ಜಮ್ಮು ಮತ್ತು ಕಾಶ್ಮೀರದಲ್ಲಿ 4ಜಿ ಮೊಬೈಲ್ ಇಂಟರ್‌ನೆಟ್ ಸೇವೆ ಆರಂಭಿಸಲು ಜಮ್ಮು ಮತ್ತು ಕಾಶ್ಮೀರ ಸರ್ಕಾರ ನಿರ್ಧರಿಸಿದೆ. “ಇಡೀ ಜಮ್ಮು ಮತ್ತು ಕಾಶ್ಮೀರದಲ್ಲಿ 4ಜಿ ಮೊಬೈಲ್ ಇಂಟರ್‌ನೆಟ್ ಸೇವೆ ಪುನರ್ ಸ್ಥಾಪಿಸಲಾಗುವುದು” ಎಂದು ಜಮ್ಮು ಮತ್ತು ಕಾಶ್ಮೀರದ ಅಧಿಕೃತ ವಕ್ತಾರ ರೋಹಿತ್ ಕನ್ಸಲ್ ಟ್ವೀಟ್ ಮಾಡಿದ್ದಾರೆ.
ಜಮ್ಮ ಮತ್ತು ಕಾಶ್ಮೀರಕ್ಕೆ ಸಂವಿಧಾನದ 370ನೇ ವಿಧಿಯಡಿ ಕಲ್ಪಿಸಲಾಗಿದ್ದ ವಿಶೇಷ ಸ್ಥಾನವನ್ನು ರದ್ದುಪಡಿಸುವುದಕ್ಕೂ ಮುನ್ನ ಕೇಂದ್ರ ಸರ್ಕಾರವು ಆಗಸ್ಟ್ 5ರಂದು ಇಂಟರ್‌ನೆಟ್ ಸೇವೆಗಳನ್ನು ನಿರ್ಬಂಧಿಸಿತ್ತು. ಇಂಟರ್‌ನೆಟ್ ಸೇವೆಗಳನ್ನು ಪುನರ್ ಸ್ಥಾಪಿಸುವ ಸಂಬಂಧ ಸಾಕಷ್ಟು ಕಾನೂನು ಹೋರಾಟ ಮಾಡಿದ್ದರೂ ಯಾವುದೇ ಪ್ರತಿಫಲ ದೊರೆತಿರಲಿಲ್ಲ. ವಿಶೇಷ ಸ್ಥಾನಮಾನ ರದ್ದುಪಡಿಸಿದ ಬಳಿಕ ಎದುರಾಗಬಹುದಾದ ಹೋರಾಟವನ್ನು ಹತ್ತಿಕ್ಕುವ ಸಂಬಂಧ ಇಂಟರ್‌ನೆಟ್ ಮತ್ತು ಟೆಲಿಕಮ್ಯುನಿಕೇಷನ್ ಸಂಪರ್ಕ ನಿರ್ಬಂಧಿಸಿದ್ದನ್ನು ಪ್ರಶ್ನಿಸಿ ಕಾಶ್ಮೀರ ಟೈಮ್ಸ್ ಸಂಪಾದಕರಾದ ಅನುರಾಧ ಭಾಸಿನ್ ಅವರು 2019ರ ಆಗಸ್ಟ್ 10ರಂದು ಸುಪ್ರೀಂ ಕೋರ್ಟ್‌ನಲ್ಲಿ ಮನವಿ ಸಲ್ಲಿಸಿದ್ದರು. ಇಂಟರ್‌ನೆಟ್ ಮೂಲಕ ಮಾಹಿತಿ ಪಡೆಯುವುದು ಮತ್ತು ವ್ಯಾಪಾರ-ವಹಿವಾಟು ನಡೆಸುವುದು ಮೂಲಭೂತ ಹಕ್ಕಾಗಿದ್ದು, ಜಮ್ಮು ಮತ್ತು ಕಾಶ್ಮೀರದಲ್ಲಿ ಇಂಟರ್‌ನೆಟ್‌ಗೆ ಹೇರಿರುವ ನಿರ್ಬಂಧವನ್ನು ಕಾಲಕಾಲಕ್ಕೆ ತಕ್ಕಂತೆ ಪರಿಶೀಲಿಸುವಂತೆ ಕಳೆದ ವರ್ಷದ ಜನವರಿ 10ರಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. ಬಳಿಕ, 4ಜಿ ಮೊಬೈಲ್ ಇಂಟರ್‌ನೆಟ್ ಸೇವೆ ಪುನರ್ ಸ್ಥಾಪಿಸುವಂತೆ ಕೋರಿ ಸರ್ಕಾರೇತರ ಸಂಸ್ಥೆಯಾದ ಮಾಧ್ಯಮ ವೃತ್ತಿಪರರ ಒಕ್ಕೂಟವು ಸುಪ್ರೀಂ ಕೋರ್ಟ್‌ನಲ್ಲಿ ಕಳೆದ ವರ್ಷದ ಮಾರ್ಚ್ 31ರಂದು ಮನವಿ ಸಲ್ಲಿಸಿತ್ತು.
