ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು | 27-2-2021

>> ವಕೀಲನ ಹತ್ಯೆಗೆ ತತ್ತರಿಸಿದ ಹೊಸಪೇಟೆ >> ʼಯುವ ರೈತ ಗುಂಡೇಟಿನಿಂದ ಸಾಯಲಿಲ್ಲʼ >> ವಾಟ್ಸಾಪ್‌ ಗ್ರೂಪ್‌ ಬಳಸದಿರಲು ಸುಪ್ರೀಂ ನಿರ್ಧಾರ >> ಅಧಿಕೃತ ಟೆಲಿಗ್ರಾಂ ಚಾನೆಲ್‌ ಆರಂಭಿಸಿದ ಗುಜರಾತ್‌ ಹೈಕೋರ್ಟ್‌
ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು | 27-2-2021

ಹೊಸಪೇಟೆಯ ನ್ಯಾಯಾಲಯದ ಆವರಣದಲ್ಲಿಯೇ ವಕೀಲ ತಾರಿಹಳ್ಳಿ ವೆಂಕಟೇಶ್‌ ಬರ್ಬರ ಹತ್ಯೆ

ವಿಜಯನಗರ ಜಿಲ್ಲಾಕೇಂದ್ರ ಹೊಸಪೇಟೆಯ ಸಿವಿಲ್‌ ಮತ್ತು ಜಿಎಂಎಫ್‌ಸಿ ನ್ಯಾಯಾಲಯದ ಆವರಣದಲ್ಲಿ ಶನಿವಾರ ವಕೀಲ ತಾರಿಹಳ್ಳಿ ವೆಂಕಟೇಶ್‌ ಅವರನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ತೀವ್ರ ಗಾಯಗೊಂಡ ವೆಂಕಟೇಶ್‌ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಹತ್ಯೆ ಮಾಡಿದ ವೆಂಕಟೇಶ್‌ ಸಂಬಂಧಿ ಮನೋಜ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೌಟುಂಬಿಕ ಕಲಹವೇ ಹತ್ಯೆಗೆ ಕಾರಣ ಎನ್ನಲಾಗಿದೆ.

 Murder
Murder

ವೆಂಕಟೇಶ್‌ ನೋಟರಿ ಮಾಡುತ್ತಿದ್ದ ಸಂದರ್ಭದಲ್ಲಿ ನ್ಯಾಯಾಲಯದ ಆವರಣದಲ್ಲಿ ಕೊಲೆ ನಡೆಯಿತು. ದೊಡ್ಡಪ್ಪ ವೆಂಕಟೇಶ್‌ ತನ್ನ ಉದ್ಯೋಗಕ್ಕೆ ನಾಲ್ಕು ಬಾರಿ ಕಂಟಕ ತಂದಿದ್ದ ವಿಚಾರವನ್ನು ಮನೋಜ್‌ ಬಹಿರಂಗಪಡಿಸಿದ್ದಾನೆ. ಘಟನೆಯಿಂದ ಕೋರ್ಟ್‌ ಆವರಣದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಹೊಸಪೇಟೆ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಟ್ರಾಕ್ಟರ್ ಮೆರವಣಿಗೆ‌ ವೇಳೆ ಯುವ ರೈತ ಮೃತಪಟ್ಟಿದ್ದು ಗುಂಡೇಟಿನಿಂದಲ್ಲ: ದೆಹಲಿ ಪೊಲೀಸರು

ದೆಹಲಿಯಲ್ಲಿ ಜನವರಿ 26ರಂದು ನಡೆದ ಟ್ರಾಕ್ಟರ್‌ ರ‍್ಯಾಲಿ ವೇಳೆ 25 ವರ್ಷದ ಪ್ರತಿಭಟನಾಕಾರ ರೈತ ಮೃತಪಟ್ಟಿದ್ದು ಗುಂಡೇಟಿನಿಂದಲ್ಲ ಎಂದು ಪೊಲೀಸರು ದೆಹಲಿ ಹೈಕೋರ್ಟ್‌ಗೆ ತಿಳಿಸಿದ್ದಾರೆ. ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯಾಧಿಕಾರಿಗಳ ವರದಿ ಕುರಿತಂತೆ ನ್ಯಾಯಾಲಯಕ್ಕೆ ಅಫಿಡವಿಟ್‌ ಸಲ್ಲಿಸಲಾಗಿದೆ. ತಲೆಗೆ ಪೆಟ್ಟು ಬಿದ್ದು ನವ್ರೀತ್‌ ಸಿಂಗ್‌ ಎಂಬ ಯುವಕ ಮೃಪಟ್ಟಿರುವುದನ್ನು ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯಾಧಿಕಾರಿಗಳು ದಾಖಲೆ ಸಲ್ಲಿಸಿದ್ದಾರೆ ಎಂದು ಅಫಿಡವಿಟ್‌ನಲ್ಲಿ ಹೇಳಲಾಗಿದೆ.

