ಮಧ್ಯಪ್ರದೇಶದ 28 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಪ್ರಚಾರದ ವೇಳೆ ಪದೇ ಪದೇ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ ಕಾರಣಕ್ಕೆ ತಮ್ಮ 'ಸ್ಟಾರ್ ಪ್ರಚಾರಕ' ಸ್ಥಾನಮಾನವನ್ನು ಚುನಾವಣಾ ಆಯೋಗ ರದ್ದುಪಡಿಸಿದ್ದನ್ನು ಪ್ರಶ್ನಿಸಿ ಕಾಂಗ್ರೆಸ್ ಮುಖಂಡ ಮಾಜಿ ಮುಖ್ಯಮಂತ್ರಿ ಕಮಲನಾಥ್ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ.
ʼಇಂತಹ ಆದೇಶವೇ ಅಕ್ರಮ ಮತ್ತು ತಮ್ಮ ಹಾಗೂ ಕಾಂಗ್ರೆಸ್ ಪಕ್ಷದ ಸಾಂವಿಧಾನಿಕ ಮತ್ತು ಶಾಸನಾತ್ಮಕ ಹಕ್ಕುಗಳ ಉಲ್ಲಂಘನೆʼ ಎಂದು ಅವರು ಅರ್ಜಿಯಲ್ಲಿ ತಿಳಿಸಿದ್ದಾರೆ. ಅಲ್ಲದೆ ʼಸ್ವಾಭಾವಿಕ ನ್ಯಾಯದ ಮೂಲ ನಿಯಮಗಳನ್ನು ಗಾಳಿಗೆ ತೂರಿ ನ್ಯಾಯದ ನಿರಾಕರಣೆ ಮೂಲಕ ಆದೇಶ ನೀಡಲಾಗಿದೆ. ಆದ್ದರಿಂದ ಅರ್ಜಿ ರದ್ದುಗೊಳಿಸಲು ಸೂಕ್ತವಾದುದು. ತಮಗೆ ಈ ಸಂಬಂಧ ನೋಟಿಸ್ ಕೂಡ ನೀಡದೆ ಸ್ವಾಭಾವಿಕ ನ್ಯಾಯದ ತತ್ವಗಳನ್ನು ಉಲ್ಲಂಘಿಸಲಾಗಿದೆʼ ಎಂದು ಹೇಳಿದ್ದಾರೆ.
ದೇಶದಲ್ಲಿ ನಡೆಯುತ್ತಿರುವ ಬಹುತೇಕ ಕೋಮು ಘರ್ಷಣೆಗಳಿಗೆ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳೇ ಕಾರಣವಾಗಿದ್ದು ದ್ವೇಷ ಭಾಷಣಕ್ಕೆ ಸಾಮಾಜಿಕ ಮಾಧ್ಯಮ ಸಂಸ್ಥೆಗಳನ್ನೇ ನೇರ ಹೊಣೆಯಾಗಿಸಬೇಕು ಎಂದು ಕೋರಿ ವಕೀಲ ವಿನೀತ್ ಜಿಂದಾಲ್ ಎಂಬುವವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ಕೋಮು ಹಿಂಸೆಯಲ್ಲಿ ಸಾಮಾಜಿಕ ಮಾಧ್ಯಮಗಳು ಮಾರಕ ಪಾತ್ರ ವಹಿಸುತ್ತಿದ್ದು ಇದನ್ನು ತಡೆಯುವ ಸಮಯ ಈಗ ಒದಗಿಬಂದಿದೆ. ಫೇಸ್‌ಬುಕ್, ಟ್ವಿಟರ್, ವಾಟ್ಸಪ್ ರೀತಿಯ ಸಾಮಾಜಿಕ ಮಾಧ್ಯಮ ಸಂಸ್ಥೆಗಳನ್ನೇ ಇದಕ್ಕೆ ನೇರ ಹೊಣೆ ಮಾಡಬೇಕು. ಇಂತಹ ವೇದಿಕೆಗಳ ವಿಚಾರಣೆಗಾಗಿ ಪ್ರತ್ಯೇಕ ಕಾನೂನು ರೂಪಿಸಬೇಕು ಎಂದು ಕೋರಲಾಗಿದ್ದು ಟ್ವಿಟರ್ ಇಂಡಿಯಾ ಮತ್ತು ಫೇಸ್‌ಬುಕ್ ಇಂಡಿಯಾ ಸಂಸ್ಥೆಗಳನ್ನು ಪ್ರಕರಣದ ಪ್ರತಿವಾದಿಗಳನ್ನಾಗಿ ಮಾಡಲಾಗಿದೆ.
