ಸಾಲ ವಸೂಲಾತಿ ನ್ಯಾಯಮಂಡಳಿಯಲ್ಲಿ (ಡಿಆರ್‌ಟಿ) ಬಾಕಿ ಇರುವ ನೂರು ಕೋಟಿ ರೂಪಾಯಿಗಿಂತ ಹೆಚ್ಚು ಸಾಲ ಮರುಪಾವತಿಯಾಗಬೇಕಾದ ಪ್ರಕರಣಗಳ ಇತ್ಯರ್ಥಕ್ಕೆ ಆರು ವಾರಗಳಲ್ಲಿ ನಿಯಮ ರೂಪಿಸುವಂತೆ ದೆಹಲಿ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ.
ನ್ಯಾಯಮೂರ್ತಿಗಳಾದ ವಿಪಿನ್ ಸಾಂಘಿ ಮತ್ತು ರೇಖಾ ಪಲ್ಲಿ ಅವರಿದ್ದ ವಿಭಾಗೀಯ ಪೀಠ “ಸಾಲ ವಸೂಲಾತಿ ನ್ಯಾಯಮಂಡಳಿಗಳ ಉದ್ದೇಶ ತ್ವರಿತವಾಗಿ ಸಾಲದ ಹಣ ಹಿಂಪಡೆಯುವುದಾಗಿದ್ದರೆ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳ ಸಾಲ ವಸೂಲಾತಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಯಾವುದೇ ವಿಳಂಬ ಉಂಟು ಮಾಡುವುದು ಆರ್ಥಿಕತೆಯ ಮೇಲೆ ಹಾನಿಕಾರಕ ಪರಿಣಾಮ ಬೀರುತ್ತದೆ” ಎಂದು ಹೇಳಿದೆ. ಎಡೆಲ್ವೀಸ್ ಅಸೆಟ್ ರಿಕನ್ಸ್ಟ್ರಕ್ಷನ್ ಕಂಪೆನಿ ಸಲ್ಲಿಸಿದ್ದ ಅರ್ಜಿಯೊಂದರ ವಿಚಾರಣೆ ವೇಳೆ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದ್ದು ಅರ್ಜಿದಾರರ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.
ಸಾಕ್ಷ್ಯಾಧಾರ ಕೊರತೆಯಿಂದಾಗಿ 1999ರ ಮಾರ್ಚ್ 18ರಂದು ಬಿಹಾರದ ಸೆನಾರಿ ಗ್ರಾಮದಲ್ಲಿ ಮೇಲ್ಜಾತಿಗೆ ಸೇರಿದ 34 ಮಂದಿಯನ್ನು ಮಾವೋವಾದಿ ಗುಂಪೊಂದು ಹತ್ಯೆ ಮಾಡಿದ ಪ್ರಕರಣದಲ್ಲಿ ಎಲ್ಲಾ 13 ಆರೋಪಿಗಳನ್ನು ಪಟ್ನಾ ಹೈಕೋರ್ಟ್ ಶುಕ್ರವಾರ ಖುಲಾಸೆಗೊಳಿಸಿದೆ. ಸಾಕ್ಷಿಗಳು ಆರೋಪಿಗಳನ್ನು ಗುರುತಿಸುವ ವೇಳೆ ಪೂರ್ವಭಾವಿಯಾಗಿ ಗುರುತು ಪರೀಕ್ಷಾ ಪೆರೇಡ್ (ಟೆಸ್ಟ್ ಐಡೆಂಟಿಫಿಕೇಷನ್ ಪೆರೇಡ್) ನಡೆಸಿಲ್ಲ. ಸಾಕ್ಷಿಗಳು ವಿಚಾರಣಾ ನ್ಯಾಯಾಲಯದ ಮುಂದೆ ಮೊದಲ ಬಾರಿಗೆ ಆರೋಪಿಗಳನ್ನು ಗುರುತಿಸಿದ್ದು, ಅದನ್ನು ಆರೋಪಿಗಳಿಗೆ ಶಿಕ್ಷೆ ವಿಧಿಸುವುದಕ್ಕೆ ಪರಿಗಣಿಸಲಾಗದು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.
ಆ ಮೂಲಕ ನ್ಯಾಯಮೂರ್ತಿಗಳಾದ ಅಶ್ವಿನಿ ಕುಮಾರ್ ಸಿಂಗ್ ಮತ್ತು ಅರವಿಂದ್ ಶ್ರೀವಾಸ್ತವ ಅವರನ್ನೊಳಗೊಂಡ ವಿಭಾಗೀಯ ಪೀಠ 10 ಅಪರಾಧಿಗಳಿಗೆ ಮರಣದಂಡನೆ ಹಾಗೂ ಉಳಿದ ಮೂವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದ ಜೆಹನಾಬಾದ್ ಸೆಷನ್ಸ್ ನ್ಯಾಯಾಲಯದ ಆದೇಶವನ್ನು ಬದಿಗೆ ಸರಿಸಿತು. ಜಾತಿ ಸಂಘರ್ಷವೊಂದರಲ್ಲಿ ಬಿಹಾರದ ಮಾವೋವಾದಿ ಕಮ್ಯುನಿಸ್ಟ್ ಕೇಂದ್ರ (ಎಂಸಿಸಿ) ಅಂದಿನ ಜೆಹನಾಬಾದ್ ಜಿಲ್ಲೆಗೆ ಸೇರಿದ ಮೂವತ್ನಾಲ್ಕು ಮಂದಿಯ ಮೇಲೆ ಶಸ್ತ್ರಸಜ್ಜಿತ ದಾಳಿ ನಡೆಸಿತ್ತು. ಲಕ್ಷ್ಮಣ್ ಬಾತೆ ಹತ್ಯಾಕಾಂಡದಲ್ಲಿ ಐವತ್ತೇಳು ದಲಿತರನ್ನು ಕಗ್ಗೊಲೆ ಮಾಡಿದ್ದಕ್ಕೆ ಪ್ರತೀಕಾರವಾಗಿ ಈ ಕೃತ್ಯ ಎಸಗಲಾಗಿತ್ತು ಎಂದು ತಿಳಿದುಬಂದಿತ್ತು.