ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು | 28-10-2020

>> ಕೇಜ್ರಿವಾಲ್‌ ಖುಲಾಸೆ >>ʼಸುಪ್ರೀಂʼ ಮೊರೆ ಹೋದ ಉತ್ತರಾಖಂಡ ಸಿಎಂ >>ವಿದ್ಯಾರ್ಥಿನಿ ಜಾಮೀನು, ಹಸ್ತಕ್ಷೇಪಕ್ಕೆ ಸುಪ್ರೀಂ ನಕಾರ‌ >>ಕೇರಳ ಐಎಎಸ್‌ ಅಧಿಕಾರಿ ಜಾಮೀನು ಅರ್ಜಿ ತಿರಸ್ಕೃತ ‌ >> ಸೆಂಟ್ರಲ್‌ ವಿಸ್ತಾ ಆಕ್ಷೇಪಣಾ ಅರ್ಜಿ ವಿಚಾರಣೆ
ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು | 28-10-2020

ಮಾನಹಾನಿ ಪ್ರಕರಣ: ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಖುಲಾಸೆ

ಬಿಜೆಪಿ ನಾಯಕ ರಮೇಶ್‌ ಬಿಧುರಿ ಹೂಡಿದ್ದ ಮಾನಹಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರನ್ನು ಖುಲಾಸೆಗಳೊಳಿಸಿ ದೆಹಲಿಯ ನ್ಯಾಯಾಲಯ ಆದೇಶ ನೀಡಿದೆ.

Arvind Kejriwal
Arvind Kejriwal

ಸುದ್ದಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದ ಹಿನ್ನೆಲೆಯಲ್ಲಿ ಕೇಜ್ರಿವಾಲ್‌ ಅವರ ವಿರುದ್ಧ ಬಿಧುರಿ 2016 ರಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದರು. ರೌಸ್ ಅವೆನ್ಯೂ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ವಿಶಾಲ್ ಪಹುಜಾ ಅವರ ನೇತೃತ್ವದ ವಿಶೇಷ ಸಂಸದ / ಶಾಸಕ ನ್ಯಾಯಾಲಯ ಈ ಆದೇಶ ನೀಡಿದೆ.

ದೇವಾಂಗನಾ ಕಲಿತಾ ಜಾಮೀನು ಪ್ರಕರಣದಲ್ಲಿ ಹಸ್ತಕ್ಷೇಪ ಮಾಡಲು ನಿರಾಕರಿಸಿದ ಸುಪ್ರೀಂಕೋರ್ಟ್‌

ಪೌರತ್ವ ವಿರೋಧಿ ತಿದ್ದುಪಡಿ ಕಾಯ್ದೆ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಪಿಂಜ್ರಾತೋಡ್‌ ಕಾರ್ಯಕರ್ತೆ ಹಾಗೂ ಜೆಎನ್‌ಯು ವಿದ್ಯಾರ್ಥಿನಿ ದೇವಾಂಗನಾ ಕಲಿತಾ ಹೇಗೆ ತಾನೇ ಸಾಕ್ಷ್ಯ ಹಾಳು ಮಾಡಬಹುದು ಎಂದು ಪ್ರಶ್ನಿಸಿರುವ ಸುಪ್ರೀಂಕೋರ್ಟ್‌ ಆಕೆಗೆ ದೆಹಲಿ ಹೈಕೋರ್ಟ್‌ ನೀಡಿದ್ದ ಜಾಮೀನಿಗೆ ಸಂಬಂಧಿಸಿದಂತೆ ಯಾವುದೇ ಹಸ್ತಕ್ಷೇಪ ಮಾಡುವುದಿಲ್ಲ ಎಂದು ತಿಳಿಸಿದೆ.

