ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು | 18-11-2020

>> ರೂ 50 ಕೋಟಿ ಸಹಾಯಧನಕ್ಕಾಗಿ ಮನವಿ >> ಛತ್ ಆಚರಣೆಗೆ ಇಲ್ಲ ದೆಹಲಿ ಹೈಕೋರ್ಟ್‌ ಮನ್ನಣೆ >> ಖಾಸಗಿ ವಾಹನದಲ್ಲಿ ಮಾಸ್ಕ್‌ ಧರಿಸುವ ಕುರಿತಾದ ಪ್ರಕರಣ >> ಸಹಾಯಕ ಶಿಕ್ಷಕರ ನೇಮಕ ಪ್ರಕರಣ
ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು | 18-11-2020

ಹೆಚ್ಚುವರಿಯಾಗಿ ರೂ 50 ಕೋಟಿ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ ಬೆಂಗಳೂರು ವಕೀಲರ ಸಂಘ

ಕೋವಿಡ್‌- 19 ಲಾಕ್‌ಡೌನ್‌ನಿಂದ ಆರ್ಥಿಕ ಸಂಕಷ್ಟದಲ್ಲಿರುವ ಕರ್ನಾಟಕ ರಾಜ್ಯದ ವೃತ್ತಿ ನಿರತ ವಕೀಲ ಸಮುದಾಯಕ್ಕೆ ರೂ 50 ಕೋಟಿ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಅವರಿಗೆ ಬೆಂಗಳೂರು ವಕೀಲರ ಸಂಘ ಮನವಿ ಮಾಡಿದೆ. ಜೊತೆಗೆ ಸರ್ಕಾರದ ವತಿಯಿಂದ ಉಚಿತ ಆರೋಗ್ಯ ವಿಮೆ ಸೌಲಭ್ಯ ನೀಡುವಂತೆ ಕೋರಲಾಗಿದೆ.

Letter of  Bar association, Bangalore
Letter of Bar association, Bangalore

ರಾಜ್ಯದಲ್ಲಿ ಸುಮಾರು ಒಂದು ಲಕ್ಷದಷ್ಟಿರುವ ವಕೀಲರಿಗೆ ಸರ್ಕಾರ ಈಗ ಬಿಡುಗಡೆ ಮಾಡಿರುವ 5 ಕೋಟಿ ರೂಪಾಯಿ ಸಹಾಯಧನ ಸಾಕಾಗದು. ತೆಲಂಗಾಣದಲ್ಲಿ ಸುಮಾರು 25 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ. ದೇಶದ ವಿವಿಧ ರಾಜ್ಯಗಳು ದೊಡ್ಡ ಪ್ರಮಾಣದಲ್ಲಿ ಆರ್ಥಿಕ ನೆರವು ನೀಡಿದ್ದು ಅದೇ ಬಗೆಯ ಸಹಾಯ ನೀಡಬೇಕೆಂದು ಸಂಘದ ಅಧ್ಯಕ್ಷ ಎ ಪಿ ರಂಗನಾಥ, ಪ್ರಧಾನ ಕಾರ್ಯದರ್ಶಿ ಎ ಎನ್‌ ಗಂಗಾಧರಯ್ಯ, ಖಜಾಂಚಿ ಶಿವಮೂರ್ತಿ ವಿನಂತಿಸಿದ್ದಾರೆ.

ಕೋವಿಡ್‌ ಮೂರನೇ ಅಲೆ: ಸಾರ್ವಜನಿಕ ಸ್ಥಳಗಳಲ್ಲಿ ಛತ್‌ ಪೂಜೆ ನಿಷೇಧಿಸುವ ಎಎಪಿ ಸರ್ಕಾರದ ಆದೇಶ ಎತ್ತಿಹಿಡಿದ ದೆಹಲಿ ಹೈಕೋರ್ಟ್‌

