ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು | 21-11-2020

>> ಪ್ರಿಯಾ ರಮಣಿ ವಿರುದ್ಧದ ಮಾನಹಾನಿ ಪ್ರಕರಣ >> ಕೌಟುಂಬಿಕ ನ್ಯಾಯಾಲಯದ ಆದೇಶ ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿ >>ʼಸೋದರ ಬಂಧುವರ್ಗದ ನಡುವೆ ಮದುವೆ ಮಾನ್ಯವೇ?ʼ
ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು | 21-11-2020

'ಇತ್ಯರ್ಥಕ್ಕೆ ಅವಕಾಶವಿದೆಯೇ?' ರಮಣಿ ವಿರುದ್ಧ ಅಕ್ಬರ್‌ ದಾಖಲಿಸಿರುವ ಮಾನಹಾನಿ ಪ್ರಕರಣದ ವಿಚಾರಣೆ ನಡೆಸುತ್ತಿರುವ ಹೊಸ ನ್ಯಾಯಾಧೀಶರ ಪ್ರಶ್ನೆ

ಕ್ರಿಮಿನಲ್‌ ಮಾನಹಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ಯರ್ಥಕ್ಕೆ ಅವಕಾಶವಿದೆಯೇ ಎಂದು ಪ್ರಿಯಾ ರಮಣಿ ಹಾಗೂ ಎಂ ಜೆ ಅಕ್ಬರ್‌ ಅವರನ್ನು ಈಚೆಗೆ ಹೊಸದಾಗಿ ವರ್ಗಾವಣೆಗೊಂಡು ಆಗಮಿಸಿರುವ ರೋಸ್‌ ಅವೆನ್ಯೂ ನ್ಯಾಯಾಲಯದ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಶನಿವಾರ ಪ್ರಶ್ನಿಸಿದ್ದಾರೆ.

MJ Akbar (L), Priya Ramani (R)
MJ Akbar (L), Priya Ramani (R)

“ಪ್ರಕರಣವು ಸಂಕೀರ್ಣವಾಗಿದೆ. ಇತ್ಯರ್ಥಕ್ಕೆ ಅವಕಾಶವಿದೆಯೇ? ಎಂದು ನ್ಯಾಯಮೂರ್ತಿ ರವೀಂದ್ರ ಕುಮಾರ್‌ ಪಾಂಡೆ ಎರಡೂ ಬದಿಯ ವಕೀಲರನ್ನು ಪ್ರಶ್ನಿಸಿದರು. ನ್ಯಾಯಮೂರ್ತಿಗಳ ಪ್ರಶ್ನೆಗೆ ರಮಣಿ ಅವರ ವಕೀಲ ಭಾವೂಕ್‌ ಚೌಹಾಣ್‌ ನಕಾರಾತ್ಮಕವಾಗಿ ಉತ್ತರಿಸಿದರು. ಎಂ ಜೆ ಅಕ್ಬರ್‌ ಅವರನ್ನು ಪ್ರತಿನಿಧಿಸುತ್ತಿರುವ ಹಿರಿಯ ವಕೀಲೆ ಗೀತಾ ಲೂಥ್ರಾ ಅವರು ತನಗೆ ವಿವರಣೆ ನೀಡುತ್ತಿರುವ ವಕೀಲರ ಸಲಹೆ ಪಡೆಯಬೇಕು ಎಂದರು.

ಹಿಂದೂ ವಿವಾಹ ಕಾಯಿದೆಯ ಅಡಿ ಪತಿಯ ವಿರುದ್ಧ ನಪುಂಸಕ ಎನ್ನುವ ಸುಳ್ಳು ಆರೋಪ ಮಾಡುವುದು ಕ್ರೌರ್ಯ: ದೆಹಲಿ ಹೈಕೋರ್ಟ್‌

ಹಿಂದೂ ವಿವಾಹ ಕಾಯಿದೆ ಅಡಿ ಪತಿಯ ವಿರುದ್ಧ ಪತ್ನಿಯು ನಪುಂಸಕ ಎನ್ನುವ ಮಿಥ್ಯಾರೋಪ ಮಾಡುವುದು ಪತಿಯ ಆರೋಪಕ್ಕೆ ಮಾಡಿದ 'ಪ್ರತ್ಯಾರೋಪ'ವಾಗಿದ್ದರೂ ಸಹ ಕ್ರೌರ್ಯವಾಗುತ್ತದೆ ಎಂದು ದೆಹಲಿ ಹೈಕೋರ್ಟ್‌ ಹೇಳಿದೆ.

