12ನೇ ತರಗತಿ ಪರೀಕ್ಷೆಗಳನ್ನು ರದ್ದುಗೊಳಿಸುವ ಸಿಬಿಎಸ್‌ಇ ಮತ್ತು ಐಸಿಎಸ್‌ಇ ನಿರ್ಧಾರ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ. ನ್ಯಾಯಮೂರ್ತಿಗಳಾದ ಎ ಎಂ ಖಾನ್ವಿಲ್ಕರ್ ಮತ್ತು ದಿನೇಶ್ ಮಹೇಶ್ವರಿ ಅವರಿರುವ ಪೀಠ ಮಂಗಳವಾರ ಮಧ್ಯಾಹ್ನ 2 ಗಂಟೆಗೆ ಪ್ರಕರಣದ ವಿಚಾರಣೆ ನಡೆಸಲಿದೆ.
12ನೇ ತರಗತಿ ಪರೀಕ್ಷೆಗಳು ವಿದ್ಯಾರ್ಥಿಗಳಿಗೆ ಬಹಳ ನಿರ್ಣಾಯಕವಾಗಿದ್ದು, ಐಐಟಿ, ಎನ್‌ಡಿಎ, ಎಂಬಿಬಿಎಸ್, ಕ್ಲಾಟ್ ಮುಂತಾದ ಕೋರ್ಸ್ ಪ್ರವೇಶದ ಮೇಲೆ ಪರಿಣಾಮ ಬೀರುತ್ತದೆ ಎಂದು ಅರ್ಜಿದಾರರು ಮನವಿ ಸಲ್ಲಿಸಿದ್ದಾರೆ. ಕೋವಿಡ್ ಹಿನ್ನೆಲೆಯಲ್ಲಿ 12ನೇ ತರಗತಿಗೆ ಭೌತಿಕ ಪರೀಕ್ಷೆಗಳನ್ನು ರದ್ದುಗೊಳಿಸಿದರೂ, ಅದೇ ವಿದ್ಯಾರ್ಥಿಗಳು ಐಐಟಿ-ಜೆಇಇ, ಸಿಎಲ್‌ಎಟಿ, ಎನ್‌ಡಿಎ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಭೌತಿಕವಾಗಿ ಹಾಜರಾಗಬೇಕಾಗುತ್ತದೆ ಎಂದು ಅರ್ಜಿದಾರರು ವಾದಿಸಿದ್ದಾರೆ. ಸಿಬಿಎಸ್‌ಇ ಐಸಿಎಸ್‌ಇ ಪರೀಕ್ಷೆ ಬರೆಯುವವರಿಗೆ ಮಾತ್ರ ಕೋವಿಡ್ ಭೀತಿ ಇದೆಯೇ? ಐಐಟಿ, ಜೆಇಇ ಅಥವಾ ಸಿಎಲ್‌ಎಟಿ ಪರೀಕ್ಷೆ ಬರೆಯುವವರಿಗೆ ಇಲ್ಲವೇ ಎಂದುಮನವಿ ಪ್ರಶ್ನಿಸಿದೆ.
ಪಶ್ಚಿಮ ಬಂಗಾಳದಲ್ಲಿ ನಡೆದ ಮತದಾನೋತ್ತರ ಹಿಂಸಾಚಾರಕ್ಕೆ ಸಂಬಂಧಿಸಿದ ದೂರುಗಳ ವಿಚಾರಣೆಗಾಗಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ (ಎನ್‌ಎಚ್‌ಆರ್‌ಸಿ) ಅಧ್ಯಕ್ಷ ನ್ಯಾ. ಅರುಣ್ ಮಿಶ್ರಾ ಅವರು ಏಳು ಸದಸ್ಯರ ಸಮಿತಿಯೊಂದನ್ನು ರಚಿಸಿದ್ದಾರೆ. ಹಿಂಸಾಚಾರದ ಬಳಿಕ ಸ್ಥಳಾಂತರಗೊಂಡಿರುವ ವ್ಯಕ್ತಿಗಳ ದೂರು ಪರಿಶೀಲಿಸಲು ಸಮಿತಿ ರಚಿಸುವಂತೆ ಎನ್‌ಎಚ್‌ಆರ್‌ಸಿ ಅಧ್ಯಕ್ಷರಿಗೆ ಜೂನ್ 18 ರಂದು ಕಲ್ಕತ್ತಾ ಹೈಕೋರ್ಟ್ ನೀಡಿದ ಆದೇಶದ ಅನುಸಾರ ಈ ಕ್ರಮ ಕೈಗೊಳ್ಳಲಾಗಿದೆ.
