ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು | 15-1-2021

>>ಆನ್‌ಲೈನ್‌ ಮೂಲಕ ಸಾಲ ನೀಡುವ ತಾಣಗಳ ನಿಯಂತ್ರಣ ಕೋರಿ ಮನವಿ >>ವಿವೇಕ್‌ ದೋವಲ್‌ ಮಾನಹಾನಿ ಪ್ರಕರಣ >>ಭೌತಿಕ ವಿಚಾರಣೆಗೆ ಆಗ್ರಹಿಸಿ ಸಿಜೆಐಗೆ ಪತ್ರ
ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು | 15-1-2021

ಆನ್‌ಲೈನ್‌ ಮೂಲಕ ಸಾಲ ನೀಡುವ ತಾಣಗಳ ನಿಯಂತ್ರಣ: ಕೇಂದ್ರ ಸರ್ಕಾರ, ಆರ್‌ಬಿಐನಿಂದ ಪ್ರತಿಕ್ರಿಯೆ ಬಯಸಿದ ದೆಹಲಿ ಹೈಕೋರ್ಟ್‌

ಆನ್‌ಲೈನ್‌ ಮೂಲಕ ಸಾಲ ನೀಡುವ ತಾಣಗಳ ನಿಯಂತ್ರಣ ಕೋರಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಮನವಿಗೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್‌ ಶುಕ್ರವಾರ ನೋಟಿಸ್‌ ಜಾರಿ ಮಾಡಿದೆ. ಧರಣೀಂದರ್‌ ಕರಿಮೊಜ್ಜಿ ಸಲ್ಲಿಸಿದ್ದ ಮನವಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ ಎನ್‌ ಪಟೇಲ್‌ ಮತ್ತು ನ್ಯಾಯಮೂರ್ತಿ ಜ್ಯೋತಿ ಸಿಂಗ್‌ ಅವರಿದ್ದ ವಿಭಾಗೀಯ ಪೀಠವು ಭಾರತೀಯ ರಿಸರ್ವ್‌ ಬ್ಯಾಂಕ್‌, ಕೇಂದ್ರ ಸರ್ಕಾರಕ್ಕೆ ನೋಟಿಸ್‌ ಜಾರಿಗೊಳಿಸಿದೆ.

Delhi High Court
Delhi High Court

ಆನ್‌ಲೈನ್ ಡಿಜಿಟಲ್ ಸಾಲ ನೀಡುವ ತಾಣಗಳನ್ನು ನಿಯಂತ್ರಿಸಲು ಅಥವಾ ಆನ್‌ಲೈನ್ ಸಾಲ ನೀಡುವ ಸಂಸ್ಥೆಗಳು ವಿಧಿಸುವ ಗರಿಷ್ಠ ಬಡ್ಡಿದರ ಅಥವಾ ಇತರ ಶುಲ್ಕಗಳಿಗೆ ಮಿತಿ ವಿಧಿಸಲು ಪ್ರಸ್ತುತ ಯಾವುದೇ ಏಕರೂಪದ ಕಾನೂನು ಇಲ್ಲ ಎಂಬುದು ಅರ್ಜಿದಾರರ ದೂರಾಗಿದೆ. ಇದರ ಫಲವಾಗಿ, ಡಿಜಿಟಲ್ ಸಾಲ ನೀಡುವ ಕಂಪೆನಿಗಳು ಸಾಲದ ಮೇಲೆ ಹೆಚ್ಚಿನ ಬಡ್ಡಿ ವಿಧಿಸುವ ಮೂಲಕ ಸಾಲಗಾರರನ್ನು ಶೋಷಿಸುತ್ತಿವೆ. ಸಾಲ ಪಾವತಿಸದೇ ಇದ್ದರೆ ವಾರ್ಷಿಕ ಶೇ. 365ರಷ್ಟು ಬಡ್ಡಿ ವಿಧಿಸುವ ಮೂಲಕ ಕಿರುಕುಳ ನೀಡುತ್ತವೆ ಎಂದು ಅರ್ಜಿದಾರರು ಉಲ್ಲೇಖಿಸಿದ್ದಾರೆ.

