ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು | 19-11-2020

>>ಆನ್‌ಲೈನ್‌ ಜೂಜಿನ ಬಗ್ಗೆ ಕಳವಳ >> ಸಲಿಂಗ ವಿವಾಹ ಅಂಗೀಕರಿಸುವಂತೆ ಕೋರಿ ಅರ್ಜಿ >> ಸಚಿವ ಎಸ್‌ ಜಯಶಂಕರ್ ಆಯ್ಕೆಗೆ ತಕರಾರು >> ‌ಕ್ರೆಡಿಟ್‌ ಕಾರ್ಡ್‌ ಬಳಕೆದಾರರು ಪಡೆವ ಲಾಭಕ್ಕೆ ಆಕ್ಷೇಪ >> ವಿಶೇಷ ಚೇತನರ ರಸ್ತೆ ಬಳಕೆ ಪರ ತೀರ್ಪು
ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು | 19-11-2020

ಆನ್‌ಲೈನ್‌ ಜೂಜು: ತಮಿಳುನಾಡಿನಲ್ಲಿ 30 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮತ್ತೆ ಕಳವಳ ವ್ಯಕ್ತಪಡಿಸಿದ ಮದ್ರಾಸ್‌ ಹೈಕೋರ್ಟ್‌

ಆನ್‌ಲೈನ್‌ ಜೂಜಾಟದ ಪರಿಣಾಮ ತಮಿಳುನಾಡಿನಲ್ಲಿ 30 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮದ್ರಾಸ್‌ ಹೈಕೋರ್ಟ್‌ ಮತ್ತೆ ಕಳವಳ ವ್ಯಕ್ತಪಡಿಸಿದೆ. ಆನ್‌ಲೈನ್‌ ಜೂಜಿಗೆ ಸಂಬಂಧಿಸಿದಂತೆ ವಕೀಲ ಮೊಹಮ್ಮದ್‌ ರಜ್ವಿ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎನ್‌ ಕಿರುಬಾಕರನ್‌, ಬಿ ಪುಗಳೇಂದಿ ಅವರಿದ್ದ ನ್ಯಾಯಪೀಠ ಮೌಖಿಕವಾಗಿ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಇದೇ ವೇಳೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರೀಡಾಲೋಕದ ವಿರಾಟ್ ಕೊಹ್ಲಿ, ಸೌರವ್ ಗಂಗೂಲಿ ಹಾಗೂ ನಟರಾದ ಸುದೀಪ್, ಪ್ರಕಾಶ್ ರಾಜ್, ತಮನ್ನಾ ಭಾಟಿಯಾ, ರಾಣಾ ದಗ್ಗುಬಾಟಿ ಅವರನ್ನು ನ್ಯಾಯಾಲಯ ಪಕ್ಷಕಾರರನ್ನಾಗಿ ಮಾಡಿಕೊಂಡಿದೆ. ಪ್ರಕರಣವನ್ನು ಡಿ 10ಕ್ಕೆ ಮುಂದೂಡಲಾಗಿದೆ.

ಹಿಂದೂ ವಿವಾಹ ಕಾಯಿದೆ ಅಡಿ ಸಲಿಂಗ ವಿವಾಹ ಅಂಗೀಕರಿಸುವಂತೆ ಕೋರಿರುವ ಅರ್ಜಿ ವಿಚಾರಣೆ ನಡೆಸಲಿರುವ ದೆಹಲಿ ಹೈಕೋರ್ಟ್

‌ಹಿಂದೂ ವಿವಾಹ ಕಾಯಿದೆ ಅಡಿ ಸಲಿಂಗ ವಿವಾಹವನ್ನು ಅಂಗೀಕರಿಸುವಂತೆ ಕೋರಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್‌ ಗುರುವಾರ ನೋಟಿಸ್‌ ಜಾರಿಗೊಳಿಸಿದೆ.

Same sex marriage
Same sex marriage

ವಿಶೇಷ ವಿವಾಹ ಕಾಯಿದೆ ಮತ್ತು ವಿದೇಶಿ ವಿವಾಹ ಕಾಯಿದೆಗಳು ಸಲಿಂಗ ವಿವಾಹಕ್ಕೂ ಅನ್ವಯವಾಗಲಿದೆ ಎಂದು ಸಾರುವಂತೆ ಕೋರಿ ಸಲ್ಲಿಸಲಾಗಿರುವ ಸಂಬಂಧಿತ ಅರ್ಜಿಗಳನ್ನು ಪಿಐಎಲ್‌ ಜೊತೆ ಸೇರಿಸಲಾಗಿದೆ. ಹಿಂದೂ ವಿವಾಹ ಕಾಯಿದೆ 1956 ರ ಅಡಿ ಸಲಿಂಗ ವಿವಾಹಿತರನ್ನು ಗುರುತಿಸುವಂತೆ ಕೋರಿ ಅಭಿಜಿತ್‌ ಐಯ್ಯರ್‌ ಮಕತ್ರಾ, ಗೋಪಿ ಶಂಕರ್‌ ಎಂ, ಗಿತಿ ಥದನಿ ಮತ್ತು ಜಿ ಊರ್ವಶಿ ಅವರು ಮನವಿ ಸಲ್ಲಿಸಿದ್ದಾರೆ. ನ್ಯಾಯಮೂರ್ತಿಗಳಾದ ಆರ್‌ ಎಸ್‌ ಎಂಡ್‌ಲಾ ಮತ್ತು ಆಶಾ ಮೆನನ್‌ ಅವರ ಪೀಠವು ಪ್ರಕರಣದ ವಿಚಾರಣೆ ನಡೆಸಿದೆ.

