ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು |10-6-2021

>> ರಾಜ್ಯದ ಹಲವೆಡೆ ಲಾಕ್‌ಡೌನ್‌ ಸಡಿಲಿಕೆ >> ʼಭಾಸ್ಕರ್‌ ಶೆಟ್ಟಿ ಕೊಲೆ ಪ್ರಕರಣದ ತೀರ್ಪು ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗುವುದುʼ >> ಸುಪ್ರೀಂಗೆ ಹೈಕೋರ್ಟ್‌ ವಕೀಲರನ್ನು ನೇಮಿಸಲು ಮನವಿ >> ಐಟಿ ನಿಯಮ ಪ್ರಶ್ನೆ: ಕೇಂದ್ರಕ್ಕೆ ನೋಟಿಸ್‌
ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು |10-6-2021
Published on

ಹನ್ನೊಂದು ಜಿಲ್ಲೆ ಹೊರತುಪಡಿಸಿ ಉಳಿದೆಡೆ ಲಾಕ್‌ಡೌನ್‌ ಸಡಿಲಿಸಿದ ಕರ್ನಾಟಕ  ಸರ್ಕಾರ

ಹನ್ನೊಂದು ಜಿಲ್ಲೆಗಳನ್ನು ಹೊರತುಪಡಿಸಿ ಉಳಿದೆಡೆ ಲಾಕ್‌ಡೌನ್‌ ಸಡಿಲಿಕೆ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಸಚಿವರು, ಜಿಲ್ಲಾಧಿಕಾರಿಗಳ ಸಭೆ ಬಳಿಕ ಗುರುವಾರ ಸಂಜೆ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಈ ವಿಷಯವನ್ನು ಮಾಧ್ಯಮಗಳಿಗೆ ತಿಳಿಸಿದರು. ಬೆಂಗಳೂರು ಗ್ರಾಮಾಂತರ, ಮೈಸೂರು, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಕೊಡಗು, ಹಾಸನ, ಮಂಡ್ಯ, ಚಾಮರಾಜನಗರ, ಬೆಳಗಾವಿ ಸೇರಿದಂತೆ 11 ಜಿಲ್ಲೆಗಳಲ್ಲಿ ಲಾಕ್‌ಡೌನ್‌ ಮುಂದುವರೆಯಲಿದೆ. ಉಳಿದ ಜಿಲ್ಲೆಗಳಲ್ಲಿ ಜೂ. 14 - 21ರವರೆಗೆ ನೂತನ ಲಾಕ್‌ಡೌನ್ ಸಡಿಲಿಕೆ ನಿಯಮ ಅನ್ವಯವಾಗಲಿದೆ.

ಲಾಕ್‌ಡೌನ್‌ ಸಡಿಲಿಕೆ ಇರಲಿರುವ ಜಿಲ್ಲೆಗಳಲ್ಲಿ ವಾರಾಂತ್ಯದ ಕರ್ಫ್ಯೂ ಹಾಗೂ ರಾತ್ರಿ ಕರ್ಫ್ಯೂ ಜಾರಿಯಲ್ಲಿರುತ್ತದೆ. ಬೆಳಿಗ್ಗೆ 6ರಿಂದ ಮಧ್ಯಾಹ್ನ 2ರವರೆಗೆ ಅಗತ್ಯವಸ್ತು ಖರೀದಿಗೆ ಅವಕಾಶ ನೀಡಲಾಗಿದೆ. ಶೇ 50ರಷ್ಟು ಸಿಬ್ಬಂದಿಯೊಂದಿಗೆ ಕಾರ್ಖಾನೆಗಳು ಮತ್ತು ಶೇ 30ರಷ್ಟು ಸಿಬ್ಬಂದಿಯೊಂದಿಗೆ ಗಾರ್ಮೆಂಟ್‌ಗಳು ಕಾರ್ಯ ನಿರ್ವಹಿಸಬಹುದಾಗಿದೆ. ಇಬ್ಬರು ಪ್ರಯಾಣಿಕರೊಂದಿಗೆ ಆಟೊರಿಕ್ಷಾ, ಟ್ಯಾಕ್ಸಿಗಳು ಸಂಚರಿಸಲು ಅನುವು ಮಾಡಿಕೊಡಲಾಗಿದೆ. ಆದರೆ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಬಸ್‌ಗಳ ಸಂಚಾರಕ್ಕೆ ಅವಕಾಶ ದೊರೆತಿಲ್ಲ. ನಿರ್ಮಾಣ ಚಟುವಟಿಕೆಗಳು ಅಬಾಧಿತ ಎಂದು ತಿಳಿಸಲಾಗಿದ್ದು ಉದ್ಯಾನವನಗಳು ಬೆಳಿಗ್ಗೆ 10ರವರೆಗೆ ತೆರೆದಿರುತ್ತವೆ. ಮದ್ಯದಂಗಡಿಗಳಲ್ಲಿ ಮಧ್ಯಾಹ್ನ 2ರವರೆಗೆ ಖರೀದಿಗೆ ಅವಕಾಶ ಇರುತ್ತದೆ.

ಭಾಸ್ಕರ್‌ ಶೆಟ್ಟಿ ಕೊಲೆ ಪ್ರಕರಣದ ತೀರ್ಪು ಹೈಕೋರ್ಟ್‌ನಲ್ಲಿ ಪ್ರಶ್ನೆ: ಆರೋಪಿಗಳ ಪರ ವಕೀಲ ಪ್ರದೀಪ್‌ ಕುಲಕರ್ಣಿ

2016ರಲ್ಲಿ ಕೊಲೆಗೀಡಾಗಿದ್ದ ಉಡುಪಿಯ ಭಾಸ್ಕರ್‌ ಶೆಟ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನೀಡಿರುವ ತೀರ್ಪನ್ನು ಕರ್ನಾಟಕ ಹೈಕೋರ್ಟ್‌ನಲ್ಲಿ ಪ್ರಶ್ನಿಸುವುದಾಗಿ ಆರೋಪಿಗಳ ಪರ ವಕೀಲ ಪ್ರದೀಪ್‌ ಕುಲಕರ್ಣಿ ತಿಳಿಸಿದ್ದಾರೆ. “ದೊರೆತಿರುವ ಮೂಳೆಗಳಲ್ಲಿ ಒಂದು ಮಹಿಳೆಯದು ಎಂದು ತಿಳಿದು ಬಂದಿದೆ. ಮನೆಯಲ್ಲಿ ದೊರೆತ ರಕ್ತದ ಕಲೆಯಲ್ಲಿ ಕೆಲವು ಮಹಿಳೆಗೆ ಸಂಬಂಧಿಸಿದ್ದು ಎಂದು ಗೊತ್ತಾಗಿದೆ. ಕೆಲವು ವಿರೋಧಾಭಾಸಗಳು ಕಂಡುಬರುತ್ತಿವೆ” ಎಂದು ಅವರು ಹೇಳಿದರು.

ಉಡುಪಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು “ಆರೋಪಿಗಳ ವಿರುದ್ಧ ಸುಳ್ಳು ದೂರು ನೀಡಲಾಗಿದೆ ಮತ್ತು ಪೊಲೀಸರು ಸುಳ್ಳು ಆರೋಪಪಟ್ಟಿ ಸಲ್ಲಿಸಿದ್ದಾರೆ. ಪ್ರಕರಣದಲ್ಲಿ ಸೂಕ್ತ ಸಾಕ್ಷ್ಯಾಧಾರಗಳು ಇಲ್ಲ. ಪ್ರತ್ಯಕ್ಷದರ್ಶಿಗಳು ಇಲ್ಲ. ಡಿಎನ್‌ಎ ದೃಢಪಟ್ಟಿಲ್ಲ. ಸಾಂದರ್ಭಿಕ ಸಾಕ್ಷ್ಯಗಳು ಪೂರಕವಾಗಿಲ್ಲ. ಭಾಸ್ಕರ್‌ ಶೆಟ್ಟಿ ದುರ್ಗ ಇಂಟರ್‌ನ್ಯಾಷನಲ್‌ ಹೋಟೆಲ್‌ನಿಂದ ಮನೆಗೆ ಹೇಗೆ ತಲುಪಿದರು ಎಂಬುದನ್ನು ಪ್ರಾಸಿಕ್ಯೂಷನ್‌ ಸಾಬೀತುಪಡಿಸಿಲ್ಲ. ಸುಳ್ಳು ದಾಖಲೆಗಳನ್ನು ಸೃಷ್ಟಿಸಲಾಗಿದೆ. ತಪ್ಪೊಪ್ಪಿಗೆ ಹೇಳಿಕೆಗಳು ಪ್ರೈಮಾ ಫೇಸಿ ಸಾಕ್ಷ್ಯವಲ್ಲ ಎಂದು ತುಂಬಾ ತೀರ್ಪುಗಳು ಬಂದಿವೆ” ಎಂಬುದಾಗಿ ಹೇಳಿದ್ದಾರೆ.

ಹತ್ತು ವರ್ಷ ಸೇವೆ ಸಲ್ಲಿಸಿರುವ ಹೈಕೋರ್ಟ್‌ ವಕೀಲರನ್ನು ಸುಪ್ರೀಂ ನ್ಯಾಯಮೂರ್ತಿ ಹುದ್ದೆಗೆ ಪರಿಗಣಿಸಲು ಸಿಜೆಐಗೆ ಎಎಬಿ ಮನವಿ

ಹತ್ತು ವರ್ಷ ಹೈಕೋರ್ಟ್‌ಗಳಲ್ಲಿ ಸೇವೆ ಸಲ್ಲಿಸಿರುವ ಅನುಭವಿ ವಕೀಲರನ್ನು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳನ್ನಾಗಿ ನೇಮಿಸುವಂತೆ ಕೋರಿ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ ಅವರಿಗೆ ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಎ ಪಿ ರಂಗನಾಥ್‌ ಅವರು ಪತ್ರ ಬರೆದಿದ್ದಾರೆ. ಸುಪ್ರೀಂ ಕೋರ್ಟ್‌ ವಕೀಲರನ್ನು ಹೈಕೋರ್ಟ್‌ ನ್ಯಾಯಮೂರ್ತಿಗಳನ್ನಾಗಿ ನೇಮಿಸುವ ಸಂಬಂಧ ಸುಪ್ರೀಂ ಕೋರ್ಟ್‌ ವಕೀಲರ ಸಂಘದ ಅಧ್ಯಕ್ಷ ವಿಕಾಸ್‌ ಸಿಂಗ್‌ ತಮ್ಮ ಸಹೋದ್ಯೋಗಿ ವಕೀಲರಿಗೆ ಬರೆದಿದ್ದಾರೆ ಎನ್ನಲಾದ ಪತ್ರ ಚರ್ಚೆ ಹುಟ್ಟು ಹಾಕಿರುವ ನಡುವೆ ಈ ಬೆಳವಣಿಗೆ ನಡೆದಿದೆ.

ಸಂವಿಧಾನದ 124ನೇ ವಿಧಿಯ ಅನ್ವಯ ಮತ್ತು ವಿವಿಧ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪನ್ನು ಆಧರಿಸಿ ಹೈಕೋರ್ಟ್‌ಗಳಲ್ಲಿ ಸೇವೆ ಸಲ್ಲಿಸುತ್ತಿರುವ ವಕೀಲರನ್ನು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳನ್ನಾಗಿ ನೇಮಿಸಲು ಅವಕಾಶವಿದೆ. ಆ ಮೂಲಕ ಅರ್ಹ ಕರ್ನಾಟಕ ಹೈಕೋರ್ಟ್‌ ವಕೀಲರು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳಾಗಿ ನೇಮಕವಾಗುವ ಪರಿಪಾಠಕ್ಕೆ ತಾವು ನಾಂದಿ ಹಾಡಬೇಕು ಎಂದು ಮನವಿ ಮಾಡಿದ್ದಾರೆ.

ಸಂಗೀತಗಾರ ಟಿ ಎಂ ಕೃಷ್ಣರಿಂದ ಐಟಿ ನಿಯಮ ಪ್ರಶ್ನೆ: ಕೇಂದ್ರ ಸರ್ಕಾರಕ್ಕೆ ಮದ್ರಾಸ್‌ ಹೈಕೋರ್ಟ್‌ ನೋಟಿಸ್‌

ಮಾಹಿತಿ ತಂತ್ರಜ್ಞಾನ (ಮಧ್ಯಸ್ಥ ವೇದಿಕೆಗಳಿಗೆ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ಸಂಹಿತೆ) ನಿಯಮಗಳು, 2021 ಅನ್ನು ಪ್ರಶ್ನಿಸಿ ಕರ್ನಾಟಕ ಶಾಸ್ತ್ರೀಯ ಸಂಗೀತಗಾರ, ಬರಹಗಾರ ಮತ್ತು ಸಾಮಾಜಿಕ ಚಿಂತಕ ಟಿ ಎಂ ಕೃಷ್ಣ ಸಲ್ಲಿಸಿದ್ದ ಮನವಿಗೆ ಸಂಬಂಧಿಸಿದಂತೆ ಮದ್ರಾಸ್‌ ಹೈಕೋರ್ಟ್‌ ಗುರುವಾರ ಕೇಂದ್ರ ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡಿದೆ. ಮೂರು ವಾರಗಳಲ್ಲಿ ನೋಟಿಸ್‌ಗೆ ಉತ್ತರಿಸುವಂತೆ ಕೇಂದ್ರಕ್ಕೆ ಸೂಚಿಸಿರುವ ಮುಖ್ಯ ನ್ಯಾಯಮೂರ್ತಿ ಸಂಜೀಬ್‌ ಬ್ಯಾನರ್ಜಿ ಮತ್ತು ನ್ಯಾ. ಸೆಂಥಿಲ್‌ ಕುಮಾರ್‌ ರಾಮಮೂರ್ತಿ ಅವರಿದ್ದ ವಿಭಾಗೀಯ ಪೀಠವು ನಾಲ್ಕು ವಾರಗಳ ನಂತರ ಪ್ರಕರಣದ ವಿಚಾರಣೆ ನಡೆಸುವುದಾಗಿ ತಿಳಿಸಿದೆ.

TM Krishna
TM Krishna

ಭಾರತೀಯ ಇಂಟರ್‌ನೆಟ್‌ ಸ್ವಾತಂತ್ರ್ಯ ಪ್ರತಿಷ್ಠಾನ ಸಿದ್ಧಪಡಿಸಿರುವ ಮನವಿಯನ್ನು ಟಿ ಎಂ ಕೃಷ್ಣ ಅವರು ಸಲ್ಲಿಸಿದ್ದಾರೆ. ಕೇಂದ್ರ ನೂತನ ಐಟಿ ನಿಯಮಗಳು ಅರ್ಜಿದಾರರ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತಿದ್ದು, ಮೂಲ ನಿಬಂಧನೆಯ ಅಧಿಕಾರವನ್ನು ಮೀರಿದೆ ಎಂದು ವಿವರಿಸಲಾಗಿದೆ. “ಆಕ್ಷೇಪಾರ್ಹವಾದ ನಿಯಮಗಳು ಕಲಾವಿದ ಮತ್ತು ಸಾಂಸ್ಕೃತಿಕ ಬಣ್ಣನೆಗಾರನಾದ ನನ್ನ ಹಕ್ಕಿಗೆ ಭಂಗ ಉಂಟು ಮಾಡಲಿದ್ದು, ಈ ಮೂಲಕ ವಾಕ್‌ ಸ್ವಾತಂತ್ರ್ಯ ಮತ್ತು ಖಾಸಗಿ ಹಕ್ಕನ್ನು ಆಕ್ಷೇಪಿಸುತ್ತದೆ” ಎಂದು ಮನವಿಯಲ್ಲಿ ವಿವರಿಸಲಾಗಿದೆ.

Kannada Bar & Bench
kannada.barandbench.com