ಕೋವಿಡ್ ಹಿನ್ನೆಲೆಯಲ್ಲಿ ಮೇ 24 ರಿಂದ ಮುಂದಿನ ಆದೇಶದವರೆಗೆ ಎಲ್ಲಾ ಪ್ರಕರಣಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತ್ರ ವಿಚಾರಣೆ ನಡೆಸಲು ಕರ್ನಾಟಕ ಹೈಕೋರ್ಟ್ ಪ್ರಧಾನ ನ್ಯಾಯಪೀಠ ನಿರ್ಧರಿಸಿದೆ. ನ್ಯಾಯಾಲಯದ ಎಲ್ಲಾ ಪೀಠಗಳು ವೀಡಿಯೊ ಕಾನ್ಫರೆನ್ಸ್ ಮೂಲಕವೇ ವಿಚಾರಣೆ ನಡೆಸಲಿವೆ. ಆದರೂ, ಅಡ್ವೊಕೇಟ್ ಜನರಲ್ / ಹೆಚ್ಚುವರಿ ಅಡ್ವೊಕೇಟ್ ಜನರಲ್ / ರಾಜ್ಯ ಸರ್ಕಾರದ ವಕೀಲರು / ಪ್ರಾಸಿಕ್ಯೂಟರ್‌ಗಳು, ಅಗತ್ಯವಿದ್ದಲ್ಲಿ ದೈಹಿಕವಾಗಿ ಹಾಜರಾಗಬಹುದು ಎಂದು ಪ್ರಭಾರ ರಿಜಿಸ್ಟ್ರಾರ್ ಜನರಲ್ ಟಿ ಜಿ ಶಿವಶಂಕರೇಗೌಡ ಅವರು ಹೊರಡಿಸಿರುವ ಪ್ರಮಾಣಿತ ಕಾರ್ಯಾಚರಣಾ ವಿಧಾನದಲ್ಲಿ (ಎಸ್‌ಒಪಿ) ಸ್ಪಷ್ಟಪಡಿಸಲಾಗಿದೆ.
ನ್ಯಾಯಾಲಯದ ನಿರ್ದಿಷ್ಟ ಆದೇಶದ ಹೊರತಾಗಿ ವಕೀಲರು, ಪಕ್ಷಗಳು ಹಾಗೂ ದಾವೆದಾರರು ನ್ಯಾಯಾಲಯ ಸಂಕೀರ್ಣ ಪ್ರವೇಶಿಸಲು ಅನುಮತಿ ಇಲ್ಲ. regjudcial@hck.gov.in ಇಮೇಲ್ ವಿಳಾಸಕ್ಕೆ ತುರ್ತು ಪ್ರಕರಣಗಳ ಅರ್ಜಿ ಸಲ್ಲಿಸಬಹುದು. ಇದಲ್ಲದೆ, ನ್ಯಾಯಾಲಯ ಕಾರ್ಯನಿರ್ವಹಣೆಯ ದಿನಗಳಲ್ಲಿ ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 1.30 ರವರೆಗೆ ಮತ್ತು ಮಧ್ಯಾಹ್ನ 2.30 ರಿಂದ ಸಂಜೆ 4.30 ರವರೆಗೆ ನೇರವಾಗಿ ಕೂಡ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಒಂದು ತಿಂಗಳ ಬೇಸಿಗೆ ರಜೆ ನಂತರ ಮೇ 24 ರಂದು ಹೈಕೋರ್ಟ್ ಮತ್ತೆ ಕಾರ್ಯಾರಂಭ ಮಾಡಿದೆ. ಎಸ್‌ಒಪಿ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ:
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯಿದೆಯಡಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ನಗರ ಮಾಜಿ ಪೊಲೀಸ್ ಆಯುಕ್ತ ಪರಮ್ ಬೀರ್ ಸಿಂಗ್ ವಿರುದ್ಧ ಕ್ರಮ ಕೈಗೊಳ್ಳುವುದಿಲ್ಲ ಎಂದು ಮಹಾರಾಷ್ಟ್ರ ಸರ್ಕಾರ ನೀಡಿರುವ ಹೇಳಿಕೆಯನ್ನು ಬಾಂಬೆ ಹೈಕೋರ್ಟ್ ಸೋಮವಾರ ದಾಖಲಿಸಿಕೊಂಡಿದೆ. ಪ್ರಕರಣದಲ್ಲಿ ದಾಖಲಾದ ಎಫ್‌ಐಆರ್ ಪ್ರಶ್ನಿಸಿ ಸಿಂಗ್ ಸುಪ್ರೀಂಕೋರ್ಟ್ ಮೆಟ್ಟಿಲೇರುವುದಿಲ್ಲ ಎಂಬ ಷರತ್ತಿನ ಮೇರೆಗೆ ಇಂತಹ ಕ್ರಮ ಕೈಗೊಳ್ಳದೇ ಇರಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಇದೇ ವೇಳೆ ಸುಪ್ರೀಂಕೋರ್ಟ್ ಮುಂದೆ ಬಾಕಿ ಇರುವ ಅರ್ಜಿಯಲ್ಲಿ ಈಗಿನ ಎಫ್‌ಐಆರ್‌ಗೆ ಸಂಬಂಧಿಸಿದಂತೆ ಯಾವುದೇ ಪರಿಹಾರಕ್ಕೆ ಒತ್ತಾಯಿಸುವುದಿಲ್ಲ ಎಂಬ ಸಿಂಗ್ ಅವರ ಹೇಳಿಕೆಯನ್ನು ಕೂಡ ನ್ಯಾಯಾಲಯ ದಾಖಲಿಸಿಕೊಂಡಿತು. ಪ್ರಕರಣದ ಅಂತಿಮ ವಿಚಾರಣೆ ಜೂನ್ 9ರಂದು ನಡೆಯಲಿದೆ ಎಂದು ನ್ಯಾಯಮೂರ್ತಿಗಳಾದ ಎಸ್ ಎಸ್ ಶಿಂಧೆ ಮತ್ತು ಎನ್ ಆರ್ ಬೋರ್ಕರ್ ಅವರಿದ್ದ ಪೀಠ ತಿಳಿಸಿದೆ.