ಒಳಾಂಗಣ ವಿನ್ಯಾಸಕಾರ ಅನ್ವಯ್ ನಾಯಕ್ ಮತ್ತವರ ತಾಯಿ ಕುಮುದ ನಾಯಕ್ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಪಬ್ಲಿಕ್ ಟಿವಿ ಪ್ರಧಾನ ಸಂಪಾದಕ ಅರ್ನಾಬ್ ಗೋಸ್ವಾಮಿ ಮತ್ತಿತರ ವಿರುದ್ಧ ಮಹಾರಾಷ್ಟ್ರದ ರಾಯಗಢ ಪೊಲೀಸರು ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದಾರೆ. ವಿಧಿವಿಜ್ಞಾನ ವರದಿಗಳನ್ನು ಆಧರಿಸಿ ಆರೋಪಪಟ್ಟಿ ಸಲ್ಲಿಸಿರುವ ಪೊಲೀಸರು, ನಾಯಕ್ ತಮ್ಮ ಆತ್ಮಹತ್ಯೆ ಪತ್ರವನ್ನು ಒತ್ತಡದಲ್ಲಿ ಬರೆದಿಲ್ಲ. ನಾಯಕ್ ಅವರ ಕೈಬರಹಕ್ಕೂ ಆತ್ಮಹತ್ಯೆ ಟಿಪ್ಪಣಿಯಲ್ಲಿರುವ ಹಸ್ತಾಕ್ಷರಕ್ಕೂ ಸಾಮ್ಯತೆ ಇದೆ ಎಂದು ಆರೋಪಪಟ್ಟಿಯಲ್ಲಿ ದಾಖಲಿಸಿದ್ದಾರೆ. ಅಲ್ಲದೆ ಪತ್ರವನ್ನು ಪೊಲೀಸರು ಮೃತರ ಮರಣ ಘೋಷಣೆ ಎಂದು ಪರಿಗಣಿಸಿದ್ದಾರೆ.
1,916 ಪುಟಗಳ ಆರೋಪಪಟ್ಟಿಯಲ್ಲಿ ಅಪರಾಧ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 164 ರ ಪ್ರಕಾರ ಅಲಿಬಾಗ್ ನ್ಯಾಯಾಧೀಶರ ಮುಂದೆ ದಾಖಲಾದ ಆರು ಹೇಳಿಕೆಗಳಿವೆ. ದಾಖಲೆ ಮತ್ತು ಎಲೆಕ್ಟ್ರಾನಿಕ್ ಸಾಕ್ಷ್ಯಗಳು ಸೇರಿದಂತೆ 65 ಪುರಾವೆಗಳನ್ನು ಕೂಡ ಇದರೊಂದಿಗೆ ನೀಡಲಾಗಿದೆ. ಆರೋಪಪಟ್ಟಿ ದಾಖಲಿಸದಂತೆ ಮತ್ತು ಮುಂದಿನ ವಿಚಾರಣೆ ನಡೆಸದಂತೆ ಅರ್ನಾಬ್ ಗೋಸ್ವಾಮಿ ಅವರು ಬಾಂಬೆ ಹೈಕೋರ್ಟ್‌ಗೆ ಮೊರೆ ಹೋದ ಮರುದಿನ ಆರೋಪಪಟ್ಟಿಯನ್ನು ದಾಖಲಿಸಲಾಗಿದೆ.
ʼದ ಹಿಂದೂʼ ದಿನಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ʼನ್ಯಾಯಾಂಗದ ಸ್ವಾತಂತ್ರ್ಯ ಕುಸಿತʼ ಕಂಡಿದೆ ಎಂದು ಹಿರಿಯ ವಕೀಲ ಪ್ರಶಾಂತ್ ಭೂಷಣ್ ನೀಡಿದ್ದ ಹೇಳಿಕೆ ಕ್ರಿಮಿನಲ್ ನ್ಯಾಯಾಂಗ ನಿಂದನೆಯಾಗಲಿದ್ದು ಈ ಸಂಬಂಧ ಪ್ರಕರಣ ದಾಖಲಿಸಲು ಒಪ್ಪಿಗೆ ನೀಡಬೇಕು ಎಂದು ಕೋರಿ ವಕೀಲ ಸುನಿಲ್ ಕುಮಾರ್ ಸಿಂಗ್ ಅವರು ಅಟಾರ್ನಿ ಜನರಲ್ ಕೆ ಕೆ ವೇಣುಗೋಪಾಲ್ ಅವರಿಗೆ ಪತ್ರ ಬರೆದಿದ್ದಾರೆ. ನವೆಂಬರ್ 29 ರಂದು ಪ್ರಶಾಂತ್ ಅವರು ಪತ್ರಿಕೆಗೆ ನೀಡಿದ್ದ ಸಂದರ್ಶನದಲ್ಲಿ “ಸುಪ್ರೀಂಕೋರ್ಟ್ ನಿಷ್ಟಕ್ಷಪಾತವಾಗಿ ಕಾರ್ಯನಿರ್ವಹಿಸುತ್ತಿಲ್ಲ,” ಎಂದಿದ್ದರು.