Family Court, New Delhi
Family Court, New Delhi

ಕೌಟುಂಬಿಕ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಪತ್ನಿ ಸಲ್ಲಿಸಿರುವ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಮನಮೋಹನ್‌ ಮತ್ತು ಸಂಜೀವ್‌ ನರುಲಾ ಅವರಿದ್ದ ವಿಭಾಗೀಯ ಪೀಠವು ಆದೇಶ ಹೊರಡಿಸಿದೆ.

ಪಂಜಾಬ್‌ ಮತ್ತು ಹರ್ಯಾಣ ಹೈಕೋರ್ಟ್ ಮುಂದೆ ಎದುರಾಯಿತು, 'ಸೋದರ ಬಂಧುವರ್ಗದ ನಡುವೆ ಮದುವೆ/ ಲಿವ್‌ ಇನ್‌ ಸಂಬಂಧ ಸಾಧ್ಯವೇ' ಎನ್ನುವ ಪ್ರಶ್ನೆ!‌

17 ವರ್ಷದ ಅಪ್ರಾಪ್ತೆಯನ್ನು ಅಪಹರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ನಡೆಸಿರುವ ಪಂಜಾಬ್‌ ಮತ್ತು ಹರ್ಯಾಣ ಹೈಕೋರ್ಟ್ ಮುಂದೆ,‌ 'ಸೋದರ ಬಂಧುವರ್ಗದ ನಡುವೆ (ಸಪಿಂಡ) ಮದುವೆ/ಲಿವ್‌ ಇನ್‌ ಸಂಬಂಧ ಸಾಧ್ಯವೇ' ಎನ್ನುವ ಪ್ರಶ್ನೆ ಎದುರಾಯಿತು. ಈ ಬಗ್ಗೆ ಸರ್ಕಾರದ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದ್ದರು.

Punjab & Haryana High Court to examine the legality of Marriage/Live-in Relationship Between First Cousins
Punjab & Haryana High Court to examine the legality of Marriage/Live-in Relationship Between First Cousins

ಅಪ್ರಾಪ್ತೆ ಮತ್ತು ಅರ್ಜಿದಾರರು ಸೋದರ ಬಂಧುವರ್ಗದವರು ಎನ್ನುವ ಅಂಶವನ್ನು ಮುಚ್ಚಿಟ್ಟಿರುವುದನ್ನು ಗಮನಿಸಿದ ನ್ಯಾಯಾಲಯವು, ಅವರ ಪ್ರಸ್ತಾವಿತ ಮದುವೆಯೂ ಕೂಡ ಅಕ್ರಮವಾಗುತ್ತದೆ ಎನ್ನುವ ತೀರ್ಪು ನೀಡಿತು. “ಅರ್ಜಿದಾರರು ತಾನು ಬಾಲಕಿಯ ಸೋದರ ಸಂಬಂಧಿ ಎಂಬ ಅಂಶವನ್ನು ಬಹಿರಂಗಪಡಿಸಿಲ್ಲ. ಜೊತೆಗೆ 18 ವರ್ಷ ತುಂಬಿದ ನಂತರ ಆಕೆಯನ್ನು ಮದುವೆಯಾಗುವುದಾಗಿ ಅರ್ಜಿದಾರ ಹೇಳುತ್ತಿರುವುದು ಕೂಡ ಅಕ್ರಮವಾಗುತ್ತದೆ. ಹೀಗಾಗಿ ಅರ್ಜಿದಾರರ ಪರ ವಕೀಲರು ವಾದ ಮಂಡಿಸಲು ಇನ್ನಷ್ಟು ಕಾಲಾವಕಾಶ ಬೇಕಾಗಬಹುದು” ಎಂದು ಅಭಿಪ್ರಾಯಪಟ್ಟಿತು.

ವಿಚಾರಣೆಯನ್ನು 2021ರ ಜನವರಿ 11ಕ್ಕೆ ಮುಂದೂಡಲಾಗಿದೆ.

Related Stories

No stories found.
Kannada Bar & Bench
kannada.barandbench.com