ಘನತೆಯ ಹಕ್ಕು ಭಾರತೀಯ ಸಂವಿಧಾನದ 21ನೇ ವಿಧಿಯಡಿ ಬದುಕುವ ಹಕ್ಕಿನ ಮತ್ತೊಂದು ಭಾಗ ಎಂದು ಕರ್ನಾಟಕ ಹೈಕೋರ್ಟ್ ಹೇಳಿದ್ದು, ಮಾನಹಾನಿಗೆ ಅಪರಾಧಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ತ್ವರಿತವಾಗಿ ನಿರ್ಧರಿಸಬೇಕು ಎಂದು ಹೇಳಿದೆ. ಮಾನಹಾನಿಗೆ ಸಂಬಂಧಿಸಿದ ಪ್ರಕರಣಗಳನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗದು ಎಂದು ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರಿದ್ದ ಏಕಸದಸ್ಯ ಪೀಠ ಹೇಳಿದೆ.
“ಮಾನಹಾನಿಗೆ ಸಂಬಂಧಿಸಿದ ಪ್ರಕರಣಗಳನ್ನು ತುರ್ತಾಗಿ ಬಗೆಹರಿಸಬೇಕು; ಯಾವುದೇ ವ್ಯಕ್ತಿಯ ವೈಯಕ್ತಿಕ ಅಥವಾ ಔದ್ಯೋಗಿಕ ಘನತೆಯು ಅತ್ಯಮೂಲ್ಯವಾಗಿದೆ; ಭಾರತದ ಸಂವಿಧಾನದ 21ನೇ ವಿಧಿಯಡಿ ಘನತೆಯ ಹಕ್ಕು, ಬದುಕುವ ಹಕ್ಕಿನ ಮತ್ತೊಂದು ಭಾಗ ಎಂದು ಸರ್ವೋಚ್ಚ ನ್ಯಾಯಾಲಯ ಹೇಳಿದೆ,” ಎಂದು ಪೀಠ ಹೇಳಿದೆ. ತಮ್ಮ ವಿರುದ್ಧ ದಾಖಲಾಗಿದ್ದ ಮಾನಹಾನಿ ಪ್ರಕರಣದಲ್ಲಿ ವಿಚಾರಣೆಯ ಹಂತದಲ್ಲಿ ಸಾಕ್ಷ್ಯ ಮಂಡಿಸಲು ಅವಕಾಶ ಮಾಡಿಕೊಡದ ಸಿವಿಲ್ ನ್ಯಾಯಾಲಯದ ಆದೇಶ ವಜಾಗೊಳಿಸುವಂತೆ ರಾಜ್ಯಸಭಾ ಸದಸ್ಯ ಮತ್ತು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಸಲ್ಲಿಸಿದ್ದ ಮನವಿಯ ವಿಚಾರಣೆಯನ್ನು ಪೀಠ ನಡೆಸಿತು. ನೈಸ್ ಸಂಸ್ಥೆಯು ದೇವೇಗೌಡರ ವಿರುದ್ಧ 2012 ಪ್ರಕರಣ ದಾಖಲಿಸಿ, 10 ಕೋಟಿ ರೂಪಾಯಿ ಪರಿಹಾರ ಕೇಳಿತ್ತು. ಪ್ರಕರಣವನ್ನು ವಿರೋಧಿಸಿ ದೇವೇಗೌಡರು ಲಿಖಿತ ಹೇಳಿಕೆ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸುತ್ತಿರುವ ಸಿವಿಲ್ ನ್ಯಾಯಾಲಯವು ದೇವೇಗೌಡರಿಗೆ ಸಾಕ್ಷ್ಯ ಸಲ್ಲಿಕೆ ಅನುಮತಿ ನಿರಾಕರಿಸಿ ಆದೇಶಿಸಿತ್ತು. ಸಿವಿಲ್ ನ್ಯಾಯಾಲಯದ ಈ ಆದೇಶವನ್ನು ಪ್ರಶ್ನಿಸಿ ದೇವೇಗೌಡರು ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು.
ಭೌತಿಕ ಮತ್ತು ವರ್ಚುವಲ್ ವಿಚಾರಣೆಗಳೆರಡನ್ನೂ ಒಳಗೊಳ್ಳಲು ಹೈಬ್ರಿಡ್ ವ್ಯವಸ್ಥೆ ಅಳವಡಿಸಿಕೊಳ್ಳಲಾಗಿದೆ ಎಂದು ದೆಹಲಿ ಹೈಕೋರ್ಟ್ ಆಡಳಿತವು ಸ್ಪಷ್ಟೀಕರಣ ಆದೇಶ ಹೊರಡಿಸಿದೆ. ಭೌತಿಕ ವಿಚಾರಣೆ ಪುನಾರಂಭದ ಕುರಿತ ಜನವರಿ 14ರ ಆದೇಶದಲ್ಲಿ ಭಾಗಶಃ ಬದಲಾವಣೆಯನ್ನು ಮಾಡಲಾಗಿದೆ.