Devangana Kalita, Supreme Court
Devangana Kalita, Supreme Court

ಸರ್ಕಾರದ ಪರವಾಗಿ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಎಸ್‌ ವಿ ರಾಜು ಅವರು ʼಆಕೆ ಪ್ರಭಾವಿ ವ್ಯಕ್ತಿಯಾಗಿದ್ದು, ಸಾಕ್ಷ್ಯಗಳನ್ನು ನಾಶಪಡಿಸಬಹುದುʼ ಎಂದು ವಾದಿಸಿದರು. ಆಗ ನ್ಯಾಯಮೂರ್ತಿಗಳಾದ ಅಶೋಕ್‌ ಭೂಷಣ್‌, ಆರ್‌ ಸುಭಾಷ್‌ ರೆಡ್ಡಿ ಹಾಗೂ ಎಂ ಆರ್‌ ಶಾ ಅವರಿದ್ದ ಪೀಠ ʼಆಕೆ ಹೇಗೆ ಸಾಕ್ಷ್ಯ ಹಾಳು ಮಾಡಬಹುದು?ʼ ಎಂದು ಪ್ರಶ್ನಿಸಿತು. ದೇವಾಂಗನಾ ದೆಹಲಿ ಸಿಎಎ ಪ್ರತಿಭಟನೆ ವೇಳೆ ನಡೆದ ಹಿಂಸಾಚಾರದಲ್ಲಿ ಭಾಗವಹಿಸಿದ್ದಕ್ಕೆ ಸಾಕ್ಷ್ಯಗಳಿಲ್ಲ ಎಂದು ಆಕೆಯ ಪರ ವಕೀಲರು ವಾದಿಸಿದರು.

ಭ್ರಷ್ಟಾಚಾರ ಪ್ರಕರಣ: ಹೈಕೋರ್ಟ್‌ ಆದೇಶವನ್ನು ಸುಪ್ರೀಂನಲ್ಲಿ ಪ್ರಶ್ನಿಸಿದ ಉತ್ತರಾಖಂಡ ಮುಖ್ಯಮಂತ್ರಿ ಟಿ ಎಸ್‌ ರಾವತ್‌

ತಮ್ಮ ವಿರುದ್ಧ ಸಿಬಿಐ ತನಿಖೆ ನಡೆಸುವಂತೆ ಉತ್ತರಾಖಂಡ ಹೈಕೋರ್ಟ್‌ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಉತ್ತರಾಖಂಡ ರಾಜ್ಯದ ಮುಖ್ಯಮಂತ್ರಿ ಟಿ ಎಸ್‌ ರಾವತ್‌ ಸುಪ್ರೀಂಕೋರ್ಟ್‌ ಮೊರೆ ಹೋಗಿದ್ದಾರೆ.

Uttarakhand Chief Minister, TS Rawat
Uttarakhand Chief Minister, TS Rawat

ರಾವತ್ ವಿರುದ್ಧದ ಭ್ರಷ್ಟಾಚಾರ ಆರೋಪಗಳ ತನಿಖೆ ನಡೆಸುವಂತೆ ಕೇಂದ್ರ ತನಿಖಾ ದಳಕ್ಕೆ (ಸಿಬಿಐ) ಹೈಕೋರ್ಟ್ ಮಂಗಳವಾರ ಸೂಚಿಸಿತ್ತು. ಇದೇ ವೇಳೆ ಆರೋಪಗಳಿದ್ದ ವೀಡಿಯೊ ಪ್ರಸಾರ ಮಾಡಿದ್ದಕ್ಕಾಗಿ ಪತ್ರಕರ್ತರಾದ ಉಮೇಶ್‌‌ ಶರ್ಮಾ ಹಾಗೂ ಶಿವಪ್ರಸಾದ್‌ ಸೆಂವಾಲ್‌ ಅವರ ವಿರುದ್ಧ ಹೂಡಲಾಗಿದ್ದ ಎಫ್‌ಐಆರ್ ರದ್ದುಗೊಳಿಸಲು ನ್ಯಾಯಾಲಯ ಸಮ್ಮತಿ ಸೂಚಿಸಿತ್ತು.

ಚಿನ್ನ ಕಳ್ಳಸಾಗಣೆ ಪ್ರಕರಣ: ಐಎಎಸ್‌ ಅಧಿಕಾರಿಯ ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕರಿಸಿದ ಕೇರಳ ಹೈಕೋರ್ಟ್‌

ಚಿನ್ನ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಅವರ ಮಾಜಿ ಮುಖ್ಯ ಕಾರ್ಯದರ್ಶಿ ಐಎಎಸ್‌ ಅಧಿಕಾರಿಯಾಗಿದ್ದ ಎಂ ಶಿವಶಂಕರ್‌ ಅವರ ಎರಡು ನಿರೀಕ್ಷಣಾ ಜಾಮೀನು ಅರ್ಜಿಗಳನ್ನು ಕೇರಳ ಹೈಕೋರ್ಟ್‌ ಬುಧವಾರ ತಿರಸ್ಕರಿಸಿದೆ. ಅಲ್ಲದೆ, ಆರೋಪಿ ಸ್ವಪ್ನಾ ಸುರೇಶ್‌ ಅವರ ಚಿನ್ನ ಕಳ್ಳಸಾಗಣೆ ಚಟುವಟಿಕೆಗಳ ಬಗ್ಗೆ ಶಿವಶಂಕರ್‌ ಅವರಿಗೆ ತಿಳಿದಿರುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟಿದೆ.