ಪೊಲೀಸರು ಗುಂಡು ಸಿಡಿಸಿರುವುದಕ್ಕೆ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಕೂಡ ಯಾವುದೇ ಪುರಾವೆ ಇಲ್ಲ. ಅಪಘಾತವೇ ವ್ಯಕ್ತಿಯ ಸಾವಿಗೆ ಕಾರಣ. ಪೆಟ್ಟು ತಗುಲಿದ ವ್ಯಕ್ತಿಯನ್ನು ಪ್ರತಿಭಟನಾಕಾರರು ಆಸ್ಪತ್ರೆಗೆ ಕರೆದೊಯ್ಯಲಿಲ್ಲ. ಬದಲಿಗೆ ಪೊಲೀಸರೇ ರೈತನನ್ನು ಕೊಂದಿರುವುದಾಗಿ ವದಂತಿಗಳನ್ನು ಹಬ್ಬಿಸತೊಡಗಿದರು. ಅಂತಹ ಪ್ರತಿಭಟನಾಕಾರರನ್ನು ಗುರುತಿಸಲಾಗಿದ್ದು ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ. ಪ್ರಕರಣದ ವಿಚಾರಣೆಯನ್ನು ಮಾರ್ಚ್‌ 4ಕ್ಕೆ ನಿಗದಿಪಡಿಸಲಾಗಿದೆ.

ಸಾಮಾಜಿಕ ಮಾಧ್ಯಮಗಳಿಗೆ ಮೂಗುದಾರ: ವಾಟ್ಸಾಪ್‌ ಮೂಲಕ  ವರ್ಚುವಲ್‌ ಕಲಾಪದ ಲಿಂಕ್‌ ಹಂಚಿಕೊಳ್ಳದಿರಲು ಸುಪ್ರೀಂ ಕೋರ್ಟ್‌ ನಿರ್ಧಾರ

ನ್ಯಾಯಾಲಯದ ವಿಚಾರಣೆಗಳಿಗಾಗಿ ವರ್ಚುವಲ್‌ ಕಲಾಪದ ಲಿಂಕ್‌ಗಳನ್ನು ಹಂಚಿಕೊಳ್ಳಲು ಸುಪ್ರೀಂಕೋರ್ಟ್‌ ಇನ್ನು ಮುಂದೆ ವಾಟ್ಸಾಪ್‌ ಗ್ರೂಪ್‌ಗಳನ್ನು ಬಳಸುವುದಿಲ್ಲ. ಅಂತಹ ಲಿಂಕ್‌ಗಳನ್ನು ಇನ್ನು ಮುಂದೆ ನೋಂದಾಯಿತ ಇಮೇಲ್ ಐಡಿಗಳಲ್ಲಿ ಮತ್ತು ಸಂಬಂಧಪಟ್ಟ ವಕೀಲರ ನೋಂದಾಯಿತ ಮೊಬೈಲ್‌ ಸಂಖ್ಯೆಗಳಿಗೆ ಮಾತ್ರ ಕಳುಹಿಸಲಾಗುವುದು. ನ್ಯಾಯಾಲಯ ಶನಿವಾರ ಹೊರಡಿಸಿರುವ ಸುತ್ತೋಲೆ ಪ್ರಕಾರ ಕೇಂದ್ರ ಸರ್ಕಾರ ಹೊಸದಾಗಿ ಹೊರಡಿಸಿರುವ 2021ರ ಮಾಹಿತಿ ತಂತ್ರಜ್ಞಾನ ನಿಯಮಗಳನ್ನು ಗಮನದಲ್ಲಿಟ್ಟುಕೊಂಡು ಈ ಕ್ರಮ ಕೈಗೊಳ್ಳಲಾಗಿದೆ.