ವಿವೇಕ್‌ ದೊವಲ್‌ ಮಾನಹಾನಿ ಪ್ರಕರಣವನ್ನು ಪಟಿಯಾಲ ಹೌಸ್‌ ನ್ಯಾಯಾಲಯಕ್ಕೆ ವರ್ಗಾಯಿಸುವಂತೆ ದೆಹಲಿ ಹೈಕೋರ್ಟ್‌ ಆದೇಶ

'ದ ಕಾರವಾನ್ʼ ನಿಯತಕಾಲಿಕದ ವಿರುದ್ಧ ವಿವೇಕ್ ದೋವಲ್ ಅವರ ಮಾನನಷ್ಟ ಮೊಕದ್ದಮೆಯನ್ನು ರೂಸ್ ಅವೆನ್ಯೂನಲ್ಲಿರುವ ಜನಪ್ರತಿನಿಧಿಗಳ ನ್ಯಾಯಾಲಯದಿಂದ ಪಟಿಯಾಲ ಹೌಸ್ ನ್ಯಾಯಾಲಯಕ್ಕೆ ವರ್ಗಾಯಿಸುವಂತೆ ದೆಹಲಿ ಹೈಕೋರ್ಟ್ ಶುಕ್ರವಾರ ನಿರ್ದೇಶನ ನೀಡಿದೆ.

Vivek Doval, The Caravan, Delhi High Court
Vivek Doval, The Caravan, Delhi High Court

ಮಾನಹಾನಿ ಪ್ರಕರಣದ ವರ್ಗಾವಣೆ ಕೋರಿ ಸಲ್ಲಿಸಲಾಗಿದ್ದ ಮನವಿ ಆಧರಿಸಿ ನ್ಯಾಯಮೂರ್ತಿ ಮುಕ್ತ ಗುಪ್ತಾ ಅವರಿದ್ದ ಏಕಸದಸ್ಯ ಪೀಠವು ಆದೇಶ ಹೊರಡಿಸಿದೆ. ಕಳೆದ ಡಿಸೆಂಬರ್‌ನಲ್ಲಿ ಸಂಸದ ಜೈರಾಮ್‌ ರಮೇಶ್‌ ವಿರುದ್ಧ ಸಲ್ಲಿಕೆಯಾಗಿದ್ದ ದೂರನ್ನು ಹಿಂಪಡೆಯಲಾಗಿದೆ ಎಂದು ದೊವಲ್‌ ಪರ ವಕೀಲ ಸೋನಮ್‌ ಗುಪ್ತಾ ಅವರು ನ್ಯಾಯಾಲಯಕ್ಕೆ ತಿಳಿಸಿದರು.

ಹಿರಿಯ ವಕೀಲರು ದೆಹಲಿಯಲ್ಲಿ ಕುಳಿತು ದೇಶವ್ಯಾಪಿ ಪ್ರಕರಣಗಳನ್ನು ನಿಭಾಯಿಸುತ್ತಿದ್ದರೆ, ಕಿರಿಯ ವಕೀಲರು ತೊಂದರೆಗೀಡಾಗಿದ್ದಾರೆ: ಭೌತಿಕ ವಿಚಾರಣೆಗೆ ಆಗ್ರಹಿಸಿ ಹಿರಿಯ ವಕೀಲ ವಿಕಾಸ್‌ ಸಿಂಗ್ ಅವರಿಂದ ಸಿಜೆಐಗೆ ಪತ್ರ

