ಗುಜರಾತ್ ಹೈಕೋರ್ಟ್‌ಗೆ 60 ವರ್ಷ ಪೂರ್ಣಗೊಂಡಿರುವ ಸ್ಮರಣಾರ್ಥ ಶನಿವಾರ ಅಂಚೆಚೀಟಿ ಬಿಡುಗಡೆ ಮಾಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಎಂ ಆರ್ ಶಾ ಅವರು “ಅತ್ಯಂತ ಜನಪ್ರಿಯ, ಪ್ರೀತಿಪಾತ್ರ, ಸ್ಪಂದನಾಶೀಲ ಹಾಗೂ ದೂರದೃಷ್ಟಿಯ ನಾಯಕ ಪ್ರಧಾನಿ ನರೇಂದ್ರಭಾಯಿ ಮೋದಿ. ಈ ಕಾರ್ಯಕ್ರಮದ ಭಾಗವಾಗಿರುವುದು ಬಹಳ ವಿಶೇಷ ಸುಯೋಗ ಎಂದು ನಾನು ಭಾವಿಸುತ್ತೇನೆ” ಎಂಬುದಾಗಿ ತಿಳಿಸಿದ್ದಾರೆ. ಅಲ್ಲದೆ, ಕಾರ್ಯಕ್ರಮಕ್ಕೆ ಹಾಜರಾಗಿ ಅಂಚೆಚೀಟಿ ಬಿಡುಗಡೆ ಮಾಡಿದ್ದಕ್ಕಾಗಿ ನ್ಯಾಯಮೂರ್ತಿ ಶಾ ಅವರು ಪ್ರಧಾನಿ ಮೋದಿ ಅವರಿಗೆ ಧನ್ಯವಾದ ಅರ್ಪಿಸಿದರು. ತಾವು ಗುಜರಾತ್ ಹೈಕೋರ್ಟ್‌ನಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿರುವುದನ್ನು ಸ್ಮರಿಸಿದ ಅವರು “ತುರ್ತುಪರಿಸ್ಥಿತಿಯ ಕರಾಳ ದಿನಗಳಲ್ಲಿಯೂ ಈ ನ್ಯಾಯಾಲಯದ ನ್ಯಾಯಾಧೀಶರು ಮಾನವ ಹಕ್ಕುಗಳ ರಕ್ಷಣೆ ಮತ್ತು ನ್ಯಾಯಾಂಗದ ಸ್ವಾತಂತ್ರ್ಯದ ಪರವಾಗಿ ನಿಂತರು," ಎಂದು ಶ್ಲಾಘಿಸಿದರು.
ಪ್ರಧಾನಿ ಮೋದಿ ಅವರು ಮಾತನಾಡಿ “ಭಾರತದಲ್ಲಿ ನ್ಯಾಯಾಂಗ ವ್ಯವಸ್ಥೆಯು ಭವಿಷ್ಯದ ದಿನಮಾನಗಳಿಗೆ ಸಿದ್ಧವಾಗಿದೆ" ಎಂದರು. ನ್ಯಾಯಾಂಗ ವಿಳಂಬ ತಗ್ಗಿಸಲು ಕೃತಕ ಬುದ್ಧಿಮತ್ತೆಯ ಸಾಧ್ಯತೆಗಳನ್ನು ಅವರು ಈ ಸಂದರ್ಭದಲ್ಲಿ ಒತ್ತಿಹೇಳಿದರು. ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್, ಗುಜರಾತ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಕ್ರಂನಾಥ್, ನ್ಯಾಯವಾದಿ ಕಮಲ್ ತ್ರಿವೇದಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ತನಗೆ ಬೇಕಾದ ಪೀಠವನ್ನು ಕೋರಿ ಬೆದರಿಕೆಯೊಡ್ಡಲು ದಾವೆದಾರನಿಗೆ ಅನುಮತಿ ಇಲ್ಲ ಎಂದು ಸುಪ್ರೀಂಕೋರ್ಟ್ ಶುಕ್ರವಾರ ತಿಳಿಸಿದೆ. ವಿಚಾರಣೆಯಿಂದ ನ್ಯಾ. ಡಿ ವೈ ಚಂದ್ರಚೂಡ್ ಅವರನ್ನು ಹಿಂಪಡೆಯಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾ. ಚಂದ್ರಚೂಡ್ ಮತ್ತು ಎಂ ಆರ್ ಶಾ ಅವರಿದ್ದ ಪೀಠ ತಿರಸ್ಕರಿಸಿದೆ.
