆಯ್ಕೆ ಮಾಡಿಕೊಂಡರೆ ಜಾತಿ ಸಮಸ್ಯೆ ನಿವಾರಣೆ >> ಫ್ರಾಂಕ್ಲಿನ್ ಟೆಂಪಲ್ಟನ್ ಮ್ಯೂಚುವಲ್ ಫಂಡ್ ಹೂಡಿಕೆದಾರರ ಆಕ್ಷೇಪಣೆ ವಜಾ
ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು | 12-2-2021
Published on

ಹವಾಲಾ ಹಣ ಪ್ರಕರಣ: ಐಸಿಐಸಿಐ ಬ್ಯಾಂಕ್‌ ಮಾಜಿ ಸಿಇಒ ಚಂದಾ ಕೊಚ್ಚಾರ್‌ಗೆ ಜಾಮೀನು ನೀಡಿದ ವಿಶೇಷ ನ್ಯಾಯಾಲಯ

ಐಸಿಐಸಿಐ ಬ್ಯಾಂಕ್‌ ಮತ್ತು ವಿಡಿಯೊಕಾನ್‌ ಸಮೂಹ ಸಂಸ್ಥೆಗಳನ್ನು ಒಳಗೊಂಡ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆರೋಪಿಯಾಗಿರುವ ಐಸಿಐಸಿಐ ಬ್ಯಾಂಕ್‌ ಮಾಜಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಮತ್ತು ವ್ಯವಸ್ಥಾಪಕ ನಿರ್ದೇಶಕಿ ಚಂದಾ ಕೊಚ್ಚಾರ್‌ ಅವರಿಗೆ ಜಾಮೀನು ದೊರೆತಿದೆ. ಅಕ್ರಮ ಹಣ ವರ್ಗಾವಣೆ ಕಾಯಿದೆ (ಪಿಎಂಎಲ್‌ಎ) ಅಡಿ ದಾಖಲಾದ ಪ್ರಕರಣಗಳ ವಿಚಾರಣೆ ನಡೆಸುವ ಮುಂಬೈ ಸೆಷನ್ಸ್‌ ನ್ಯಾಯಾಲಯವು ಅವರಿಗೆ ಜಾಮೀನು ಮಂಜೂರು ಮಾಡಿದೆ.

Chanda Kochhar, Mumbai Sessions Court
Chanda Kochhar, Mumbai Sessions Court

ಪ್ರಕರಣದ ತನಿಖೆ ನಡೆಸುತ್ತಿರುವ ವಕೀಲ ವಿಜಯ್‌ ಅಗರ್ವಾಲ್‌ ಅವರು ಕೊಚ್ಚಾರ್‌ ಜಾರಿ ನಿರ್ದೇಶನಾಲಯ ಕೈಗೊಂಡಿರುವ ತನಿಖೆಗೆ ಸಹಕರಿಸುತ್ತಿದ್ದಾರೆ ಎಂದು ವಾದಿಸಿದರು. ಪಿಎಂಎಲ್‌ಎ ಕಾಯಿದೆಯ ಸೆಕ್ಷನ್‌ 45ರ ಅಡಿ ಜಾಮೀನುರಹಿತ ಪ್ರಕರಣಗಳಲ್ಲೂ ಮಹಿಳೆಯರು ಜಾಮೀನಿಗೆ ಅರ್ಹರು ಎಂದು ಹೇಳಲಾಗಿದೆ ಎಂದರು. ಈ ವಾದವನ್ನು ಒಪ್ಪಿದ ಪೀಠವು ವಿಶೇಷ ನ್ಯಾಯಾಲಯದ ಅನುಮತಿ ಪಡೆಯದೇ ಕೊಚ್ಚಾರ್‌ ಅವರು ದೇಶ ತೊರೆಯುವಂತಿಲ್ಲ ಎಂದಿತು. ತಮ್ಮ ಸ್ಥಾನ ದುರ್ಬಳಕೆ ಮಾಡಿಕೊಂಡು ಕೊಚ್ಚಾರ್‌ ಅವರು ವಿಡಿಯೊಕಾನ್‌ ಸಮೂಹಕ್ಕೆ ಸಾಲ ಮಂಜೂರು ಮಾಡಿದ್ದು, ಅದಕ್ಕಾಗಿ ಪತಿ ದೀಪಕ್‌ ಕೊಚ್ಚಾರ್‌ ಮೂಲಕ ಕಾನೂನುಬಾಹಿರವಾಗಿ ಲಾಭ ಪಡೆದುಕೊಂಡಿದ್ದಾರೆ ಎಂಬ ಆರೋಪ ಅವರ ಮೇಲಿದೆ. ವಿಡಿಯೊಕಾನ್‌ ಇಂಡಸ್ಟ್ರೀಸ್‌ ಲಿಮಿಟೆಡ್‌ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ವಿ ಎನ್‌ ಧೂತ್‌ ಮತ್ತು ದೀಪಕ್‌ ಕೊಚ್ಚಾರ್‌ ಆಪ್ತರು ಎಂಬುದು ಜಾರಿ ನಿರ್ದೇಶನಾಲಯದ ವಾದವಾಗಿದೆ.

