ಕೊನೆಯ ಸೆಮಿಸ್ಟರ್ ಪರೀಕ್ಷೆಯನ್ನು ಆಫ್‌ಲೈನ್‌ನಲ್ಲಿ ನಡೆಸಲು ನಿರ್ಧರಿಸಿರುವ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (ವಿಟಿಯು) ನಿರ್ಧಾರವನ್ನು ಪ್ರಶ್ನಿಸಿ 125 ವಿದ್ಯಾರ್ಥಿಗಳು ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಆಫ್‌ಲೈನ್ ಮೂಲಕ ಪರೀಕ್ಷೆ ನಡೆಸುವ ನಿರ್ಧಾರವು ಸಂಪೂರ್ಣವಾಗಿ ಅನಿಯಂತ್ರಿತ ಮತ್ತು ಅಪ್ರಾಯೋಗಿಕವಾಗಿದ್ದು, ವಿದ್ಯಾರ್ಥಿಗಳ ಆತಂಕಗಳನ್ನು ಪರಿಗಣಿಸುವಲ್ಲಿ ಅದು ವಿಫಲವಾಗಿದೆ ಎಂದು ಅರ್ಜಿದಾರ ವಿದ್ಯಾರ್ಥಿಗಳು ದೂರಿದ್ದಾರೆ.
ಅಕ್ಟೋಬರ್ 19ರಂದು ಅಧಿಸೂಚನೆ ಹೊರಡಿಸಿದ್ದ ವಿಟಿಯು ಪೂರಕ ಪರೀಕ್ಷೆಗಳು ಮತ್ತು ಮೊದಲ ವರ್ಷದ ಪರೀಕ್ಷೆಗಳನ್ನು ಆನ್‌ಲೈನ್‌ನಲ್ಲಿ ನಡೆಸುವುದಾಗಿ ಪ್ರಸ್ತಾಪಿಸಿತ್ತು. ಡಿಸೆಂಬರ್ 9ರಂದು ಮತ್ತೊಂದು ಅಧಿಸೂಚನೆ ಹೊರಡಿಸಿರುವ ವಿಟಿಯು ರಾಜ್ಯದಾದ್ಯಂತ ಇರುವ ಎಲಾ ಕಾಲೇಜುಗಳಲ್ಲಿ ಆಫ್‌ಲೈನ್‌ನಲ್ಲಿ ಪರೀಕ್ಷೆ ನಡೆಸುವುದಾಗಿ ಹೇಳಿತ್ತು. ಇದನ್ನು ಆಧರಿಸಿ, ಆಫ್‌ಲೈನ್‌ನಲ್ಲಿ ಪರೀಕ್ಷೆ ನಡೆಸುವುದರಿಂದ ಎದುರಾಗುವ ಸಮಸ್ಯೆಗಳನ್ನು ಉಲ್ಲೇಖಿಸಿ 1,373 ವಿದ್ಯಾರ್ಥಿಗಳು ವಿಟಿಯು ಉಪಕುಲಪತಿಗೆ ಪತ್ರ ಬರೆದಿದ್ದರು. ಕೋವಿಡ್‌ನ ಹೊಸ ಮಾದರಿಯ ಸೋಂಕು ವ್ಯಾಪಿಸುತ್ತಿರುವ ಸಂದರ್ಭದಲ್ಲಿ ಅಧಿಸೂಚನೆ ಹೊರಡಿಸಲಾಗಿದೆ. ಇದು ಸಂವಿಧಾನದ 14 ಮತ್ತು 21ನೇ ವಿಧಿಯ ಉಲ್ಲಂಘನೆಯಾಗಿದೆ ಎಂದು ವಿದ್ಯಾರ್ಥಿಗಳು ತಮ್ಮ ಮನವಿಯಲ್ಲಿ ತಗಾದೆ ಎತ್ತಿದ್ದಾರೆ.
ಒಟ್ಟಿಗೆ ಜೀವನ ನಡೆಸಲು ನಿರ್ಧರಿಸಿದ ಇಬ್ಬರು ವಯಸ್ಕರ ಬದುಕಿನಲ್ಲಿ ಯಾರೂ ಮಧ್ಯಪ್ರವೇಶಿಸಲಾಗದು ಎಂದು ಇತ್ತೀಚೆಗೆ ಒತ್ತಿ ಹೇಳಿರುವ ಅಲಾಹಾಬಾದ್ ಹೈಕೋರ್ಟ್, ಅಂತರಧರ್ಮೀಯ ವಿವಾಹವಾಗಿರುವ ದಂಪತಿಗೆ ಅಗತ್ಯವಿದ್ದರೆ ಭದ್ರತೆ ಕಲ್ಪಿಸುವಂತೆ ಪೊಲೀಸರಿಗೆ ಸೂಚಿಸಿದೆ.
