“ನಿಮ್ಮ ನಿರ್ಧಾರದಂತೆ ಹೊರ ನಡೆದಿದ್ದೀರಿ. ಈಗ ಅವರು ವಜಾ ಮಾಡಿದಿರಿ ಎಂದು ಹೇಳುತ್ತಿದ್ದೀರಿ. ಬ್ಯಾಂಕ್ ನಿಮ್ಮನ್ನು ವಜಾ ಮಾಡಿಲ್ಲ” ಎಂದು ಐಸಿಐಸಿಐ ಮಾಜಿ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕಿ ಚಂದಾ ಕೊಚ್ಚಾರ್ ಅವರಿಗೆ ಸುಪ್ರೀಂ ಕೋರ್ಟ್ ಹೇಳಿದೆ.
ಐಸಿಐಸಿಐ ಬ್ಯಾಂಕ್ ಖಾಸಗಿ ಸಂಸ್ಥೆಯಾಗಿದ್ದು, ಕೊಚ್ಚಾರ್ ಅವರ ಸೇವಾ ನಿಯಮಗಳು ಶಾಸನಬದ್ಧ ಸಂಸ್ಥೆಗೆ ಒಳಪಟ್ಟಿಲ್ಲ ಎಂದು ಹೇಳಿ ಕಳೆದ ಮಾರ್ಚ್‌ನಲ್ಲಿ ಬಾಂಬೆ ಹೈಕೋರ್ಟ್ ಕೊಚ್ಚಾರ್ ಅವರ ಮನವಿಯನ್ನು ವಜಾಗೊಳಿಸಿತ್ತು. ಈಗ ಸುಪ್ರೀಂ ಕೋರ್ಟ್ ಬಾಂಬೆ ಹೈಕೋರ್ಟ್ ಆದೇಶದಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿದೆ. “ಈಗಾಗಲೇ ಹೊರಡಿಸಿರುವ ಆದೇಶದಲ್ಲಿ ಮಧ್ಯಪ್ರವೇಶಿಸಲು ಆಗದು. ಇದು ಬ್ಯಾಂಕ್ ಮತ್ತು ಸಿಬ್ಬಂದಿಗೆ ಸಂಬಂಧಿಸಿದ ಖಾಸಗಿ ಒಪ್ಪಂದವಾಗಿದೆ. ನಾವು ಈ ವಿಚಾರದಲ್ಲಿ ಮಧ್ಯಪ್ರವೇಶಿಸಲಾಗದು ರೋಹಟ್ಗಿ” ಎಂದು ಸುಪ್ರೀಂ ಕೋರ್ಟ್ ಹೇಳಿತು. ಹಿರಿಯ ವಕೀಲ ಮುಕುಲ್ ರೋಹಟ್ಗಿ ಅವರು ಚಂದಾ ಕೊಚ್ಚಾರ್ ಅವರನ್ನು ಪ್ರತಿನಿಧಿಸಿದ್ದರು.
ಕಳೆದ ಏಪ್ರಿಲ್‌ನಿಂದ ಕೊಚ್ಚಿಯ ಕಡಲಕಿನಾರೆಯಲ್ಲಿ ಸಿಲುಕಿದ್ದ ಮೀನುಗಾರಿಕೆ ನಾವೆಯಲ್ಲಿದ್ದ ಐವರು ನಾವಿಕರನ್ನು ಕೇರಳ ಹೈಕೋರ್ಟ್ ಮಧ್ಯಪ್ರವೇಶಿಸಿದ ಹಿನ್ನೆಲೆಯಲ್ಲಿ ರಕ್ಷಿಸಲಾಗಿದೆ.
