ಧಾರ್ಮಿಕ ಮತಾಂತರ ಮತ್ತು ಅಂತರಧರ್ಮೀಯ ವಿವಾಹಗಳನ್ನು ನಿರ್ಬಂಧಿಸಿ ಉತ್ತರಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರ ಜಾರಿಗೆ ತಂದಿರುವ ಸುಗ್ರೀವಾಜ್ಞೆ ಸಮುದಾಯಗಳನ್ನು ಧ್ರುವೀಕರಿಸುವ ಮತ್ತು ಚುನಾವಣಾ ಲಾಭಗಳಿಸುವ ಗುರಿಹೊಂದಿರುವ ಕೋಮು ವಿಭಜಕ ತಂತ್ರಗಳಿಂದ ಕೂಡಿದೆ ಎಂದು ಆಕ್ಷೇಪ ವ್ಯಕ್ತಪಡಿಸಿ ಅಲಾಹಾಬಾದ್ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ. ಸೌರಭ್ ಕುಮಾರ್ ಎಂಬುವವರು ಸಲ್ಲಿಸಿದ ಅರ್ಜಿಯಲ್ಲಿ, “ವ್ಯಕ್ತಿಗಳ ಮೂಲಭೂತ ಹಕ್ಕು ಮತ್ತು ರಾಷ್ಟ್ರೀಯ ಐಕ್ಯತೆಯನ್ನು ಪರಿಗಣಿಸದೆ ಸುಗ್ರೀವಾಜ್ಞೆಯನ್ನು ಭಾರಿ ತರಾತುರಿಯಲ್ಲಿ ಮತ್ತು ಅಜಾಗರೂಕವಾಗಿ ಜಾರಿಗೆ ತರಲಾಗಿದೆ” ಎಂದು ತಿಳಿಸಲಾಗಿದೆ.
ನವೆಂಬರ್ 28ರಂದು ರಾಜ್ಯಪಾಲರಾದ ಆನಂದಿಬೆನ್ ಪಟೇಲ್ ಅವರು ಸಹಿ ಹಾಕಿದ, "ಸಂವಿಧಾನದ 21ನೇ ವಿಧಿ ನೀಡಿರುವ ಖಾಸಗಿತನ ಮತ್ತು ವ್ಯಕ್ತಿಗತ ಸಾರ್ವಭೌಮತ್ವಕ್ಕೆ ಉತ್ತರಪ್ರದೇಶ ಕಾನೂನು ಬಾಹಿರ ಧಾರ್ಮಿಕ ಮತಾಂತರ ನಿಷೇಧ ಅಧಿನಿಯಮ ಧಕ್ಕೆ ತರುತ್ತದೆ. ಸುಗ್ರೀವಾಜ್ಞೆಯ 3, 4 ಮತ್ತು 6 ನೇ ವಿಧಿಗಳು ನಾಗರಿಕರ ಜೀವನ ಸಂಗಾತಿ ಆಯ್ಕೆ, ಧಾರ್ಮಿಕ ಸ್ವಾತಂತ್ರ್ಯದ ಮೇಲೆ ನಿಗಾ ಇರಿಸಲು ಸರ್ಕಾರಕ್ಕೆ ಅನುವು ಮಾಡಿಕೊಡುತ್ತವೆ. ಈ ಆಜ್ಞೆ ಅನೈತಿಕ ಮತ್ತು ಸಂವಿಧಾನಬಾಹಿರ ಎಂದು ವಿವರಿಸಲಾಗಿದೆ. ಇತ್ತೀಚಿಗೆ ಇದೇ ಸುಗ್ರೀವಾಜ್ಞೆಯ ಸಿಂಧುತ್ವ ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಕೂಡ ಅರ್ಜಿ ಸಲ್ಲಿಸಲಾಗಿದ್ದು, ʼಸುಗ್ರೀವಾಜ್ಞೆಯ ದುರ್ಬಳಕೆ ಮಾಡಿಕೊಂಡು ಜನರ ನಡುವೆ ಅರಾಜಕತೆ ಮತ್ತು ಭೀತಿ ಉಂಟು ಮಾಡುವ ಸಾಧ್ಯತೆಗಳಿವೆʼ ಎಂದು ಆತಂಕ ವ್ಯಕ್ತಪಡಿಸಲಾಗಿದೆ.
