ಸರ್ಕಾರದ ಜೊತೆ ಚರ್ಚಿಸಿ ಅಂಚೆ ವಿಧಾನದ ಮೂಲಕ ಹಕ್ಕು ಚಲಾಯಿಸುವ ಸಂಬಂಧ ಮತದಾರರ ವರ್ಗವನ್ನು ನಿರ್ಧರಿಸಲು ಭಾರತೀಯ ಚುನಾವಣಾ ಆಯೋಗಕ್ಕೆ ಅನುಮತಿಸುವ 1951ರ ಜನಪ್ರತಿನಿಧಿ ಕಾಯಿದೆ ಸೆಕ್ಷನ್ 60(ಸಿ) ಸಿಂಧುತ್ವ ಪ್ರಶ್ನಿಸಿದ್ದ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಮನವಿಯನ್ನು ಮದ್ರಾಸ್ ಹೈಕೋರ್ಟ್ ಬುಧವಾರ ವಜಾಗೊಳಿಸಿದೆ.
ಅಗತ್ಯ ಸೇವೆ ನೀಡುವವರು, ಹಿರಿಯ ನಾಗರಿಕರು, ವಿಶೇಷ ಚೇತನರು ಮತ್ತು ಕೋವಿಡ್‌ಗೆ ತುತ್ತಾಗಿರುವವರು ಅಥವಾ ಕೋವಿಡ್ ಶಂಕಿತರು ಅಂಚೆ ವಿಧಾನದ ಮೂಲಕ ಮತದಾನ ಮಾಡಲು 2019 ಮತ್ತು 2020ರ ತಿದ್ದುಪಡಿ ಮತ್ತು ಅಧಿಸೂಚನೆಯ ಮೂಲಕ ಅನುಮತಿಸಲಾಗಿತ್ತು. ನಿರಂಕುಶತ್ವ, ವಿಪರೀತವಾದ ನಿಯೋಜನೆ ಮತ್ತು ಅಂಚೆ ಮತದಾನವು ಚುನಾವಣೆಯ ಪರಿಪೂರ್ಣತೆಗೆ ಧಕ್ಕೆ ಉಂಟು ಮಾಡುತ್ತದೆ ಎಂಬ ಡಿಎಂಕೆ ವಾದವನ್ನು ತಿರಸ್ಕರಿಸಿರುವ ಮುಖ್ಯ ನ್ಯಾಯಮೂರ್ತಿ ಸಂಜೀಬ್ ಬ್ಯಾನರ್ಜಿ ಮತ್ತು ನ್ಯಾ. ಸೆಂಥಿಲ್‌ಕುಮಾರ್ ರಾಮಮೂರ್ತಿ ಅವರಿದ್ದ ವಿಭಾಗೀಯ ಪೀಠ “ಎಲ್ಲರನ್ನೂ ಒಳಗೊಳ್ಳುವ ನಿಟ್ಟಿನಲ್ಲಿ ಅಂಚೆ ಮತದಾನದ ಮೂಲಕ ಪ್ರಜಾಪ್ರಭುತ್ವದ ಹಬ್ಬದಲ್ಲಿ ಭಾಗವಹಿಸಲು ತಮ್ಮ ಹಕ್ಕನ್ನು ಚಲಾಯಿಸುವುದರಿಂದ ವಂಚಿತರಾಗಬಹುದಾದ ಕೆಲವು ವರ್ಗದ ವ್ಯಕ್ತಿಗಳಿಗೆ ಅವಕಾಶ ನೀಡಬೇಕು ಎಂದು ಚುನಾವಣಾ ಆಯೋಗವು ಮಾಡಿರುವ ಈ ಕೆಲಸವನ್ನು