ನಿಷೇಧಿತ ಮಾವೋವಾದಿ ಭಯೋತ್ಪಾದನಾ ಸಂಘಟನೆಯಾದ ಸಿಪಿಐ (ಎಂ) ಜೊತೆ ಸಂಪರ್ಕ ಹೊಂದಿದ್ದ ಆರೋಪದಲ್ಲಿ ಅಲ್ಲಾನ್ ಶುಯೆಬ್ ಮತ್ತು ಥವಾಹಾ ಫಸಲ್ ಅವರಿಗೆ ಎನ್‌ಐಎ ವಿಶೇಷ ನ್ಯಾಯಾಲಯ ಮಂಜೂರು ಮಾಡಿದ್ದ ಜಾಮೀನು ಆದೇಶದಲ್ಲಿ ಕೇರಳ ಹೈಕೋರ್ಟ್ ಭಾಗಶಃ ಬದಲಾವಣೆ ಮಾಡಿದೆ. ಶುಯೆಬ್ ಅವರಿಗೆ ಮಂಜೂರು ಮಾಡಿದ್ದ ಜಾಮೀನು ಆದೇಶವನ್ನು ಎತ್ತಿ ಹಿಡಿದಿದ್ದು, ಫಸಲ್ ಜಾಮೀನು ವಜಾಗೊಳಿಸಿದೆ. ಇದರ ಜೊತೆಗೆ ಎನ್‌ಐಎ ನ್ಯಾಯಾಲಯದ ತೀರ್ಪಿಗೆ ಅಸಮ್ಮತಿ ಸೂಚಿಸಿರುವ ನ್ಯಾಯಾಲಯವು, 'ದಾಖಲೆ ನ್ಯಾಯಾಲಯ'ದ ರೀತಿಯಲ್ಲಿ ತೀರ್ಪು ಸಿದ್ಧಪಡಿಸಿರುವುದು ಅನಗತ್ಯ ಎಂದು ಹೇಳಿದೆ.
“ಮಾವೋವಾದಿ ಸಾಹಿತ್ಯ ಹೊಂದಿದ್ದ ಮಾತ್ರಕ್ಕೆ, ಸರ್ಕಾರ ವಿರೋಧಿ ಪ್ರತಿಭಟನೆ ಅಥವಾ ಪ್ರಬಲವಾದ ರಾಜಕೀಯ ನಂಬಿಕೆಗಳನ್ನು ಹೊಂದಿದ್ದ ಮಾತ್ರಕ್ಕೆ ವ್ಯಕ್ತಿಯು ಭಯೋತ್ಪಾದನಾ ಚಟುವಟಿಕೆಗಳಲ್ಲಿ ತೊಡಗಿದ್ದಾರೆ ಎಂದು ಅರ್ಥವಲ್ಲ,” ಎಂದು ಎನ್‌ಐಎ ವಿಶೇಷ ನ್ಯಾಯಾಧೀಶ ಅನಿಲ್ ಕೆ ಭಾಸ್ಕರ್ ತಮ್ಮ 64 ಪುಟಗಳ ತೀರ್ಪಿನಲ್ಲಿ ವಿವರಿಸಿದ್ದರು. ಪ್ರಶ್ನಾರ್ಹವಾದ ಆದೇಶವನ್ನು ದಾಖಲೆ ನ್ಯಾಯಾಲಯದ ರೀತಿಯಲ್ಲಿ ಸಿದ್ಧಪಡಿಸಿರುವುದು ಅನವಶ್ಯಕ ಎಂದು ನ್ಯಾಯಾಲಯ ಹೇಳಿದೆ. ಅಲ್ಲದೆ, ತಮ್ಮ ತೀರ್ಪಿನಲ್ಲಿ ಹಿಂದಿನ ತೀರ್ಪುಗಳನ್ನು ಬರೆದಿರುವ ಗೌರವಾನ್ವಿತ ನ್ಯಾಯಮೂರ್ತಿಗಳ ಹೆಸರುಗಳನ್ನು ಉಲ್ಲೇಖಿಸಿರುವ ಬಗ್ಗೆಯೂ ಪೀಠವು ಅಸಮಾಧಾನ ವ್ಯಕ್ತಪಡಿಸಿದೆ.
ಮುಖ್ಯ ನ್ಯಾಯಮೂರ್ತಿಯು ಕೇವಲ ಸಮಾನರಲ್ಲಿ ಮೊದಲಿಗರು ಎಂದು ಮದ್ರಾಸ್ ಹೈಕೋರ್ಟ್‌ಗೆ ಪದೋನ್ನತಿ ಪಡೆದು ಮುಖ್ಯ ನ್ಯಾಯಮೂರ್ತಿಯಾಗಿರುವ ಸಂಜೀಬ್ ಬ್ಯಾನರ್ಜಿ ಹೇಳಿದರು. ರಾಜಭವನದಲ್ಲಿ ಪ್ರಮಾಣ ಸ್ವೀಕರಿಸಿದ ಬಳಿಕ ಸಿಜೆ ಬ್ಯಾನರ್ಜಿ ಅವರಿಗೆ ಮದ್ರಾಸ್ ಹೈಕೋರ್ಟ್‌ನಲ್ಲಿ ಸ್ವಾಗತ ಸಮಾರಂಭ ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ವಕೀಲರ ಪರಿಷತ್ತಿನ ಪ್ರಮುಖರು ಮಾತನಾಡಿದರು. ಈ ಸಂದರ್ಭದಲ್ಲಿ “ಮುಖ್ಯ ನ್ಯಾಯಮೂರ್ತಿ ಮೊದಲಿಗೆ ಕೇವಲ ನ್ಯಾಯಮೂರ್ತಿ, ಆಮೇಲೆ ಮುಖ್ಯ. ನನ್ನನ್ನು ಕಡಿಮೆ ಆಲಿಸಬೇಕು, ಹೆಚ್ಚು ಓದಬೇಕು ಎಂದು ಬಯಸುತ್ತೇನೆ. ಆ ಮೂಲಕ ನಾನು ಮಧ್ಯಪ್ರವೇಶಿಸದೆ ಹೆಚ್ಚು ಪರಿಣಾಮಕಾರಿಯಾಗಿರಬಯಸುತ್ತೇನೆ," ಎಂದು ಅವರು ನುಡಿದರು.