ವಿದೇಶಾಂಗ ಸಚಿವ ಎಸ್‌ ಜಯಶಂಕರ್ ರಾಜ್ಯಸಭೆಗೆ ಆಯ್ಕೆ ಪ್ರಶ್ನಿಸಿ ಅರ್ಜಿ ಸಲ್ಲಿಕೆ: ಸಚಿವರ ಪ್ರತಿಕ್ರಿಯೆ ಬಯಸಿದ ಸುಪ್ರೀಂ ಕೋರ್ಟ್‌

ಗುಜರಾತ್‌ನಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ವಿದೇಶಾಂಗ ಸಚಿವ ಎಸ್‌ ಜಯಶಂಕರ್‌ ಅವರ ಚುನಾವಣೆಯನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗೆ ಸಂಬಂಧಿಸಿದಂತೆ ಬುಧವಾರ ಸುಪ್ರೀಂ ಕೋರ್ಟ್‌ ಸಚಿವರ ಪ್ರತಿಕ್ರಿಯೆ ಬಯಸಿದೆ.

S Jaishankar, Supreme Court
S Jaishankar, Supreme Court

ಮುಖ್ಯ ನ್ಯಾಯಮೂರ್ತಿ ಎಸ್‌ ಎ ಬೊಬ್ಡೆ, ನ್ಯಾಯಮೂರ್ತಿಗಳಾದ ಎ ಎಸ್‌ ಬೋಪಣ್ಣ ಮತ್ತು ವಿ ರಾಮಸುಬ್ರಮಣಿಯನ್‌ ಅವರಿದ್ದ ತ್ರಿಸದಸ್ಯ ಪೀಠವು ಜೈಶಂಕರ್‌ ಅವರಿಗೆ ನೋಟಿಸ್‌ ಜಾರಿಗೊಳಿಸಿದ್ದು, ಡಿಸೆಂಬರ್‌ 8ರೊಳಗೆ ಪ್ರತಿಕ್ರಿಯೆ ದಾಖಲಿಸುವಂತೆ ಸೂಚಿಸಿದೆ. ರಾಜ್ಯಸಭೆಯಲ್ಲಿನ ಖಾಲಿಯಾದ ಸ್ಥಾನಗಳಿಗೆ ಪ್ರಾಸಂಗಿಕ ಮತ್ತು ನಿಯಮಿತವಾಗಿ ಉಪಚುನಾವಣೆ ನಡೆಸುವ ಕುರಿತು ಚುನಾವಣಾ ಆಯೋಗವು ಪ್ರತ್ಯೇಕ ಅಧಿಸೂಚನೆ ಹೊರಡಿಸಿರುವುದು ಕಾನೂನು ಉಲ್ಲಂಘನೆಯಾಗಿದೆ. ಈ ಹಿನ್ನೆಲೆಯಲ್ಲಿ ಜೈಶಂಕರ್‌ ಆಯ್ಕೆ ಅಕ್ರಮ ಎಂದು ಕಾಂಗ್ರೆಸ್‌ ಮುಖಂಡ ಗೌರವ್‌ ಪಾಂಡ್ಯ ಮನವಿಯಲ್ಲಿ ಉಲ್ಲೇಖಿಸಿದ್ದಾರೆ. 2019ರ ಸೆಪ್ಟೆಂಬರ್‌ನಲ್ಲಿ ಪಾಂಡ್ಯ ಆವರ ಮನವಿಯನ್ನು ಗುಜರಾತ್‌ ಹೈಕೋರ್ಟ್‌ ವಜಾಗೊಳಿಸಿತ್ತು.

