ಸ್ಟೆರ್ಲೈಟ್ ತಾಮ್ರ ಘಟಕದ ವಿರುದ್ಧ ಪ್ರತಿಭಟನೆಯಲ್ಲಿ ನಿರತರಾಗಿದ್ದವರ ವಿರುದ್ಧ ಗುಂಡು ಹಾರಿಸಿ 16 ಮಂದಿಯನ್ನು ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ 2018ರಲ್ಲಿ ಪೊಲೀಸರ ಗುಂಡಿನ ದಾಳಿಯ ಕುರಿತು ತನಿಖೆ ನಡೆಸಿರುವ, ಇನ್ನೂ ಬಹಿರಂಗಪಡಿಸದ ವರದಿಯನ್ನು ಸಲ್ಲಿಸುವಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ಸೋಮವಾರ ಮದ್ರಾಸ್ ಹೈಕೋರ್ಟ್ ಶುಕ್ರವಾರ ನಿರ್ದೇಶಿಸಿದೆ.
ಪೊಲೀಸರ ಬಲ ಪ್ರಯೋಗ ಮತ್ತು ದೌರ್ಜನ್ಯ ನಡೆದಿರುವುದಕ್ಕೆ ಸಂಬಂಧಿಸಿದಂತೆ ಸಂತ್ರಸ್ತರಿಗೆ ಪರಿಹಾರ ಕೊಟ್ಟು ಕೈತೊಳೆದುಕೊಂಡರೆ ಸಾಕೆ? ಸಾವುಗಳಿಗೆ ಸಂಬಂಧಿಸಿದಂತೆ ಯಾರನ್ನು ಹೊಣೆಗಾರರನ್ನಾಗಿ ಮಾಡಬಾರದೆ? ಎಂದು ಪೀಠ ಪ್ರಶ್ನಿಸಿದೆ. “ಜನರನ್ನು ಕೊಂದು ಅವರಿಗೆ ಹಣ ಎಸೆದು ನಮ್ಮ ಕೆಲಸ ಮುಗಿಯಿತು ಎನ್ನಬಹುದೇ? ಇಂಥ ಸಮಾಜ ನಿರ್ಮಾಣ ಮಾಡುವುದು ನಮ್ಮ ಉದ್ದೇಶವೇ? … ಕೆಲವು ಜನರತ್ತ ಹಣ ಬಿಸಾಡಿದರೆ ಎಲ್ಲವೂ ಸುಮ್ಮನಾಗುತ್ತದೆಯೇ?” ಎಂದು ಮುಖ್ಯ ನ್ಯಾಯಮೂರ್ತಿ ಸಂಜೀಬ್ ಬ್ಯಾನರ್ಜಿ ಅವರ ನೇತೃತ್ವದ ಪೀಠ ಮೌಖಿಕವಾಗಿ ಪ್ರಶ್ನಿಸಿತು.
ಮಧ್ಯಪ್ರದೇಶ ಹೈಕೋರ್ಟ್ ನ್ಯಾಯಾಲಯದ ಕಲಾಪವನ್ನು ಶುಕ್ರವಾರದಿಂದ ಯೂಟ್ಯೂಬ್‌ನಲ್ಲಿ ಲೈವ್ ಸ್ಟ್ರೀಮಿಂಗ್ ಮಾಡಲು ಆರಂಭಿಸಿದೆ. ಈ ಮೂಲಕ ಗುಜರಾತ್ ಮತ್ತು ಕರ್ನಾಟಕ ನಂತರ ಈ ಪ್ರಯತ್ನ ಆರಂಭಿಸಿದ ಮೂರನೇ ಹೈಕೋರ್ಟ್ ಎಂಬ ಹಿರಿಮೆಗೆ ಅದು ಪಾತ್ರವಾಗಿದೆ.
