ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಟೀಕೆಗಳು ಅಪ್‌ಲೋಡ್ ಆಗುತ್ತಲೇ ಇದ್ದರೆ ಅದರಿಂದ ಉಂಟಾಗುವ ಹಾನಿಯನ್ನು ಲೆಕ್ಕಹಾಕಲು ಸಾಧ್ಯವಿಲ್ಲ ಎಂದು ಮದ್ರಾಸ್ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಈ ಮೂಲಕ ಕಲ್ಕತ್ತಾ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಸಿ ಎಸ್ ಕರ್ಣನ್ ಅವರ ಆಕ್ಷೇಪಾರ್ಹ ಹೇಳಿಕೆಗಳನ್ನು ಆನ್‌ಲೈನ್ ವೇದಿಕೆಗಳಲ್ಲಿ ನಿರ್ಬಂಧಿಸುವಂತೆ ಅಧಿಕಾರಿಗಳಿಗೆ ಆದೇಶ ನೀಡಿದೆ.
ಹಿರಿಯ ವಕೀಲ ಎಸ್ ಪ್ರಭಾಕರನ್ ಅವರ ಅಹವಾಲನ್ನು ಪುರಸ್ಕರಿಸಿದ ನ್ಯಾಯಮೂರ್ತಿಗಳಾದ ಎಂ ಸತ್ಯನಾರಾಯಣನ್ ಮತ್ತು ಆರ್ ಹೇಮಲತಾ ಅವರಿದ್ದ ಪೀಠ ಅರ್ಜಿ ಸಲ್ಲಿಸಿರುವ ತಮಿಳುನಾಡು ವಕೀಲರ ಪರಿಷತ್ತಿಗೆ ಮಧ್ಯಂತರ ಪರಿಹಾರ ಒದಗಿಸಲು ಅನುಮತಿ ನೀಡಿತು. ನ್ಯಾ. ಕರ್ಣನ್ ಅವರ ವಿರುದ್ಧ ಕ್ರಿಮಿನಲ್ ಮತ್ತು ಕಾನೂನು ಕ್ರಮಗಳನ್ನು ಜಾರಿಗೊಳಿಸುವಂತೆ ಕೋರಿ ಪರಿಷತ್ತು ಅರ್ಜಿ ಸಲ್ಲಿಸಿತ್ತು. ಜೊತೆಗೆ ಅವರ ಹೇಳಿಕೆಗಳನ್ನು ಒಳಗೊಂಡಿದ್ದ, ಫೇಸ್‌ಬುಕ್, ಯೂಟ್ಯೂಬ್ ಮತ್ತು ಗೂಗಲ್ ಹೋಸ್ಟ್ ಮಾಡಿದ್ದ ಜಾಲತಾಣಗಳ ಯುಆರ್‌ಎಲ್ ನಿರ್ಬಂಧ ಮಾಡುವಂತೆ ಮನವಿ ಸಲ್ಲಿಸಿತ್ತು. ಕರ್ಣನ್ ಅವರ ಆರೋಪಗಳು ಮೇಲ್ನೋಟಕ್ಕೆ ನ್ಯಾಯಾಂಗ ನಿಂದನೆಯಿಂದ ಕೂಡಿದೆ ಎಂದು ನ್ಯಾಯಾಲಯ ತಿಳಿಸಿದೆ.
ಒಳಾಂಗಣ ವಿನ್ಯಾಸಕಾರ ಅನ್ವಯ್ ನಾಯಕ್ ಮತ್ತು ಅವರ ತಾಯಿಯ ಆತ್ಮಹತ್ಯೆಗೆ ಪ್ರೇರೇಪಿಸಿದ ಪ್ರಕರಣದಲ್ಲಿ ಮಧ್ಯಂತರ ಜಾಮೀನು ಕೋರಿ ರಿಪಬ್ಲಿಕ್ ಟಿವಿ ಪ್ರಧಾನ ಸಂಪಾದಕ ಅರ್ನಾಬ್ ಗೋಸ್ವಾಮಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ಬುಧವಾರ ಸುಪ್ರೀಂಕೋರ್ಟ್‌ನಲ್ಲಿ ನಡೆಯಲಿದೆ.
