ಆಂಧ್ರಪ್ರದೇಶದಲ್ಲಿ ಸುಮಾರು 5,25,000 ಪರೀಕ್ಷೆ ಬರೆಯುತ್ತಿದ್ದಾರೆ ಎಂಬುದನ್ನು ಅರಿತ ಸುಪ್ರೀಂಕೋರ್ಟ್ ಸಾಮಾಜಿಕ ಅಂತರ ಕಾಯ್ದುಕೊಂಡು ಪರೀಕ್ಷೆ ನಡೆಸಲು 34,634 ಕೊಠಡಿಗಳು ಅಗತ್ಯವಿದ್ದು ಇಷ್ಟು ವೆಂಟಿಲೇಟೆಡ್ ಕೊಠಡಿಗಳನ್ನು ಒದಗಿಸಲು ಸಾಧ್ಞವೇ ಎಂಬುದಾಗಿ ಗುರುವಾರ ಸರ್ಕಾರವನ್ನು ಪ್ರಶ್ನಿಸಿತು. ಕೋವಿಡ್ ಮೂರನೇ ಅಲೆ ಎದುರಾದರೆ ರಾಜ್ಯ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆಯೂ ಪೀಠ ಸರ್ಕಾರವನ್ನು ಕೇಳಿತು.
ಕೋವಿಡ್ ಸಾಂಕ್ರಾಮಿಕದ ವೇಳೆ 12ನೇ ತರಗತಿ ಪರೀಕ್ಷೆಗಳನ್ನು ನಡೆಸದಂತೆ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ಎ ಎಂ ಖಾನ್ವಿಲ್ಕರ್ ಮತ್ತು ದಿನೇಶ್ ಮಹೇಶ್ವರಿ ಅವರಿದ್ದ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿತು. ವಿದ್ಯಾರ್ಥಿಗಳು, ಮೆಲ್ವಿಚಾರಕರು, ಸಿಬ್ಬಂದಿ ಸೇರಿದಂತೆ ಲಕ್ಷಾಂತರ ಜನರ ಪ್ರಾಣದ ಪ್ರಶ್ನೆಯಾಗಿದೆ ಎಂದು ಅದು ಹೇಳಿತು. ನಾಳೆ (ಶುಕ್ರವಾರ) ಈ ಸಂಬಂಧ ವಿಚಾರಣೆ ಮುಂದುವರೆಯಲಿದ್ದು ಅಷ್ಟರೊಳಗೆ ಪರೀಕ್ಷೆ ಕುರಿತ ವಿವಿಧ ವಿಚಾರಗಳ ಸಂಬಂಧ ಮಾಹಿತಿ ಒದಗಿಸಬೇಕು ಎಂದು ಸೂಚಿಸಿತು.
ಜುಲೈ 5ರಿಂದ ಉಲ್ಲೇಖನಾಧಿಕಾರಿ ಎದುರು ಪ್ರಕರಣಗಳ ಭೌತಿಕ ಉಲ್ಲೇಖ ಆರಂಭಿಸಲು ಸುಪ್ರೀಂಕೋರ್ಟ್ ನಿರ್ಧರಿಸಿದೆ. ಅಡ್ವೊಕೇಟ್ಸ್ ಆನ್ ರೆಕಾರ್ಡ್/ಪಾರ್ಟಿ ಇನ್ ಪರ್ಸನ್ ವಕೀಲರು ತಮ್ಮ ಹೊಸ ಪ್ರಕರಣಗಳನ್ನು ಸೋಮವಾರದಿಂದ ಶುಕ್ರವಾರದವರೆಗೆ ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 12.00 ರವರೆಗೆ ಮತ್ತು ಶನಿವಾರ ಬೆಳಿಗ್ಗೆ 10.30 ರಿಂದ 11.00 ರವರೆಗೆ ನೇರವಾಗಿ ಪ್ರಸ್ತಾಪಿಸಲು ಅವಕಾಶ ಕಲ್ಪಿಸಲಾಗಿದೆ. ಭೌತಿಕವಾಗಿ ಮತ್ತು ವೀಡಿಯೊ ಕಾನ್ಫರೆನ್ಸ್ (ವಿಸಿ) ಮೂಲಕ ಪ್ರಕರಣಗಳನ್ನು ಪ್ರಸ್ತಾಪಿಸಬಹುದು ಎಂದು ನ್ಯಾಯಾಲಯದ ಸುತ್ತೋಲೆ ತಿಳಿಸಿದೆ. ವಿಸಿ ಮೂಲಕ ಪ್ರಕರಣಗಳನ್ನು ಪ್ರಸ್ತಾಪಿಸಲು ಬಯಸುವವರು ತಮ್ಮ ನೋಂದಾಯಿತ ಇಮೇಲ್ ಐಡಿಯಿಂದ ಲಿಸ್ಟಿಂಗ್ ಪ್ರೊಫಾರ್ಮಾದಲ್ಲಿ ಮನವಿಯನ್ನು ಇ-ಮೇಲ್ ಐಡಿ ಉಲ್ಲೇಖದ ತುರ್ತು ಪತ್ರದೊಂದಿಗೆ ಸಲ್ಲಿಸಬೇಕು. ನ್ಯಾಯಾಲಯದ ಇಮೇಲ್ ವಿಳಾಸ: sc@sci.nic.in.