ಹಿರಿಯ ವಕೀಲ ಆದಿತ್ಯ ಸೋಂಧಿ, ನ್ಯಾಯಾಂಗದ ಅಧಿಕಾರಿಗಳಾಗಿರುವ ರಾಜೇಂದ್ರ ಬದಾಮಿಕರ್ ಮತ್ತು ಖಾಜಿ ಜಯಬುನ್ನೀಸಾ ಮೊಹಿಯುದ್ದೀನ್ ಅವರನ್ನು ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಗಳನ್ನಾಗಿ ನೇಮಕ ಮಾಡಲು ಸುಪ್ರೀಂ ಕೋರ್ಟ್ ಕೊಲಿಜಿಯಂ ಶಿಫಾರಸ್ಸು ಮಾಡಿದೆ. ಫೆಬ್ರುವರಿ 4ರಂದು ನಡೆದ ಕೊಲಿಜಿಯಂ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
2014ರಲ್ಲಿ ಆದಿತ್ಯ ಸೋಂಧಿ ಅವರು ಹಿರಿಯ ವಕೀಲರಾಗಿ ಪದೋನ್ನತಿ ಹೊಂದಿದ್ದರು. 1998ರಲ್ಲಿ ವಕೀಲಿಕೆ ನೋಂದಣಿ ಮಾಡಿಸಿದ್ದ ಸೋಂಧಿ ಅವರು ಹಿರಿಯ ವಕೀಲ ಉದಯ್ ಹೊಳ್ಳ ಅವರ ಬಳಿ ಕೆಲಸ ಮಾಡಿದ್ದಾರೆ. ಬೆಂಗಳೂರಿನ ಭಾರತೀಯ ವಿಶ್ವವಿದ್ಯಾಲಯದ ರಾಷ್ಟ್ರೀಯ ಕಾನೂನು ಶಾಲೆಯಲ್ಲಿ ಪದವಿ ಪಡೆದಿರುವ ಸೋಂಧಿ ಅವರು ಮೈಸೂರು ವಿಶ್ವವಿದ್ಯಾಲಯದಿಂದ ರಾಜಕೀಯ ವಿಜ್ಞಾನ ವಿಷಯದಲ್ಲಿ ಪಿಎಚ್. ಡಿ ಪಡೆದಿದ್ದಾರೆ. ಇದಕ್ಕೂ ಮುನ್ನ ಬೆಂಗಳೂರು ವಿಶ್ವವಿದ್ಯಾಲಯದಿಂದ ರಾಜಕೀಯ ವಿಜ್ಞಾನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು. 2016ರಲ್ಲಿ ಅವರು ಕರ್ನಾಟಕ ಸರ್ಕಾರದಲ್ಲಿ ಹೆಚ್ಚುವರಿ ಅಡ್ವೊಕೇಟ್ ಜನರಲ್ ಆಗಿಯೂ ಕರ್ತವ್ಯ ನಿರ್ವಹಿಸಿದ್ದರು. ರಾಜೇಂದ್ರ ಬದಾಮಿಕರ್ ಅವರು ಕರ್ನಾಟಕ ಹೈಕೋರ್ಟ್‌ನಲ್ಲಿ ರಿಜಿಸ್ಟ್ರಾರ್ ಜನರಲ್ ಆಗಿದ್ದು, ಖಾಜಿ ಜಯಬುನ್ನೀಸಾ ಮೊಹಿಯುದ್ದೀನ್ ಅವರು ಹೈಕೋರ್ಟ್ ರಿಜಿಸ್ಟ್ರಾರ್ (ವಿಚಕ್ಷಣಾ ವಿಭಾಗ) ಆಗಿದ್ದಾರೆ.