ಬಿಜೆಪಿ ರಥಯಾತ್ರೆ: ರಾಜಕೀಯ ಪ್ರೇರಿತ ಎಂದು ಪಿಐಎಲ್‌ ವಜಾಗೊಳಿಸಿದ ಕಲ್ಕತ್ತಾ ಹೈಕೋರ್ಟ್‌

ಭಾರತೀಯ ಜನತಾ ಪಕ್ಷ ನಡೆಸುವ ರಥಯಾತ್ರೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಮನವಿಯನ್ನು ಗುರುವಾರ ಕಲ್ಕತ್ತಾ ಹೈಕೋರ್ಟ್‌ ವಜಾಗೊಳಿಸಿದ್ದು, ತೃಣಮೂಲ ಕಾಂಗ್ರೆಸ್‌ನ ಕಾನೂನು ಘಟಕದ ಜೊತೆ ಸಂಪರ್ಕ ಹೊಂದಿರುವ ವಕೀಲ ಸಲ್ಲಿಸಿರುವ ಮನವಿಯು ರಾಜಕೀಯ ಪ್ರೇರಿತ ಎಂದಿದೆ. ರಥಯಾತ್ರೆ ನಡೆಸುವುದರಿಂದ ಕೋವಿಡ್‌ ವ್ಯಾಪಿಸುವ ಸಾಧ್ಯತೆ ಇದ್ದು, ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆ ಉಂಟಾಗಲಿದೆ ಎಂದು ಅರ್ಜಿದಾರ ರಾಮಪ್ರಸಾದ್‌ ಸರ್ಕಾರ್‌ ಮನವಿಯಲ್ಲಿ ವಿವರಿಸಿದ್ದರು.