ಮುಂಚಿತವಾಗಿ ಹೈಕೋರ್ಟ್‌ಗೆ ಮಾಹಿತಿ ನೀಡುವ ಮೂಲಕ ಭೌತಿಕ ವಿಚಾರಣೆಗೆ ನಿಗದಿಯಾಗಿರುವ ಪ್ರಕರಣದಲ್ಲಿ ವರ್ಚುವಲ್ ವ್ಯವಸ್ಥೆಯಲ್ಲಿ ವಕೀಲರು ಭಾಗವಹಿಸಬಹುದು ಎಂದು ನ್ಯಾಯಾಲಯ ಅಭಯ ನೀಡಿದೆ. ನ್ಯಾಯಾಲಯದಲ್ಲಿ ಒಬ್ಬರು ಭೌತಿಕವಾಗಿ ಹಾಜರಿದ್ದರೂ ಪಕ್ಷಕಾರರು ವರ್ಚುವಲ್ ವ್ಯವಸ್ಥೆಯ ಮೂಲಕ ಕಲಾಪದಲ್ಲಿ ಭಾಗಿಯಾಗಬಹುದು. ನ್ಯಾಯಮೂರ್ತಿಗಳ ರೋಸ್ಟರ್‌ಗೆ ಅನುಗುಣವಾಗಿ ಪ್ರಕರಣಗಳನ್ನು ಭೌತಿಕ ವಿಚಾರಣೆಗೆ ಪರಿಗಣಿಸಲಾಗುವುದು. ಮುಂಚಿತವಾಗಿ ನ್ಯಾಯಾಲಯದ ಗಮನಕ್ಕೆ ತಂದರೆ ನಿರ್ದಿಷ್ಟ ಪ್ರಕರಣಗಳನ್ನು ವರ್ಚುವಲ್ ವ್ಯವಸ್ಥೆಯ ಮೂಲಕ ವಿಚಾರಣೆ ನಡೆಸಲು ಪರಿಗಣಿಸಲಾಗುವುದು ಎಂದು ಸ್ಪಷ್ಟೀಕರಿಸಲಾಗಿದೆ. ಇದೆಲ್ಲದರ ಮಧ್ಯೆ, ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಕೊಠಡಿಯಲ್ಲಿ ಹೈಬ್ರಿಡ್ ವ್ಯವಸ್ಥೆಗೆ ಬೇಕಾದ ಮೂಲಸೌಕರ್ಯ ಕಲ್ಪಿಸಲು ಕ್ರಮಕೈಗೊಳ್ಳಲಾಗಿದೆ.
ಉತ್ತರ ಪ್ರದೇಶ ಪೊಲೀಸರಿಂದ ಬಂಧಿಸಲ್ಪಟ್ಟಿರುವ ಪತ್ರಕರ್ತ ಸಿದ್ದಿಕಿ ಕಪ್ಪನ್ ಅವರ ತಾಯಿಯು ಮಗನನ್ನು ನೋಡಲು ಅವಕಾಶ ಮಾಡಿಕೊಡುವಂತೆ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿದ್ದಾರೆ. ಈ ಸಂಬಂಧ ಮನವಿ ಸಲ್ಲಿಸಲಾಗಿದೆ ಎಂದು ಶುಕ್ರವಾರ ಸರ್ವೋಚ್ಚ ನ್ಯಾಯಾಲಯಕ್ಕೆ ಹಿರಿಯ ವಕೀಲ ಕಪಿಲ್ ಸಿಬಲ್ ತಿಳಿಸಿದ್ದಾರೆ.
“ಕಪ್ಪನ್ ಅವರ ತಾಯಿ ಅರೆಪ್ರಜ್ಞಾವಸ್ಥೆಯಲ್ಲಿದ್ದು, ಪುತ್ರನನ್ನು ನೋಡಲು ಬಯಸುತ್ತಿದ್ದಾರೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಅವರು ಬದುಕಿರುವಾಗಲೇ ಪುತ್ರನನ್ನು ನೋಡಲು ಅವಕಾಶ ಮಾಡಿಕೊಡಿ. ನಾವು ಮನವಿ ಸಲ್ಲಿಸಿದ್ದೇವೆ. ಅದಕ್ಕೆ ಅವಕಾಶ ಮಾಡಿಕೊಡಿ,” ಎಂದು ಸಿಬಲ್ ಮನವಿ ಮಾಡಿದ್ದಾರೆ. ಕಪ್ಪನ್ ಬಿಡುಗಡೆ ಮಾಡುವಂತೆ ಕೇರಳ ಕಾರ್ಯನಿರತ ಪತ್ರಕರ್ತರ ಸಂಘವು ಹೇಬಿಯಸ್ ಕಾರ್ಪಸ್ ಮನವಿ ಸಲ್ಲಿಸಿದ್ದು, ಅದನ್ನು ಸಿಬಲ್ ಪ್ರತಿನಿಧಿಸಿದ್ದಾರೆ. ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ಅವರಿದ್ದ ಪೀಠವು ಮನವಿಗೆ ಒಪ್ಪಿಗೆ ನೀಡುವ ಇಚ್ಛೆ ವ್ಯಕ್ತಪಡಿಸಿತಾದರೂ ಈ ಸಂಬಂಧ ಅಗತ್ಯ ಕ್ರಮವನ್ನು ಉತ್ತರ ಪ್ರದೇಶ ಸರ್ಕಾರ ಕೈಗೊಳ್ಳಲಿದ್ದು, ಈ ವಿಚಾರವನ್ನು ಅವರಿಗೆ ಬಿಡುವಂತೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಪೀಠವನ್ನು ಕೋರಿದರು. ಈ ಹಿನ್ನೆಲೆಯಲ್ಲಿ ನ್ಯಾಯಾಲಯವು ಪ್ರಕರಣದ ವಿಚಾರಣೆಯನ್ನು ಮುಂದೂಡಿತು.