ಹೆಚ್ಚಿನ ಪ್ರಕರಣಗಳನ್ನು ವಿಲೇವಾರಿ ಮಾಡುವುದನ್ನು ಖಾತರಿಪಡಿಸುವ ದೃಷ್ಟಿಯಿಂದ ನ್ಯಾಯಾಲಯದ ಪ್ರಕ್ರಿಯೆಗಳನ್ನು ಬಹಿಷ್ಕರಿಸದಂತೆ ಮತ್ತು ಕಲಾಪದಿಂದ ವಿಮುಖವಾಗದಂತೆ ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಅವರು ವಕೀಲರಿಗೆ ಮನವಿ ಮಾಡಿದ್ದಾರೆ. “ಎಷ್ಟೇ ಗಂಭೀರವಾದ ಉದ್ದೇಶವಿದ್ದರೂ ನ್ಯಾಯಾಲಯದ ಪ್ರಕ್ರಿಯೆಗಳನ್ನು ಬಹಿಷ್ಕರಿಸದಂತೆ ಮತ್ತು ವಿಚಾರಣೆಯಿಂದ ವಿಮುಖವಾಗುವ ಮೂಲಕ ಕಾನೂನುಬಾಹಿರ ಚಟುವಟಿಕೆಯಲ್ಲಿ ಭಾಗಿಯಾದಂತೆ ರಾಜ್ಯದಲ್ಲಿರುವ ಎಲ್ಲಾ ವಕೀಲರ ಸಂಘಗಳಿಗೆ ನಾನು ಮನವಿ ಮಾಡುತ್ತೇನೆ. ಹೆಚ್ಚಿನ ಸಂಖ್ಯೆಯ ಪ್ರಕರಣಗಳನ್ನು ವಿಲೇವಾರಿ ಮಾಡುವ ಸಂಬಂಧ ನ್ಯಾಯಾಲಯದ ಜೊತೆ ಸಹಕರಿಸಬೇಕು,” ಎಂದು ಸಿಜೆ ಓಕಾ ಕೋರಿದ್ದಾರೆ.
ಕಲಾಪ ಬಹಿಷ್ಕರಿಸುವುದು ನ್ಯಾಯಾಲಯದ ಆಡಳಿತದಲ್ಲಿ ಮಧ್ಯಪ್ರವೇಶಿಸಿದಂತಾಗಲಿದ್ದು, ಕಕ್ಷಿದಾರರಿಗೆ ಅನನುಕೂಲ ಮತ್ತು ಪೂರ್ವಾಗ್ರಹ ಉಂಟು ಮಾಡಲಿದೆ ಎಂದಿದ್ದಾರೆ. ಮಂಡ್ಯ, ದಾವಣಗೆರೆ ಮುಂತಾದ ಕಡೆ ಅಲ್ಲಿನ ವಕೀಲರ ಸಂಘಗಳು ಕೆಲಸದಿಂದ ಹಿಂದೆ ಸರಿಯುವಂತೆ ತಮ್ಮ ಸದಸ್ಯರಿಗೆ ಕರೆ ನೀಡಿರುವ ಮಾಹಿತಿಯನ್ನು ಜಿಲ್ಲಾ ನ್ಯಾಯಾಲಯಗಳಿಂದ ಸ್ವೀಕರಿಸಿದ ಬಳಿಕ ಹೀಗೆ ಹೇಳಿದ್ದಾರೆ.