ಸುಪ್ರೀಂಕೋರ್ಟ್‌ನಲ್ಲಿ ವೃತ್ತಿಯಲ್ಲಿ ತೊಡಗಿಕೊಂಡಿರುವ ಅನುಭವಿ, ಪ್ರಾಮಾಣಿಕ ಹಾಗೂ ದೃಢ ಸಂಕಲ್ಪದ ವಕೀಲೆಯರನ್ನು ಎಲ್ಲಾ ಹೈಕೋರ್ಟ್‌ಗಳಲ್ಲಿ ನ್ಯಾಯಮೂರ್ತಿಗಳಾಗಿ ನೇಮಕ ಮಾಡುವಂತೆ ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ಅವರಿಗೆ ನ್ಯಾಯಾಲಯದ ಮಹಿಳಾ ವಕೀಲರ ಸಂಘ ಎಸ್‌ಸಿಡಬ್ಲ್ಯೂಎಲ್‌ಎ ಪತ್ರ ಬರೆದಿದೆ. ಇತ್ತೀಚೆಗಷ್ಟೆ ಅಟಾರ್ನಿ ಜನರಲ್ ಕೆ ಕೆ ವೇಣುಗೋಪಾಲ್ ಅವರು ಲೈಂಗಿಕ ಹಿಂಸಾಚಾರ ಪ್ರಕರಣಗಳಲ್ಲಿ ಸೂಕ್ತ ತೀರ್ಪು ನೀಡಲು ನ್ಯಾಯಾಂಗದಲ್ಲಿ ಮಹಿಳಾ ನ್ಯಾಯಾಧೀಶರ ಸಂಖ್ಯೆಯನ್ನು ಹೆಚ್ಚಿಸಬೇಕು ಎಂದು ಅಭಿಪ್ರಾಯಪಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದು.
ಸಂಘದ ಅಧ್ಯಕ್ಷೆ ಹಿರಿಯ ನ್ಯಾಯವಾದಿ ಮಹಾಲಕ್ಷ್ಮೀ ಪಾವನಿ ಅವರು ಕಳೆದ ಮಾರ್ಚ್‌ನಿಂದ ಈವರೆಗೆ ಮೂವರು ನ್ಯಾಯಮೂರ್ತಿಗಳು ನಿವೃತ್ತರಾಗಿದ್ದಾರೆ. ಈ ನಿವೃತ್ತಿಯಿಂದಾಗಿ ಹೊಸ ನೇಮಕಾತಿಯ ಪ್ರಶ್ನೆ ಉದ್ಭವಿಸಿದ್ದರೂ ಇದುವರೆಗೆ ಯಾವುದೇ ನೇಮಕಾತಿ ನಡೆದಿಲ್ಲ ಎಂದಿದ್ದಾರೆ. ʼಹೈಕೋರ್ಟ್ ವಕೀಲರ ಪರಿಷತ್ತುಗಳು ಆಕ್ಷೇಪ ಎತ್ತಿದರೂ ಅದನ್ನು ಪರಿಗಣಿಸದೇ ಮಹಿಳೆಯರ ನೇಮಕಾತಿ ಕಾರ್ಯ ನಡೆಯಬೇಕು. ಪ್ರತಿ ಬ್ಯಾಚ್‌ನಲ್ಲಿ 200ಕ್ಕೂ ಹೆಚ್ಚು ವಿದ್ಯಾರ್ಥಿಗಳಿರುವ ಕಾನೂನು ಕಾಲೇಜುಗಳು ಕಡ್ಡಾಯವಾಗಿ 4 ಮತ್ತು 5ನೇ ವರ್ಷದ ವ್ಯಾಸಂಗದ ಅವಧಿಯಲ್ಲಿ ನ್ಯಾಯಾಂಗ ಪರೀಕ್ಷೆಗಳನ್ನು ತೆಗೆದುಕೊಳ್ಳುವ ವಿದ್ಯಾರ್ಥಿನಿಯರಿಗೆ ಮಾರ್ಗದರ್ಶನ ಮತ್ತು ತರಬೇತಿ ನೀಡಬೇಕು,ʼ ಎಂಬಿತ್ಯಾದಿ ಅಂಶಗಳನ್ನು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಜಮ್ಮು ಮತ್ತು ಕಾಶ್ಮೀರದ ಜೈಲುಗಳಲ್ಲಿ ಇರುವವರಲ್ಲಿ ಶೇ. 90 ಮಂದಿ ವಿಚಾರಣಾಧೀನ ಕೈದಿಗಳಿದ್ದಾರೆ. 2020ರ ಏಪ್ರಿಲ್ ಬಳಿಕ ಶೇ. 54 ಮಂದಿ ಜಾಮೀನು/ ಪೆರೋಲ್ ಮೇಲೆ ಬಿಡುಗಡೆಯಾಗಿದ್ದಾರೆ ಎಂದು ಆರ್‌ಟಿಐ ಅಡಿ ಸಲ್ಲಿಸಲಾದ ಅರ್ಜಿಯೊಂದಕ್ಕೆ ರಾಜ್ಯ ಬಂಧಿಖಾನೆ ಇಲಾಖೆ ಮಾಹಿತಿ ನೀಡಿದೆ. ಭಯೋತ್ಪಾದನೆ ಪ್ರಕರಣಗಳಡಿ ಬಂಧಿತರಾದವರವಲ್ಲಿ ಶೇ. 2ಕ್ಕಿಂತ ಕಡಿಮೆ ಮಂದಿಗೆ ಶಿಕ್ಷೆಯಾಗಿದೆ ಎಂದು ತಿಳಿದುಬಂದಿದೆ. ಕಾಶ್ಮೀರ ವಿವಿಯ ಕಾನೂನು ವಿಭಾಗದ ಇಬ್ಬರು ವಿದ್ಯಾರ್ಥಿಗಳು ಮಾಹಿತಿ ಹಕ್ಕು ಕಾಯಿದೆಯಡಿ ಅರ್ಜಿ ಸಲ್ಲಿಸಿದ್ದರು.
