ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು | 14-11-2020

ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು | 14-11-2020

>> ಮಾಜಿ ಶಾಸಕರ ವಿರುದ್ಧದ ಪ್ರಕರಣ ರದ್ದು >> ಕಾಶ್ಮೀರದಲ್ಲಿ ಇನ್ನೂ ಇಲ್ಲ ಅಂತರ್ಜಾಲ >> ಕುನಾಲ್‌ ವಿರುದ್ಧ ಪ್ರಕರಣ ದಾಖಲಿಸಲು ಎಂಟು ಮಂದಿಗೆ ಅನುಮತಿ >> ಜಾರಿ ನಿರ್ದೇಶನಾಲಯದ ಮುಖ್ಯಸ್ಥರಾಗಿ ಇನ್ನೂ ಒಂದು ವರ್ಷ ಮುಂದುವರೆಯಲಿರುವ ಮಿಶ್ರಾ

ಶಾಂತಿಯುತ ಅಹಿಂಸಾತ್ಮಕ ಪ್ರತಿಭಟನೆಗಳಿಗೆ ಸಂವಿಧಾನತ್ಮಕ ರಕ್ಷಣೆ ಇದೆ: ಕೇರಳ ಹೈಕೋರ್ಟ್‌

2017ರಲ್ಲಿ ಮಾನವ ಹಕ್ಕು ಪ್ರತಿಭಟನಾ ಮೆರವಣಿಗೆ ನಡೆಸಿದ್ದಕ್ಕಾಗಿ ಎರ್ನಾಕುಲಂ ಮಾಜಿ ಶಾಸಕ ಡೊಮಿನಿಕ್‌ ಪ್ರೆಸಂಟೇಷನ್‌ ಅವರ ವಿರುದ್ಧ ಹೂಡಲಾಗಿದ್ದ ಕ್ರಿಮಿನಲ್‌ ಮೊಕದ್ದಮೆಯನ್ನು ಕೇರಳ ಹೈಕೋರ್ಟ್‌ ಇತ್ತೀಚೆಗೆ ರದ್ದುಪಡಿಸಿದೆ. ಅಲ್ಲದೆ ಶಾಂತಿಯುತ ಮತ್ತು ಅಹಿಂಸಾತ್ಮಕ ಪ್ರತಿಭಟನೆಗಳಿಗೆ ಸಂವಿಧಾನದ ರಕ್ಷಣೆ ಇದೆ ಎಂದು ಅಭಿಪ್ರಾಯಪಟ್ಟಿದೆ.

Kerala High Court
Kerala High Court

ಇದೇ ವೇಳೆ ನ್ಯಾ. ಎಂ ಆರ್ ಅನಿತಾ ಅವರಿದ್ದ ಏಕಸದಸ್ಯ ಪೀಠವು ʼಕೆಲವೊಮ್ಮೆ ಸಭೆಗಳು ಆರಂಭದಲ್ಲಿ ಶಾಂತಿಯುತವಾಗಿದ್ದು ನಂತರ ಹಿಂಸಾತ್ಮಕ ಸ್ವರೂಪ ಪಡೆಯುತ್ತವೆ. ಹೀಗಾಗಿ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಸೋಗಿನಲ್ಲಿ ಎಲ್ಲಾ ಮೆರವಣಿಗೆಗಳು ಅಥವಾ ಜಾಥಾಗಳಿಗೆ ಸಾರಾಸಗಟಾಗಿ ರಕ್ಷಣೆ ನೀಡಲು ಸಾಧ್ಯವಿಲ್ಲ. ಸಂವಿಧಾನದ 19 (1) (ಎ) ಮತ್ತು 19 (1) (ಬಿ) ಅಡಿ ರಕ್ಷಣೆ ನೀಡಲು ಸಾಧ್ಯವಿಲ್ಲʼ ಎಂದು ಅಭಿಪ್ರಾಯಪಟ್ಟಿದೆ.