ಹಿಂದೂ ದೇವಾಲಯಗಳು ಮತ್ತು ಹಿಂದೂ ದೇವತೆಗಳ ವಿರುದ್ಧ ಅಲಕ್ಷ್ಯದ ಹೇಳಿಕೆ ನೀಡಿದ್ದ ಕ್ರೈಸ್ತ ಧರ್ಮ ಬೋಧಕ ಮೋಹನ್ ಸಿ ಲಜಾರಸ್ ವಿರುದ್ಧದ ಎಫ್‌ಐಆರ್‌ಗಳನ್ನು ಶುಕ್ರವಾರ ರದ್ದುಗೊಳಿಸಿರುವ ಮದ್ರಾಸ್ ಹೈಕೋರ್ಟ್ ಧಾರ್ಮಿಕ ಮುಖಂಡರು ಮತ್ತೊಂದು ಧರ್ಮವನ್ನು ತುಚ್ಛವಾಗಿ ಕಾಣುವುದಕ್ಕೆ ಕಳಕಳಿ ವ್ಯಕ್ತಪಡಿಸಿದೆ. ಕ್ರೈಸ್ತ ಧರ್ಮ ಬೋಧಕ ಬೇಷರತ್ ಕ್ಷಮೆ ಯಾಚಿಸಿದ ಹಿನ್ನೆಲೆಯಲ್ಲಿ ಅವರ ವಿರುದ್ಧದ ಎಫ್‌ಐಆರ್‌ಗಳನ್ನು ನ್ಯಾಯಾಲಯ ವಜಾಗೊಳಿಸಿದೆ. “ಉತ್ತಮ ಮನುಷ್ಯರಾಗುವಂತೆ ಮಾಡುವುದು ಇಡೀ ಧರ್ಮದ ಉದ್ದೇಶ… ದುರಂತವೆಂದರೆ, ಹಲವು ಸಂದರ್ಭದಲ್ಲಿ ಜನರು ಕುರುಡಾಗಿ ತಮ್ಮ ಧಾರ್ಮಿಕ ನಂಬಿಕೆಗಳಿಗೆ ಜೋತು ಬಿದ್ದು, ಮತ್ತೊಂದು ಧರ್ಮದ ಬಗ್ಗೆ ತುಚ್ಛವಾದ ಹೇಳಿಕೆಗಳನ್ನು ನೀಡುತ್ತಾರೆ. ಆಧ್ಯಾತ್ಮಿಕತೆ ಎಂಬುದು ಒಂದು ಧರ್ಮ ಮತ್ತೊಂದು ಧರ್ಮದ ಜೊತೆ ಸ್ಪರ್ಧಿಸಿ ತಾನು ಮೇಲು ಎಂಬುದನ್ನು ತೋರಿಸುವುದಲ್ಲ ಎಂಬುದನ್ನು ಅವರು ಅರ್ಥ ಮಾಡಿಕೊಂಡಿಲ್ಲ,” ಎಂದು ನ್ಯಾಯಮೂರ್ತಿ ಎನ್ ಆನಂದ್ ವೆಂಕಟೇಶ್ ಹೇಳಿದ್ದಾರೆ.
“ಮತ್ತೊಂದು ಧಾರ್ಮಿಕ ನಂಬಿಕೆಯ ಬಗ್ಗೆ ವಿಷಕಾರುವ ಮೂಲಕ ನಿರ್ದಿಷ್ಟ ಧರ್ಮದ ಅನುಯಾಯಿಗಳಲ್ಲಿ ಮತ್ತೊಂದು ಧರ್ಮದ ಬಗ್ಗೆ ದ್ವೇಷ ಹರಡುವುದು ಧರ್ಮದ ನೈಜ ಉದ್ದೇಶವನ್ನೇ ಸೋಲಿಸುತ್ತದೆ. ಧರ್ಮ ಎಂಬುದು ಸತ್ಯದಡೆಗಿನ ನಡಿಗೆ,” ಎಂದು ನ್ಯಾಯಾಲಯ ಹೇಳಿದೆ. ಕ್ರೈಸ್ತ ಧರ್ಮ ಬೋಧಕ ಮೋಹನ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳಾದ 153ಎ, 295ಎ, 505ರ ಅಡಿ ದಾಖಲಿಸಲಾಗಿದ್ದ ದೂರುಗಳನ್ನು ವಜಾಗೊಳಿಸಿಲಾಗಿದೆ.