ನಾವು ಶ್ಲಾಘಿಸಬೇಕಿದೆ… ಹಕ್ಕು ಚಲಾವಣೆಯ ಗೌಪ್ಯತೆ ಅಥವಾ ಚುನಾವಣೆಯ ಪಾರದರ್ಶಕತೆ ಜೊತೆ ರಾಜಿ ಮಾಡಿಕೊಳ್ಳದೇ ಪ್ರಕ್ರಿಯೆಯು ಎಲ್ಲರನ್ನೂ ಒಳಗೊಳ್ಳುವುದಾದರೆ ಇದೊಂದು ಮಹತ್ವದ ಬೆಳವಣಿಗೆಯಾಗಿದ್ದು ಅದಕ್ಕಾಗಿ ಚುನಾವಣಾ ಆಯೋಗವನ್ನು ನಾವು ಅಭಿನಂದಿಸಬೇಕಿದೆ” ಎಂದು ಪೀಠ ಹೇಳಿದೆ. 1951ರ ಕಾಯಿದೆಯ ಸೆಕ್ಷನ್ 60 (ಸಿ) ಸಾಂವಿಧಾನಿಕ ನಿಬಂಧನೆ ಅಥವಾ ತತ್ವಗಳನ್ನು ಉಲ್ಲಂಘಿಸುತ್ತದೆ ಎಂಬ ವಾದಕ್ಕೆ ಮನವಿದಾರರು ಸೂಕ್ತ ಸಮರ್ಥನೆ ನೀಡಿಲ್ಲ ಎಂದೂ ನ್ಯಾಯಾಲಯ ಹೇಳಿದೆ.
ಬಾಲಿವುಡ್ ನಟಿ ರಿಯಾ ಚಕ್ರವರ್ತಿ ಅವರಿಗೆ ಬಾಂಬೆ ಹೈಕೋರ್ಟ್ ಮಂಜೂರು ಮಾಡಿರುವ ಜಾಮೀನು ಆದೇಶವನ್ನು ಪ್ರಶ್ನಿಸಿ ಕೇಂದ್ರ ಸರ್ಕಾರ ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆಯನ್ನು ಮುಂದಿನ ವಾರ ನಡೆಸಲು ಸುಪ್ರೀಂ ಕೋರ್ಟ್ ಸಮ್ಮತಿಸಿದೆ. ಮಾದಕ ವಸ್ತು ನಿಯಂತ್ರಣ ಸಂಸ್ಥೆಯು ಮಾದಕ ವಸ್ತುಗಳು ಮತ್ತು ಅಮಲು ಪದಾರ್ಥಗಳ ಕಾಯಿದೆ ಅಡಿ ರಿಯಾ ವಿರುದ್ಧ ದಾಖಲಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಅವರಿಗೆ ನೀಡಿದ್ದ ಜಾಮೀನನ್ನು ಪ್ರಶ್ನಿಸಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ, ನ್ಯಾಯಮೂರ್ತಿಗಳಾದ ಎ ಎಸ್ ಬೋಪಣ್ಣ ಮತ್ತು ವಿ ರಾಮಸುಬ್ರಮಣಿಯನ್ ಅವರಿದ್ದ ತ್ರಿಸದಸ್ಯ ಪೀಠ ನಡೆಸಿತು.
