2020ರ ದೆಹಲಿ ಗಲಭೆಗಳ ತನಿಖೆಗಾಗಿ ದೆಹಲಿಯ ವಿಧಾನಸಭೆ ರಚಿಸಿದ್ದ ಶಾಂತಿ ಮತ್ತು ಸಾಮರಸ್ಯ ಸಮಿತಿ (ಸಮಿತಿ) ಅಸಾಂವಿಧಾನಿಕವಾಗಿದೆ ಎಂದು ಕೇಂದ್ರ ಸರ್ಕಾರ ಮತ್ತು ಫೇಸ್‌ಬುಕ್ ಎರಡೂ ಮಂಗಳವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿವೆ (ಅಜಿತ್ ಮೋಹನ್ ಮತ್ತು ವಿಧಾನಸಭೆ, ದೆಹಲಿ ನಡುವಣ ಪ್ರಕರಣ). ದ್ವೇಷದ ಭಾಷಣ ತಡೆಯುವಲ್ಲಿ ಫೇಸ್‌ಬುಕ್‌ನಂತಹ ಸಾಮಾಜಿಕ ಮಾಧ್ಯಮ ದೈತ್ಯರ ಪಾತ್ರವನ್ನು ಪರಿಶೀಲಿಸುವ ಸಮಿತಿಯನ್ನು ದೆಹಲಿ ವಿಧಾನಸಭೆ ರಚಿಸುವಂತಿಲ್ಲ. ವಿಷಯ ಅದರ ವ್ಯಾಪ್ತಿಗೆ ಬರುವುದಿಲ್ಲ ಎಂದು ಕೇಂದ್ರ ಮತ್ತು ಫೇಸ್‌ಬುಕ್ ವಾದಿಸಿವೆ.
" ಮಾಹಿತಿ ತಂತ್ರಜ್ಞಾನ ಮತ್ತು ಕಾನೂನು ರೀತಿಯ ವಿಚಾರಗಳು ಸಂಸತ್ತಿನ ವ್ಯಾಪ್ತಿಗೆ ಬರುತ್ತವೆಯೇ ಹೊರತು ಅಂಥ ವಿಚಾರಗಳು ದೆಹಲಿ ವಿಧಾನಸಭೆ ಅಥವಾ ಇನ್ನಾವುದೇ ವಿಧಾನಸಭೆಯ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು ಕೇಂದ್ರ ಸರ್ಕಾರವನ್ನು ಪ್ರತಿನಿಧಿಸುವ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ತಿಳಿಸಿದರು. ಫೇಸ್‌ಬುಕ್ ಪರ ವಾದ ಮಂಡಿಸಿದ ಹಿರಿಯ ನ್ಯಾಯವಾದಿ ದಾತಾರ್‌ಕೇಂದ್ರ ಪಟ್ಟಿಯಲ್ಲಿನ ವಿಷಯಕ್ಕೆ ಸಂಬಂಧಿಸಿದಂತೆ ದೆಹಲಿ ವಿಧಾನಸಭೆಗೆ ಸಾಕ್ಷಿಯನ್ನು ಕರೆಸಿಕೊಳ್ಳುವ ಅಧಿಕಾರ ಇಲ್ಲ ಎಂದು ಹೇಳಿದರು. ಬುಧವಾರ ದೆಹಲಿ ವಿಧಾನಸಭೆ ಪರವಾಗಿ ಹಿರಿಯ ನ್ಯಾಯವಾದಿ ಡಾ ಅಭಿಷೇಕ್ ಮನು ಸಿಂಘ್ವಿ ವಾದ ಮಂಡಿಸಲಿದ್ದಾರೆ.
ಪುರುಷರು ಮತ್ತು ಮಹಿಳೆಯರಿಗೆ ಏಕರೂಪದ ವಿವಾಹ ವಯಸ್ಸು ನಿಗದಿಪಡಿಸುವ ಕುರಿತು ವಿವಿಧ ಹೈಕೋರ್ಟ್‌ಗಳಲ್ಲಿ ಸಲ್ಲಿಸಲಾಗಿರುವ ಮನವಿಗಳನ್ನು ಅಲ್ಲಿಂದ ಸುಪ್ರೀಂ ಕೋರ್ಟ್‌ಗೆ ವರ್ಗಾಯಿಸಬೇಕೆಂದು ಕೋರಿ ಸಲ್ಲಿಸಿದ್ದ ಮನವಿಗೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯವು ಸೋಮವಾರ ನೋಟಿಸ್ ಜಾರಿ ಮಾಡಿದೆ. ಬಹು ವಿಧದ ಮೊಕದ್ದಮೆಗಳು ಮತ್ತು ಸಂವಿಧಾನದ 14, 15, 21ನೇ ವಿಧಿಯ ವ್ಯಾಖ್ಯಾನದ ಕುರಿತು ವ್ಯಕ್ತವಾಗಬಹುದಾದ ಸಂಘರ್ಷಾತ್ಮಕ ಅಭಿಪ್ರಾಯಗಳು, ಲಿಂಗ ನ್ಯಾಯದ ಕುರಿತ ತೀರ್ಪುಗಳು ಮತ್ತು ಲಿಂಗ ಸಮಾನತೆಯ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್, ದೆಹಲಿ ಮತ್ತು ರಾಜಸ್ಥಾನ ಹೈಕೋರ್ಟ್‌ಗಳಲ್ಲಿ ಬಾಕಿ ಇರುವ ಮನವಿಗಳನ್ನು ಸರ್ವೋಚ್ಚ ನ್ಯಾಯಾಲಯಕ್ಕೆ ವರ್ಗಾಯಿಸುವಂತೆ ಕೋರಿ ವಕೀಲ ಅಶ್ವಿನಿ ಕುಮಾರ್ ಉಪಾಧ್ಯಾಯ ಸಲ್ಲಿಸಿರುವ ವರ್ಗಾವಣೆ ಮನವಿಯಲ್ಲಿ ವಿವರಿಸಲಾಗಿದೆ.