ಮನವಿಯನ್ನು ಸಲ್ಲಿಸುವಾಗ “ವಿಡಿಯೊ ಕಾನ್ಫರೆನ್ಸ್ ಮೂಲಕ ಪ್ರಸ್ತಾಪಿಸುವುದು” ಎಂದು ನಿರ್ದಿಷ್ಟಪಡಿಸಬೇಕು. ಅಂತಹ ವಿನಂತಿಯನ್ನು ಸ್ವೀಕರಿಸಿದ ನಂತರ, ಲಿಸ್ಟಿಂಗ್ ಪ್ರೊಫಾರ್ಮಾದಲ್ಲಿ, ನಿಗದಿತ ಸಮಯದೊಳಗೆ ಮರುದಿನ ವಿಸಿ ಮೂಲಕ ಪ್ರಸ್ತಾಪಿಸಲು ಅನುಮತಿ ನೀಡಲಾಗುತ್ತದೆ. ಕೋವಿಡ್ ಎರಡನೇ ಅಲೆ ಬಳಿಕ ಕಳೆದ ಏಪ್ರಿಲ್ನಲ್ಲಿ ಸರ್ವೋಚ್ಚ ನ್ಯಾಯಾಲಯ ಪ್ರಕರಣಗಳ ಭೌತಿಕ ಉಲ್ಲೇಖವನ್ನು ಸ್ಥಗಿತಗೊಳಿಸಿತ್ತು.
ಬಲವಂತದ ವಿಧಾನಗಳ ಮೂಲಕ ಲಸಿಕೆ ಹಾಕುವುದು ಲಸಿಕೆ ಹಾಕುವ ಉತ್ತಮ ಕಾರ್ಯದ ಮೂಲಭೂತ ಉದ್ದೇಶವನ್ನೇ ಹಾಳುಮಾಡುತ್ತದೆ ಎಂದು ಮೇಘಾಲಯ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಈ ಹಿನ್ನೆಲೆಯಲ್ಲಿ ಅಂಗಡಿ ಮಾಲೀಕರು, ಮಾರಾಟಗಾರರು, ಸ್ಥಳೀಯ ಟ್ಯಾಕ್ಸಿ ಚಾಲಕರಂತಹ ಜನರು ತಮ್ಮ ವ್ಯವಹಾರ ಅಥವಾ ವೃತ್ತಿ ಆರಂಭಕ್ಕೂ ಮುನ್ನ ಲಸಿಕೆ ಹಾಕಿಕೊಳ್ಳುವಂತೆ ಒತ್ತಾಯಿಸುವುದು ಸಂವಿಧಾನದ 19 (1) (ಜಿ) ವಿಧಿಯ ಉಲ್ಲಂಘನೆಯಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.
ಈ ನಿಟ್ಟಿನಲ್ಲಿ ನ್ಯಾಯಾಲಯ ಎರಡು ವಿಚಾರಗಳನ್ನು ಚರ್ಚಿಸಿತು: ಎ) ಲಸಿಕೆ ಕಡ್ಡಾಯಗೊಳಿಸಬಹುದೇ? ಬಿ) ಅಂತಹ ಕಡ್ಡಾಯ ಕ್ರಮ ನಾಗರಿಕರ ಜೀವನೋಪಾಯಕ್ಕೆ ಪ್ರತಿಕೂಲ ಪರಿಣಾಮ ಬೀರಲಿದೆಯೇ? ಲಸಿಕೆ ತೆಗೆದುಕೊಳ್ಳಲು ಹಿಂಜರಿಯುತ್ತಿರುವ ಸಮಸ್ಯೆ ನಿವಾರಣೆಗಾಗಿ ಸರ್ಕಾರಕ್ಕೆ ಸಹಾಯ ಮಾಡಲು ನ್ಯಾಯಾಲಯ ಪ್ರಕರಣವನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುವ ಉದ್ದೇಶ ಹೊಂದಿದ್ದು ಜೂನ್ 30 ರಂದು ಮತ್ತೆ ಪ್ರಕರಣದ ವಿಚಾರಣೆ ನಡೆಯಲಿದೆ.