ಕೋವಿಡ್‌ ಮೂರನೇ ಅಲೆ ಹಿನ್ನೆಲೆಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಛತ್‌ ಪೂಜೆಗೆ ನಿಷೇಧ ವಿಧಿಸುವ ದೆಹಲಿ ಆಡಳಿತದ ಆದೇಶದಲ್ಲಿ ಹಸ್ತಕ್ಷೇಪ ಮಾಡಲು ದೆಹಲಿ ಹೈಕೋರ್ಟ್‌ ಬುಧವಾರ ನಿರಾಕರಿಸಿದೆ. ದೆಹಲಿ ಸರ್ಕಾರದ ಆದೇಶವನ್ನು ರದ್ದುಗೊಳಿಸುವಂತೆ ಶ್ರೀ ದುರ್ಗಾ ಜನಸೇವಾ ಟ್ರಸ್ಟ್ (ಅರ್ಜಿದಾರರು) ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯವು ವಿಚಾರಣೆ ನಡೆಸಿತು

Chath Pooja
Chath Pooja

ನವೆಂಬರ್ 20 ರಂದು ನಡೆಯಲಿರುವ ಪೂಜಾ ಕಾರ್ಯಕ್ರಮಕ್ಕೆ 1,000 ಜನರಿಗೆ ಅನುಮತಿ ನೀಡಬೇಕೆಂದು ಟ್ರಸ್ಟ್‌ ಕೋರಿತ್ತು. ಆದರೆ ದೊಡ್ಡ ಸಭೆಗಳಿಗೆ ಅನುವು ಮಾಡಿಕೊಟ್ಟರೆ ಅವು ಸೋಂಕಿನ ʼಸೂಪರ್‌ ಪ್ರಸಾರಕʼಗಳಾಗುತ್ತವೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.

ಖಾಸಗಿ ವಾಹನದಲ್ಲಿ ಓಡಾಡಿದರೂ ಮಾಸ್ಕ್‌ ಧರಿಸುವುದು ಕಡ್ಡಾಯ: ಪರಿಹಾರ ಕೋರಿದ್ದ ವಕೀಲರಿಗೆ ದೆಹಲಿ ಸರ್ಕಾರ ಪ್ರತಿಕ್ರಿಯೆ

ಖಾಸಗಿ ವಾಹನ ಖಾಸಗಿ ವಲಯವಲ್ಲ, ವಾಹನದೊಳಗಿರುವ ಯಾವುದೇ ವ್ಯಕ್ತಿ ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು ಎಂದು ದೆಹಲಿ ಹೈಕೋರ್ಟ್‌ಗೆ ದೆಹಲಿ ಸರ್ಕಾರ ತಿಳಿಸಿದೆ. ಕಾರಿನಲ್ಲಿ ಒಬ್ಬನೇ ಇದ್ದರೂ 500 ರೂಪಾಯಿ ದಂಡ ವಿಧಿಸಿದ್ದ ದೆಹಲಿ ಸರ್ಕಾರ ಪ್ರಶ್ನಿಸಿ, 10 ಲಕ್ಷ ರೂಪಾಯಿ ಪರಿಹಾರ ಕೋರಿ ವಕೀಲರೊಬ್ಬರು ಸಲ್ಲಿಸಿದ್ದ ಮನವಿಗೆ ಸಂಬಂಧಿಸಿದ ವಿಚಾರಣೆಯ ವೇಳೆ ದೆಹಲಿ ಸರ್ಕಾರವು ಮೇಲಿನ ವಾದ ಮಂಡಿಸಿದೆ.