ಏಕರೂಪದ ವಿವಾಹ ವಯಸ್ಸಿನ ಕುರಿತು ಪ್ರಮುಖ ಮನವಿಯಲ್ಲಿ ವಿವರಿಸಿರುವ ಉಪಾಧ್ಯಾಯ ಅವರು ಕೆಲವು ಧರ್ಮಾಧಾರಿತ ಶಾಸನಗಳಿದ್ದು, ಅವುಗಳಲ್ಲಿ ನಿರ್ದಿಷ್ಟ ವಿವಾಹ ವಯಸ್ಸನ್ನು ಉಲ್ಲೇಖಿಸಲಾಗಿದೆ. ಇದು ಸಂವಿಧಾನದ 14 ಮತ್ತು 21ನೇ ವಿಧಿಯ ಅಡಿ ತಾರತಮ್ಯದಿಂದ ಕೂಡಿದೆ ಎಂದಿದ್ದಾರೆ. ಪುರುಷ ಮತ್ತು ಮಹಿಳೆ ವಿವಾಹ ವಯಸ್ಸನ್ನು 21ಕ್ಕೆ ನಿಗದಿಗೊಳಿಸಬೇಕು ಎಂದು ಉಪಾಧ್ಯಾಯ ಕೋರಿದ್ದಾರೆ.
ಹೋರಾಟಗಾರ್ತಿ ಶೆಹ್ಲಾ ರಷೀದ್‌ಗೆ ಸಾಮಾಜಿಕ ಮಾಧ್ಯಮದ ಮೂಲಕ ಅಶ್ಲೀಲ ಸಂದೇಶ ರವಾನಿಸಿದ್ದ ಹಾಗೂ ಆಕೆಯನ್ನು ಧರ್ಮ ಮತ್ತು ಸಮುದಾಯದ ಹಿನ್ನೆಲೆಯಲ್ಲಿ ಹಳಿದಿದ್ದ ಆರೋಪಿಗೆ ಶ್ರೀನಗರ ನ್ಯಾಯಾಲಯವು ಜಾಮೀನು ರದ್ದುಗೊಳಿಸಿದೆ. ಅರ್ಜಿದಾರರಿಗೆ ಸ್ವಾತಂತ್ರ್ಯ ಹೇಗೆ ಅತ್ಯಮೂಲ್ಯವಾಗಿರುತ್ತದೋ ಹಾಗೆಯೇ ಸಮಾಜವು ಶಾಂತಿ ಬಯಸುವುದರ ಜೊತೆಗೆ ಕಾನೂನು ಮತ್ತು ಸುವ್ಯವಸ್ಥೆ ಸರಿಯಾಗಿರಬೇಕು ಎಂದೂ ಬಯಸುತ್ತದೆ ಎಂದು ನ್ಯಾಯಾಲಯವು ಈ ವೇಳೆ ಹೇಳಿತು.
ಉತ್ತಮ ಪ್ರಜೆಯ ರೀತಿಯಲ್ಲಿ ಅರ್ಜಿದಾರರು ಡಿಜಿಟಲ್ ವೇದಿಕೆಗಳಲ್ಲಿ ತಮ್ಮ ನಡವಳಿಕೆ ಮತ್ತು ಪದ ಬಳಕೆಯಲ್ಲಿ ಜಾಗೃತಿ ಮತ್ತು ಎಚ್ಚರಿಕೆ ವಹಿಸಬೇಕು ಎಂದು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಹಕ್ ನವಾಜ್ ಜರ್ಗರ್ ಹೇಳಿದ್ದು, ಗುಜರಾತ್ ಮೂಲದ ಆರೋಪಿ ಮಿಹಿರ್ ಥಾಕೂರ್ ಪಟೇಲ್‌ಗೆ ನೀಡಲಾಗಿದ್ದ ಮಧ್ಯಂತರ, ನಿರೀಕ್ಷಣಾ ಜಾಮೀನನ್ನು ರದ್ದುಗೊಳಿಸಿದ್ದಾರೆ. ಆರೋಪಿಯು ಅಶ್ಲೀಲ ಸಂದೇಶ ರವಾನಿಸುವುದರ ಜೊತೆಗೆ ತಾನು ಅನುಸರಿಸುತ್ತಿರುವ ಧರ್ಮ ಮತ್ತು ಸಮುದಾಯದ ಮೇಲೆ ದಾಳಿ ಮಾಡುತ್ತಿದ್ದಾರೆ. ಇದು ತನಗೆ ಮತ್ತು ತನ್ನ ಕುಟುಂಬಕ್ಕೆ ಭಾರಿ ಕಿರುಕುಳ ಉಂಟು ಮಾಡಿದೆ ಎಂದು ದೂರುದಾರೆ ಶೆಹ್ಲಾ ಆರೋಪಿಸಿದ್ದರು.