ಹೈಕೋರ್ಟ್ ಆದೇಶವು ಎನ್‌ಡಿಪಿಎಸ್ ಕಾಯಿದೆಯನ್ನು ಅರ್ಥಹೀನವಾಗಿಸಿದೆ ಎಂದು ವಿಚಾರಣೆಯ ಸಂದರ್ಭದಲ್ಲಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹೇಳಿದರು. “ಜಾಮೀನಿನ ವಿಚಾರದಲ್ಲಿ ನೀವು ಮಧ್ಯಪ್ರವೇಶಿಸುವುದಿಲ್ಲ ಎಂದು ನಮಗೆ ಗೊತ್ತು. ಎನ್‌ಡಿಪಿಎಸ್ ಕಾಯಿದೆಯ ಕುರಿತಾಗಿ ಬಾಂಬೆ ಹೈಕೋರ್ಟ್ ಹಲವು ಅಭಿಪ್ರಾಯಗಳನ್ನು ವ್ಯಕ್ತಪಡಿಸಿರುವುದು ನನಗೆ ಆತಂಕ ಉಂಟು ಮಾಡಿದ್ದು, ಇದರಿಂದ ಕಾಯಿದೆ ಅರ್ಥಹೀನವಾಗಲಿದೆ” ಎಂದರು. ಇದಕ್ಕೆ ಸ್ಪಷ್ಟನೆ ನೀಡಿದ ಸಿಜೆಐ ಎಸ್ ಎ ಬೊಬ್ಡೆ ಅವರು “ಜಾಮೀನಿನ ವಿಚಾರದಲ್ಲಿ ನಾವು ಮಧ್ಯಪ್ರವೇಶಿಸುತ್ತೇವೆ. ನೀವು ಜಾಮೀನು ಆದೇಶವನ್ನು ಪ್ರಶ್ನಿಸಿದರೆ ಮಾತ್ರ ಇಲ್ಲಿಗೆ ಬರಬಹುದು. ಜಾಮೀನು ಆದೇಶದಲ್ಲಿ ಹೈಕೋರ್ಟ್ ಅನ್ನು ಹುಡುಕಬಾರದು” ಎಂದರು. ಮೇಲ್ಮನವಿ ತಿದ್ದುಪಡಿ ಮಾಡಲು ಕಾಲಾವಕಾಶ ನೀಡುವಂತೆ ಮೆಹ್ತಾ ಪೀಠವನ್ನು ಕೋರಿದರು. ಎನ್‌ಡಿಪಿಎಸ್ ಕಾಯಿದೆ ಕುರಿತು ಹೈಕೋರ್ಟ್ ಎತ್ತಿರುವ ವಿಚಾರಗಳನ್ನು ಪ್ರಶ್ನಿಸುವುದರ ಜೊತೆಗೆ ಜಾಮೀನು ಮಂಜೂರು ಮಾಡಿರುವುದನ್ನೂ ಪ್ರಶ್ನಿಸುವುದಾಗಿ ಮೆಹ್ತಾ ಹೇಳಿದರು.
ಅಮೆಜಾನ್ ಪಾಲಿಗೆ ಮಹತ್ವದ ಗೆಲುವು ದಕ್ಕಿದ್ದು, ಫ್ಯೂಚರ್ –ರಿಲಯನ್ಸ್ ಒಪ್ಪಂದದ ವಿರುದ್ಧ ಹೊರಡಿಸಲಾಗಿದ್ದ ತುರ್ತು ತೀರ್ಪನ್ನು ದೆಹಲಿ ಹೈಕೋರ್ಟ್ ಎತ್ತಿ ಹಿಡಿದಿದೆ. ಅಲ್ಲದೇ, ಫ್ಯೂಚರ್ ಸಮೂಹಕ್ಕೆ 20 ಲಕ್ಷ ರೂಪಾಯಿ ದಂಡ ವಿಧಿಸಲಾಗಿದ್ದು, ಅದನ್ನು ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ಸಂದಾಯ ಮಾಡುವಂತೆ ನ್ಯಾಯಾಲಯ ಆದೇಶಿಸಿದೆ.
