ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು | 7-1-2021

>> ಅಮಿತಾಬ್‌ ಕಾಲರ್‌ ಟ್ಯೂನ್‌ ವಿರುದ್ಧ ಪಿಐಎಲ್‌ >> ಮಾಧ್ಯಮ ವರದಿ ನಿರಾಕರಿಸಿದ ಸುಪ್ರೀಂ >> ಅಪೌಷ್ಠಿಕತೆ ಪತ್ತೆಗೆ ಕರ್ನಾಟಕ ಹೈಕೋರ್ಟ್‌ ಸೂಚನೆ >> ಚಿತ್ರಮಂದಿರ ಹೌಸ್‌ಫುಲ್‌ ನಿರ್ಧಾರ ವಿರೋಧಿಸಿ ಅರ್ಜಿ
ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು | 7-1-2021

ನಟ ಅಮಿತಾಬ್‌ ಬಚ್ಚನ್‌ ಕೋವಿಡ್‌ ಜಾಗೃತಿ ಮೂಡಿಸಲು ಸೂಕ್ತರಲ್ಲ, ಅವರ ಧ್ವನಿ ಇರುವ ಕಾಲರ್‌ ಟ್ಯೂನ್‌ ತೆಗೆಯಿರಿ ಎಂದು ಕೋರಿ ಪಿಐಎಲ್‌

ನ್ಯಾಯಿಕ ಹಿತದೃಷ್ಟಿಯಿಂದ ಕೊರೊನಾ ಕುರಿತು, ಹಿರಿಯ ನಟ ಅಮಿತಾಬ್‌ ಬಚ್ಚನ್‌ ಕಾಲರ್‌ ಟ್ಯೂನ್‌ ಮೂಲಕ ಮೂಡಿಸಿರುವ ಜಾಗೃತಿಯ ಕಾಲರ್‌ಟ್ಯೂನ್‌ ಅನ್ನು ತೆಗೆದುಹಾಕಬೇಕು ಎಂದು ಕೋರಿ ರಾಕೇಶ್‌ ಎಂಬುವವರು ದೆಹಲಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್‌) ದಾಖಲಿಸಿದ್ದಾರೆ. “ಅಮಿತಾಬ್‌ ಅವರು ಇಂತಹ ಜಾಗೃತಿ ಕಾರ್ಯಕ್ರಮಗಳಿಗೂ ಸಂಭಾವನೆ ಪಡೆಯುತ್ತಿದ್ದಾರೆ. ಇಂತಹ ಕಾಲರ್‌ ಟ್ಯೂನ್‌ಗಾಗಿ ಕೇಂದ್ರ ಸರ್ಕಾರ ಅವರಿಗೆ ಹಣ ಪಾವತಿಸುತ್ತಿದೆ” ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

Amitabh Bachchan
Amitabh Bachchan imagup.com

“ಆದರೆ ಕೆಲವು ಕೊರೊನಾ ಯೋಧರು ದೇಶಕ್ಕಾಗಿ ಉತ್ತಮ ಸೇವೆ ಸಲ್ಲಿಸಿದ್ದು ಬಡ ಮತ್ತು ನಿರ್ಗತಿಕರಿಗೆ ಸಹಾಯ ಮಾಡಿದ್ದಾರೆ. ಇನ್ನೂ ಕೆಲವು ಕೊರೊನಾ ಯೋಧರು ಕಷ್ಟಪಟ್ಟು ಸಂಪಾದಿಸಿದ್ದನ್ನು ದಾನ ಮಾಡಿದ್ದಾರೆ. ಮತ್ತೆ ಕೆಲವು ಪ್ರಸಿದ್ಧ ಕೊರೊನಾ ಯೋಧರು ಯಾವುದೇ ಹಣ ಪಡೆಯದೆ ಈಗಲೂ ಸೇವೆ ಒದಗಿಸಲು ಸಿದ್ಧರಾಗಿದ್ದಾರೆ. ಹಿರಿಯ ನಟನಿಗೆ 'ಶುದ್ಧ ಚಾರಿತ್ರ್ಯ ಇಲ್ಲ' ಅಲ್ಲದೆ ಅವರು 'ಸಾಮಾಜಿಕ ಕಾರ್ಯಕರ್ತನಾಗಿಯೂ' ದೇಶಕ್ಕೆ ಸೇವೆ ಸಲ್ಲಿಸಿಲ್ಲ. ಅಮಿತಾಭ್‌ ಮತ್ತವರ ಕುಟುಂಬ ಕೂಡ ಕೊರೊನಾ ದಾಳಿಗೆ ತುತ್ತಾಗಿದೆ. ಸ್ವತಃ ಅಮಿತಾಭ್‌ ಕೂಡ ಕೊರೊನಾ ರೋಗದಿಂದ ತಪ್ಪಿಸಿಕೊಳ್ಳಲಾರರು” ಎಂದು ಕೂಡ ಅರ್ಜಿಯಲ್ಲಿ ತಿಳಿಸಲಾಗಿದೆ. ವಕೀಲ ಎ ಕೆ ದುಬೆ ಮತ್ತು ಪವನ್‌ ಕುಮಾರ್‌ ಅವರ ಮೂಲಕ ಅರ್ಜಿ ಸಲ್ಲಿಸಲಾಗಿದೆ. ಜನವರಿ 18ರಂದು ಪ್ರಕರಣದ ವಿಚಾರಣೆ ನಡೆಯಲಿದೆ.