BJP Rath Yatra, Calcutta HC
BJP Rath Yatra, Calcutta HC

ಅರ್ಜಿದಾರ ವಕೀಲರು ಕಲ್ಕತ್ತಾ ಹೈಕೋರ್ಟ್‌ ತೃಣಮೂಲ ಕಾನೂನು ಘಟಕದ ಭಾಗವಾಗಿದ್ದಾರೆ. ಅದು ರಾಜಕೀಯ ಪಕ್ಷದ ಜೊತೆ ಗುರುತಿಸಿಕೊಂಡಿದ್ದು, ಸದ್ಯ ಆ ಪಕ್ಷ ಅಧಿಕಾರದಲ್ಲಿರುವುದರಿಂದ ಸದರಿ ರಿಟ್‌ ಮನವಿಯು ರಾಜಕೀಯ ಪ್ರೇರಿತವಾಗಿದೆ ಎಂದು ನ್ಯಾಯಮೂರ್ತಿಗಳಾದ ರಾಜೇಶ್‌ ಬಿಂದಾಲ್‌ ಮತ್ತು ಅನಿರುದ್ಧ ರಾಯ್‌ ಅವರಿದ್ದ ವಿಭಾಗೀಯ ಪೀಠ ಹೇಳಿದೆ. “ಅಧಿಕಾರದಲ್ಲಿರುವ ರಾಜಕೀಯ ಪಕ್ಷದ ಜೊತೆ ನೇರ ಸಂಪರ್ಕ ಹೊಂದಿರುವ ವಕೀಲ ಸಲ್ಲಿಸಿರುವ ರಿಟ್‌ ಮನವಿಯಲ್ಲಿ ಮತ್ತೊಂದು ರಾಜಕೀಯ ಪಕ್ಷದ ವಿರುದ್ಧ ಚುನಾವಣೆಯ ಸಂದರ್ಭದಲ್ಲಿ ಸಮಸ್ಯೆ ಎತ್ತುವುದರಲ್ಲಿ ವಿಸ್ತೃತವಾದ ಸಾರ್ವಜನಿಕ ಹಿತಾಸಕ್ತಿ ಇಲ್ಲ. ಇದರಲ್ಲಿ ಖಾಸಗಿ ಹಿತಾಸಕ್ತಿ ಇದೆ ಎಂದು ಹೇಳಬಹುದು” ಎಂದು ಆದೇಶದಲ್ಲಿ ಹೇಳಿದೆ. ಸದರಿ ಪ್ರಕರಣದ ಕುರಿತು ಅಧಿಕಾರಿಗಳು ಕ್ರಮಕೈಗೊಳ್ಳಬೇಕಿದ್ದು, ಅರ್ಜಿದಾರರು ಮನವಿ ಸಲ್ಲಿಸುವ ಅಗತ್ಯವಿರಲಿಲ್ಲ ಎಂದು ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ವೈ ಜೆ ದಸ್ತೂರ್‌ ಹೇಳಿದ್ದಾರೆ.

ವಿದ್ಯಾವಂತ ಯುವಜನತೆ ತಮ್ಮ ಸಂಗಾತಿ ಆಯ್ಕೆ ಮಾಡಿಕೊಂಡರೆ ಜಾತಿ ಮತ್ತು ಸಮುದಾಯ ಸಮಸ್ಯೆ ಕುಂದಲಿದೆ: ಸುಪ್ರೀಂ ಕೋರ್ಟ್‌

ಬಾಳ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ವಿಚಾರದಲ್ಲಿ ವ್ಯಕ್ತಿಯೊಬ್ಬರ ಸ್ವಾತಂತ್ರ್ಯವು ಆಕೆಯ ಘನತೆಯ ಅವಿಭಾಜ್ಯ ಭಾಗ ಎಂದು ಈಚೆಗೆ ಸುಪ್ರೀಂ ಕೋರ್ಟ್‌ ಪುನರುಚ್ಚರಿಸಿದೆ. ತಮ್ಮ ಇಚ್ಛೆಯ ವ್ಯಕ್ತಿಯನ್ನು ವಿವಾಹ ಮಾಡಿಕೊಳ್ಳುವ ಯುವಕರು ಹಿರಿಯರಿಂದ ಬೆದರಿಕೆಗೆ ಒಳಗಾಗುವುದು ಮುಂದುವರೆದಿದ್ದು, ನ್ಯಾಯಾಲಯಗಳು ಮೇಲಿಂದ ಮೇಲೆ ಅವರ ಬೆಂಬಲಕ್ಕೆ ಬರುತ್ತಿವೆ ಎಂದು ನ್ಯಾಯಮೂರ್ತಿಗಳಾದ ಸಂಜಯ್‌ ಕಿಶನ್‌ ಕೌಲ್‌ ಮತ್ತು ಹೃಷಿಕೇಷ್‌ ರಾಯ್‌ ಅವರಿದ್ದ ಪೀಠ ಹೇಳಿದೆ.