ಆರ್‌ಬಿಐ ಸಾಲ ಮೊರಟೊರಿಯಂ ಯೋಜನೆ: ಕ್ರೆಡಿಟ್‌ ಕಾರ್ಡ್‌ ಬಳಕೆದಾರರಿಗೆ ಏಕೆ ಲಾಭ ಸಿಗಬೇಕು ಎಂದು ಕೇಂದ್ರವನ್ನು ಪ್ರಶ್ನಿಸಿದ ʼಸುಪ್ರೀಂʼ

ಆರ್‌ಬಿಐ ಸಾಲ ನಿಷೇಧದ ಯೋಜನೆಯಡಿ ಚಕ್ರ ಬಡ್ಡಿ ಮನ್ನಾ ಪ್ರಯೋಜನಕ್ಕೆ ಏಕೆ ಕ್ರೆಡಿಟ್ ಕಾರ್ಡ್ ಬಳಕೆದಾರರನ್ನು ಅರ್ಹರನ್ನಾಗಿ ಮಾಡಲಾಗುತ್ತಿದೆ ಎಂದು ಸುಪ್ರೀಂಕೋರ್ಟ್‌ ಗುರುವಾರ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದೆ. ಇದೇ ವೇಳೆ ಕೇಂದ್ರ ಸರ್ಕಾರದ ಪರವಾಗಿ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ʼಕ್ರೆಡಿಟ್‌ ಕಾರ್ಡ್‌ ಬಳಕೆದಾರರಿಗೆ ಕೂಡ ಎಕ್ಸ್‌ ಗ್ರೇಷಿಯಾ (ಕೃಪಾಧನ) ಪ್ರಯೋಜನ ದೊರೆಯಲಿದೆ ಎಂದರು .

RBI Reserve Bank of India
RBI Reserve Bank of India

ಆದರೆ ನ್ಯಾಯಾಲಯ ʼಕ್ರೆಡಿಟ್‌ ಕಾರ್ಡ್‌ ಬಳಕೆದಾರರು ಕಾರ್ಡ್‌ ಬಳಸಿ ವಸ್ತುಗಳನ್ನು ಖರೀದಿಸುತ್ತಾರೆ. ಅವರು ಸಾಲ ಪಡೆದುಕೊಂಡಿಲ್ಲ. ಅವರಿಗೆ ಈ ಪ್ರಯೋಜನ ದೊರೆಯಬಾರದುʼ ಎಂದು ಒತ್ತಿ ಹೇಳಿತು. ಪ್ರಕರಣ ಮುಂದಿನವಾರ ಮತ್ತೆ ವಿಚಾರಣೆಗೆ ಬರಲಿದೆ.

ವಿಶೇಷ ಚೇತನರು ರಸ್ತೆ ಬಳಸಲು ಅನುವು ಮಾಡಿಕೊಡುವಂತೆ ಕೊಚ್ಚಿ ಸ್ಥಳೀಯ ಆಡಳಿತಕ್ಕೆ ಸೂಚಿಸಿದ ಕೇರಳ ಹೈಕೋರ್ಟ್‌

ಮಹತ್ವದ ತೀರ್ಪೊಂದರಲ್ಲಿ ಕೇರಳ ಹೈಕೋರ್ಟ್‌, ವಿಶೇಷ ಚೇತನರು ರಸ್ತೆಗಳನ್ನು ಬಳಸಲು ಅನುವು ಮಾಡಿಕೊಡುವಂತೆ ಕೊಚ್ಚಿ ನಗರ ಪಾಲಿಕೆಗೆ ನಿರ್ದೇಶನ ನೀಡಿದೆ. ಮುಖ್ಯ ನ್ಯಾಯಮೂರ್ತಿ ಎಸ್‌ ಮಣಿಕುಮಾರ್‌ ಮತ್ತು ನ್ಯಾಯಮೂರ್ತಿ ಶಾಜಿ ಪಿ ಚಾಲಿ ಅವರಿದ್ದ ನ್ಯಾಯಪೀಠ ಪಿ ಎ ಮೇರಿ ಅನಿತಾ ಎಂಬುವವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿತು.

Disability rights
Disability rights

ಬೇರೆ ಯಾವುದೇ ನಾಗರಿಕರಂತೆ ವಿಶೇಷ ಚೇತನರು ಸಂವಿಧಾನದ 21ನೇ ಪರಿಚ್ಛೇದದಡಿಯಲ್ಲಿ ಖಾತ್ರಿಪಡಿಸಿದ ಜೀವನ ಮತ್ತು ಸ್ವಾತಂತ್ರ್ಯದ ಫಲವನ್ನು ಪಡೆಯಲು ಅರ್ಹರಾಗಿದ್ದಾರೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ವಿಭಿನ್ನ ಸಾಮರ್ಥ್ಯದ ವ್ಯಕ್ತಿಗಳ ಹಿತಾಸಕ್ತಿ ಕಾಪಾಡುವ ಸಾಂವಿಧಾನಿಕ ಕರ್ತವ್ಯ ಮತ್ತು ಜವಾಬ್ದಾರಿಗಳನ್ನು ಕೊಚ್ಚಿ ಆಡಳಿತ ಕಡ್ಡಾಯವಾಗಿ ಗಣನೆಗೆ ತೆಗೆದುಕೊಳ್ಳಬೇಕಿದೆ ಎಂದು ಪೀಠ ಈ ಸಂದರ್ಭದಲ್ಲಿ ತಿಳಿಸಿದೆ.

Related Stories

No stories found.
Kannada Bar & Bench
kannada.barandbench.com