ಐವರು ನಾವಿಕರ ಸಂಕಷ್ಟವನ್ನು ಅರಿತು ಕೇರಳ ಹೈಕೋರ್ಟ್ ಸೂಕ್ತ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಹಿನ್ನೆಲೆಯಲ್ಲಿ ಅವರು ಅಲ್ಲಿಂದ ಸುರಕ್ಷಿತವಾಗಿ ಹೊರಬರುವಂತಾಗಿದೆ. ಐವರು ನಾವಿಕರಿಗೆ ಊಟ ಮತ್ತಿತರ ಸೌಲಭ್ಯ ಕಲ್ಪಿಸುವಂತೆ ಬಂದರು ಇಲಾಖೆಗೆ ಕಳೆದ ವಾರ ನ್ಯಾಯಾಲಯ ನಿರ್ದೇಶಿಸಿತ್ತು. ಸದ್ಯ ನೌಕೆ ಕೊಚ್ಚಿ ಮುನಂಬಂ ಮೀನುಗಾರಿಕಾ ಬಂದರಿನಲ್ಲಿದೆ. ನಾವೆಯ ಮಾಲೀಕ ತಾನು ದಿವಾಳಿಯಾಗಿರುವುದಾಗಿ ನ್ಯಾಯಾಲಯಕ್ಕೆ ತಿಳಿಸಿದ್ದ. ಕಡಲಯಾನಕ್ಕೆ ಸಂಬಂಧಿಸಿದ ಕಾನೂನಿನ ನಿಯಮಾವಳಿಗಳ ಕಾರಣದಿಂದಾಗಿ ನೌಕೆಯಲ್ಲಿದ್ದ ನಾವಿಕರು ಮಾಲೀಕ ಅವರನ್ನು ಕೆಲಸದಿಂದ ಬಿಡುಗಡೆ ಮಾಡದೆ ಹೊರಬರುವಂತಿರಲಿಲ್ಲ. ಆದರೆ, ದಿವಾಳಿಯಾದ ಹಿನ್ನೆಲೆಯಲ್ಲಿ ತನಗೆ ನಾವಿಕರಿಗೆ ನೀಡಬೇಕಾದ ಸಂಬಳವನ್ನು ನೀಡಲು ಸಾಧ್ಯವಿಲ್ಲದ ಕಾರಣ ನಿಯಮಾವಳಿಗಳನ್ವಯ ನಾವಿಕರನ್ನು ನೌಕೆಯಿಂದ ಹೊರಗೆ ಕಳುಹಿಸಲು ತನಗೆ ಸಾಧ್ಯವಾಗಿಲ್ಲದಿರುವುದಾಗಿ ಮಾಲೀಕ ತಿಳಿಸಿದ್ದ. ಅಂತಿಮವಾಗಿ ಹೈಕೋರ್ಟಿನ ನಿರ್ದೇಶನದ ನಂತರ ನಾವಿಕರನ್ನು ಸೇವೆಯಿಂದ ಬಿಡುಗಡೆಗೊಳಿಸಿರುವುದಾಗಿ ಮಾಲೀಕ ನ್ಯಾಯಾಲಯಕ್ಕೆ ತಿಳಿಸಿದ.
ರಾಜಕೀಯ ಮಹತ್ವವಾದ 2ಜಿ ತರಂಗಾಂತರ ಪ್ರಕರಣದಲ್ಲಿ ಎಲ್ಲರೂ ನಿರ್ದೋಷಿಗಳು ಎಂದು ಘೋಷಿಸಲ್ಪಟ್ಟಿರುವುದನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಮೇಲ್ಮನವಿಗೆ ಸಂಬಂಧಿಸಿದಂತೆ ಜನವರಿ 13ರಿಂದ ಕೇಂದ್ರೀಯ ತನಿಖಾ ದಳವು ಮತ್ತೊಮ್ಮೆ ದೆಹಲಿ ಹೈಕೋರ್ಟ್ ಎದುರು ವಾದ ಮಂಡಿಸಲಿದೆ.
ಕಳೆದ ತಿಂಗಳು ನ್ಯಾಯಮೂರ್ತಿ ಬ್ರಿಜೇಶ್ ಸೇಥಿ ಅವರು ತಮ್ಮಿಂದ ಪ್ರಕರಣಗಳನ್ನು ಬಿಡುಗಡೆ ಮಾಡಿದ ಹಿನ್ನೆಲೆಯಲ್ಲಿ ಸಿಬಿಐ ಹಾಗೂ ಜಾರಿ ನಿರ್ದೇಶನಾಲಯದ ಮೇಲ್ಮನವಿಗಳನ್ನು ನ್ಯಾಯಮೂರ್ತಿ ಯೋಗೇಶ್ ಖನ್ನಾ ನೇತೃತ್ವದ ಏಕಸದಸ್ಯ ಪೀಠದ ಮುಂದೆ ವಿಚಾರಣೆಗೆ ನಿಗದಿಪಡಿಸಲಾಗಿದೆ. ನ್ಯಾಯಮೂರ್ತಿ ಸೇಥಿ ಅವರು ಸೇವೆಯಿಂದ ನಿವೃತ್ತರಾದ ಹಿನ್ನೆಲೆಯಲ್ಲಿ ಪ್ರಕರಣಗಳು ನೂತನ ನ್ಯಾಯಮೂರ್ತಿಯ ಪೀಠಕ್ಕೆ ವರ್ಗಾವಣೆಗೊಂಡಿವೆ.
