ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು | 25-11-2020
ಭಾರತೀಯ ಸೇನೆ ಶೇ. 50ರಷ್ಟು ಮಹಿಳಾ ಅಭ್ಯರ್ಥಿಗಳಿಗೆ ಶಾಶ್ವತ ಆಯೋಗ ಕಲ್ಪಿಸಿಲ್ಲ: ಕೇಂದ್ರ ಸರ್ಕಾರದ ಸ್ವೇಚ್ಛೆ ಪ್ರಶ್ನಿಸಿ ʼಸುಪ್ರೀಂʼನಲ್ಲಿ ಅರ್ಜಿ
ಸುಪ್ರೀಂಕೋರ್ಟ್ ತೀರ್ಪಿನ ಹೊರತಾಗಿಯೂ “ಕನಿಷ್ಠ ಶೇ. 50ರಷ್ಟು ಮಹಿಳಾ ಅಧಿಕಾರಿಗಳಿಗೆ ಕೂಡ ಭಾರತೀಯ ಸೇನೆ ಶಾಶ್ವತ ಆಯೋಗ ರಚಿಸಿಲ್ಲ” ಎಂದು ಆರೋಪಿಸಿ 17 ಮಹಿಳಾ ಸೇನಾಧಿಕಾರಿಗಳು ಅರ್ಜಿ ಸಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಸೂಚಿಸಿದೆ.
ಅರ್ಹ ಮಹಿಳಾ ಅಭ್ಯರ್ಥಿಗಳಿಗೆ ಪ್ರಯೋಜನ ನಿರಾಕರಿಸುವಂತೆ ಶಾಶ್ವತ ಆಯೋಗ ಮಂಡಳಿಯ ಅನಿಯಂತ್ರಿತ ಮಾನದಂಡವಿದೆ. ಜೊತೆಗೆ ಮಾತಿನಲ್ಲಿ ಮಾತ್ರ ಶಾಶ್ವತ ಆಯೋಗ ರಚಿಸಲಾಗುವುದು ಎಂದು ಹೇಳಲಾಗುತ್ತಿದೆಯೇ ವಿನಾ ಕೃತಿಯಲ್ಲಿ ಇಲ್ಲ ಎಂದು ವಕೀಲರಾದ ಚಿತ್ರಾಂಗದಾ ರಾಷ್ಟ್ರಾವರ ಅವರು ವಕೀಲೆ ಅರ್ಚನಾ ಪಾಠಕ್ ದವೆ ಅವರ ಮೂಲಕ ಸಲ್ಲಿಸಿರುವ ಅರ್ಜಿಯಲ್ಲಿ ವಿವರಿಸಲಾಗಿದೆ. ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಅವರಿದ್ದ ಪೀಠ ಈ ಸಂಬಂಧ ಕೇಂದ್ರ ಸರ್ಕಾರಕ್ಕೆ ಪ್ರತಿ ಅಭ್ಯರ್ಥಿಯ ಮಾಹಿತಿ ಪಟ್ಟಿ ಸಿದ್ಧಪಡಿಸುವಂತೆ ಸೂಚಿಸಿದ್ದು ವಿಚಾರಣೆಯನ್ನು ಡಿಸೆಂಬರ್‌ಗೆ ಮುಂದೂಡಿದೆ.
ಉಮರ್ ಖಾಲಿದ್, ಶಾರ್ಜೀಲ್ ಇಮಾಮ್ ವಿರುದ್ಧ ವಿಚಾರಣೆ ಮುಂದುವರೆಸಲು ಸಾಕಷ್ಟು ದಾಖಲೆಗಳಿವೆ ಎಂಬುದನ್ನು ಪರಿಗಣನೆಗೆ ತೆಗೆದುಕೊಂಡ ದೆಹಲಿ ನ್ಯಾಯಾಲಯ
ದೆಹಲಿ ಗಲಭೆಗೆ ಸಂಬಂಧಿಸಿದಂತೆ ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯಿದೆ (ಯುಎಪಿಎ) ಅಡಿ ಹೋರಾಟಗಾರರಾದ ಉಮರ್ ಖಾಲಿದ್ ಮತ್ತು ಶಾರ್ಜಿಲ್ ಇಮಾಮ್ ವಿರುದ್ಧ ಸಲ್ಲಿಸಲಾಗಿರುವ ಆರೋಪಪಟ್ಟಿಯನ್ನು ಮಂಗಳವಾರ ದೆಹಲಿ ನ್ಯಾಯಾಲಯ ಪರಿಗಣಿಸಿದೆ. ಖಾಲಿದ್ ಮತ್ತು ಶಾರ್ಜೀಲ್ ವಿರುದ್ಧ ವಿಚಾರಣೆ ಮುಂದುವರೆಸಲು ಸಾಕಷ್ಟು ದಾಖಲೆಗಳಿವೆ ಎಂದು ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.
ಆರೋಪಪಟ್ಟಿ ಮತ್ತು ಪೂರಕ ದಾಖಲೆಗಳಲ್ಲಿ ತಿಳಿಸಿರುವಂತೆ ಆರೋಪಿಗಳ ವಿರುದ್ಧ ವಿಚಾರಣೆ ಮುಂದುವರೆಸಲು ಸಾಕಷ್ಟು ದಾಖಲೆಗಳು ಇವೆ ಎಂಬುದನ್ನು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರಾದ ಅಮಿತಾಭ್ ರಾವತ್ ಅವರು ಪರಿಗಣಿಸಿದ್ದು, ಆದೇಶ ಹೊರಡಿಸಿದ್ದಾರೆ.