M Sivakumar, Kerala High Court
M Sivakumar, Kerala High Court

ಶಿವಶಂಕರ್‌ ಪರ ವಕೀಲರು ಹಾಗೂ ಸುಂಕ ಇಲಾಖೆ, ಜಾರಿ ನಿರ್ದೇಶನಾಲಯದ ಪರ ವಕೀಲರ ವಾದ- ಪ್ರತಿವಾದಗಳಿಗೆ ನ್ಯಾಯಾಲಯ ಸಾಕ್ಷಿ ಆಯಿತು. ಚಿನ್ನ ಕಳ್ಳಸಾಗಣೆ ಆರೋಪಿ ಸ್ವಪ್ನಾ ಸುರೇಶ್‌ ಅವರ ಜೊತೆ ಸಂಪರ್ಕ ಹೊಂದಿದ್ದರು ಎಂಬ ಕಾರಣಕ್ಕೆ ಶಿವಶಂಕರ್‌ ವಿವಾದದ ಕೇಂದ್ರಬಿಂದುವಾಗಿದ್ದಾರೆ.

ನೂತನ ಸಂಸತ್‌ ಭವನ ನಿರ್ಮಿಸುವ ಕೇಂದ್ರ ಸರ್ಕಾರದ ಸೆಂಟ್ರಲ್‌ ವಿಸ್ತಾ ಯೋಜನೆ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಆಕ್ಷೇಪಣಾ ಅರ್ಜಿ ವಿಚಾರಣೆ

ದೆಹಲಿಯಲ್ಲಿ ನೂತನ ಸಂಸತ್‌ ಭವನವನ್ನು ನಿರ್ಮಿಸುವ ಕೇಂದ್ರ ಸರ್ಕಾರದ ಸೆಂಟ್ರಲ್‌ ವಿಸ್ತಾ ಯೋಜನೆಯ ಬಗೆಗೆ ಸಲ್ಲಿಸಲಾಗಿರುವ ಆಕ್ಷೇಪಣಾ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಇಂದು ಆಲಿಸಿತು. ನ್ಯಾ. ಎ ಎಂ ಖಾನ್ವಿಲ್ಕರ್‌ ನೇತೃತ್ವದ ಪೀಠವು ಪ್ರಕರಣದ ವಿಚಾರಣೆ ನಡೆಸಿತು.

Central Vista
Central Vista

ಸರ್ಕಾರಗಳು ಬದಲಾಗುತ್ತಿರುತ್ತವೆ, ಹೀಗಿರುವಾಗ ಸಂಸದೀಯ ಪಾರಂಪರಿಕ ಕೆಲಸಕ್ಕೆ ಕೈಹಾಕುವಾಗ ಪ್ರಜಾಸತ್ತಾತ್ಮಕ ನೀತಿನಿಯಮಾನುಸಾರ ಮುನ್ನಡೆಯಬೇಕಾಗುತ್ತದೆ. ಸೆಂಟ್ರಲ್‌ ವಿಸ್ತಾದಂತಹ ಭಾರತದ ಪ್ರಜಾಪ್ರಭುತ್ವವನ್ನು ಬಿಂಬಿಸುವ ಸಂಸದೀಯ ಭವನದ ನಿರ್ಮಾಣದ ವೇಳೆ ನ್ಯಾಯಾಂಗದ ಸೂಕ್ಷ್ಮ ಪರಿಶೀಲನೆ ಅಗತ್ಯ ಎಂದು ಅರ್ಜಿದಾರರ ಪರ ಹಿರಿಯ ವಕೀಲ ಶ್ಯಾಮ್‌ ದಿವಾನ್‌ ವಾದಿಸಿದರು.

ಅರ್ಜಿ ವಿಚಾರಣೆ ನಾಳೆಯೂ ಮುಂದುವರೆಯಲಿದೆ.

Related Stories

No stories found.