ಆಯೋಗದ ಸದಸ್ಯ ರಾಜೀವ್ ಜೈನ್ ಅವರು ಸಮಿತಿಯ ನೇತೃತ್ವ ವಹಿಸಲಿದ್ದಾರೆ. ಅಲ್ಪಸಂಖ್ಯಾತರ ರಾಷ್ಟ್ರೀಯ ಆಯೋಗದ ಉಪಾಧ್ಯಕ್ಷ ಅತೀಫ್ ರಶೀದ್, ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯರಾದ ಡಾ. ರಾಜುಲ್ಬೆನ್ ಎಲ್ ದೇಸಾಯಿ, ಎನ್‌ಎಚ್‌ಆರ್‌ಸಿ ಮಹಾ ನಿರ್ದೇಶಕ ಸಂತೋಷ್ ಮೆಹ್ತಾ, ಪಶ್ಚಿಮ ಬಂಗಾಳ ಮಾನವ ಹಕ್ಕುಗಳ ಆಯೋಗದ ರಿಜಿಸ್ಟ್ರಾರ್ ಪ್ರದೀಪ್ ಕುಮಾರ್ ಪಂಜಾ, ಪಶ್ಚಿಮ ಬಂಗಾಳ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರಾಜು ಮುಖರ್ಜಿ, ಎನ್‌ಎಚ್‌ಆರ್‌ಸಿ ತನಿಖಾ ವಿಭಾಗದ ಡಿಐಜಿ ಮಂಜಿಲ್ ಸೈನಿ ಅವರು ಸಮಿತಿಯ ಸದಸ್ಯರಾಗಿದ್ದಾರೆ.
ಆಕ್ಷೇಪಣೆಗಳನ್ನು ಎತ್ತುವ ಬದಲು, ಮಹಾರಾಷ್ಟ್ರ ಸರ್ಕಾರ ತನಿಖೆಗೆ ಸಹಕರಿಸಬೇಕು ಎಂದು ಸಿಬಿಐ ಸೋಮವಾರ ಬಾಂಬೆ ಹೈಕೋರ್ಟ್ ಎದುರು ಹೇಳಿದೆ. ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ವಿರುದ್ಧ ದಾಖಲಾದ ಎಫ್‌ಐಆರ್‌ನ ಕೆಲ ಭಾಗಗಳನ್ನು ತೆಗೆದುಹಾಕಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ವೇಳೆ ತನಿಖಾ ಸಂಸ್ಥೆ ಈ ವಿಷಯ ಪ್ರಸ್ತಾಪಿಸಿತು.
ಎಫ್ಐಆರ್‌ನ ಪ್ಯಾರಾಗಳನ್ನು ತೆಗೆದುಹಾಕುವ ಮೂಲಕ, ನ್ಯಾಯಾಲಯ ಹೊರಡಿಸಿದ ಆದೇಶವನ್ನು ದುರ್ಬಲಗೊಳಿಸಲು ಸರ್ಕಾರ ಯತ್ನಿಸುತ್ತಿದೆ ಎಂದು ಸಿಬಿಐ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹೇಳಿದರು. ಈ ಬಗ್ಗೆ ತನಿಖೆ ನಡೆಸಬೇಕು ಎಂದು ಕರೆ ನೀಡಿತ್ತು. ಮುಂಬೈನ ಈ ಹಿಂದಿನ ಪೊಲೀಸ್ ಆಯುಕ್ತ ಪರಮ್ ಬಿರ್ ಸಿಂಗ್ ಅವರು ಬರೆದ ಪತ್ರವನ್ನು ಒಳಗೊಂಡ ಡಾ.ಜೈಶ್ರೀ ಪಾಟೀಲ್ ಅವರ ದೂರಿನ ಬಗ್ಗೆ ತನಿಖೆ ನಡೆಸುವಂತೆ ಆದೇಶಿಸಲಾಗಿತ್ತು ಎಂದು ಅವರು ತಿಳಿಸಿದರು.