ನವೆಂಬರ್ 9ರ ಬಾಂಬೆ ಹೈಕೋರ್ಟ್ ಆದೇಶದ ವಿರುದ್ಧ ಸಲ್ಲಿಸಿರುವ ಮೇಲ್ಮನವಿಯನ್ನು ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್ ಮತ್ತು ಇಂದಿರಾ ಬ್ಯಾನರ್ಜಿ ಅವರಿರುವ ಪೀಠ ವಿಚಾರಣೆ ನಡೆಸಲಿದೆ. ಜಾಮೀನು ಪಡೆಯಲು ಸೆಷನ್ಸ್ ನ್ಯಾಯಾಲಯವನ್ನು ಕೋರುವಂತೆ ಸೂಚಿಸಿ ಅರ್ನಾಬ್, ಫಿರೋಜ್ ಶೇಖ್ ಮತ್ತು ನಿತೀಶ್ ಶಾರ್ದಾ ಅವರು ಸಲ್ಲಿಸಿದ್ದ ಮನವಿಯನ್ನು ಹೈಕೋರ್ಟ್ ತಿರಸ್ಕರಿಸಿತ್ತು. ಫಿರೋಜ್ ಶೇಖ್ ಸಂಬಂಧಿ, ಪರ್ವೀನ್ ಶೇಖ್ ಅವರು ಆರೋಪಿಗಳಿಗೆ ಜಾಮೀನು ದೊರಕಿಸಿಕೊಡುವಂತೆ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ.
ಕೋವಿಡ್ ರೋಗಿಗಳಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಶೇ. 80ರಷ್ಟು ತುರ್ತು ನಿಗಾ ಘಟಕದ ಹಾಸಿಗೆಗಳನ್ನು ಮೀಸಲಿಡುವ ದೆಹಲಿ ಸರ್ಕಾರದ ಯೋಜನೆಗೆ ತಡೆಯಾಜ್ಞೆ ತೆರೆವುಗೊಳಿಸಲು ಸುಪ್ರೀಂ ಕೋರ್ಟ್ ಮಂಗಳವಾರ ನಿರಾಕರಿಸಿದೆ.
ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್ ಮತ್ತು ಬಿ ಆರ್ ಗವಾಯಿ ಅವರು ಪ್ರಕರಣವು ದೆಹಲಿ ಹೈಕೋರ್ಟ್‌ನಲ್ಲಿ ಬಾಕಿ ಇದ್ದು, ತಡೆಯಾಜ್ಞೆ ತೆರವುಗೊಳಿಸುವ ಸಂಬಂಧ ಅಲ್ಲಿನ ನ್ಯಾಯಾಲಯವನ್ನು ಸಂಪರ್ಕಿಸುವಂತೆ ಆಮ್ ಆದ್ಮಿ ಪಕ್ಷದ ಸರ್ಕಾರಕ್ಕೆ ಸೂಚಿಸಿದೆ. ರಾಷ್ಟ್ರ ರಾಜಧಾನಿಯಲ್ಲಿ ಪ್ರತಿದಿನವೂ ಕೋವಿಡ್ ಸ್ಥಿತಿ ಕೈಮೀರುತ್ತಿದೆ ಎಂದು ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಸಂಜಯ್ ಜೈನ್ ಅವರು ಪೀಠಕ್ಕೆ ವಿವರಿಸಿದ ಹಿನ್ನೆಲೆಯಲ್ಲಿ ನವೆಂಬರ್ 12ರಂದು ವಿಚಾರಣೆ ನಡೆಸುವಂತೆ ದೆಹಲಿ ಹೈಕೋರ್ಟ್‌ಗೆ ಸುಪ್ರೀಂ ಕೋರ್ಟ್ ಸೂಚಿಸಿದೆ.
ಚೆಕ್ ವಿತರಿಸಿದವರ ಉದ್ದೇಶ ಹಣ ನೀಡುವುದು ಆಗಿರದೇ ಹೋದಲ್ಲಿ ನೆಗೋಷಿಯಬಲ್ ಇನ್ಸ್ ಟ್ರುಮಂಟ್ ಕಾಯಿದೆಯ ಸೆಕ್ಷನ್ 138ರ ಅಡಿ ಹಣ ಸ್ವೀಕೃತಿದಾರರು ದೂರು ನೀಡಲು ಹದಿನೈದು ದಿನದವರೆಗೆ ಕಾಯುವ ಅಗತ್ಯವಿಲ್ಲ ಎಂದು ಅಲಾಹಾಬಾದ್ ಹೈಕೋರ್ಟ್ ಹೇಳಿದೆ.
ಕಾಯಿದೆಯ ಉದ್ದೇಶ ಚೆಕ್ ನೀಡಿದವರ ಪ್ರಾಮಾಣಿಕತೆಯನ್ನು ಗಮನಿಸುವುದಾಗಿದ್ದು ಅವರಿಗೆ ಒಂದು ಅವಕಾಶವನ್ನು ನೀಡುವುದಾಗಿದೆ. ಚೆಕ್ ನೀಡಿರುವವರು ಹಣ ನೀಡಲು ನಿರಾಕರಿಸಿದರೂ ಕೂಡ ಸ್ವೀಕೃತಿದಾರರು ಹದಿನೈದು ದಿನದವರೆಗೆ ದೂರು ನೀಡುವಂತಿಲ್ಲ ಎಂದು ಸೆಕ್ಷನ್ 138ಅನ್ನು ಭಾವಿಸಬಾರದು ಎಂದು ನ್ಯಾಯಾಲಯ ಹೇಳಿದೆ.