ʼಲೈವ್‌ಲಾʼ ಜಾಲತಾಣದ ವರದಿಗಾರಾದ ನೂಪುರ್ ಥಾಪ್ಲಿಯಾಲ್, ಲೈವ್‌ಲಾ ವಿಶೇಷ ಕಾನೂನು ವರದಿಗಾರರಾದ ಸ್ಪರ್ಶ್ ಉಪಾಧ್ಯಾಯ ಹಾಗೂ ʼಬಾರ್ ಅಂಡ್ ಬೆಂಚ್ʼ ಜಾಲತಾಣದ ಕಾನೂನು ವರದಿಗಾರ ಅರೀಬ್ ಉದ್ದಿನ್ ಅಹ್ಮದ್ ಮತ್ತು ದೈನಿಕ್ ಭಾಸ್ಕರ್‌ನ ಕಾನೂನು ವರದಿಗಾರ ರಾಹುಲ್ ದುಬೆ ಪರವಾಗಿ ವಕೀಲ ಮನು ಮಹೇಶ್ವರಿ ಅವರು ಮನವಿ ಸಲ್ಲಿಸಿದ ಬಳಿಕ ಈ ಬೆಳವಣಿಗೆ ನಡೆದಿದೆ. ಮಧ್ಯಪ್ರದೇಶ ಹೈಕೋರ್ಟ್‌ನ ವಿಡಿಯೊ ಕಾನ್ಫರೆನ್ಸಿಂಗ್ ಮತ್ತು ಆಡಿಯೊ-ವಿಷುವಲ್ ಎಲೆಕ್ಟ್ರಾನಿಕ್ ಲಿಂಕೇಜ್ ನಿಯಮಗಳನ್ನು ಅರ್ಜಿದಾರರು ಪ್ರಶ್ನಿಸಿದ್ದರು. ಈ ನಿಯಮದಡಿ ಕಲಾಪ ವೀಕ್ಷಿಸಲು ಹೊರಗಿನವರಿಗೆ ನಿರ್ಬಂಧ ವಿಧಿಸಲಾಗಿತ್ತು.
ಇಸ್ರೊ ಪಿತೂರಿ ಪ್ರಕರಣದಲ್ಲಿ ಆರೋಪಿಯಾಗಿರುವ ನಿವೃತ್ತ ಗುಪ್ತಚರ ಇಲಾಖೆ ಅಧಿಕಾರಿ ಪಿ ಎಸ್ ಜಯಪ್ರಕಾಶ್ ಅವರ ಮಧ್ಯಂತರ ನಿರೀಕ್ಷಣಾ ಜಾಮೀನು ಅವಧಿಯನ್ನು ಕೇರಳ ಹೈಕೋರ್ಟ್ ವಿಸ್ತರಿಸಿದೆ. ಜುಲೈ 1ರವರೆಗೆ ಮಧ್ಯಂತರ ನಿರೀಕ್ಷಣಾ ಜಾಮೀನು ವಿಸ್ತರಿಸಿ ನ್ಯಾಯಮೂರ್ತಿ ಕೆ ಹರಿಪಾಲ್ ಅವರಿದ್ದ ಏಕಸದಸ್ಯ ಪೀಠವು ಆದೇಶಿಸಿದೆ. ಆ ವೇಳೆಗೆ ಸಿಬಿಐ ಪ್ರತಿಕ್ರಿಯೆ ಸಲ್ಲಿಸುವ ಸಾಧ್ಯತೆ ಇದೆ.
ಇಸ್ರೊ ಪಿತೂರಿ ಪ್ರಕರಣದಲ್ಲಿ ಸಿಬಿಐ ತಮ್ಮ ಹೆಸರು ಉಲ್ಲೇಖಿಸಿದ ಹಿನ್ನೆಲೆಯಲ್ಲಿ ಕೇಂದ್ರ ಗುಪ್ತಚರ ನಿವೃತ್ತ ಅಧಿಕಾರಿ ಜಯಪ್ರಕಾಶ್ ಅವರು ಹೈಕೋರ್ಟ್‌ನಲ್ಲಿ ನಿರೀಕ್ಷಣಾ ಜಾಮೀನು ಕೋರಿ ಮನವಿ ಸಲ್ಲಿಸಿದ್ದರು. ವಕೀಲ ಕಲೀಶ್ವರಂ ರಾಜ್ ಅವರ ಮೂಲಕ ಜಯಪ್ರಕಾಶ್ ಮನವಿ ಸಲ್ಲಿಸಿದ್ದಾರೆ. ಇಸ್ರೊ ಗೂಢಚರ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸ್ಥೆಯ ವಿಜ್ಞಾನಿ ನಂಬಿ ನಾರಾಯಣನ್ ಮತ್ತಿತರರನ್ನು ತಪ್ಪಾಗಿ ಬಂಧಿಸಿ ಚಿತ್ರಹಿಂಸೆ ನೀಡಿ ವಿನಾಕಾರಣ ಜೈಲುವಾಸ ಅನುಭವಿಸುವಂತೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ 2018ರಲ್ಲಿ ನಿವೃತ್ತ ನ್ಯಾಯಾಧೀಶ ನ್ಯಾಯಮೂರ್ತಿ ಡಿಕೆ ಜೈನ್ ಅವರ ನೇತೃತ್ವದಲ್ಲಿ ಮೂವರು ಸದಸ್ಯರ ಸಮಿತಿ ರಚಿಸಿತ್ತು. ಸಮಿತಿಯ ವರದಿಯನ್ನು ಸರ್ವೋಚ್ಚ ನ್ಯಾಯಾಲಯ ಸಿಬಿಐಗೆ ವಹಿಸಿತ್ತು. ಅದನ್ನು ಆಧರಿಸಿ ಸಿಬಿಐ ಕೃತ್ಯ ಎಸಗಿದ ಅಧಿಕಾರಿಗಳ ವಿರುದ್ಧ ತನಿಖೆ ಆರಂಭಿಸಿತ್ತು.