ಹಾಲಿ ನ್ಯಾಯಮೂರ್ತಿ ವಿರುದ್ಧ ಕ್ರಮ ಕೈಗೊಳ್ಳುವ ಕುರಿತು ಪ್ರಕಟವಾಗಿದ್ದ ಮಾಧ್ಯಮ ವರದಿಗಳನ್ನು ನಿರಾಕರಿಸಿದ ಸುಪ್ರೀಂ

ಸುಪ್ರೀಂಕೋರ್ಟ್‌ನ ಹಾಲಿ ನ್ಯಾಯಮೂರ್ತಿಗಳೊಬ್ಬರ ವಿರುದ್ಧ ಮುಖ್ಯ ನ್ಯಾಯಮೂರ್ತಿ ಎಸ್‌ ಎ ಬೊಬ್ಡೆ ಅವರು ಕ್ರಮಕೈಗೊಳ್ಳುವ ಸಾಧ್ಯತೆಗಳಿವೆ ಎಂಬ ಮಾಧ್ಯಮ ವರದಿಗಳನ್ನು ನಿರಾಕರಿಸಿ ಸರ್ವೋಚ್ಚ ನ್ಯಾಯಾಲಯ ಹೇಳಿಕೆ ನೀಡಿದೆ. “ನಿರ್ಬಂಧಿತ ವಿಚಾರಣೆ ಗೌಪ್ಯವಾಗಿರುತ್ತದೆ. ನಿರ್ಬಂಧಿತ ವಿಚಾರಣೆಯ ಯಾವುದೇ ವಿಷಯಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಮತ್ತು ಯಾವ ಕಾರಣಕ್ಕೂ ಅದನ್ನು ಬಿಡುಗಡೆ ಮಾಡಲಾಗದು,” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

Jagan Mohan Reddy, Supreme Court
Jagan Mohan Reddy, Supreme Court

ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ ಎನ್‌ ವಿ ರಮಣ ಅವರು ತಮ್ಮ ಪ್ರಭಾವವನ್ನು ತೆಲಗು ದೇಶಂ ಪಕ್ಷದ ಪರವಾಗಿ ಬಳಸುತ್ತಿದ್ದಾರೆ ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ವೈ ಎಸ್‌ ಜಗನ್‌ಮೋಹನ್‌ ರೆಡ್ಡಿ ಅವರು ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಾಧೀಶರಿಗೆ ಬರೆದ ಪತ್ರದ ಹಿನ್ನೆಲೆಯಲ್ಲಿ ನ್ಯಾ. ಬೊಬ್ಡೆ ಅವರು ರಮಣ ಅವರ ವಿರುದ್ಧ ಕ್ರಮ ಕೈಗೊಳ್ಳಲಿದ್ದಾರೆ ಎಂದು ಕೆಲ ಮಾಧ್ಯಮಗಳಲ್ಲಿ ವರದಿಯಾಗಿತ್ತು.