ಎರಡು ಜಿಲ್ಲೆ ಹೊರತುಪಡಿಸಿ ಕಾಶ್ಮೀರದಲ್ಲಿ ನ.26ರವರೆಗೆ ವೇಗದ ಮೊಬೈಲ್‌ ಅಂತರ್ಜಾಲಕ್ಕೆ ನಿರ್ಬಂಧ ಮುಂದುವರಿಕೆ

ಗಾಂದರ್‌ಬಲ್‌ ಮತ್ತು ಉಧಾಂಪುರ್ ಜಿಲ್ಲೆಗಳನ್ನು ಹೊರತುಪಡಿಸಿ ಜಮ್ಮು ಮತ್ತು ಕಾಶ್ಮೀರದಲ್ಲಿ ನವೆಂಬರ್ 26ರವರೆಗೆ ಕೇವಲ 2ಜಿ ಮೊಬೈಲ್‌ ಸೇವೆ ಮುಂದುವರೆಯಲಿದೆ. ಜಿಲ್ಲಾ ಅಭಿವೃದ್ಧಿ ಮಂಡಳಿ ಕ್ಷೇತ್ರಗಳು, ಪಂಚಾಯತ್‌ ರಾಜ್‌ ಸಂಸ್ಥೆಗಳು ಹಾಗೂ ನಗರ ಸ್ಥಳೀಯ ಸಂಸ್ಥೆ ಚುನಾವಣೆಗಳಿಗೆ ಪ್ರತ್ಯೇಕತಾವಾದಿಗಳು ಅಥವಾ ಉಗ್ರಗಾಮಿಗಳು ಧಕ್ಕೆ ತರಬಹುದು ಎಂಬ ಹಿನ್ನೆಲೆಯಲ್ಲಿ 3ಜಿ ಮತ್ತು 4ಜಿ ಸೇವೆಗೆ ವಿಧಿಸಲಾಗಿರುವ ನಿರ್ಬಂಧವನ್ನು ಸರ್ಕಾರ 2020ರ ನವೆಂಬರ್ 26ರವರೆಗೆ ವಿಸ್ತರಿಸಿದೆ.

J & K Sim Cards
J & K Sim Cards

ದೇಶದ ಸಾರ್ವಭೌಮತೆ ಹಾಗೂ ಭದ್ರತೆಯ ದೃಷ್ಟಿಯಿಂದ ಮತ್ತು ನಾಡಿನ ಕಾನೂನು ಸುವ್ಯವಸ್ಥೆ ಕಾಪಾಡಲು ಈ ಕ್ರಮ ಅಗತ್ಯ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಹೊರಡಿಸಿರುವ ಆದೇಶ ತಿಳಿಸಿದೆ. ಸಂವಿಧಾನದ 370ನೇ ವಿಧಿ ರದ್ದುಪಡಿಸಿದ ನಂತರ ಅಲ್ಲಿ ವೇಗದ ಅಂತರ್ಜಾಲ ಸಂಪರ್ಕ ಕಡಿತಗೊಂಡಿದೆ.

ಕುನಾಲ್‌ ಕಮ್ರಾ ವಿರುದ್ಧ ನ್ಯಾಯಾಂಗ ನಿಂದನೆ ದಾಖಲಿಸಲು ಎಂಟು ಮಂದಿಗೆ ಒಪ್ಪಿಗೆ

ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ಅಟಾರ್ನಿ ಜನರಲ್‌ ಕೆ ಕೆ ವೇಣುಗೋಪಾಲ್‌ ಅವರು ಅನುಮತಿ ನೀಡುತ್ತಿದ್ದಂತೆ ಹಾಸ್ಯ ಕಲಾವಿದ ಕುನಾಲ್‌ ಕಮ್ರಾ ವಿರುದ್ಧ ಪ್ರಕರಣ ದಾಖಲಿಸಲು ಒಟ್ಟು ಹತ್ತು ಅರ್ಜಿಗಳನ್ನು ಸಲ್ಲಿಸಲಾಗಿತ್ತು. ಅವುಗಳಲ್ಲಿ ಎಂಟು ಅರ್ಜಿಗಳಿಗೆ ಎ.ಜಿ. ಅವರು ಸಮ್ಮತಿ ನೀಡಿದ್ದಾರೆ.