ವಿಕಲತೆಗೆ ತುತ್ತಾಗಿರುವ ಕಾನೂನು ವೃತ್ತಿಪರರ ಕುರಿತಾದ ವರ್ಚುವಲ್ ಅಂತಾರಾಷ್ಟ್ರೀಯ ಸಮಾವೇಶವು ಇಂದಿನಿಂದ ಡಿಸೆಂಬರ್ 3ರವರೆಗೆ ನಡೆಯಲಿದ್ದು, ಬೀಳ್ಕೊಡುಗೆ ಸಮಾರಂಭದಲ್ಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಭಾಗವಹಿಸಲಿದ್ದಾರೆ.
ಆಕ್ಸ್‌ಫರ್ಡ್ ಮಾನವ ಹಕ್ಕುಗಳ ಹಬ್, ವಿಕಲತೆಗೆ ಸಂಬಂಧಿಸಿದ ಹಾರ್ವರ್ಡ್ ಕಾನೂನು ಶಾಲೆಯ ಪ್ರಾಜೆಕ್ಟ್ ಮತ್ತು ಇಂಗ್ಲೆಂಡ್‌ನ ಲೀಡ್ಸ್ ವಿಶ್ವವಿದ್ಯಾಲಯದ ವಿಕಲತೆ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ಐಎಲ್‌ಎಸ್ ಕಾನೂನು ಕಾಲೇಜು ಹಾಗೂ ಪುಣೆಯ ಈಕ್ವಲ್ ಆಪರ್ಚುನಿಟಿ ಕಮ್ ಎನೇಬಲಿಂಗ್ ಸೆಲ್ ಸಮಾವೇಶ ಆಯೋಜಿಸಿವೆ. ವಿಕಲತೆಗೆ ತುತ್ತಾಗಿರುವ ಕಾನೂನು ವೃತ್ತಿಪರರನ್ನು ಒಳಗೊಂಡ ಮೂರು ಚರ್ಚೆಗಳನ್ನೂ ಆಯೋಜಿಸಲಾಗಿದೆ. ದೇಶ-ವಿದೇಶಗಳ ಖ್ಯಾತನಾಮ ವಕೀಲರು, ಪ್ರಾಧ್ಯಾಪಕರು ಮತ್ತು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.
“ಎಲ್ಲಾ ಕಡೆ ನಾವು ಗಾಂಧಿ ಪ್ರತಿಮೆಗಳನ್ನು ಪ್ರತಿಷ್ಠಾಪಿಸಿದ್ದೇವೆ. ಆದರೆ, ಮಹಾತ್ಮ ಗಾಂಧಿ ಅವರ ತತ್ವಗಳನ್ನು ಅನುಸರಿಸುತ್ತಿದ್ದೇವೆಯೇ? ಅವರ ಹೆಸರನ್ನು ಹೇಳಲೂ ನಾವು ಯೋಗ್ಯರಲ್ಲ!” ಎಂದು ಮದ್ರಾಸ್ ಹೈಕೋರ್ಟ್ ಮಂಗಳವಾರ ಖಾರವಾಗಿ ನುಡಿದಿದೆ.
ದೇಶದಲ್ಲಿ ಅಸ್ತಿತ್ವದಲ್ಲಿರುವ ಪ್ರತಿಮೆ ಸಂಸ್ಕೃತಿಗೆ ಅಸಮ್ಮತಿ ಸೂಚಿಸಿರುವ ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠವು ಪ್ರಮುಖ ನಾಯಕರ ತತ್ವಗಳನ್ನು ಅನುಸರಿಸದೇ ಇರುವಾಗ ಅವರ ಪ್ರತಿಮೆಗಳನ್ನು ಸ್ಥಾಪಿಸುವ ಅಗತ್ಯವೇನಿದೆ ಎಂದು ಬಹಿರಂಗ ಪ್ರಶ್ನೆ ಹಾಕಿತು. “ನಾಯಕರನ್ನು ಗೂಡಿನಲ್ಲಿ ಬಂಧಿಸುವ ಉದ್ದೇಶದಿಂದ ಪ್ರತಿಮೆ ಸ್ಥಾಪಿಸಲು ಅನುಮತಿ ಪಡೆಯುವ ಅಗತ್ಯವೇನಿದೆ” ಎಂದು ನ್ಯಾಯಮೂರ್ತಿಗಳಾದ ಎನ್ ಕಿರುಬಾಕರನ್ ಮತ್ತು ಬಿ ಪುಗಳೇಂದಿ ಅವರಿದ್ದ ಪೀಠ ಪ್ರಶ್ನಿಸಿತು. ಪ್ರತಿಮೆ ಸ್ಥಾಪನೆ ಕುರಿತಾದ ಅರ್ಜಿಯೊಂದರ ವಿಚಾರಣೆ ವೇಳೆ ನ್ಯಾಯಪೀಠ ಮೇಲಿನಂತೆ ಅಭಿಪ್ರಾಯಪಟ್ಟಿತು.