“ಈ ಹಿಂದಿನ ಆದೇಶ ಅರ್ಜಿದಾರರ ಪರವಾಗಿ ಬಂದಿರಲಿಲ್ಲ ಎಂದ ಮಾತ್ರಕ್ಕೆ ಅದು ನ್ಯಾಯಮೂರ್ತಿಗಳನ್ನು ಹಿಂಪಡೆಯಬೇಕು ಎಂಬುದಕ್ಕೆ ವೇದಿಕೆಯಾಗಲಾರದು” ಎಂದು ನ್ಯಾಯಾಲಯ ಹೇಳಿತು. ಅಲ್ಲದೆ ಅರ್ಹತೆಯ ಕಾರಣಕ್ಕೆ ನ್ಯಾಯಾಲಯ ಪ್ರಕರಣವನ್ನು ವಜಾಗೊಳಿಸಿತು. ಕಳೆದ ಸೆಪ್ಟಂಬರ್‌ನಲ್ಲಿಯೂ ಅರ್ಜಿದಾರೆ ನೀಲಂ ಮನಮೋಹನ್ ಅತ್ತಾವರ್ ಇದೇ ಬಗೆಯ ಬೇಡಿಕೆ ಇಟ್ಟಿದ್ದರು. ಆಗಲೂ ನ್ಯಾಯಾಲಯ ಅದನ್ನು ತಿರಸ್ಕರಿಸಿತ್ತು. ಅದೇ ಬಗೆಯ ಪರಿಹಾರ ಬಯಸುವ ಹೊಸ ಅರ್ಜಿಯನ್ನು ಪುರಸ್ಕರಿಸಲಾಗುವುದಿಲ್ಲ ಎಂದು ನ್ಯಾಯಪೀಠ ಹೇಳಿದೆ.
ಕೊರೊನಾ ವಿರುದ್ಧ ಮುಂಚೂಣಿ ಹೋರಾಟದಲ್ಲಿ ತೊಡಗಿಸಿಕೊಂಡಿದ್ದ ತಮ್ಮ ಪತಿಯ ಸಾವಿಗೆ ಕೋವಿಡ್-19 ಲಸಿಕೆ ಕಾರಣವಿರಬಹುದು ಎಂದು ತಮಿಳುನಾಡಿನ ಮಹಿಳೆಯೊಬ್ಬರು ಅರ್ಜಿ ಸಲ್ಲಿಸಿದ್ದು ಈ ಹಿನ್ನೆಲೆಯಲ್ಲಿ ಲಸಿಕಾ ನಂತರದ ಪ್ರತಿಕೂಲ ಪರಿಣಾಮ (ಎಇಎಫ್‌ಐ) ಮಾರ್ಗಸೂಚಿಯಂತೆ ವ್ಯಕ್ತಿಯ ಶವ ಪರೀಕ್ಷೆ ನಡೆಸಲು ಮದ್ರಾಸ್ ಹೈಕೋರ್ಟ್ ತಿಳಿಸಿದೆ. ನ್ಯಾಯಮೂರ್ತಿಗಳಾದ ಎಂ ಎಂ ಸುಂದರೇಶ್ ಮತ್ತು ಎಸ್ ಆನಂದಿ ಅವರಿದ್ದ ಪೀಠ ಪ್ರಕರಣ ಕೇವಲ ಶಂಕೆಯ ಹಂತದಲ್ಲಿದ್ದರೂ ಅಧಿಕಾರಿಗಳು ಎಇಎಫ್‌ಐ ಮಾರ್ಗಸೂಚಿಗಳನ್ನು ಅನುಸರಿಸಬೇಕು ಎಂದು ಸೂಚಿಸಿದೆ.