ಕೇರಳ ಪೊಲೀಸ್ ಕಾಯಿದೆಯ ಸೆಕ್ಷನ್ 118 ಎ: ಸುಗ್ರೀವಾಜ್ಞೆ ಹಿಂಪಡೆಯಲು ಸಂಪುಟ ಶಿಫಾರಸು ಮಾಡಿದೆ ಎಂದು ಹೈಕೋರ್ಟ್‌ಗೆ ವಿವರಿಸಿದ ಕೇರಳ ಸರ್ಕಾರ
ಕೇರಳ ಪೊಲೀಸ್ ಕಾಯಿದೆಗೆ 118 ಎ ಸೆಕ್ಷನ್ ಅಳವಡಿಸಲು ಹೊರಡಿಸಿದ್ದ ವಿವಾದಿತ ಸುಗ್ರೀವಾಜ್ಞೆಯನ್ನು ಹಿಂತೆಗೆದುಕೊಳ್ಳಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಕೇರಳ ಸರ್ಕಾರ ಬುಧವಾರ ಅಲ್ಲಿನ ಹೈಕೋರ್ಟ್‌ಗೆ ವಿವರಣೆ ನೀಡಿದೆ.
ವಿವಾದಾತ್ಮಕ ಕೇರಳ ಪೊಲೀಸ್ ತಿದ್ದುಪಡಿ ಕಾಯಿದೆ ಪ್ರಶ್ನಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎಸ್ ಮಣಿಕುಮಾರ್ ಮತ್ತು ನ್ಯಾಯಮೂರ್ತಿ ಶಾಜಿ ಪಿ ಚಾಲೆ ಅವರಿದ್ದ ವಿಭಾಗೀಯ ಪೀಠಕ್ಕೆ ಹೆಚ್ಚುವರಿ ಅಡ್ವೊಕೇಟ್ ಜನರಲ್ ವಿವರಣೆ ನೀಡಿದರು. ಈ ನಡುವೆ ಮಧ್ಯಂತರದಲ್ಲಿ ಯಾವುದೇ ಕ್ರಮಕೈಗೊಳ್ಳುವಂತಿಲ್ಲ ಎಂದಿರುವ ಪೀಠವು ಎರಡು ವಾರಗಳವರೆಗೆ ಪ್ರಕರಣದ ವಿಚಾರಣೆ ಮುಂದೂಡಿದೆ.
ಭೌತಿಕವಾಗಿ ನ್ಯಾಯಾಲಯಕ್ಕೆ ಹಾಜರಾಗುವಂತೆ ವಕೀಲರಿಗೆ ಹೇಳುವಂತಿಲ್ಲ: ದೆಹಲಿ ಹೈಕೋರ್ಟ್
ಕೋವಿಡ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಹೈಕೋರ್ಟ್ ಸಲಹೆಗಳ ಅನ್ವಯ ನ್ಯಾಯಾಲಯದಲ್ಲಿ ಭೌತಿಕವಾಗಿ ವಕೀಲರು ಹಾಜರಾಗುವಂತೆ ಸೂಚಿಸುವಂತಿಲ್ಲ ಎಂದು ದೆಹಲಿ ಹೈಕೋರ್ಟ್ ಹೇಳಿದೆ. ಇದೇ ವೇಳೆ ಸೂಚನೆ ಬಳಿಕವೂ ವರ್ಚುವಲ್ ಕಲಾಪದಲ್ಲಿ ಭಾಗವಹಿಸದಿದ್ದರೆ ಸಂಬಂಧಪಟ್ಟ ನ್ಯಾಯಾಲಯ ಕಾನೂನಿನ ಪ್ರಕಾರ ಮುಂದುವರೆಯಬಹುದು ಎಂದು ನ್ಯಾಯಮೂರ್ತಿ ಸಂಜೀವ್ ಸಚದೇವ್ ಅವರಿದ್ದ ಏಕಸದಸ್ಯ ಪೀಠ ಹೇಳಿದೆ.
ವಿಚಾರಣಾಧೀನ ನ್ಯಾಯಾಲಯವೊಂದು ತಮ್ಮ ಪ್ರಕರಣವನ್ನು ಭೌತಿಕ ವಿಚಾರಣೆಗೆ ನಿಗದಿಪಡಿಸಿದ್ದನ್ನು ಪ್ರಶ್ನಿಸಿ ಅರ್ಜಿದಾರರೊಬ್ಬರು ಮನವಿ ಸಲ್ಲಿಸಿದ್ದರು. ವರ್ಚುವಲ್ ಕಲಾಪದಲ್ಲಿ ಭಾಗಿಯಾಗುವ ಸಂಬಂಧ ಅರ್ಜಿದಾರರು ಸಲ್ಲಿಸಿದ್ದ ಮನವಿಯನ್ನು ವಿಚಾರಣಾಧೀನ ನ್ಯಾಯಾಲಯ ವಜಾಗೊಳಿಸಿತ್ತು. ಪಕ್ಷಕಾರರು ವಿಸ್ತೃತ ವಾದಕ್ಕೆ ಆಸ್ಪದ ನೀಡಬಹುದು ಎಂಬ ನೆಲೆಯಲ್ಲಿ ವಿಚಾರಣಾ ನ್ಯಾಯಾಲಯ ಅರ್ಜಿಯನ್ನು ವಜಾಗೊಳಿಸಿತ್ತು.