ದೇಶದ ವಿವಿಧ ಭಾಗಗಳಲ್ಲಿ ವಕೀಲರ ಮೇಲಿನ ದಾಳಿಗಳು ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ವಕೀಲರ ರಕ್ಷಣಾ ಮಸೂದೆ ರೂಪಿಸಲು ಭಾರತೀಯ ವಕೀಲರ ಪರಿಷತ್ (ಬಿಸಿಐ) ಏಳು ಸದಸ್ಯರ ಸಮಿತಿಯೊಂದನ್ನು ರಚಿಸಿದೆ. ಜೂನ್ 10ರಂದು ನಡೆದ ಸಭೆಯಲ್ಲಿ ಈ ಕುರಿತು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಶನಿವಾರ ನೀಡಿರುವ ಪ್ರಕಟಣೆಯಲ್ಲಿ ಅದು ತಿಳಿಸಿದೆ. ಮಸೂದೆ ರೂಪುಗೊಂಡರೆ ನ್ಯಾಯಾಂಗ ಅಧಿಕಾರಿಗಳಿಗೆ ಹಾಗೂ ಅವರ ಕುಟುಂಬದವರಿಗೆ ಸುರಕ್ಷತೆ ದೊರೆಯಲಿದ್ದು ಅವರು ನಿಶ್ಚಿಂತವಾಗಿ ಕರ್ತವ್ಯ ನಿರ್ವಹಿಸಬಹುದು ಎಂದು ಪತ್ರದಲ್ಲಿ ತಿಳಿಸಲಾಗಿದೆ.
ವಕೀಲರ ಪರಿಷತ್ತಿನ ವಿವಿಧ ಪದಾಧಿಕಾರಿಗಳಾದ ಎಸ್ ಪ್ರಭಾಕರನ್, ದೇವಿಪ್ರಸಾದ್ ಧಲ್, ಸುರೇಶ್ ಚಂದ್ರ ಶ್ರಿಮಾಲಿ, ಶೈಲೇಂದ್ರ ದುಬೆ, ಎ ರಾಮಿರೆಡ್ಡಿ, ಶ್ರೀನಾಥ್ ತ್ರಿಪಾಠಿ, ಪ್ರಶಾಂತ್ ಕುಮಾರ್ ಸಿಂಗ್ ಸಮಿತಿಯ ಸದಸ್ಯರಾಗಿದ್ದಾರೆ. ಜೈಪುರ, ತೆಲಂಗಾಣದಲ್ಲಿ ವಕೀಲ ದಂಪತಿ ಮೇಲೆ ಹಲ್ಲೆ ಕೊಲೆ ಪೊಲೀಸ್ ಕಸ್ಟಡಿಯಲ್ಲಿದ್ದಾಗ ಸಂಭವಿಸಿದ್ದ ಸಾವಿನ ಬಗ್ಗೆ ಕರ್ನಾಟಕ ಮೂಲದ ವಕೀಲರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಮತ್ತು ತೆಲಂಗಾಣದಲ್ಲಿ ಆಡಳಿತ ಪಕ್ಷದ ನಾಯಕರ ವಿರುದ್ಧದ ಕೆಲವು ಪ್ರಕರಣಗಳ ಕುರಿತು ಸಭೆಯಲ್ಲಿ ಚರ್ಚಿಸಲಾಗಿದೆ.
ಬೆನ್ನುಮೂಳೆ ಸ್ನಾಯು ಸವೆತದಿಂದ ಬಳಲುತ್ತಿರುವ ತನ್ನ ಐದು ತಿಂಗಳ ಪುತ್ರನ ಚಿಕಿತ್ಸೆಗಾಗಿ ರೂ 18 ಕೋಟಿ ಮೌಲ್ಯದ ಔಷಧ ಅಗತ್ಯ ಇರುವುದರಿಂದ ಅದನ್ನು ಖರೀದಿಸಲು ಸರ್ಕಾರದ ನೆರವು ಕೋರಿ ವ್ಯಕ್ತಿಯೊಬ್ಬರು ಕೇರಳ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಈ ಸಂಬಂಧ ನ್ಯಾಯಮೂರ್ತಿ ಬೆಚು ಕುರಿಯನ್ ಥಾಮಸ್ ಅವರಿದ್ದ ಪೀಠವು, ಕೇರಳ ಸರ್ಕಾರ ಮುಖ್ಯ ಕಾರ್ಯದರ್ಶಿ ಮತ್ತು ಆರೋಗ್ಯ ಸೇವೆಗಳ ನಿರ್ದೇಶಕರ ಪ್ರತಿಕ್ರಿಯೆ ಕೇಳಿದ್ದು ಜೂನ್ 28ರ ಒಳಗೆ ಉತ್ತರಿಸುವಂತೆ ಸೂಚಿಸಿದೆ.