ಭಾರತದಿಂದ ಸಿರಿಯಾಕ್ಕೆ ತೆರಳಿ ಅಲ್ಲಿಂದ ವಾಪಸಾಗುವುದಕ್ಕೂ ಮುನ್ನ ಭಯೋತ್ಪಾದನಾ ಸಂಘಟನೆ ಐಸಿಸ್‌ಗೆ ಸೇರಿದ ಆರೋಪ ಎದುರಿಸುತ್ತಿರುವ ಯುವಕನ ನಡವಳಿಕೆಯ ಬಗ್ಗೆ ಬಾಂಬೆ ಹೈಕೋರ್ಟ್ ಗಂಭೀರವಾದ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದೆ. ತನ್ನ ಕುಟುಂಬವನ್ನು ದುಃಖದ ಮಡುವಿಗೆ ನೂಕಿ ಇರಾಕ್‌ಗೆ 21 ವರ್ಷದ ಯುವಕ ತೆರಳಿದ್ದರ ಬಗ್ಗೆ ನ್ಯಾಯಮೂರ್ತಿಗಳಾದ ಎಸ್ ಎಸ್ ಶಿಂಧೆ ಮತ್ತು ಮನೀಷ್ ಪಿಟಾಲೆ ಅವರಿದ್ದ ವಿಭಾಗೀಯ ಪೀಠವು ಗಂಭೀರ ಅಭಿಪ್ರಾಯ ವ್ಯಕ್ತಪಡಿಸಿತು.
“ತನ್ನ ಕುಟುಂಬವನ್ನು ತೊರೆದು ಜೀವನದಲ್ಲಿ ತಾನೆಂದೂ ನೋಡದ ಜನರ ಬಳಿಗೆ 21 ವರ್ಷದ ಯುವಕ ಇರಾಕ್‌ಗೆ ಹೋಗಿದ್ದು ಏತಕ್ಕೆ? ನಿಮ್ಮ ಸುತ್ತಲಿನ ಜನರು ಸಾಕಷ್ಟು ಯಾತನೆ ಅನುಭವಿಸುತ್ತಾರೆ ಎಂಬುದು ನಿಮಗೆ ತಿಳಿದಿಲ್ಲವೇ? ನೀವು ಹೇಳಿದಂತೆ ನೀವು ಅಪ್ರಬುದ್ಧರೇ ಆಗಿರಬಹುದು.. ನಿಮ್ಮ ಪೋಷಕರು ಎಂಥ ಪರಿಸ್ಥಿತಿ ಎದುರಿಸುತ್ತಿದ್ದಾರೆ ಎಂಬುದು ನಮಗೆ ಗೊತ್ತಿಲ್ಲ” ಎಂದು ಪೀಠ ಹೇಳಿದೆ. ಆರೋಪಿ ಆರೀಬ್ ಮಜೀದ್‌ಗೆ ಅಧೀನ ನ್ಯಾಯಾಲಯ ಮಂಜೂರು ಮಾಡಿದ್ದ ಜಾಮೀನು ಪ್ರಶ್ನಿಸಿ ರಾಷ್ಟ್ರೀಯ ಭದ್ರತಾ ಪಡೆ (ಎನ್‌ಐಎ) ಸಲ್ಲಿಸಿದ್ದ ಮನವಿಯ ವಿಚಾರಣೆಯನ್ನು ಪೀಠ ನಡೆಸುವ ಸಂದರ್ಭದಲ್ಲಿ ಮೇಲಿನಂತೆ ಹೇಳಿದೆ. ಜಾಗತಿಕ ಭಯೋತ್ಪಾದನಾ ಸಂಘಟನೆಯಾದ ಐಸಿಸ್ ಸೇರ್ಪಡೆಯಾಗಲು ಸಿರಿಯಾಕ್ಕೆ ತೆರಳಿ ವಾಪಸಾಗಿದ್ದ ಆರೋಪಕ್ಕೆ ಗುರಿಯಾಗಿದ್ದ ಮಜೀದ್ ಅವರನ್ನು 2014ರ ನವೆಂಬರ್‌ನಲ್ಲಿ ಕಾನೂನುಬಾಹಿರ ಚಟುವಟಿಕೆಗಳ (ನಿಯಂತ್ರಣ) ಕಾಯಿದೆ ಅಡಿ ಬಂಧಿಸಲಾಗಿತ್ತು.