ಪತ್ರಕರ್ತ ತರುಣ್ ತೇಜ್‌ಪಾಲ್ ವಿರುದ್ಧ ಎಫ್‌ಐಆರ್ ದಾಖಲಾಗುವ ಮುನ್ನ ಸಂತ್ರಸ್ತೆ ವಕೀಲರನ್ನು ಸಂಪರ್ಕಿಸಿರುವ ಸಾಧ್ಯತೆಗಳಿದ್ದು ಅವರ ಸಹಾಯದಿಂದ ಘಟನೆಗಳನ್ನು ತಿರುಚಿರಬಹುದು ಎಂದು ಗೋವಾದ ಸೆಷನ್ಸ್ ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಮಹಿಳಾ ಸಹೋದ್ಯೋಗಿ ವಿರುದ್ಧ ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿದ್ದ ತೆಹಲ್ಕಾ ಪತ್ರಿಕೆ ಮಾಜಿ ಸಂಪಾದಕ ತೇಜ್‌ಪಾಲ್ ಅವರನ್ನು ಖುಲಾಸೆಗೊಳಿಸುವ ಸಂದರ್ಭದಲ್ಲಿ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಮಂಗಳವಾರ ತೀರ್ಪಿನ ಪ್ರತಿ ಲಭ್ಯವಾಗಿದ್ದು ಅದರ ಪ್ರಕಾರ ಸಂತ್ರಸ್ತೆ ಸ್ವತಃ ಪತ್ರಕರ್ತೆಯಾಗಿದ್ದಾರೆ. ಅತ್ಯಾಚಾರ ಮತ್ತು ಲೈಂಗಿಕ ಕಿರುಕುಳ ಕುರಿತಂತೆ ಅನೇಕ ಲೇಖನಗಳನ್ನು ಬರೆದಿದ್ದಾರೆ. ಎಫ್‌ಐಆರ್ ದಾಖಲಿಸುವ ಮುನ್ನ ಅವರು ತಮ್ಮ ಮಿತ್ರರೂ ಆಗಿರುವ ಖ್ಯಾತ ವಕೀಲೆಯರಾದ ರೆಬೆಕಾ ಜಾನ್, ಇಂದಿರಾ ಜೈಸಿಂಗ್ ಅವರನ್ನು ಸಂಪರ್ಕಿಸಿದ್ದಾರೆ. ಪ್ರಕರಣದೊಂದಿಗೆ ನಂಟು ಹೊಂದಿರುವ ಅಂದಿನ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಶಮೀನಾ ಶಫೀಕ್ ಅವರ ಜೊತೆ ಸಂಪರ್ಕದಲ್ಲಿರಲಿಲ್ಲ ಎಂದು ಸಂತ್ರಸ್ತೆ ಸುಳ್ಳು ಹೇಳಿದ್ದಾರೆ ಎಂದು ನ್ಯಾಯಾಲಯ ಹೇಳಿದೆ.
ಕೋವಿಡ್ ನಿರ್ವಹಣೆ ಸಮಸ್ಯೆಗಳ ಕುರಿತಂತೆ ದಾಖಲಿಸಿಕೊಂಡಿರುವ ಸ್ವಯಂಪ್ರೇರಿತ ಮೊಕದ್ದಮೆಯ ವಿಚಾರಣೆ ನಡೆಸುತ್ತಿರುವ ಗುಜರಾತ್ ಹೈಕೋರ್ಟ್ ಕೋವಿಡ್ ಲಸಿಕೆ ಖರೀದಿಗೆ ರಾಜ್ಯ ಸರ್ಕಾರ ಪಂಚವಾರ್ಷಿಕ ಯೋಜನೆ ಹಮ್ಮಿಕೊಂಡಿರುವಂತೆ ತೋರುತ್ತದೆ ಎಂದು ಟೀಕಿಸಿದೆ.
ಮೇ ತಿಂಗಳಲ್ಲಿ ರಾಜ್ಯಕ್ಕೆ 16 ಲಕ್ಷ ಲಸಿಕೆ ದೊರೆತಿದ್ದು ಜೂನ್‌ನಲ್ಲಿ 10.7 ಲಕ್ಷ ಲಸಿಕೆ ದೊರೆಯಲಿದೆ ಎಂದು ಅಡ್ವೊಕೇಟ್ ಜನರಲ್ ಕಮಲ್ ತ್ರಿವೇದಿ ಅವರು ನ್ಯಾಯಾಲಯಕ್ಕೆ ತಿಳಿಸಿದ ಬಳಿಕ ನ್ಯಾಯಮೂರ್ತಿಗಳಾದ ಬೇಲಾ ಎಂ ತ್ರಿವೇದಿ ಮತ್ತು ಭಾರ್ಗವ್ ಡಿ ಕರಿಯಾ ಅವರಿದ್ದ ಪೀಠ ಈ ಅಭಿಪ್ರಾಯವ್ಯಕ್ತಪಡಿಸಿತು. ಇದೇ ವೇಳೆ ನ್ಯಾಯಾಲಯ ಲಸಿಕೆ ಖರೀದಿಗೆ ಜಾಗತಿಕ ಟೆಂಡರ್ ಕರೆಯುವ ಕುರಿತು ಮಾಹಿತಿ ಪಡೆಯಿತು.
ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ವಿರುದ್ದ ಆಕ್ಷೇಪಾರ್ಹ ಮತ್ತು ಅಶ್ಲೀಲ ಪೋಸ್ಟ್ ಹಾಕಿರುವ ಆರೋಪಕ್ಕೆ ಸಂಬಂಧಿಸಿದಂತೆ ಪ್ರಾಧ್ಯಾಪಕ ಡಾ. ಶಹರ್ಯಾರ್ ಅಲಿ ಅವರ ಜಾಮೀನು ಅರ್ಜಿಯನ್ನು ಅಲಾಹಾಬಾದ್ ಹೈಕೋರ್ಟ್ ತಿರಸ್ಕರಿಸಿದೆ. ವಿವಿಧ ಸಮುದಾಯಗಳ ನಡುವೆ ದ್ವೇಷ ಬಿತ್ತುವ ಅಥವಾ ಬಿತ್ತುವ ಸಾಧ್ಯತೆ ಪೋಸ್ಟ್‌ನಲ್ಲಿರುವ ಕಂಟೆಂಟ್‌ಗೆ ಇದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಅರ್ಜಿದಾರರು ಕಾಲೇಜೊಂದರ ಹಿರಿಯ ಬೋಧಕರಾಗಿದ್ದು, ವಿಭಾಗದ ಮುಖ್ಯಸ್ಥರು ಕೂಡ ಆಗಿದ್ದಾರೆ ಎಂಬ ಅಂಶವನ್ನು ಗಮನಿಸಿ ಮೇಲ್ನೋಟಕ್ಕೆ ಅವರ ನಡವಳಿಕೆ ನಿರೀಕ್ಷಣಾ ಜಾಮೀನು ಪಡೆಯಲು ಅರ್ಹವಾಗಿರುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ. ಅಶ್ಲೀಲ ಪೋಸ್ಟ್ ಹಾಕಿದ್ದರ ವಿರುದ್ಧ ಬಿಜೆಪಿಯ ನಾಯಕರೊಬ್ಬರು ಅಲಿ ಅವರ ವಿರುದ್ಧ ದೂರು ನೀಡಿದ್ದರು.