ನಾರದಾ ಪ್ರಕರಣವನ್ನು ವರ್ಗಾಯಿಸುವಂತೆ ಕೋರಿ ಸಿಬಿಐ ಸಲ್ಲಿಸಿದ್ದ ವರ್ಗಾವಣೆ ಮನವಿಗೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ರಾಜ್ಯ ಕಾನೂನು ಸಚಿವ ಮೊಲೊಯ್ ಘಟಕ್ ಅವರು ಸಲ್ಲಿಸಿದ್ದ ಅಫಿಡವಿಟ್ ಅನ್ನು ದಾಖಲೆಯಲ್ಲಿ ಸ್ವೀಕರಿಸಲು ನಿರಾಕರಿಸಿದ್ದ ಕಲ್ಕತ್ತಾ ಹೈಕೋರ್ಟ್‌ನ ಜೂನ್ 9ರ ಆದೇಶವನ್ನು ಸುಪ್ರೀಂಕೋರ್ಟ್ ಶುಕ್ರವಾರ ವಜಾ ಮಾಡಿದೆ.
ತಮ್ಮ ಅಫಿಡವಿಟ್ ಬೆಂಬಲಿಸಿ ಪೂರಕ ಅಫಿಡವಿಟ್ ಮತ್ತು ಮಹತ್ವದ ವಿಚಾರಣೆ ಮುಗಿದ ಬಳಿಕ ಜೂನ್ 7 ಮತ್ತು 9ರಂದು ಅಫಿಡವಿಟ್ ಸಲ್ಲಿಸಿದ್ದೇಕೆ ಎಂಬುದನ್ನು ವಿವರಿಸುವಂತೆ ನ್ಯಾಯಮೂರ್ತಿಗಳಾದ ವಿನೀತ್ ಶರಣ್ ಮತ್ತು ದಿನೇಶ್ ಮಹೇಶ್ವರಿ ಅವರಿದ್ದ ವಿಭಾಗೀಯ ಪೀಠ ನಿರ್ದೇಶಿಸಿದೆ.
ದೆಹಲಿ ಗಲಭೆ ಆರೋಪಿ ಆಸೀಫ್ ಇಕ್ಬಾಲ್ ತನ್ಹಾ ಸಲ್ಲಿಸಿದ್ದ ಜಾಮೀನು ಬಾಂಡ್ ಅನ್ನು ಬುಧವಾರ ಅಂಗೀಕರಿಸಿರುವ ದೆಹಲಿ ನ್ಯಾಯಾಲಯ ಅವರು ಸಲ್ಲಿಸಿರುವ ವಿಳಾಸದ ತನಿಖೆಗೆ ಸಂಬಂಧಿಸಿದಂತೆ ಹೊಸ ಆದೇಶ ಹೊರಡಿಸಿದೆ.
ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಅಮಿತಾಭ್ ರಾವತ್ ಆದೇಶದ ಹೊರಡಿಸಿದ ಬಳಿಕ ತನ್ಹಾ ಸಲ್ಲಿಸಿರುವ ವಿಳಾಸ ಸರಿಯಿಲ್ಲ ಎಂದು ವಿಶೇಷ ಸರ್ಕಾರಿ ಅಭಿಯೋಜಕ ತಗಾದೆ ಎತ್ತಿದ್ದರು. ಆರೋಪಿಯು ತಾನು ನೀಡಿರುವ ವಿಳಾಸದಲ್ಲಿ ನೆಲೆಸಿರಲಿಲ್ಲ ಎಂದಿದ್ದರು. ಬಂಧನಕ್ಕೂ ಮುನ್ನ ತನ್ಹಾ ಅಲ್ಲಿ ನೆಲೆಸಿದ್ದರು, ಬಂಧನವಾದ ನಂತರ ಅವರ ಕರಾರು ಮುಗಿದಿತ್ತು ಎಂದು ತನ್ಹಾ ಪರ ವಕೀಲರು ವಾದಿಸಿದರು.