ಫ್ಯೂಚರ್ ರಿಟೇಲ್, ಫ್ಯೂಚರ್ ಕೂಪನ್ಸ್, ಕಿಶೋರ್ ಬಿಯಾನಿ ಮತ್ತು ಇತರರು ತುರ್ತು ತೀರ್ಪನ್ನು ಉಲ್ಲಂಘಿಸಿದ್ದಾರೆ ಎಂದು ನ್ಯಾಯಮೂರ್ತಿ ಜೆ ಆರ್ ಮಿಧಾ ಅವರ ನೇತೃತ್ವದ ಏಕಸದಸ್ಯ ಪೀಠವು ಹೇಳಿದೆ. ಬಿಯಾನಿ ಮತ್ತು ಇತರರಿಗೆ ಷೋಕಾಸ್ ನೋಟಿಸ್ ಜಾರಿಗೊಳಿಸಿರುವ ನ್ಯಾಯಾಲಯವು ಅವರನ್ನು ಏಕೆ ಕಾರಾಗೃಹದಲ್ಲಿ ಇಡಬಾರದು ಎಂದು ಪ್ರಶ್ನಿಸಿದೆ. ಬಿಯಾನಿ ಅವರ ಆಸ್ತಿಗಳನ್ನು ಉಲ್ಲೇಖಿಸಿ, ಆಸ್ತಿಯ ವಿವರವನ್ನು ಒಳಗೊಂಡ ಅಫಿಡವಿಟ್ ಸಲ್ಲಿಸುವಂತೆ ನ್ಯಾಯಾಲಯ ನಿರ್ದೇಶಿಸಿದೆ. ಫ್ಯೂಚರ್ ಸಮೂಹದ ಕಂಪೆನಿಗಳಿಗೆ ಸಂಬಂಧಿಸಿದಂತೆ ತುರ್ತು ಮಧ್ಯಸ್ಥಿಕೆದಾರರು 'ಗ್ರೂಪ್ ಆಫ್ ಕಂಪನಿ' ಸಿದ್ಧಾಂತವನ್ನು ಸರಿಯಾಗಿ ಪ್ರಸ್ತಾಪಿಸಿದ್ದಾರೆ. ಫ್ಯೂಚರ್ -ರಿಲಯನ್ಸ್ ಒಪ್ಪಂದಕ್ಕೆ ನೀಡಲಾದ ಅನುಮೋದನೆಗಳನ್ನು ಹಿಂಪಡೆಯಲು ಅಧಿಕಾರಿಗಳನ್ನು ಸಂಪರ್ಕಿಸಲು ಫ್ಯೂಚರ್ ಗ್ರೂಪ್‌ಗೆ ನಿರ್ದೇಶಿಸಲಾಗಿದೆ. ಎಫ್‌ಆರ್‌ಎಲ್‌ನ ಷೇರುದಾರ ಮತ್ತು ಶೇ 49 ಪಾಲನ್ನು ಹೊಂದಿರುವ ಫ್ಯೂಚರ್ ಕೂಪನ್ಸ್ ಪ್ರೈವೇಟ್ ಲಿಮಿಟೆಡ್ ತಾನು ಒಪ್ಪಿಗೆ ನೀಡದೇ ಎಫ್‌ಆರ್‌ಎಲ್-ರಿಲಯನ್ಸ್ ಒಪ್ಪಂದಕ್ಕೆ ಅನುಮತಿ ನೀಡಲಾರದು ಎಂದು ಅಮೆಜಾನ್ ಪ್ರತಿಪಾದಿಸಿತ್ತು. ಎಫ್‌ಆರ್‌ಎಲ್‌ನಲ್ಲಿ ತಾನು “ರಕ್ಷಣಾತ್ಮಕ ಹಕ್ಕುಗಳನ್ನು” ಹೊಂದಿದ್ದು, ಎಫ್‌ಆರ್‌ಎಲ್‌ನಲ್ಲಿ "ಹಕ್ಕುಗಳನ್ನು ನಿಯಂತ್ರಿಸುವುದಿಲ್ಲ" ಎಂದು ಅಮೆಜಾನ್ ಹೇಳಿತ್ತು. ಎಫ್‌ಆರ್‌ಎಲ್ ಸ್ವತ್ತುಗಳನ್ನು ರಿಲಯನ್ಸ್‌ಗೆ ಮಾರಾಟ ಮಾಡುವುದರ ಮೂಲಕ ಅದನ್ನು ಉಲ್ಲಂಘಿಸಲಾಗುತ್ತಿದೆ ಎಂದು ಅಮೆಜಾನ್ ವಾದಿಸಿತ್ತು.