ವಕೀಲ ಸಿಂಗ್ ಅವರ ಪ್ರಕಾರ ಪ್ರಶಾಂತ್ ಹೇಳಿಕೆ ಗೌರವಾನ್ವಿತ ಸುಪ್ರೀಂಕೋರ್ಟಿನ ಸಮಗ್ರತೆಗೆ ಸಂಪೂರ್ಣ ವಿರುದ್ಧವಾಗಿದೆ, ಭಾರತದ ಸುಪ್ರೀಂಕೋರ್ಟ್ ಸ್ವತಂತ್ರ ಮತ್ತು ನಿಷ್ಪಕ್ಷಪಾತ ಸಂಸ್ಥೆಯಲ್ಲ ಬದಲಿಗೆ ಸರ್ಕಾರದ ಆಜ್ಞಾವರ್ತಿಯಾಗಿ ಕೆಲಸ ಮಾಡಲು ಸಿದ್ಧವಾಗಿದೆ ಎಂಬ ಮಾತು ಆಕ್ಷೇಪಾರ್ಹ ಮತ್ತು ಉದ್ದಟತನದಿಂದ ಕೂಡಿದೆ. ಇದು ಗೌರವಾನ್ವಿತ ಸುಪ್ರೀಂಕೋರ್ಟ್ ಮೇಲೆ ನಡೆದ ದುರುದ್ದೇಶಪೂರ್ವಕ ದಾಳಿಯಾಗಿದೆ” ಎಂದು ತಿಳಿಸಿದ್ದಾರೆ.
ಸುಪ್ರೀಂ ಕೋರ್ಟ್‌ನ ಹೆಚ್ಚುವರಿ ಕಟ್ಟಡ ಸಂಕೀರ್ಣದಲ್ಲಿ 476 ಚೇಂಬರ್‌ಗಳು ಮತ್ತು 30 ಸಮಾಲೋಚನಾ ಕೊಠಡಿಗಳನ್ನು ನಿರ್ಮಿಸುವ ಸಂಬಂಧ ಪುನರ್ ಅಭಿವೃದ್ಧಿ ಯೋಜನೆ ರೂಪಿಸುವಂತೆ ಕೇಂದ್ರೀಯ ಲೋಕೋಪಯೋಗಿ ಇಲಾಖೆಗೆ ಸುಪ್ರೀಂ ಕೋರ್ಟ್‌ನ ಆಡಳಿತ ವಿಭಾಗ ಸೂಚಿಸಿದೆ.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ಅವರನ್ನೊಳಗೊಂಡ ಸಮಿತಿಯ ಮರುಪರಿಶೀಲನೆಗೆ ಅನುಗುಣವಾಗಿ ಜಾಗ ಹಂಚಿಕೆ ಮಾಡಿದೆ. ಆರಂಭದಲ್ಲಿ ಒಟ್ಟು 234 ಚೇಂಬರ್‌ಗಳ ಆರಂಭಕ್ಕೆ ಪ್ರಸ್ತಾಪಿಸಲಾಗಿತ್ತು. ಸುಪ್ರೀಂ ಕೋರ್ಟ್ ವಕೀಲರ ಪರಿಷತ್ ಅಧ್ಯಕ್ಷ ದುಷ್ಯಂತ್ ದವೆ ಅವರು ನ್ಯಾಯಮೂರ್ತಿಗಳಾದ ರೋಹಿಂಟನ್ ಫಾಲಿ ನಾರಿಮನ್, ಯು ಯು ಲಲಿತ್, ನಾಗೇಶ್ವರ್ ರಾವ್ ಮತ್ತು ಸಿಜೆಐ ಎಸ್ ಎ ಬೊಬ್ಡೆ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ನೂತನ ಚೇಂಬರ್‌ಗಳಲ್ಲಿ ಒಬ್ಬರು ಮಾತ್ರ ಇರಬಹುದಾಗಿದೆ ಎಂದು ದವೆ ತಿಳಿಸಿದ್ದಾರೆ.