ಇದೇ ವೇಳೆ, “ಜಮ್ಮು ಕಾಶ್ಮೀರದಿಂದ ಹೊರಗೆ ಬಂಧಿತರಾಗಿರುವ ರಾಜ್ಯದ ಎಲ್ಲಾ ವ್ಯಕ್ತಿಗಳ ಬಗ್ಗೆ ಮಾಹಿತಿ ಇಲ್ಲ. 43 ಮಂದಿ ಉತ್ತರಪ್ರದೇಶ ಮತ್ತು ಹರ್ಯಾಣ ರಾಜ್ಯಗಳಲ್ಲಿ ಬಂಧಿಯಾಗಿದ್ದಾರೆ” ಎಂದು ಬಂಧೀಖಾನೆ ಇಲಾಖೆ ಡಿಜಿಪಿ ತಿಳಿಸಿದ್ದಾರೆ.
ಕೋವಿಡ್ ಆವರಿಸಿದ ಕಳೆದ ಏಪ್ರಿಲ್‌ನಿಂದ ನವೆಂಬರ್‌ವರೆಗೆ ಅಲಾಹಾಬಾದ್ ಹೈಕೋರ್ಟ್‌ನಲ್ಲಿ 115,953 ಪ್ರಕರಣಗಳು ದಾಖಲಾಗಿದ್ದು, 78,306 ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ. ನವೆಂಬರ್ ತಿಂಗಳೊಂದರಲ್ಲೇ ಅಲಾಹಾಬಾದ್ ಪೀಠದಲ್ಲಿ ಸುಮಾರು 1,478 ಪ್ರಕರಣಗಳನ್ನು ಇ-ಫೈಲಿಂಗ್ ಮೂಲಕ ಸಲ್ಲಿಸಲಾಗಿದ್ದು ಲಖನೌ ಪೀಠದಲ್ಲಿ 2,663 ಪ್ರಕರಣಗಳು ದಾಖಲಾಗಿವೆ. ಈ ವಿವರವನ್ನು ಇತ್ತೀಚೆಗೆ ಹೈಕೋರ್ಟ್ ಬಿಡುಗಡೆ ಮಾಡಿದ್ದು ಕೋವಿಡ್ ಹಿನ್ನೆಲೆಯಲ್ಲಿ ತನ್ನ ಕಾರ್ಯಾಚರಣೆಯನ್ನು ಅದು ಸೀಮಿತಗೊಳಿಸಿಕೊಂಡಿತ್ತು.
ಇವುಗಳಲ್ಲಿ ಅಲಹಾಬಾದ್ ಪೀಠ 59,057 ಪ್ರಕರಣಗಳನ್ನು ಭೌತಿಕವಾಗಿ ಮತ್ತು 3,361 ಪ್ರಕರಣಗಳನ್ನು ಜಾಲ- ಕಲಾಪಗಳ ಮೂಲಕ ವಿಲೇವಾರಿ ಮಾಡಿದೆ. 74, 622 ಮೊಕದ್ದಮೆಗಳನ್ನು ಭೌತಿಕವಾಗಿ ಹೂಡಲಾಗಿದ್ದರೆ 11,187 ಪ್ರಕರಣಗಳನ್ನು ವಿದ್ಯುನ್ಮಾನ ವಿಧಾನದ ಮೂಲಕ ದಾಖಲಿಸಲಾಗಿದೆ. ಲಕ್ನೋ ಪೀಠದಲ್ಲಿ, 15,009 ಮೊಕದ್ದಮೆಗಳನ್ನು ಭೌತಿಕವಾಗಿ ಹೂಡಲಾಗಿದೆ. ಅದರಲ್ಲಿ 8,227 ಪ್ರಕರಣಗಳನ್ನು ಭೌತಿಕ ವಿಚಾರಣೆಯ ಮೂಲಕ ವಿಲೇವಾರಿ ಮಾಡಲಾಗಿದೆ. 15,135 ದಾವೆಗಳನ್ನು ವಿದ್ಯುನ್ಮಾನ ರೂಪದಲ್ಲಿ ಹೂಡಲಾಗಿದ್ದು ಅದರಲ್ಲಿ 7,661 ಪ್ರಕರಣಗಳನ್ನು ವರ್ಚುವಲ್ ಕಲಾಪದ ಮೂಲಕ ವಿಲೇವಾರಿ ಮಾಡಲಾಗಿದೆ.