ಹೊಸ ನಿಯಮಗಳನ್ನು ಫೆ 25ರಂದು ಜಾರಿಗೆ ತರಲಾಗಿತ್ತು. 2000ರ ಮಾಹಿತಿ ತಂತ್ರಜ್ಞಾನ ಕಾಯಿದೆಯ ಸೆಕ್ಷನ್ 79 (2) (ಸಿ) ಮತ್ತು ಸೆಕ್ಷನ್ 69 ಎ (2)ರಿಂದ ನೀಡಲಾದ ಅಧಿಕಾರಗಳಿಗೆ ಅನುಸಾರವಾಗಿ ರೂಪಿಸಲಾದ ನಿಯಮ, ಚಲನಚಿತ್ರ ಮತ್ತು ವೆಬ್‌ ಸರಣಿಯಂತಹ ಇತರೆ ಮನರಂಜನಾ ಕಾರ್ಯಕ್ರಮಗಳನ್ನು ವರ್ಗೀಕರಿಸುತ್ತದೆ. ಡಿಜಿಟಲ್‌ ಸುದ್ದಿ ವೇದಿಕೆಗಳನ್ನು ನಿಯಮದ ವ್ಯಾಪ್ತಿಗೆ ತರುತ್ತದೆ. ಮುದ್ರಣ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳೂ ಸೇರಿದಂತೆ ಸಾಮಾಜಿಕ ಮಾಧ್ಯಮ ಮಧ್ಯವರ್ತಿಗಳನ್ನು ನಿಯಂತ್ರಿಸುತ್ತದೆ.

ಸುತ್ತೋಲೆ, ವ್ಯಾಜ್ಯ ಪಟ್ಟಿ, ನೋಟಿಸ್‌ ನೀಡಲು ಅಧಿಕೃತ ಟೆಲಿಗ್ರಾಂ ಚಾನೆಲ್‌ ಆರಂಭಿಸಿದ ಗುಜರಾತ್‌ ಹೈಕೋರ್ಟ್‌

ವಕೀಲರು, ದಾವೆದಾರರು ಮತ್ತು ಸಂಬಂಧಪಟ್ಟವರಿಗೆ ಎದುರಾಗುವ ಸಮಸ್ಯೆಗಳನ್ನು ಕಡಿಮೆ ಮಾಡಿ, ಚಟುವಟಿಕೆಯನ್ನು ಸರಾಗಗೊಳಿಸುವ ಉದ್ದೇಶದಿಂದ ಗುಜರಾತ್‌ ಹೈಕೋರ್ಟ್‌ ಅಧಿಕೃತ ಟೆಲಿಗ್ರಾಂ ಚಾನೆಲ್‌ ಅನ್ನು ಆರಂಭಿಸಿದೆ. ಮುಖ್ಯ ನ್ಯಾಯಮೂರ್ತಿ ವಿಕ್ರಮ್‌ ನಾಥ್‌ ಸಲಹೆ ಮೇರೆಗೆ ಇದನ್ನು ಆರಂಭಿಸಲಾಗಿದ್ದು, ಪ್ರತಿದಿನದ ವ್ಯಾಜ್ಯ ಪಟ್ಟಿ, ನೋಟಿಸ್‌, ಸುತ್ತೋಲೆ, ಮಾಧ್ಯಮ ಪ್ರಕಟಣೆ ಮತ್ತು ಯೂಟ್ಯೂಬ್‌ ನೇರಪ್ರಸಾರದ ಸ್ಟ್ರೀಮಿಂಗ್ ಲಿಂಕ್‌ಗಳನ್ನು ಮಾರ್ಚ್‌‌ 1ರಿಂದ ನೀಡಲಾಗುವುದು ಎಂದು ಹೇಳಲಾಗಿದೆ.

Gujarat High Court, Telegram
Gujarat High Court, Telegram

ಮುಂದಿನ ದಿನಗಳಲ್ಲಿ ವಕೀಲರ ವ್ಯಾಜ್ಯಗಳ ಪಟ್ಟಿ, ಪ್ರಕರಣದ ಸ್ಥಿತಿಗತಿ, ಆದೇಶಗಳು ಮತ್ತು ತೀರ್ಪು ಇತ್ಯಾದಿ ಮಾಹಿತಿಯನ್ನು ಒದಗಿಸಲಾಗುವುದು ಎಂದು ಮಾಧ್ಯಮ ಹೇಳಿಕೆಯಲ್ಲಿ ತಿಳಿಸಲಾಗಿದೆ. ಅಧಿಕೃತ ಟೆಲಿಗ್ರಾಂ ಚಾನೆಲ್‌ ಹೊಂದಿದ ಮೊದಲ ಹೈಕೋರ್ಟ್‌ ಗುಜರಾತ್‌ ಹೈಕೋರ್ಟ್‌ ಎಂಬ ಹಿರಿಮೆಗೆ ಪಾತ್ರವಾಗಿದೆ. ನ್ಯಾಯಾಲಯದ ಕಲಾಪಗಳನ್ನು ನೇರಪ್ರಸಾರ ಮಾಡಿದ ಪ್ರಥಮ ಹೈಕೋರ್ಟ್‌ನ ಗರಿಮೆಯನ್ನೂ ಅದು ಈ ಹಿಂದೆ ತನ್ನದಾಗಿಸಿಕೊಂಡಿದೆ.

Related Stories

No stories found.
Kannada Bar & Bench
kannada.barandbench.com