ಜೊತೆಯಾಗಿ ಜೀವನ ನಡೆಸುತ್ತಿರುವ ಇಬ್ಬರು ವಯಸ್ಕರ ಶಾಂತಿಯುತ ಬದುಕಿನಲ್ಲಿ ಮಧ್ಯಪ್ರವೇಶಿಸಲು ಯಾರಿಗೂ ಅರ್ಹತೆ ಇಲ್ಲ ಎಂದು ನ್ಯಾಯಮೂರ್ತಿ ಸರಳ್ ಶ್ರೀವಾಸ್ತವ ಪುನರುಚ್ಚರಿಸಿದ್ದಾರೆ. ಈ ಪ್ರಕರಣದಲ್ಲಿ ಮುಸ್ಲಿಂ ಯುವಕನನ್ನು ವರಿಸುವ ಉದ್ದೇಶದಿಂದ ಹಿಂದೂ ಯುವತಿಯು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದರು. ತಾವು ವಯಸ್ಕರಾಗಿದ್ದು, ಸ್ವಇಚ್ಛೆಯಿಂದ ಒಟ್ಟಾಗಿ ಬದುಕು ನಡೆಸುತ್ತಿರುವುದಾಗಿ ಮನವಿದಾರರು ಹೇಳಿದ್ದಾರೆ. ಇಸ್ಲಾಂ ಅನುಸರಿಸುವುದಾಗಿ ಸ್ವಪ್ರೇರಣೆಯಿಂದ ಮಹಿಳೆ ಮತಾಂತರಗೊಂಡಿದ್ದಾರೆ ಎಂದು ನ್ಯಾಯಾಲಯಕ್ಕೆ ವಿವರಿಸಲಾಗಿದೆ. ಕುಟುಂಬ ಸದಸ್ಯರು ಬೆದರಿಕೆಯೊಡ್ಡುವ ಮೂಲಕ ಕಿರುಕುಳ ನೀಡುತ್ತಿದ್ದಾರೆ ಎಂದು ದಂಪತಿ ನ್ಯಾಯಾಲಯದ ಮೆಟ್ಟಿಲೇರಿದ್ದರು.
ಲೈಂಗಿಕ ಅಪರಾಧಕ್ಕೆ ತುತ್ತಾದ ಸಂತ್ರಸ್ತರ ಗುರುತು ಬಹಿರಂಗಪಡಿಸಿರುವ ಟ್ವಿಟರ್, ಫೇಸ್‌ಬುಕ್ ಮತ್ತು ಯುಟ್ಯೂಬ್ ವಿರುದ್ಧ ಕ್ರಮಕೈಗೊಳ್ಳುವಂತೆ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ಶುಕ್ರವಾರ ದೆಹಲಿ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ. ಹೀಗೆ ಮಾಡಿದಲ್ಲಿ ಅವುಗಳು ಅಂಥ ವಿಚಾರಗಳನ್ನು ತಮ್ಮ ತಾಣಗಳಿಂದ ತೆಗೆದುಹಾಕುತ್ತವೆ ಎಂದು ಹೇಳಲಾಗಿದೆ.
ಬಜ್‌ಫೀಡ್, ದ ಸಿಟಿಜನ್, ದ ಟೆಲಿಗ್ರಾಫ್, ಐದಿವಾ, ಜನಭಾರತ್ ಟೈಮ್ಸ್, ನ್ಯೂಸ್ 18, ದೈನಿಕ್ ಜಾಗರಣ್, ಯುನೈಟೆಡ್ ನ್ಯೂಸ್ ಆಫ್ ಇಂಡಿಯಾ, ಬನ್ಸಲ್ ಟೈಮ್ಸ್, ದಲಿತ್ ಕ್ಯಾಮೆರಾ, ದಿ ಮಿಲೇನಿಯಂ ಪೋಸ್ಟ್ ಮತ್ತು ವಿಕಿಫೀಡ್ ವಿರುದ್ಧವೂ ಮನವಿಯಲ್ಲಿ ಕ್ರಮಕೈಗೊಳ್ಳುವಂತೆ ಕೋರಲಾಗಿದೆ. ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ ಎನ್ ಪಟೇಲ್ ಮತ್ತು ನ್ಯಾಯಮೂರ್ತಿ ಜ್ಯೋತಿ ಸಿಂಗ್ ಅವರಿದ್ದ ವಿಭಾಗೀಯ ಪೀಠವು ದೆಹಲಿ ಸರ್ಕಾರ ಮತ್ತು ಮೇಲೆ ಉಲ್ಲೇಖಿಸಲಾದ ಪಬ್ಲಿಕೇಷನ್/ಪೋರ್ಟಲ್/ಸುದ್ದಿ ಸಂಸ್ಥೆಗಳಿಗೆ ಪ್ರತಿಕ್ರಿಯಿಸುವಂತೆ ನೋಟಿಸ್ ಜಾರಿಗೊಳಿಸಿದೆ. ಮೇಲೆ ಉಲ್ಲೇಖಿಸಲಾದ ಪಬ್ಲಿಕೇಷನ್/ಪೋರ್ಟಲ್/ಸುದ್ದಿ ಸಂಸ್ಥೆಗಳು ಮತ್ತು ಸಾಮಾಜಿಕ ಜಾಲತಾಣಗಳು ಭಾರತೀಯ ದಂಡ ಸಂಹಿತೆಯೆ ಸೆಕ್ಷನ್ 228ಎ ಅನ್ನು ಉಲ್ಲಂಘಿಸಿವೆ ಎಂದು ಪಿಐಎಲ್ ಸಲ್ಲಿಸಿರುವ ವಕೀಲ ಮನನ್ ನರುಲಾ ಹೇಳಿದ್ದಾರೆ. ಪ್ರಕರಣದ ವಿಚಾರಣೆಯನ್ನು ಫೆಬ್ರುವರಿ 5ಕ್ಕೆ ಮುಂದೂಡಲಾಗಿದೆ.