person sitting in a car with mask
person sitting in a car with mask

“ಖಾಸಗಿ ಕಾರಿನಲ್ಲಿ ಪ್ರಯಾಣಿಸುತ್ತಿರುವುದರಿಂದ ತಾನು ಸಾರ್ವಜನಿಕ ಸ್ಥಳದಲ್ಲಿ ಇಲ್ಲ ಎಂಬ ಪ್ರಮುಖ ತಗಾದೆಯನ್ನು ಸದರಿ ಪ್ರಕರಣದಲ್ಲಿ ಅರ್ಜಿದಾರರು ಎತ್ತಿದ್ದು, ಈ ಕಾರಣದಿಂದ ಮಾಸ್ಕ್‌ ಧರಿಸದಿರುವುದಕ್ಕೆ ತಮಗೆ ದಂಡ ವಿಧಿಸಲಾಗದು ಎಂದು ಹೇಳಿದ್ದರು. ನಿಯಂತ್ರಣಗಳು/ನಿರ್ದೇಶನಗಳು/ಮಾರ್ಗಸೂಚಿಗಳ ಪ್ರಕಾರ ಯಾವುದೇ ವ್ಯಕ್ತಿ ವೈಯಕ್ತಿಕ ವಾಹನ ಅಥವಾ ಅಧಿಕೃತ ವಾಹನದಲ್ಲಿ ಓಡಾಡಿದರೂ ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು. ಇದು ಎಲ್ಲಾ ಸಾರ್ವಜನಿಕ ಸ್ಥಳಗಳಿಗೂ ಅನ್ವಯವಾಗಲಿದ್ದು, ವೈಯಕ್ತಿಕ ವಾಹನವೂ ಇದರಲ್ಲಿ ಸೇರಲಿದ್ದು, ಅದನ್ನು ಖಾಸಗಿ ವಲಯ ಎಂದು ಹೇಳಲಾಗದು” ಎಂದು ದೆಹಲಿ ಸರ್ಕಾರ ತನ್ನ ಅಫಿಡವಿಟ್‌ನಲ್ಲಿ ವಿವರಿಸಿದೆ.

ಸಹಾಯಕ ಶಿಕ್ಷಕರ ನೇಮಕ: ಕಟ್‌-ಆಫ್‌ ಅಂಕ ಹೆಚ್ಚಿಸಿದ ಉತ್ತರ ಪ್ರದೇಶ ಸರ್ಕಾರದ ನಿರ್ಧಾರ ಎತ್ತಿಹಿಡಿದ ಸುಪ್ರೀಂ ಕೋರ್ಟ್‌

ಉತ್ತರ ಪ್ರದೇಶ ಸರ್ಕಾರವು 69,000 ಶಿಕ್ಷಾ ಮಿತ್ರರನ್ನು (ಸಹಾಯಕ ಶಿಕ್ಷಕರು) ನೇಮಕ ಮಾಡಿಕೊಳ್ಳುವ ಸಂಬಂಧ ಸಾಮಾನ್ಯ ವರ್ಗ ಹಾಗೂ ಮೀಸಲು ವಿಭಾಗದ ಕಟ್‌ ಆಫ್‌ ಅಂಕಗಳನ್ನು ಕ್ರಮವಾಗಿ 65 ಮತ್ತು 60ಕ್ಕೆ ಹೆಚ್ಚಿಸಿರುವ ನಿರ್ಧಾರವನ್ನು ಸುಪ್ರೀಂ ಕೋರ್ಟ್‌ ಬುಧವಾರ ಎತ್ತಿ ಹಿಡಿದಿದೆ.

UU lalit and MM Shantanagoudar
UU lalit and MM Shantanagoudar

ಅಲಾಹಾಬಾದ್‌ ಹೈಕೋರ್ಟ್‌ ತೀರ್ಪನ್ನು ಎತ್ತಿ ಹಿಡಿದಿರುವ ಸುಪ್ರೀಂ ಕೋರ್ಟ್‌ ಉತ್ತರ ಪ್ರದೇಶ ಪ್ರಾಥಮಿಕ ಶಿಕ್ಷಾ ಮಿತ್ರಾ ಸಂಸ್ಥೆ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿದ್ದು, ಮೇನಲ್ಲಿ ಪ್ರಕಟಿಸಲಾಗಿರುವ ಅರ್ಹತಾ ಪರೀಕ್ಷೆ ಫಲಿತಾಂಶ ಆಧರಿಸಿ 37,000 ಶಿಕ್ಷಾ ಮಿತ್ರ ಹುದ್ದೆಗೆ ನೇಮಕಾತಿ ಮಾಡಲು ಸರ್ಕಾರ ಹಸಿರು ನಿಶಾನೆ ತೋರಿದೆ. ನ್ಯಾಯಮೂರ್ತಿಗಳಾದ ಯು ಯು ಲಲಿತ್‌ ಮತ್ತು ಮೋಹನ್‌ ಎಂ ಶಾಂತನಗೌಡರ್‌ ನೇತೃತ್ವದ ವಿಭಾಗೀಯ ಪೀಠವು ತೀರ್ಪು ನೀಡಿದೆ.

Related Stories

No stories found.
Kannada Bar & Bench
kannada.barandbench.com