ಶಸ್ತ್ರಚಿಕಿತ್ಸಕ, ರೋಗಶಾಸ್ತ್ರಜ್ಞ ಮತ್ತು ವಿಧಿವಿಜ್ಞಾನ ತಜ್ಞರನ್ನು ಒಳಗೊಂಡ ವೈದ್ಯರ ತಂಡ ಶವಪರೀಕ್ಷೆ ಮಾಡಬೇಕು ಎಂದು ಮಾರ್ಗಸೂಚಿಯ 2015ರ ಆವೃತ್ತಿ ಹೇಳುತ್ತದೆ. ಕೋವಿಡ್ 19 ಲಸಿಕೆಗಳ ಸಂಬಂಧ ಬಿಡುಗಡೆ ಮಾಡಿರುವ ಮಾರ್ಗಸೂಚಿ ಪ್ರಕಾರ ಎಇಎಫ್‌ಐ ಪ್ರಕರಣಗಳ ಬಗ್ಗೆ ತನಿಖೆ ನಡೆಸಬೇಕು ಎಂದು ವಿಚಾರಣೆ ವೇಳೆ ತಿಳಿಸಲಾಯಿತು. ಈ ವಾದ ಪರಿಗಣಿಸಿದ ನ್ಯಾಯಾಲಯ ಗುರುವಾರ ವಿರುಧುನಗರ ಜಿಲ್ಲೆಯ ಅರುಪುಕೊಟ್ಟೈ ಸರ್ಕಾರಿ ಆಸ್ಪತ್ರೆಯ ಮುಖ್ಯಸ್ಥರಿಗೆ ಎಇಎಫ್‌ಐ ಮಾರ್ಗಸೂಚಿಗಳಂತೆ ಶವಪರೀಕ್ಷೆ ನಡೆಸಲು ಸೂಚಿಸಿತು.
ಬಿಯರ್ಸ್‌ಡಾರ್ಫ್ ಎಜಿ ಕಂಪೆನಿಯ ನಿವಿಯಾಗೆ ಹೋಲುವ ಸೌಂದರ್ಯವರ್ಧಕ ಉತ್ಪನ್ನಗಳ ಬಳಕೆ, ತಯಾರಿಕೆ, ಮಾರಾಟ, ಜಾಹೀರಾತು, ನೇರ ಅಥವಾ ಪರೋಕ್ಷ ವ್ಯವಹಾರ ಮಾಡದಂತೆ ಜಾಯ್ ಬ್ರಾಂಡ್ ಹೆಸರಿನಡಿ ಕಾರ್ಯ ನಿರ್ವಹಿಸುವ ಆರ್‌ಎಸ್‌ಎಚ್ ಗ್ಲೋಬಲ್ ಪ್ರೈವೇಟ್ ಲಿಮಿಟೆಡ್‌ಗೆ ದೆಹಲಿ ಹೈಕೋರ್ಟ್ ನಿರ್ಬಂಧ ವಿಧಿಸಿದೆ. ನ್ಯಾಯಮೂರ್ತಿ ಸಿ ಹರಿಶಂಕರ್ ಅವರಿದ್ದ ಏಕಸದಸ್ಯ ಪೀಠ ಜಾಯ್ ಇಂಟೆನ್ಸ್ ಮಾಯಿಶ್ಚರ್ ಲೋಷನ್‌ನ ಆಕಾರ ಗಾತ್ರ ಮತ್ತು ಬಣ್ಣ ನಿವಿಯಾದೊಂದಿಗೆ ಏಕರೂಪತೆ ಹೊಂದಿಲ್ಲದೆ ಹೋದರೂ ಹೋಲಿಕೆಯಾಗುವಂತಿದೆ ” ಎಂದು ಅಭಿಪ್ರಾಯಪಟ್ಟಿತು.
“ಮೇಲ್ನೋಟಕ್ಕೆ ಸಾಧಾರಣ ಬುದ್ಧಿಮತ್ತೆಯ, ಅಷ್ಟಾಗಿ ಸ್ಮರಣಶಕ್ತಿ ಇರದ ಅಜಾಗರೂಕ ಖರೀದಿದಾರನಿಗೆ ಈ ಎರಡು ಉತ್ಪನ್ನಗಳ ನಡುವೆ ಗೊಂದಲ ಮೂಡುತ್ತದೆ," ಎಂದು ನ್ಯಾಯಾಲಯ ಹೇಳಿದೆ. ತನ್ನದೇ ಉತ್ಪನ್ನವಾದ ಕೊಕೊ ಬಟರ್ ಮಾಯಿಶ್ಚರೈಜರನ್ನು ಹೋಲುವ ವಾಣಿಜ್ಯ ಪೋಷಾಕು ತೊಟ್ಟು ಜಾಯ್ ಇಂಟೆನ್ಸ್ ಮಾಯಿಶ್ಷರ್ ಮಾರುಕಟ್ಟೆಗೆ ಇಳಿದ ಹಿನ್ನೆಲೆಯಲ್ಲಿ ಬಿಯರ್ಸ್‌ಡಾರ್ಫ್ ಎಜಿ ಕಂಪೆನಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಿತ್ತು.