ಕಿರಿಯ ಮಹಿಳಾ ಸಹೋದ್ಯೋಗಿಯ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ತೆಹಲ್ಕಾ ನಿಯತಕಾಲಿಕೆಯ ಮಾಜಿ ಸಂಪಾದಕ ತರುಣ್ ತೇಜ್‌ಪಾಲ್ ನಿರ್ದೋಷಿ ಎಂದು ಘೋಷಿಸಿದ್ದ ಗೋವಾ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ರಾಜ್ಯ ಸರ್ಕಾರವು ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಲ್ಲಿ ಮೇಲ್ಮನವಿ ಸಲ್ಲಿಸಿದೆ.
ತೇಜ್‌ಪಾಲ್ ನಿರ್ದೋಷಿ ಎಂದು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರಾದ ಕ್ಷಮಾ ಜೋಶಿ ತೀರ್ಪು ಪ್ರಕಟಿಸಿದರು. ಅತ್ಯಾಚಾರ ಸೇರಿದಂತೆ ವಿವಿಧ ಅಪರಾಧಗಳ ಅಡಿ ತೇಜ್‌ಪಾಲ್ ವಿರುದ್ಧ ಗೋವಾ ಪೊಲೀಸರು ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಿಕೊಂಡಿದ್ದರು. 2013ರ ನವೆಂಬರ್‌ನಲ್ಲಿ ಬಂಧಿತರಾಗಿದ್ದ ತೇಜ್‌ಪಾಲ್ ಅವರು 2014ರ ಜುಲೈನಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.
ನ್ಯಾಯಮೂರ್ತಿಗಳ ಮೇಲೆ ಅಪಾರವಾದ ನ್ಯಾಯಿಕ ಕೆಲಸದ ಒತ್ತಡವಿದೆ. ಹೀಗಾಗಿ ಕರಡು ತಿದ್ದುವಿಕೆಯಲ್ಲಿ (ಪ್ರೂಫ್‌ರೀಡಿಂಗ್) ಅವರು ಹೆಚ್ಚು ಸಮಯ ಮತ್ತು ಶಕ್ತಿ ವ್ಯಯಿಸಬೇಕು ಎಂದು ಬಯಸುವುದು ಸರಿಯಲ್ಲ ಎಂದು ಈಚೆಗೆ ಮದ್ರಾಸ್ ಹೈಕೋರ್ಟ್‌ನ ಮದುರೈ ಪೀಠ ಹೇಳಿದೆ. ಮೇಲ್ಮನವಿಯನ್ನು ವಿಚಾರಣೆಗೆ ಪರಿಗಣಿಸುವಾಗ ಹೈಕೋರ್ಟ್ ರೂಪಿಸಿದ ಕಾನೂನಿನ ಪ್ರಶ್ನೆಗಳಲ್ಲಿ ಗಂಭೀರ ವ್ಯಾಕರಣ ದೋಷಗಳು ಕಂಡುಬಂದ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ಜಿ ಆರ್ ವಿಶ್ವನಾಥನ್ ಅವರಿದ್ದ ಏಕಸದಸ್ಯ ಪೀಠ ಮೇಲಿನಂತೆ ಹೇಳಿದೆ.
“ನ್ಯಾಯಮೂರ್ತಿಗಳ ಮೇಲೆ ಅಪಾರವಾದ ನ್ಯಾಯಿಕ ಕೆಲಸದ ಒತ್ತಡವಿದೆ. ಹೀಗಾಗಿ ಕರಡು ತಿದ್ದುವಿಕೆಯಲ್ಲಿ ಅವರು ಹೆಚ್ಚು ಸಮಯ ಮತ್ತು ಶಕ್ತಿ ವ್ಯಯಿಸಬೇಕು ಎಂದು ಬಯಸುವುದು ಸರಿಯಲ್ಲ. ವಕೀಲರು ಈ ವಿಚಾರದಲ್ಲಿ ಹೆಚ್ಚಿನ ಜವಾಬ್ದಾರಿ ತೆಗೆದುಕೊಳ್ಳಬೇಕು. ವಕೀಲರು ಆಳವಾಗಿ ಪ್ರಕರಣದ ದಾಖಲೆಯನ್ನು ಅಧ್ಯಯನ ಮಾಡಬೇಕು” ಎಂದು ಹೈಕೋರ್ಟ್ ಹೇಳಿದೆ. ಪ್ರಧಾನ ಜಿಲ್ಲಾ ನ್ಯಾಯಾಲಯವು 2012ರ ಸೆಪ್ಟೆಂಬರ್ 17ರಂದು ಹೊರಡಿಸಿದ್ದ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿಯ ವಿಚಾರಣೆಯನ್ನು ಪೀಠ ನಡೆಸಿತು.