ಸುಪ್ರೀಂಕೋರ್ಟ್‌ ವೀಡಿಯೊ ಕಲಾಪಗಳನ್ನು ಮುಂದುವರೆಸಿರುವುದರಿಂದ ಹಿರಿಯ ವಕೀಲರಿಗೆ ಮಾತ್ರ ಅನುಕೂಲವಾಗಿದ್ದು ನ್ಯಾಯಾಲಯದಲ್ಲಿ ವಕೀಲಿಕೆ ಮಾಡುತ್ತಿರುವ ಯುವ ವಕೀಲರ ವೃತ್ತಿಜೀವನ ಅಪಾಯಕ್ಕೆ ಸಿಲುಕಿದೆ ಎಂದು ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಎಸ್‌ ಎ ಬೊಬ್ಡೆ ಅವರಿಗೆ ಬರೆದ ಪತ್ರದಲ್ಲಿ ಹಿರಿಯ ನ್ಯಾಯವಾದಿ ವಿಕಾಸ್‌ ಸಿಂಗ್‌ ಅವರು ತಿಳಿಸಿದ್ದಾರೆ. ಜಾಲ ಕಲಾಪದ ಕಾರಣದಿಂದಾಗಿ ಯುವ ವಕೀಲರ ಪ್ರಕರಣಗಳ ವಿಚಾರಣೆ ಮೊಟಕುಗೊಳ್ಳುತ್ತಿದ್ದರೆ ಹಿರಿಯ ವಕೀಲರು ದೆಹಲಿಯ ಆಚೆಗೆ ಕೂಡ ಕಾಲಿಡದೆ ದೇಶವ್ಯಾಪಿ ಪ್ರಕರಣಗಳಲ್ಲಿ ಮುಳುಗಿಹೋಗಿದ್ದಾರೆ ಎಂದು ಸುಪ್ರೀಂಕೋರ್ಟ್‌ ವಕೀಲರ ಸಂಘದ ಮಾಜಿ ಅಧ್ಯಕ್ಷರೂ ಆದ ಸಿಂಗ್‌ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Supreme Court Video Conference & Lock Down
Supreme Court Video Conference & Lock Down

ಆದ್ದರಿಂದ ಕೂಡಲೇ ಭೌತಿಕ ಕಲಾಪಗಳನ್ನು ಆರಂಭಿಸಬೇಕು ಎಂದು ಅವರು ಸುಪ್ರೀಂಕೋರ್ಟ್‌ನ ಐವರು ಅತಿ ಹಿರಿಯ ನ್ಯಾಯಮೂರ್ತಿಗಳನ್ನು ಕೋರಿದ್ದಾರೆ. ಇಡೀ ದೇಶವೇ ಸಾಮಾನ್ಯ ಕಾರ್ಯಚಟುವಟಿಕೆಗೆ ಮರಳುತ್ತಿರುವಾಗ ಸಾಕಷ್ಟು ಸುರಕ್ಷತಾ ಕ್ರಮಗಳನ್ನು ಕೈಗೊಂಡು ಭೌತಿಕ ಕಲಾಪ ಆರಂಭಿಸದೇ ಇರಲು ನ್ಯಾಯಾಲಯಕ್ಕೆ ಯಾವುದೇ ಕಾರಣಗಳಿಲ್ಲ ಎಂದು ಅವರು ಒತ್ತಾಯಿಸಿದ್ದಾರೆ. ತುರ್ತು ವಿಷಯಗಳನ್ನು ಪಟ್ಟಿ ಮಾಡಲು ಮೌಖಿಕ ಉಲ್ಲೇಖವಿಲ್ಲದ ಕಾರಣ ವಕೀಲರು ಎದುರಿಸುತ್ತಿರುವ ತೊಂದರೆಗಳನ್ನು ಸಿಂಗ್ ಎತ್ತಿ ತೋರಿಸಿದರು. ವರ್ಚುವಲ್ ವಿಚಾರಣೆಗಳು ಪ್ರಾರಂಭವಾದಾಗಿನಿಂದ, ಪ್ರಕರಣಗಳ ಬಗ್ಗೆ ಮೌಖಿಕ ಉಲ್ಲೇಖವಿಲ್ಲ ಮತ್ತು ಪ್ರಕರಣಗಳ ತುರ್ತು ಪಟ್ಟಿ ಪಡೆಯಲು ವಕೀಲರು ರೆಜಿಸ್ಟ್ರಿಗೆ ಇಮೇಲ್ ಕಳುಹಿಸಬೇಕಾಗುತ್ತದೆ ಎಂದು ವಿವರಿಸಿದ್ದಾರೆ. ಇದೇ ವಿಚಾರವಾಗಿ ಸಿಂಗ್‌ ಅವರು ಸಿಜೆಐ ಬೊಬ್ಡೆ ಅವರಿಗೆ ಎರಡನೇ ಬಾರಿಗೆ ಪತ್ರ ಬರೆಯುತ್ತಿದ್ದಾರೆ.

Related Stories

No stories found.
Kannada Bar & Bench
kannada.barandbench.com