Kunal Kamra
Kunal Kamra

ಕುನಾಲ್‌ ಅವರ ನಾಲ್ಕು ಟ್ವೀಟ್‌ಗಳನ್ನು ಆಧರಿಸಿ ಪ್ರಕರಣ ದಾಖಲಿಸಲು ವಿದ್ಯಾರ್ಥಿಗಳು, ವಕೀಲರು ಸೇರಿದಂತೆ ಒಟ್ಟು ಎಂಟು ಮಂದಿಗೆ ಅನುಮತಿ ದೊರೆತಿದೆ. ಅವರ ಪಟ್ಟಿ ಹೀಗಿದೆ: ಶ್ರೀರಂಗ ಕತ್ನೇಶ್ವರ್ಕರ್, ನಿತಿಕಾ ದುಹಾನ್, ಸ್ಕಂದ ಬಾಜಪೇಯಿ, ಅನ್ಹ್ಯೂದಯ ಮಿಶ್ರಾ, ಅಮೆ ಅಭಯ್ ಸಿರ್ಸೀಕರ್‌, ಅಭಿಷೇಕ್ ಶರದ್ ರಸ್ಕರ್, ಸತ್ಯೇಂದ್ರ ವಿನಾಯಕ ಮುಳೆ ಅವರ ಅರ್ಜಿಗಳಿಗೆ ಅನುಮತಿ ದೊರೆತಿದೆ.

ಜಾರಿ ನಿರ್ದೇಶನಾಲಯದ ಮುಖ್ಯಸ್ಥರಾಗಿ ಇನ್ನೂ ಒಂದು ವರ್ಷ ಮುಂದುವರೆಯಲಿರುವ ಸಂಜಯ್ ಮಿಶ್ರಾ

ಜಾರಿ ನಿರ್ದೇಶನಾಲಯದ ಹಾಲಿ ಮುಖ್ಯಸ್ಥ ಸಂಜಯ್‌ ಕುಮಾರ್‌ ಮಿಶ್ರಾ ಅವರು ಇನ್ನೂ ಒಂದು ವರ್ಷಗಳ ಕಾಲ ಹುದ್ದೆಯಲ್ಲಿ ಮುಂದುವರೆಯುವಂತೆ ರಾಷ್ಟ್ರಪತಿ ರಮಾನಾಥ ಕೋವಿಂದ್‌ ಆದೇಶ ಹೊರಡಿಸಿದ್ದಾರೆ. ಈ ಕುರಿತಂತೆ ಕೇಂದ್ರ ಹಣಕಾಸು ಸಚಿವಾಲಯದ ಕಂದಾಯ ಇಲಾಖೆಯ ಅಧಿಕೃತ ಪ್ರಕಟಣೆ ತಿಳಿಸಿದೆ.

Directorate of Enforcement
Directorate of Enforcement

ಹಿಂದೆ ನೀಡಲಾಗಿದ್ದ ಎರಡು ವರ್ಷಗಳ ಕಾಲದ ಸೇವಾವಧಿ ವಿಸ್ತರಣೆಯ ಆದೇಶವನ್ನು ಮಾರ್ಪಡಿಸಿ ಮೂರು ವರ್ಷಗಳ ಕಾಲ ಮಿಶ್ರಾ ಅವರನ್ನು ಮುಂದುವರೆಸಲು ಆದೇಶ ಹೊರಡಿಸಲಾಗಿದೆ. ದೇಶದ ಅತಿ ಮಹತ್ವದ ಹಣಕಾಸು ಗುಪ್ತಚರ ಸಂಸ್ಥೆಯಾದ ಜಾರಿ ನಿರ್ದೇಶನಾಲಯದ ಮುಖ್ಯಸ್ಥರ ಹುದ್ದೆಗೆ ಮಿಶ್ರಾ ಅವರನ್ನು 2018ರಲ್ಲಿ ನೇಮಿಸಲಾಗಿತ್ತು.

Related Stories

No stories found.
Kannada Bar & Bench
kannada.barandbench.com