ಕೋವಿಡ್ ಸಾಂಕ್ರಾಮಿಕತೆಯ ಹಿನ್ನೆಲೆಯಲ್ಲಿ ಸರ್ಕಾರಿ ಉದ್ಯೋಗಿಗಳು, ಅದರಲ್ಲೂ ವಿಶೇಷವಾಗಿ ದೃಷ್ಟಿದೋಷ ಸಮಸ್ಯೆ ಇರುವವರು ಕಡ್ಡಾಯವಾಗಿ ಕರ್ತವ್ಯಕ್ಕೆ ಹಾಜರಾಗುವಂತೆ ಆದೇಶಿಸಿರುವ ರಾಜ್ಯ ಸರ್ಕಾರವು ತನ್ನ ನಿರ್ಧಾರವನ್ನು ಮರುಪರಿಶೀಲಿಸುವಂತೆ ಕರ್ನಾಟಕ ಹೈಕೋರ್ಟ್ ಸೂಚಿಸಿದೆ.
“ವಿಶೇಷ ಚೇತನರು ಅದರಲ್ಲೂ ದೃಷ್ಟಿದೋಷ ಇರುವ ವ್ಯಕ್ತಿಗಳಿಗೆ ಖಾತರಿಪಡಿಸಲಾಗಿರುವ ಹಕ್ಕುಗಳ ಅಡಿಯಲ್ಲಿ ಮೇ 18ರ ತನ್ನ ನಿರ್ಧಾರವನ್ನು ಮರುಪರಿಶೀಲಿಸುವಂತೆ ನಾವು ರಾಜ್ಯ ಸರ್ಕಾರಕ್ಕೆ ಸೂಚಿಸುತ್ತೇವೆ. ಕೆಲವು ವಿಶೇಷ ಚೇತನರಿಗೆ ಸಹಾಯದ ಅವಶ್ಯಕತೆ ಇರುವ ವಿಚಾರವನ್ನು ಪ್ರಸ್ತಾಪಿಸಬೇಕಿದೆ. ವಿಶೇಷ ಚೇತನರ ಹಕ್ಕುಗಳು ಮತ್ತು ಅವರು ವಾಸ್ತವದಲ್ಲಿ ಎದುರಿಸುವ ಸಮಸ್ಯೆಗಳನ್ನು ಪರಿಗಣಿಸಿ ರಾಜ್ಯ ಸರ್ಕಾರವು ತನ್ನ ನಿರ್ಧಾರವನ್ನು ಮರುಪರಿಶೀಲಿಸುವಂತೆ ನಾವು ನಿರ್ದೇಶಿಸುತ್ತೇವೆ” ಎಂದು ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಅವರಿದ್ದ ವಿಭಾಗೀಯ ಪೀಠವು ಹೇಳಿದ್ದು, ನಿರ್ಧಾರ ಮರುಪರಿಶೀಲಿಸಲು ರಾಜ್ಯ ಸರ್ಕಾರಕ್ಕೆ ಎರಡು ವಾರಗಳ ಗಡುವು ವಿಧಿಸಿದೆ.
ಕಳೆದ ಸೆಪ್ಟೆಂಬರ್‌ನಲ್ಲಿ ಬಾಂದ್ರಾದಲ್ಲಿನ ತನ್ನ ಬಂಗಲೆಯ ಮೇಲೆ ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ನಡೆಸಿದ ನೆಲಸಮ ಚಟುವಟಿಕೆಯನ್ನು ಪ್ರಶ್ನಿಸಿ ನಟಿ ಕಂಗನಾ ರನೌತ್ ಸಲ್ಲಿಸಿದ್ದ ಮನವಿಗೆ ಸಂಬಂಧಿಸಿದಂತೆ ಬಾಂಬೆ ಹೈಕೋರ್ಟ್ ಆದೇಶ ನೀಡಿದೆ. ಬಿಎಂಸಿ ನೀಡಿದ್ದ ಕಟ್ಟಡ ನೆಲಸಮ ನೋಟಿಸ್ ಅನ್ನು ಅದು ವಜಾಗೊಳಿಸಿದೆ.
ಅಲ್ಲದೆ, ಜೀವಿಸಲು ಯೋಗ್ಯವಾದ ರೀತಿಯಲ್ಲಿ ಕಟ್ಟಡ ಪುನರ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕಂಗನಾ ಕ್ರಮಕೈಗೊಳ್ಳಬಹುದು ಎಂದು ನ್ಯಾಯಾಲಯ ಹೇಳಿದೆ. ಕಂಗನಾ ಅವರ ಕಟ್ಟಡವನ್ನು ನೆಲಸಮ ಮಾಡಿದ್ದಕ್ಕೆ ಸಂಬಂಧಿಸಿದಂತೆ ಪರಿಹಾರ ನೀಡಲು ಬೆಲೆ ನಿಗದಿ ಮಾಡುವವರ ನೇಮಕಕ್ಕೂ ನ್ಯಾಯಾಲಯ ಆದೇಶಿಸಿದೆ.