ಚುನಾವಣಾ ಸಂಬಂಧಿತ ಅರ್ಜಿ ವಿಚಾರಣೆಯ ಸಂದರ್ಭದಲ್ಲಿ ಸಮ್ಮಿಶ್ರ ರಾಜಕೀಯ ಹೊಂದಾಣಿಕೆಗೆ ಸಂಬಂಧಿಸಿದಂತೆ ಸಕಾಲಿಕವಾದ ಅಭಿಪ್ರಾಯವನ್ನು ಈಚೆಗೆ ಕೇರಳ ಹೈಕೋರ್ಟ್ ವ್ಯಕ್ತಪಡಿಸಿದೆ (ಬಾಬಿ ಅಬ್ರಹಾಂ ವರ್ಸಸ್ ಅಬ್ರಹಾಂ ಮತ್ತು ಇತರರು).
ಸಮ್ಮಿಶ್ರ ಪಕ್ಷ ರಾಜಕಾರಣದಲ್ಲಿ ಭಾಗಿಯಾದ ಪಕ್ಷದ ಸದಸ್ಯರು ಸಮ್ಮಿಶ್ರದ ಹಿತಾಸಕ್ತಿಗೆ ವಿರುದ್ಧವಾಗಿ ನಡೆದುಕೊಳ್ಳುವುದು ತಮ್ಮ ಪಕ್ಷದ ವಿರುದ್ಧವೇ ಬಂಡೆದ್ದ ಹಾಗೆ ಎಂದು ನ್ಯಾಯಮೂರ್ತಿ ಎ ಎಂ ಮುಸ್ತಾಕ್ ನೇತೃತ್ವದ ಪೀಠ ಹೇಳಿದೆ. ಗ್ರಾಮ ಪಂಚಾಯಿತಿ ಸದಸ್ಯರಾದ ಅರ್ಜಿದಾರರನ್ನು ಅನರ್ಹಗೊಳಿಸಿ, ಮುಂದಿನ ಆರು ವರ್ಷಗಳ ಅವಧಿಗೆ ಅವರು ಯಾವುದೇ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸ್ಪರ್ಧಿಸದಂತೆ ಆದೇಶಿಸಿದ್ದ ಚುನಾವಣಾ ಆಯೋಗದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿಯ ವಿಚಾರಣೆಯನ್ನು ಪೀಠ ನಡೆಸಿತು.
ಮರ್ಯಾದೆಗೇಡು ಹತ್ಯೆಗೆ ಸಂಬಂಧಿಸಿದಂತೆ ದಾಖಲಾಗಿರುವ ದೂರುಗಳು, ಪ್ರಕರಣಗಳ ವಿಚಾರಣೆಯನ್ನು ತ್ವರಿತಗತಿಯಲ್ಲಿ ನಡೆಸಲಾಗುತ್ತಿದೆಯೇ ಮತ್ತು ಸಂತ್ರಸ್ತರಿಗೆ ಯಾವ ತೆರನಾದ ಭದ್ರತೆ ಕಲ್ಪಿಸಲಾಗಿದೆ ಎಂಬುದನ್ನು ದಾಖಲೆಯಲ್ಲಿ ಸಲ್ಲಿಸುವಂತೆ ಪಂಜಾಬ್ ಮತ್ತು ಹರಿಯಾಣ ಸರ್ಕಾರಗಳಿಗೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ನಿರ್ದೇಶಿಸಿದೆ (ರವಿ ಕುಮಾರ್ ವರ್ಸಸ್ ಪಂಜಾಬ್ ರಾಜ್ಯ).
ನ್ಯಾಯಮೂರ್ತಿ ಅರುಣ್ ಕುಮಾರ್ ತ್ಯಾಗಿ ಅವರನ್ನೊಳಗೊಂಡ ಪೀಠವು ಸಂಪೂರ್ಣ ನ್ಯಾಯ ಒದಗಿಸಲು ಹೈಕೋರ್ಟ್‌ನಲ್ಲಿ ಅಂತರ್ಗತವಾಗಿರುವ ಅಧಿಕಾರ ಚಲಾಯಿಸುವುದು ಅಗತ್ಯ ಎಂದು ಘೋಷಿಸಿದೆ. ಮರ್ಯಾದೆಗೇಡು ಹತ್ಯೆಗೆ ಸಂಬಂಧಿಸಿದ ಪ್ರಕರಣಗಳ ನಿಖರ ಸಂಖ್ಯೆ, ಇಂಥ ಪ್ರಕರಣಗಳ ವಿಚಾರಣೆಯನ್ನು ತ್ವರಿತಗತಿಯಲ್ಲಿ ನಡೆಸಲು ರಾಜ್ಯ ಸರ್ಕಾರ ತೆಗೆದುಕೊಂಡಿರುವ ಕ್ರಮ ಮತ್ತು ಇಂತಹ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಂತ್ರಸ್ತ ಪತ್ನಿ/ಪತಿ ಅಥವಾ ಇತರೆ ಪ್ರಧಾನ ಸಾಕ್ಷಿಗಳನ್ನು ರಕ್ಷಿಸಲು ತೆಗೆದುಕೊಂಡಿರುವ ಕ್ರಮದ ಬಗೆಗೆ ಮಾಹಿತಿ ಒದಗಿಸುವಂತೆ ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ.