ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು | 14-12-2020

>> ಕಪ್ಪನ್‌ ವಿರುದ್ಧ ಹೊಸ ಅಫಿಡವಿಟ್ >> ಜಾಮೀನು ಅರ್ಜಿ ವಿಚಾರಣೆ >> ಛತ್ತೀಸಗಢದಲ್ಲಿ ಬಹುಕೋಟಿ ಪಿಡಿಎಸ್‌ ಹಗರಣ >> ಹಿರಿಯ ನಾಗರಿಕರಿಗೆ ಸಂಬಂಧಿಸದ ಪ್ರಕರಣ >> ಜೂಜಾಟ, ಬೆಟ್ಟಿಂಗ್ ವೆಬ್‌ಸೈಟ್‌ಗಳ ನಿಷೇಧ ಕೋರಿ ಪಿಐಎಲ್ >> ಅಪಘಾತ ಪ್ರಕರಣ
ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು | 14-12-2020
Published on

ಪತ್ರಕರ್ತ ಸಿದ್ದಿಕಿ ತಮ್ಮ ಸಾಮಾಜಿಕ ಮಾಧ್ಯಮ ಖಾತೆಯ ವಿವರ ಬಹಿರಂಗಪಡಿಸುತ್ತಿಲ್ಲ ಎಂದ ಉತ್ತರಪ್ರದೇಶ ಸರ್ಕಾರ

ಕೇರಳ ಪತ್ರಕರ್ತ ಸಿದ್ದಿಕಿ ಕಪ್ಪನ್ ಅವರು ಪೊಲೀಸರೊಂದಿಗೆ ಸಹಕರಿಸುತ್ತಿಲ್ಲ. ತಮ್ಮ ದುಷ್ಕೃತ್ಯ ಮರೆಮಾಚುವ ಉದ್ದೇಶದಿಂದ ಸಾಮಾಜಿಕ ಮಾಧ್ಯಮ ಖಾತೆಗಳು, ಪಾಸ್‌ವರ್ಡ್‌ ಇತ್ಯಾದಿ ವಿವರಗಳನ್ನು ಬಹಿರಂಗಪಡಿಸಲು ನಿರಾಕರಿಸಿದ್ದಾರೆ ಎಂದು ಉತ್ತರಪ್ರದೇಶ ಸರ್ಕಾರ ಸೋಮವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. “ಕಪ್ಪನ್ ಜೊತೆಗೆ ಬಂಧಿತರಾದ ಇತರ ವ್ಯಕ್ತಿಗಳು, ಹಾಥ್‌ರಸ್‌ಗೆ‌ ತೆರಳುವಾಗ ʼಅಂತರರಾಷ್ಟ್ರೀಯ ಶಂಕಿತ ಮೂಲಗಳಿಂದʼ ಕೋಟಿಗಟ್ಟಲೆ ಹಣವನ್ನು ಪಡೆದಿದ್ದಾರೆ,' ಎಂದು ಉತ್ತರಪ್ರದೇಶ ಪೊಲೀಸರು ಅಫಿಡವಿಟ್‌ನಲ್ಲಿ ವಿವರಿಸಿದ್ದಾರೆ.

Siddique Kappan, Supreme Court
Siddique Kappan, Supreme Court

ಕಪ್ಪನ್ ಬಂಧನ ಪ್ರಶ್ನಿಸಿ ಕೇರಳ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) ಸಲ್ಲಿಸಿರುವ ಹೇಬಿಯಸ್ ಕಾರ್ಪಸ್ ಅರ್ಜಿಗೆ ಪ್ರತಿಕ್ರಿಯೆಯಾಗಿ ಅಫಿಡವಿಟ್ ಸಲ್ಲಿಸಲಾಗಿದೆ. "ಕೆಯುಡಬ್ಲ್ಯೂಜೆ ಕೇರಳದ ಎಲ್ಲಾ ಪತ್ರಕರ್ತರನ್ನು ಪ್ರತಿನಿಧಿಸುವ ಸಂಸ್ಥೆ ಅಲ್ಲ. ತಮ್ಮ ಸದಸ್ಯರಾಗಿ ಎಲ್ಲಾ ಪತ್ರಕರ್ತರನ್ನು ಒಳಗೊಂಡ ಪ್ರತ್ಯೇಕ ಸಂಸ್ಥೆ ಒಂದು ಇದೆ" ಎಂದು ಅಫಿಡವಿಟ್‌ ಹೇಳುತ್ತದೆ. ಹೊಸ ಅಫಿಡವಿಟ್‌ಗೆ ಸಂಘ ಪ್ರತಿಕ್ರಿಯೆ ನೀಡಬೇಕಿದೆ ಎಂದು ಕೆಯುಡಬ್ಲ್ಯೂಜೆಯನ್ನು ಪ್ರತಿನಿಧಿಸುವ ಹಿರಿಯ ನ್ಯಾಯವಾದಿ ಕಪಿಲ್‌ ಸಿಬಲ್‌ ತಿಳಿಸಿದರು. ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಪ್ರಕರಣವನ್ನು ಜನವರಿ ತಿಂಗಳಿಗೆ ಮುಂದೂಡಿದೆ.

ಹೈಕೋರ್ಟ್‌ ನಿರ್ದೇಶನದ ಅನ್ವಯ ಅಧೀನ ನ್ಯಾಯಾಲಯ ನಡೆಯಬೇಕು, ಆದೇಶ ಪಾಲನೆ ನಿರ್ಬಂಧಿಸುವ ಎಲ್ಲವನ್ನೂ ದಾಖಲಿಸಬೇಕು: ಕೇರಳ ಹೈಕೋರ್ಟ್‌

ಹೈಕೋರ್ಟ್‌ ಆದೇಶಗಳಿಗೆ ಅಧೀನ ನ್ಯಾಯಾಲಯಗಳು ಬದ್ಧವಾಗಿರಬೇಕು ಎಂದು ಕೇರಳ ಹೈಕೋರ್ಟ್‌ ಒತ್ತಿ ಹೇಳಿದೆ. ಹೈಕೋರ್ಟ್‌ ಆದೇಶಗಳನ್ನು ಪಾಲಿಸುವುದು ಅಧೀನ ನ್ಯಾಯಾಲಯಗಳಿಗೆ ಕಷ್ಟವಾದರೆ ಅವುಗಳನ್ನು ದಾಖಲಿಸಬೇಕು ಎಂದು ಹೈಕೋರ್ಟ್‌ನ ನ್ಯಾಯಮೂರ್ತಿ ಪಿ ವಿ ಕುನ್ಹಿಕೃಷ್ಣನ್ ಹೇಳಿದ್ದಾರೆ.

Kerala HC
Kerala HC

ಅತ್ಯಾಚಾರ ಮತ್ತು ನಂಬಿಕೆ ದ್ರೋಹ ಆರೋಪ ಎದುರಿಸುತ್ತಿರುವ ಅಬ್ದುಲ್‌ ರೆಹಮಾನ್‌ ಎಂಬವರ ಜಾಮೀನು ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯವು ನಡೆಸಿತು. “ಈ ಘನ ನ್ಯಾಯಲಯ ನೀಡಿದ ನಿರ್ದೇಶನಗಳಿಗೆ ಅಧೀನ ನ್ಯಾಯಾಲಯಗಳು ಬದ್ಧವಾಗಿರಬೇಕು. ಅವುಗಳನ್ನು ಪಾಲಿಸಲು ಯಾವುದೇ ತೆರನಾದ ಸಮಸ್ಯೆಗಳಿದ್ದರೆ ಅದನ್ನು ಗೌರವಾನ್ವಿತ ಮ್ಯಾಜಿಸ್ಟ್ರೇಟ್‌ ಕಡ್ಡಾಯವಾಗಿ ಉಲ್ಲೇಖಿಸಬೇಕು” ಎಂದು ಪೀಠ ಹೇಳಿದೆ. ಕೇರಳ ಹೈಕೋರ್ಟ್‌ ಹಿಂದೆ ರೆಹಮಾನ್‌ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸಿತ್ತು. ಅಲ್ಲದೇ ಸಾಮಾನ್ಯ ಜಾಮೀನು ಅರ್ಜಿ ಸಲ್ಲಿಸುವ ಸ್ವಾತಂತ್ರ್ಯವನ್ನು ಮನವಿದಾರರಿಗೆ ನೀಡಿತ್ತು.

ಛತ್ತೀಸಗಡದ ಬಹುಕೋಟಿ ಪಿಡಿಎಸ್‌ ಹಗರಣದ ವಿಚಾರಣೆ: ತೀರ್ಪು ಕಾಯ್ದಿರಿಸಿದ ಸುಪ್ರೀಂ ಕೋರ್ಟ್‌

ಛತ್ತೀಸಗಢದಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಪಿಡಿಎಸ್‌ ಹಗರಣದ (ಪಡಿತರ ವಿತರಣೆ ಯೋಜನೆ) ವಿಚಾರಣೆ ವರ್ಗಾವಣೆ ಕುರಿತ ಮನವಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಸೋಮವಾರ ತೀರ್ಪು ಕಾಯ್ದಿರಿಸಿದೆ.

Migrants
Migrants

ಛತ್ತೀಸಗಢದ ರಾಯಪುರದಲ್ಲಿರುವ ನಾಗರಿಕ ಪೂರೈಕೆ ಕಾರ್ಪೊರೇಶನ್‌ ಉದ್ಯೋಗಿ ಹಾಗೂ ಪ್ರಕರಣದಲ್ಲಿ ಸಾಕ್ಷಿಯಾಗಿರುವ ಗಿರೀಶ್‌ ಶರ್ಮಾ ಎಂಬವರು ಸಲ್ಲಿಸಿದ್ದ ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ರೋಹಿಂಟನ್‌ ನಾರಿಮನ್‌, ನವೀನ್‌ ಸಿನ್ಹಾ ಮತ್ತು ಕೆ ಎಂ ಜೋಸೆಫ್‌ ಅವರಿದ್ದ ತ್ರಿಸದಸ್ಯ ಪೀಠವು ಸಮಜಂಸ ಆದೇಶ ಹೊರಡಿಸುವುದಾಗಿ ಹೇಳಿದೆ.

ಹಿರಿಯ ನಾಗರಿಕರಿಗೆ ಬಸ್‌ಗಳಲ್ಲಿ ಆರಾಮದಾಯಕ ಸೀಟು ನೀಡಿದರೆ ಸಾಲದು, ತುರ್ತು ನ್ಯಾಯದಾನ ಮಾಡುವುದು ನಿಜವಾದ ಗೌರವ: ಆಂಧ್ರಪ್ರದೇಶ ಹೈಕೋರ್ಟ್‌

“ಬಾಳ ಮುಸ್ಸಂಜೆಯಲ್ಲಿರುವ ಹಿರಿಯ ನಾಗರಿಕರಿಗೆ ಬಸ್ಸು, ರೈಲು ಮತ್ತು ವಿಮಾನಯಾನ ದರದಲ್ಲಿ ವಿನಾಯಿತಿ, ರೈಲುಗಳಲ್ಲಿ ಕೆಳಗಿನ ಸೀಟುಗಳನ್ನು ನೀಡಲು ಒತ್ತು ನೀಡುವುದು, ಬಸ್‌ಗಳಲ್ಲಿ ಆರಾಮದಾಯಕ ಸೀಟುಗಳನ್ನು ನೀಡುವ ಮೂಲಕ ಗೌರವ ಮತ್ತು ಆದರ ನೀಡಿದರೆ ಸಾಲದು. ಹಿರಿಯ ನಾಗರಿಕರಿಗೆ ಶಾಸನಬದ್ಧವಾಗಿ ತುರ್ತಾಗಿ ದೊರಕಬೇಕಿರುವ ನ್ಯಾಯದಾನ ಮಾಡಬೇಕಿದೆ” ಎಂದು ಆಂಧ್ರ ಪ್ರದೇಶ ಹೈಕೋರ್ಟ್‌ ಪ್ರತಿಪಾದಿಸಿದೆ.

Senior Citizens (Representative Image)
Senior Citizens (Representative Image)

ಹಿರಿಯ ದಾವೆದಾರರಿಗೆ ಸಂಬಂಧಿಸಿದ ಪ್ರಕರಣಗಳ ವಿಲೇವಾರಿ ತಡವಾಗುತ್ತಿರುವುದಕ್ಕೆ ಸಂಬಂಧಿಸಿದಂತೆ ಕಳವಳ ವ್ಯಕ್ತಪಡಿಸಿರುವ ನ್ಯಾಯಾಲಯವು ಯಾವುದೇ ರೀತಿಯಲ್ಲೂ ತಡಮಾಡದೇ ಹಿರಿಯ ನಾಗರಿಕರಿಗೆ ಸಂಬಂಧಿಸಿದ ಪ್ರಕರಣಗಳನ್ನು ವಿಲೇವಾರಿ ಮಾಡುವಂತೆ ನ್ಯಾಯಿಕ ಅಧಿಕಾರಿಗಳಿಗೆ ಸೂಚಿಸಿತು. “…ಬಾಳ ಬದುಕಿನ ಮುಸ್ಸಂಜೆಯ ದಿನಗಳನ್ನು ಕಳೆಯುತ್ತಿರುವ ದಾವೆದಾರರು ಖುಷಿಯಾಗಿ ಬದುಕು ದೂಡಲು ಅವರ ಪ್ರಕರಣಗಳಿಗೆ ಸಂಬಂಧಿಸಿದಂತೆ ತುರ್ತು ನ್ಯಾಯದಾನವಾಗಬೇಕು” ಎಂದು ನ್ಯಾಯಮೂರ್ತಿ ಬಟ್ಟು ದೇವಾನಂದ್‌ ಅಭಿಪ್ರಾಯಪಟ್ಟರು.

ಜೂಜಾಟ, ಬೆಟ್ಟಿಂಗ್‌ ವೆಬ್‌ಸೈಟ್‌ಗಳ ನಿಷೇಧ ಕೋರಿ ಪಿಐಎಲ್‌ ಸಲ್ಲಿಕೆ: ಕೇಂದ್ರದ ನಿಲುವು ಬಯಸಿದ ದೆಹಲಿ ಹೈಕೋರ್ಟ್‌

ಜೂಜಾಟ, ಬೆಟ್ಟಿಂಗ್‌, ಬಾಜಿಕಟ್ಟುವುದಕ್ಕೆ ಸಂಬಂಧಿಸಿದ ವೆಬ್‌ಸೈಟ್‌ಗಳನ್ನು ನಿಷೇಧಿಸುವ ಕುರಿತು ನಿರ್ದೇಶನ ನೀಡುವಂತೆ ಕೋರಿದ್ದ ಮನವಿಗೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್‌ ಕೇಂದ್ರ ಮತ್ತು ದೆಹಲಿ ಸರ್ಕಾರಕ್ಕೆ ನೋಟಿಸ್‌ ಜಾರಿಗೊಳಿಸಿದೆ.

online gambling
online gambling

ಅವಿನಾಶ್‌ ಮೆಹ್ರೋತ್ರ ಎಂಬವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ ಎನ್‌ ಪಟೇಲ್ ಮತ್ತು ಪ್ರತೀಕ್‌ ಜಲನ್‌ ಅವರಿದ್ದ ವಿಭಾಗೀಯ ಪೀಠವು ನೋಟಿಸ್‌ ಜಾರಿಗೊಳಿಸಿದೆ. ಡ್ರೀಮ್‌11, ಮೈ11ಸರ್ಕಲ್‌, ಪೇಟಿಎಂಫಸ್ಟ್‌ಗೇಮ್ಸ್‌ ಇತ್ಯಾದಿ ವೆಬ್‌ಸೈಟ್‌ಗಳನ್ನು ಪಟ್ಟಿ ಮಾಡಲಾಗಿದೆ.

ಯಾವುದೇ ಗೃಹಿಣಿಯ ಸೇವೆಯ ಮೌಲ್ಯ ಅಮೂಲ್ಯ: ಅಪಘಾತದಲ್ಲಿ ಮೃತಪಟ್ಟ ಗೃಹಿಣಿಯ ಕುಟುಂಬಕ್ಕೆ ರೂ. 10 ಲಕ್ಷ ಪರಿಹಾರಕ್ಕೆ ಆದೇಶಿಸಿದ ಎಂಎಸಿಟಿ

“ಗೃಹಿಣಿಯಾದವರು ಹಲವು ಪ್ರಮುಖ ಜವಾಬ್ದಾರಿಗಳನ್ನು ನಿಭಾಯಿಸುತ್ತಾರೆ. ಆಕೆ ಇಲ್ಲದೆ ಇದ್ದರೆ ಮನೆ ಪರಿಪೂರ್ಣ ಎನಿಸಿಕೊಳ್ಳುವುದಿಲ್ಲ… ಯಾವುದೇ ಗೃಹಿಣಿಯ ಸೇವೆಯ ಮೌಲ್ಯಕ್ಕೆ ಬೆಲೆ ಕಟ್ಟಲಾಗದು,” ಎಂದು ಮೋಟಾರು ಅಪಘಾತ ಕ್ಲೇಮು ನ್ಯಾಯಾಧಿಕರಣ (ಎಂಎಸಿಟಿ) ಅಭಿಪ್ರಾಯಪಟ್ಟಿದೆ.

Representational image
Representational image

2014ರಲ್ಲಿ ನಡೆದ ಅಪಘಾತವೊಂದರಲ್ಲಿ ಗೃಹಿಣಿಯೊಬ್ಬರು ಮೃತಪಟ್ಟಿದ್ದು ಪರಿಹಾರಕ್ಕಾಗಿ ಆಕೆಯ ಪತಿ ಮತ್ತು ಮಕ್ಕಳು ಸಲ್ಲಿಸಿದ್ದ ಮನವಿಯನ್ನು ಆಧರಿಸಿ ಎಂಎಸಿಟಿ ಸದಸ್ಯ ಎಸ್‌ ಬಿ ಹೆಡೋ ಅವರು ರೂ. 10 ಲಕ್ಷ ಪರಿಹಾರದ ಜೊತೆಗೆ ವಾರ್ಷಿಕ ಶೇ. 8ರಷ್ಟು ಬಡ್ಡಿ ಪಾವತಿಸುವಂತೆ ಆದೇಶ ಹೊರಡಿಸಿದ್ದಾರೆ.

Kannada Bar & Bench
kannada.barandbench.com