ಸೂಕ್ತ ಶಸ್ತ್ರಾಸ್ತ್ರಗಳಿಲ್ಲದೆ ಜನವಸತಿರಹಿತ ವಿಸ್ತಾರ ಪ್ರಮಾಣದ ಅರಣ್ಯ ಭೂಮಿಯನ್ನು ರಕ್ಷಿಸುವ ಮತ್ತು ಕಳ್ಳಬೇಟೆಗಾರರನ್ನು ನಿಯಂತ್ರಿಸುವ ಹೊಣೆಗಾರಿಕೆ ನಿಭಾಯಿಸುತ್ತಿರುವ ಅರಣ್ಯ ಇಲಾಖೆ ಸಿಬ್ಬಂದಿಯ ಸುರಕ್ಷತೆ ಮತ್ತು ಅಸಹಾಯಕತೆ ಬಗ್ಗೆ ಸುಪ್ರೀಂ ಕೋರ್ಟ್ ಶುಕ್ರವಾರ ಕಳವಳ ವ್ಯಕ್ತಪಡಿಸಿದೆ. ವನಪಾಲಕರಿಗೆ ಶಸ್ತ್ರಾಸ್ತ್ರಗಳನ್ನು ಪೂರೈಸುವುದರ ಜೊತೆಗೆ ಬುಲೆಟ್ ಪ್ರೂಪ್ ಜಾಕೆಟ್‌ಗಳನ್ನು ನೀಡುವುದು ಸೇರಿದಂತೆ ಹೇಗೆ ಅರಣ್ಯ ಇಲಾಖೆಯ ಸಿಬ್ಬಂದಿಯನ್ನು ರಕ್ಷಿಸಬಹುದು ಎಂದು ತಿಳಿಸುವಂತೆ ಸೂಚಿಸಿ ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ಅವರ ನೇತೃತ್ವದ ತ್ರಿಸದಸ್ಯ ಪೀಠವು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನೋಟಿಸ್ ನೀಡಿದೆ.
“ಪರಿಸ್ಥಿತಿ ಗಂಭೀರವಾಗಿದ್ದು, ಜನವಸತಿ ಇಲ್ಲದ ಅಪಾರ ಪ್ರಮಾಣದ ಭೂಮಿಯನ್ನು ರಕ್ಷಿಸುವ ಕಠಿಣ ಜವಾಬ್ದಾರಿಯನ್ನು ವನಪಾಲಕರು ಹೊತ್ತಿದ್ದಾರೆ. ಶಸ್ತ್ರಾಸ್ತ್ರಗಳಿಲ್ಲದ ಅರಣ್ಯ ಇಲಾಖೆಯ ಸಿಬ್ಬಂದಿಯಿಂದ ಕಾನೂನು ಜಾರಿಗೊಳಿಸಲು ಹೇಗೆ ಸಾಧ್ಯ? ಕಳ್ಳಬೇಟೆಗಾರರು ಶಸ್ತ್ರಾಸ್ತ್ರಗಳನ್ನು ಹೊಂದಿರುವ ಸಾಧ್ಯತೆ ಹೆಚ್ಚು,” ಎಂದು ಸಿಜೆಐ ಹೇಳಿದ್ದಾರೆ. ಅಸ್ಸಾಂ ಮತ್ತು ಮಹಾರಾಷ್ಟ್ರ ಸರ್ಕಾರಗಳು ಕ್ರಮಕೈಗೊಂಡಿದ್ದು, ಇತರೆ ರಾಜ್ಯಗಳು ಅದರಲ್ಲೂ ಕಳ್ಳಬೇಟೆಗಾರರ ದಾಳಿ ವ್ಯಾಪಕವಾಗಿರುವ ಕಡೆ ಅರಣ್ಯ ಇಲಾಖೆಯ ಸಿಬ್ಬಂದಿಯನ್ನು ರಕ್ಷಿಸಲು ಕೈಗೊಂಡಿರುವ ಕ್ರಮಗಳ ವರದಿ ಸಲ್ಲಿಸುವಂತೆ ನ್ಯಾಯಾಲಯ ಸೂಚಿಸಿದೆ.