ರಾಜ್ಯದ ಅಪೌಷ್ಠಿಕತೆ ಸ್ಥಿತಿಯ ಮೇಲೆ ಕೋವಿಡ್‌ ಬೀರುವ ಪರಿಣಾಮ ಎಂತಹುದು? ಕರ್ನಾಟಕ ಹೈಕೋರ್ಟ್‌ ಪ್ರಶ್ನೆ

ರಾಜ್ಯದಲ್ಲಿ ಸಾಮಾನ್ಯದಿಂದ ತೀವ್ರ ಪ್ರಮಾಣದವರೆಗೆ ಅಪೌಷ್ಟಿಕತೆಯಿಂದ ಬಳಲುತ್ತಿರುವ ಎಲ್ಲ ಮಕ್ಕಳನ್ನು ಗುರುತಿಸಿ ಸಹಾಯ ಮಾಡಲು ಕೋರಿ 2011 ರಲ್ಲಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್‌ ʼರಾಜ್ಯದ ಅಪೌಷ್ಠಿಕತೆ ಸ್ಥಿತಿಯ ಮೇಲೆ ಕೋವಿಡ್‌ ಬೀರುವ ಪರಿಣಾಮ ಎಂತಹುದು?ʼ ಎಂದು ಬುಧವಾರ ಮೌಖಿಕವಾಗಿ ಪ್ರಶ್ನಿಸಿದೆ. ಇದೇ ವೇಳೆ ಸಮಸ್ಯೆಯ ಗಂಭೀರತೆಯನ್ನು ಪರಿಗಣಿಸಿದ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ನ್ಯಾಯಮೂರ್ತಿ ಎಸ್.ಎಸ್.ಮಗದುಂ ಅವರಿದ್ದ ವಿಭಾಗೀಯ ಪೀಠ ಎಲ್ಲಾ ಮಕ್ಕಳಿಗೆ ಆಗಾಗ್ಗೆ ಆರೋಗ್ಯ ತಪಾಸಣೆ ಮಾಡಲು ಅನುಕೂಲವಾಗುವಂತೆ ರಾಜ್ಯದ ಹಿಂದುಳಿದ ಜಿಲ್ಲೆಗಳನ್ನು ಗುರುತಿಸಲು ಸೂಚಿಸಿದೆ.

Karnataka High Court
Karnataka High Court

ಈ ಉದ್ದೇಶಕ್ಕಾಗಿ ಪ್ರತ್ಯೇಕ ಸಮಿತಿಯನ್ನು ರಚಿಸಬೇಕಾಗುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದ್ದು, ಸಮಿತಿ ರಚನೆಗೆ ಶಿಫಾರಸುಗಳನ್ನು ಮಾಡುವಂತೆ ಸರ್ಕಾರಿ ವಕೀಲ ವಿಕ್ರಂ ಹುಯಿಲಗೊಳ ಮತ್ತು ವಕೀಲ ಕ್ಲಿಪ್ಟನ್‌ ಡಿ ರೊಜಾರಿಯೊ ಅವರಿಗೆ ನಿರ್ದೇಶನ ನೀಡಿತು. ವಿಚಾರಣೆಯ ವೇಳೆ, ರಾಜ್ಯದಲ್ಲಿ ಉತ್ತರ ಕರ್ನಾಟಕದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಎಂದು ರೊಜಾರಿಯೋ ನ್ಯಾಯಾಲಯಕ್ಕೆ ಮಾಹಿತಿ ನೀಡಿದರು. ದಕ್ಷಿಣದ ಜಿಲ್ಲೆಗಳಲ್ಲಿ, ಪರಿಶಿಷ್ಟ ಪಂಗಡಕ್ಕೆ ಸೇರಿದ ಕೆಲವು ಸಮುದಾಯಗಳು ಅಪೌಷ್ಟಿಕತೆಯಿಂದ ಬಳಲುತ್ತಿವೆ ಎಂದು ತಿಳಿಸಲಾಯಿತು. ವೃತ್ತಪತ್ರಿಕೆಯ ವರದಿಯೊಂದನ್ನು ಆಧರಿಸಿ ರೊಜಾರಿಯೊ ನ್ಯಾಯಾಲಯದ ಗಮನ ಸೆಳೆದಿದ್ದರು. ಕಳೆದ ಮಾರ್ಚ್‌ನಿಂದ ರಾಜ್ಯ ಸರ್ಕಾರ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆ ಎಷ್ಟೆಂಬ ಮಾಹಿತಿ ನೀಡುತ್ತಿಲ್ಲ ಎಂದ ಅವರು ಪರಿಸ್ಥಿತಿ ಸುಧಾರಿಸುವ ಸಲುವಾಗಿ ವೈದ್ಯಕೀಯ ಶಿಬಿರಗಳ ಆಯೋಜನೆ ಮತ್ತು ಚಿಕಿತ್ಸೆಯ ಪ್ರೋಟೋಕಾಲ್‌ ಪ್ರಾರಂಭಿಸಲು ಕೋರಿದರು. ಪ್ರಕರಣ ಜ. 20ರಂದು ವಿಚಾರಣೆಗೆ ಬರಲಿದೆ.