ಒಂದು ಕಲ್ಯಾಣ ರಾಜ್ಯವಾಗಿ ಔಷಧಿಯ ಪರಿಣಾಮಕಾರಿತ್ವ, ದಿಗ್ಭ್ರಮೆಗೊಳಿಸುವ ಅದರ ವೆಚ್ಚ, ಚಿಕಿತ್ಸೆಯ ವಿಧಿವಿಧಾನ, ಕ್ರೌಡ್ ಫಂಡಿಂಗ್ (ಜನಸಮೂಹದಿಂದ ನಿಧಿ ಸಂಗ್ರಹ) ಮೂಲಕ ಹಣ ಸಂಗ್ರಹಿಸುವ ಸಾಧ್ಯತೆಗಳನ್ನು ಗಮನಿಸಬೇಕಿದೆ. ಆದ್ದರಿಂದ ಸಾಧ್ಯವಾದಷ್ಟು ಬೇಗ ಪ್ರತಿಕ್ರಿಯೆ ಸಲ್ಲಿಸುವಂತೆ ಅದು ತಿಳಿಸಿದೆ. ಪ್ರಸ್ತುತ ಕೋಯಿಕ್ಕೋಡ್‌ನ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯ ವೆಂಟಿಲೇಟರ್‌ನಲ್ಲಿ ಮಗು ಇದೆ. ಜೂನ್ 29ಕ್ಕೆ ಪ್ರಕರಣದ ಮುಂದಿನ ವಿಚಾರಣೆ ನಡೆಯಲಿದೆ. ಇಂತಹುದೇ ಕಾಯಿಲೆಯಿಂದ ಬಳಲುತ್ತಿದ್ದ ಹೈದರಾಬಾದ್ ಮೂಲದ ಮೂರು ವರ್ಷದ ಮಗುವಿಗೆ ಇತ್ತೀಚೆಗೆ ಕ್ರೌಡ್ ಫಂಡಿಂಗ್ ಮೂಲಕ 16 ಕೋಟಿ ಮೌಲ್ಯದ ಔಷಧ ಒದಗಿಸಿದ್ದು ದೇಶದೆಲ್ಲೆಡೆ ಸುದ್ದಿಯಾಗಿತ್ತು.
ವಕೀಲರು ತಮ್ಮ ವೃತ್ತಿ ಆರಂಭಿಸಲು ಅನುಕೂಲ ಕಲ್ಪಿಸುವ ಅಖಿಲ ಭಾರತ ನ್ಯಾಯವಾದಿ ವರ್ಗದ ಪರೀಕ್ಷೆ ಎಐಬಿಇ- 16 ನೋಂದಣಿ ಗಡುವನ್ನು ಭಾರತೀಯ ವಕೀಲರ ಪರಿಷತ್ (ಬಿಸಿಐ) ಜುಲೈ 15ರವರೆಗೆ ವಿಸ್ತರಿಸಿದೆ. ಪರೀಕ್ಷೆ ನಡೆಯುವ ದಿನಾಂಕವನ್ನು ನಂತರ ತಿಳಿಸಲಾಗುವುದು ಎಂದು ಪರಿಷತ್ ತಿಳಿಸಿದೆ.
ಈ ಸಾಲಿನ ಪರೀಕ್ಷೆ ಏಪ್ರಿಲ್ 25 ರಂದು ನಡೆಯಬೇಕಿತ್ತು. ಆದರೆ ಮಾರ್ಚ್‌ನಲ್ಲಿ ಎಐಬಿಇ- 15 ಪರೀಕ್ಷೆಯ ಫಲಿತಾಂಶ ಪ್ರಕಟಿಸುವಾಗ ಬಿಸಿಐ, ಕೋವಿಡ್ ಕಾರಣದಿಂದಾಗಿ ಈ ಸಾಲಿನ ಪರೀಕ್ಷೆಯನ್ನು ಮುಂದೂಡುವುದಾಗಿ ತಿಳಿಸಿತ್ತು. ನೋಂದಣಿ ದಿನಾಂಕವನ್ನು ಕೂಡ ಏಪ್ರಿಲ್ 30ರವರೆಗೆ ವಿಸ್ತರಿಸಿತ್ತು. ಬಳಿಕ ಮತ್ತೊಮ್ಮೆ ನೋಂದಣಿ ದಿನಾಂಕವನ್ನು ಜೂನ್ 15ರವರೆಗೆ ಮುಂದೂಡಲಾಗಿತ್ತು. ಪ್ರಸ್ತುತ ಅಧಿಸೂಚನೆ ಮೂಲಕ ಇದನ್ನು ಮತ್ತೊಂದು ತಿಂಗಳಿಗೆ ವಿಸ್ತರಿಸಲಾಗಿದೆ.