Sanjay Kishan Kaul and Hrishikesh Roy
Sanjay Kishan Kaul and Hrishikesh Roy

“ವಿವಾಹದ ಅನ್ಯೋನ್ಯತೆಗಳು ಗೌಪ್ಯತೆಯ ಒಂದು ಪ್ರಮುಖ ವಲಯದೊಳಗೆ ಇರುತ್ತವೆ, ಅದನ್ನು ಉಲ್ಲಂಘಿಸಲಾಗುವುದಿಲ್ಲ. ಸಂವಿಧಾನದ 21ನೇ ವಿಧಿಯ ಅನ್ವಯ ಇಚ್ಛೆಯ ವ್ಯಕ್ತಿಯ ಜೊತೆ ವಿವಾಹ ಮಾಡಿಕೊಳ್ಳುವುದು ಅವಿಭಾಜ್ಯ ಅಂಶವಾಗಿದೆ” ಎಂದು ಪೀಠ ಹೇಳಿದೆ. “ವಿದ್ಯಾವಂತ ಯುವತಿ/ಯುವಕರು ತಮ್ಮ ಬಾಳ ಸಂಗಾತಿಗಳನ್ನು ಆರಿಸಿಕೊಳ್ಳುತ್ತಿದ್ದಾರೆ. ಪ್ರತಿಯಾಗಿ ಜಾತಿ ಮತ್ತು ಸಮುದಾಯವು ಪ್ರಮುಖ ಪಾತ್ರವಹಿಸುವ ಸಮಾಜದ ಹಿಂದಿನ ಕಟ್ಟುಪಾಡುಗಳಿಂದ ವಿಮುಖರಾಗುತ್ತಿದ್ದಾರೆ. ಬಹುಶಃ ಇಂತಹ ಅಂತರ್ಜಾತಿ ವಿವಾಹದಿಂದ ಜಾತಿ ಮತ್ತು ಸಮುದಾಯದ ಸಮಸ್ಯೆ ನಿವಾರಣೆಯಾಗಬಹುದು. ಆದರೆ, ಈ ಯುವಕರು ಹಿರಿಯರಿಂದ ಬೆದರಿಕೆಗಳನ್ನು ಎದುರಿಸುತ್ತಿದ್ದಾರೆ. ನ್ಯಾಯಾಲಯಗಳು ಈ ಯುವಕರ ನೆರವಿಗೆ ಧಾವಿಸುತ್ತಿವೆ” ಎಂದಿದ್ದಾರೆ. ಕರ್ನಾಟಕ ಮೂಲದ ಕಾಲೇಜು ಉಪನ್ಯಾಸಕಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಾಲಯ ತೀರ್ಪು ಪ್ರಕಟಿಸಿದೆ. ಆಕೆಯ ವಿರುದ್ಧ ಅವರ ಪೋಷಕರು ನಾಪತ್ತೆ ದೂರು ದಾಖಲಿಸಿದ್ದರು. ಪೋಷಕರಿಗೆ ವಿಷಯ ತಿಳಿಸದೇ ಉತ್ತರ ಪ್ರದೇಶ ಮೂಲದ ವ್ಯಕ್ತಿಯೊಂದಿಗೆ ಆಕೆ ವಿವಾಹವಾಗಿದ್ದರು. ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗುತ್ತಿದ್ದಂತೆ ಆಕೆ ತಮ್ಮ ವಿವಾಹ ನೋಂದಣಿ ಪ್ರತಿಯನ್ನು ವಾಟ್ಸಾಪ್‌ ಮೂಲಕ ಕಳುಹಿಸಿದ್ದರು. ಪ್ರಕರಣದ ತನಿಖಾಧಿಕಾರಿಯು ಅರ್ಜಿದಾರೆಯಾದ ಆಕೆಗೆ ನೋಟಿಸ್‌ ಜಾರಿಮಾಡಿದ್ದು, ಬೆಳಗಾವಿ ಜಿಲ್ಲೆಯ ಮುರಗೋಡು ಪೊಲೀಸ್‌ ಠಾಣೆಯಲ್ಲಿ ತನಿಖೆಗೆ ಹಾಜರಾಗುವಂತೆ ಸೂಚಿಸಿದ್ದರು. ಆಕೆಯ ಪೋಷಕರು ಮತ್ತು ಸಂಬಂಧಿಗಳು ಬೆದರಿಕೆ ಹಾಕಿದ್ದಾರೆ. ಅಲ್ಲದೇ ತಾನು ಪತಿಯ ಜೊತೆ ವಾಸವಾಗಿರುವುದರಿಂದ ತಾವು ಸೂಚಿಸಿದ ಸ್ಥಳದಲ್ಲಿ ವಿಚಾರಣೆಗೆ ಹಾಜರಾಗಲು ಆಗದು ಎಂದಿದ್ದರು.