ಲೈಂಗಿಕ ಕಾರ್ಯಕರ್ತೆಯರಿಂದ ಯಾವುದೇ ತೆರನಾದ ಗುರುತಿನ ಚೀಟಿ ಬಯಸದೇ ಅಕ್ಟೋಬರ್-ಡಿಸೆಂಬರ್ ಅವಧಿಗೆ ಮಾಸಿಕ ವಿತ್ತೀಯ ಪರಿಹಾರ ಹಾಗೂ ಪಡಿತರ ನೀಡುವ ಸಂಬಂಧ ನಿರ್ದೇಶನ ನೀಡುವ ಕುರಿತು ಗುರುವಾರ ಮಹಾರಾಷ್ಟ್ರ ಸರ್ಕಾರವು ನಿಲುವಳಿ ಜಾರಿಗೆ ತಂದಿದೆ. ಈ ಸಂಬಂಧ ಅದು ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆಗೆ (ಎನ್‌ಎಸಿಒ) ಸೂಚನೆ ನೀಡಿದೆ.
“ಯಾವುದೇ ತೆರನಾದ ಗುರುತಿನ ಚೀಟಿ ಬಯಸದೇ ಲೈಂಗಿಕ ವೃತ್ತಿಯನ್ನೇ ಅವಲಂಬಿಸಿ ಬದುಕುವ ಮಹಿಳೆಯರಿಗೆ 5,000 ರೂಪಾಯಿ ಮತ್ತು ಮಕ್ಕಳಿದ್ದರೆ ಅವರಿಗೆ ಪ್ರತ್ಯೇಕವಾಗಿ 2,500 ರೂಪಾಯಿ ನೀಡಲು ಎನ್‌ಎಸಿಒ ಕ್ರಮಕೈಗೊಳ್ಳಬೇಕು” ಎಂದು ರಾಜ್ಯ ಸರ್ಕಾರ ಹೇಳಿದೆ.
ಗುಜರಾತ್‌ನ ರಾಜ್‌ಕೋಟ್‌ನ ಆಸ್ಪತ್ರೆಯೊಂದರಲ್ಲಿ ಶುಕ್ರವಾರ ಸಂಭವಿಸಿದ ಅಗ್ನಿ ಅನಾಹುತದಲ್ಲಿ ಐವರು ಕೋವಿಡ್ ರೋಗಿಗಳು ಮೃತಪಟ್ಟ ಸ್ಥಿತಿ "ಆಘಾತಕಾರಿ" ಮತ್ತು ಅಂತಹ ಬೆಂಕಿ ಅಪಘಾತಗಳ ಮರುಕಳಿಸುವಿಕೆಯ ಕುರಿತು ಆತ್ಮಾವಲೋಕನದ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಘಟನೆಯ ಕುರಿತು ಹೇಳಿದ್ದು, ಸ್ವಯಂ ಪ್ರೇರಿತವಾಗಿ ಪ್ರಕರಣವನ್ನು ಪರಿಗಣಿಸಿದೆ.
ದೇಶಾದ್ಯಂತದ ಆಸ್ಪತ್ರೆಗಳಲ್ಲಿ ಅಗ್ನಿ ಸುರಕ್ಷತಾ ಕಾರ್ಯವಿಧಾನದ ಅನುಷ್ಠಾನದ ಕುರಿತು ಆಕ್ಷೇಪಣೆ ಎತ್ತಿರುವ ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಆರ್ ಸುಭಾಷ್ ರೆಡ್ಡಿ ಮತ್ತು ಎಂ ಆರ್ ಶಾ ಅವರಿದ್ದ ತ್ರಿಸದಸ್ಯ ಪೀಠವು ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್ ಸರ್ಕಾರದ ಪ್ರತಿಕ್ರಿಯೆ ಬಯಸಿದ್ದು, ಮಂಗಳವಾರದೊಳಗೆ ವರದಿ ಸಲ್ಲಿಸಲು ಸೂಚಿಸಿದೆ. ಅಗ್ನಿ ಅನಾಹುತ ತಡೆಗೆ ಕಾಲಕಾಲಕ್ಕೆ ತಕ್ಕಂತೆ ವರದಿಗಳು ಮತ್ತು ಮಾರ್ಗಸೂಚಿಗಳಿದ್ದರೂ ಅವುಗಳನ್ನು ರಾಜ್ಯ ಸರ್ಕಾರಗಳು ಜಾರಿಗೊಳಿಸಿಲ್ಲ ಎಂದು ಪೀಠ ಹೇಳಿದೆ.