ಪೆಟ್ರೋಯಂ ಉತ್ಪನ್ನಗಳನ್ನು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯಾಪ್ತಿಗೆ ತರುವ ಸಂಬಂಧ ಕೋರಿಕೆ ಕುರಿತು ನಿರ್ಧಾರ ಕೈಗೊಳ್ಳುವಂತೆ ಜಿಎಸ್‌ಟಿ ಮಂಡಳಿಗೆ ಸೋಮವಾರ ಕೇರಳ ಹೈಕೋರ್ಟ್ ನಿರ್ದೇಶಿಸಿದೆ. ನಿರ್ಧಾರ ಕೈಗೊಳ್ಳುವಂತೆ ಜಿಎಸ್‌ಟಿ ಮಂಡಳಿಗೆ ಸೂಚಿಸುವಂತಿಲ್ಲ. ಬದಲಿಗೆ ತನಗೆ ಬರುವ ಮನವಿಯನ್ನು ಕೇಂದ್ರ ಸರ್ಕಾರಕ್ಕೆ ವರ್ಗಾಯಿಸಿ ಆರು ವಾರಗಳಲ್ಲಿ ನಿರ್ಧಾರ ಕೈಗೊಳ್ಳುವಂತೆ ಕೋರಬಹುದು ಎಂಬ ನ್ಯಾಯಾಲಯದ ಹಿಂದಿನ ತೀರ್ಪನ್ನು ಉಲ್ಲೇಖಿಸಿದ ಮುಖ್ಯ ನ್ಯಾಯಮೂರ್ತಿ ಎಸ್ ಮಣಿಕುಮಾರ್ ಮತ್ತು ನ್ಯಾ. ಶಾಜಿ ಪಿ ಚಾಲಿ ಅವರಿದ್ದ ಪೀಠ ಮನವಿಯನ್ನು ವಿಲೇವಾರಿ ಮಾಡಿತು.
ಛಿದ್ರವಾದ ತೆರಿಗೆ ನೀತಿಯಿಂದಾಗಿ ದೇಶದ ವಿವಿಧೆ ವಿವಿಧ ರಾಜ್ಯಗಳು ವಿಭಿನ್ನ ತೆರಿಗೆ ವಿಧಿಸುವುದರಿಂದ ಒಂದೊಂದು ಕಡೆ ಪೆಟ್ರೋಲ್ ಮತ್ತು ಡೀಸೆಲ್ ಬೇರೆ ಬೇರೆ ದರ ವಿಧಿಸಲಾಗುತ್ತಿದೆ ಎಂದು ಅರ್ಜಿದಾರರ ಪರ ವಕೀಲ ಅರುಣ್ ವರ್ಗೀಸ್ ವಾದಿಸಿದರು.
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಲ್ಲಿಸಿರುವ ಮನವಿಯೊಂದರ ವಿಚಾರಣೆಯಿಂದ ಹಿಂದೆ ಸರಿಯುವಂತೆ ನ್ಯಾ. ಕೌಶಿಕ್ ಚಂದಾ ಅವರನ್ನು ಕೋರಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ವೇಳೆ ನ್ಯಾ. ಚಂದಾ ಮತ್ತು ವಕೀಲರ ನಡುವೆ ಹಲವು ಕೌತುಕಮಯ ವಿಚಾರಗಳು ವಿನಿಮಯವಾದವು. ಬಿಜೆಪಿಗೆ ಸಮೀಪವಾಗಿರುವುದರಿಂದ ನ್ಯಾ. ಚಂದಾ ಅವರು ಬಿಜೆಪಿ ಶಾಸಕ ಸುವೇಂದು ಅಧಿಕಾರಿ ನಂದಿಗ್ರಾಮದಿಂದ ಆಯ್ಕೆಯಾಗಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆಯಿಂದ ಹಿಂದೆ ಸರಿಯಬೇಕು ಎಂದು ಕೋರಲಾಗಿತ್ತು.
ಆರಂಭದ ದಿನಗಳಲ್ಲಿ ಬಿಜೆಪಿಯನ್ನು ಪ್ರತಿನಿಧಿಸುತ್ತಿದ್ದಾಗ ರಾಜ್ಯದಲ್ಲಿ ಅದರ ಬಗ್ಗೆ ಯಾರಿಗೂ ತಿಳಿದಿರಲಿಲ್ಲ. “ಯಾವ ಪಕ್ಷವನ್ನು ನೀವು ಪ್ರತಿನಿಧಿಸುತ್ತಿದ್ದೀರಿ ಎಂದು ನ್ಯಾಯಮೂರ್ತಿಯೊಬ್ಬರು ನನ್ನನ್ನು ಪ್ರಶ್ನಿಸಿದ್ದರು. ಆಗ ನಾನು ಭಾರತೀಯ ಜನತಾ ಪಕ್ಷ ಎಂದೆ. ಆಗ ಅವರು ಮತ್ತೊಮ್ಮೆ ಯಾವ ಪಕ್ಷ ಎಂದು ಕೇಳಿದರು. ಆಗ ನಾನು ಪುನರುಚ್ಚರಿಸಿದೆ. ಅಂತಿಮವಾಗಿ ನಾನು ಬಿಜೆಪಿ ಎಂದೆ. ಆಗ ಅವರು ʼಓಹ್ ಬಿಜೆಪಿʼ” ಎಂದಿದ್ದರು ಎಂಬುದಾಗಿ ನ್ಯಾ. ಚಂದಾ ನೆನೆಪಿಸಿಕೊಂಡರು. ಅಂತಿಮವಾಗಿ ಮನವಿಯ ಸಂಬಂಧ ಮತ್ತೊಮ್ಮೆ ಯೋಚಿಸಲಾಗುವುದು ಎಂದಿರುವ ನ್ಯಾ. ಚಂದಾ ತೀರ್ಪು ಕಾಯ್ದಿರಿಸಿದ್ದಾರೆ.