ಫ್ರಾಂಕ್ಲಿನ್ ಟೆಂಪಲ್ಟನ್ ಮ್ಯೂಚುವಲ್ ಫಂಡ್ ಯೋಜನೆ ಮುಕ್ತಾಯಗೊಳಿಸುವ ವಿರುದ್ಧದ ಹೂಡಿಕೆದಾರರ ‌ಆಕ್ಷೇಪಣೆ ವಜಾಗೊಳಿಸಿದ ಸುಪ್ರೀಂ ಕೋರ್ಟ್

ಆರು ಫ್ರಾಂಕ್ಲಿನ್ ಟೆಂಪಲ್ಟನ್ ಮ್ಯೂಚುವಲ್ ಫಂಡ್ ಯೋಜನೆಗಳಿಗೆ ಸಂಬಂಧಿಸಿದಂತೆ ಹೂಡಿಕೆದಾರರು (ಯುನಿಟ್‌ಹೋಲ್ಡರ್ಸ್)‌ ಎತ್ತಿದ್ದ ತಗಾದೆಗಳನ್ನು ವಜಾಗೊಳಿಸಿ ಸುಪ್ರೀಂ ಕೋರ್ಟ್‌ ಶುಕ್ರವಾರ ಆದೇಶ ಹೊರಡಿಸಿದೆ. ಇ-ಮತದಾನ ಫಲಿತಾಂಶವನ್ನು ನ್ಯಾಯಾಲಯ ಎತ್ತಿ ಹಿಡಿದಿದ್ದು, ಈ ಹಿಂದೆ ನ್ಯಾಯಾಲಯದ ಆದೇಶದಂತೆ ಹೂಡಿಕೆದಾರರಿಗೆ ರೂ. 9,122 ಕೋಟಿ ವಿತರಣೆ ಮಾಡಲಾಗುವುದು.

Franklin Templeton, Supreme Court
Franklin Templeton, Supreme Court

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಮ್ಯೂಚುಯಲ್ ಫಂಡ್‌ಗಳ ಮೂಲಕ ಹಣವನ್ನು ವಿತರಿಸಲು ಈ ಹಿಂದೆ ಆದೇಶಿಸಲಾಗಿತ್ತು. ಇದೀಗ ನ್ಯಾಯಮೂರ್ತಿ ಎಸ್ ಅಬ್ದುಲ್ ನಜೀರ್ ಮತ್ತು ಸಂಜೀವ್ ಖನ್ನಾ ಅವರ ನ್ಯಾಯಪೀಠ ಹೂಡಿಕೆದಾರರ ಎಲ್ಲ ತಗಾದೆಗಳನ್ನು ವಜಾಗೊಳಿಸಿ ಆದೇಶ ಹೊರಡಿಸಿದೆ. ಟೆಂಪಲ್ಟನ್‌ ತನ್ನ ಆರು ಮ್ಯೂಚುಯಲ್‌ ಫಂಡ್‌ ಯೋಜನೆಗಳನ್ನು ಕಳೆದ ವರ್ಷ ಏಕಾಏಕಿ ಅಂತ್ಯಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ಪ್ರಕರಣವು ನ್ಯಾಯಾಲಯದ ಮೆಟ್ಟಿಲೇರಿತ್ತು.

Kannada Bar & Bench
kannada.barandbench.com