ಕೋವಿಡ್‌ ನಡುವೆಯೂ ಚಿತ್ರಮಂದಿರಗಳ ಭರ್ತಿಗೆ ಅವಕಾಶ ನೀಡಿದ್ದ ತಮಿಳುನಾಡು ಸರ್ಕಾರದ ವಿರುದ್ಧ ಮದ್ರಾಸ್‌ ಹೈಕೋರ್ಟ್‌ಗೆ ಮನವಿ

ಕೋವಿಡ್‌ ಸಾಂಕ್ರಾಮಿಕದ ನಡುವೆಯೂ ಚಿತ್ರಮಂದಿರದಲ್ಲಿ ಅಂತರ ಕಾಯ್ದುಕೊಳ್ಳುವುದು ಅನಗತ್ಯ, ಪ್ರೇಕ್ಷಕರ ಆಸನಗಳನ್ನು, ಶೇ 100ರಷ್ಟು ಭರ್ತಿ ಮಾಡಬಹುದು ಎಂದು ತಮಿಳುನಾಡು ಸರ್ಕಾರ ಇತ್ತೀಚೆಗೆ ಹೊರಡಿಸಿದ್ದ ಆದೇಶವನ್ನು ಮದ್ರಾಸ್‌ ಹೈಕೋರ್ಟ್‌ನಲ್ಲಿ ಗುರುವಾರ ಪ್ರಶ್ನಿಸಲಾಗಿದೆ.

Image for representative purposes.
Image for representative purposes.

ಹೈಕೋರ್ಟ್‌ನಲ್ಲಿ ವಕೀಲಿ ವೃತ್ತಿಯಲ್ಲಿ ತೊಡಗಿರುವ ಪಿ ಎಸ್‌ ಪ್ರಭು ಅವರು ಸಲ್ಲಿಸಿರುವ ಅರ್ಜಿಯಲ್ಲಿ ಜ. 4ರಂದು ತಮಿಳುನಾಡು ಸರ್ಕಾರ ಹೊರಡಿಸಿರುವ ಆದೇಶ ಕೇಂದ್ರ ಆರೋಗ್ಯ ಸಚಿವಾಲಯ ನೀಡಿರುವ ಮಾರ್ಗಸೂಚಿಗೆ ವಿರುದ್ಧವಾಗಿದೆ. ಮಾರ್ಗಸೂಚಿಯ ಪ್ರಕಾರ ಕಂಟೇನ್ಮೆಂಟ್‌ ವಲಯದ ಹೊರಗಿರುವ ಚಿತ್ರಮಂದಿರಗಳು ಹಾಗೂ ಮಲ್ಟಿಪ್ಲೆಕ್ಸ್‌ಗಳಲ್ಲಿ ಶೇ 50ರಷ್ಟು ಸೀಟುಗಳ ಭರ್ತಿಗೆ ಅವಕಾಶ ನೀಡಲಾಗಿದೆ. ಆಸನಗಳನ್ನು ಶೇ 100ರಷ್ಟು ಭರ್ತಿ ಮಾಡುವುದರಿಂದ ಕೋವಿಡ್‌ ಸೋಂಕು ಹರಡುವ ಸಾಧ್ಯತೆ ಹೆಚ್ಚಿರುತ್ತದೆ. ರೋಗಿಗಳ ಸಂಖ್ಯೆ ಹೆಚ್ಚಾದರೆ ಆರೋಗ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವವರು, ಪೌರಕಾರ್ಮಿಕರು ಮತ್ತಿತರರ ಮೇಲೆ ಒತ್ತಡ ಹೆಚ್ಚುತ್ತದೆ. ಇದೇ ವೇಳೆ ತುರ್ತು ಆದ್ಯತೆ ಮೇರೆಗೆ ಪ್ರಕರಣವನ್ನು ಕೈಗೆತ್ತಿಕೊಳ್ಳಲು ಮುಖ್ಯ ನ್ಯಾಯಮೂರ್ತಿ ಸಂಜೀಬ್‌ ಬ್ಯಾನರ್ಜಿ, ನ್ಯಾಯಮೂರ್ತಿಗಳಾದ ಸೆಂಥಿಲ್‌ಕುಮಾರ್‌ ರಾಮಮೂರ್ತಿ ಅವರಿದ್ದ ಪೀಠ ನಿರಾಕರಿಸಿತು.

Related Stories

No stories found.
Kannada Bar & Bench
kannada.barandbench.com