28 ವರ್ಷಗಳ ಹಿಂದಿನ ಕೇರಳ ಕ್ರೈಸ್ತ ಸನ್ಯಾಸಿನಿ ಅಭಯಾ ಕೊಲೆ ಪ್ರಕರಣದಲ್ಲಿ ಪಾದ್ರಿ ಥಾಮಸ್ ಕೊಟ್ಟೂರು ಮತ್ತು ಸನ್ಯಾಸಿನಿ ಸಿಸ್ಟರ್ ಸೆಫಿ ತಪ್ಪಿತಸ್ಥರು ಎಂದು ಸಿಬಿಐ ವಿಶೇಷ ನ್ಯಾಯಾಲಯ ಘೋಷಿಸಿದೆ. ಸಿಬಿಐ ನ್ಯಾಯಾಧೀಶ ತಿರುವನಂತಪುರಂ ಕೆ ಸನೀಲ್ ಕುಮಾರ್ ಮಂಗಳವಾರ ತೀರ್ಪು ಪ್ರಕಟಿಸಿದ್ದು ಶಿಕ್ಷೆಯ ಪ್ರಮಾಣ ಬುಧವಾರ ಹೊರಬೀಳಲಿದೆ. 28 ವರ್ಷಗಳ ಸುದೀರ್ಘ ಅವಧಿಯ ಬಳಿಕ ಕಡೆಗೂ ಆರೋಪಿಗಳನ್ನು ತಪ್ಪಿತಸ್ಥರು ಎಂದು ಘೋಷಿಸಲಾಗಿದೆ. 1992ರ ಮಾರ್ಚ್ 27ರಂದು ಅಭಯಾ ಶವ ಕಾನ್ವೆಂಟ್‌ನ ಬಾವಿಯೊಂದರಲ್ಲಿ ಪತ್ತೆಯಾಗಿತ್ತು. ನ್ಯಾಯಾಲಯದ ವಿಚಾರಣೆಗೂ ಮೊದಲು ಪ್ರಕರಣ ಹಲವು ತಿರುವುಗಳನ್ನು ಪಡೆದುಕೊಂಡಿತ್ತು. 1993ರಲ್ಲಿ ಇದೊಂದು ಆತ್ಮಹತ್ಯೆ ಪ್ರಕರಣ ಎಂದು ತೀರ್ಮಾನಿಸಿದ್ದ ರಾಜ್ಯ ಪೊಲೀಸರು ಪ್ರಕರಣ ಮುಚ್ಚಿ ಹಾಕಿದ್ದರು. ಜೋಮನ್ ಪುಥೆನ್‌ಪುರಕ್ಕಳ್ ಎಂಬ ಸಾಮಾಜಿಕ ಕಾರ್ಯಕರ್ತರು ಪ್ರಕರಣದ ಸಂಬಂಧ ನ್ಯಾಯಾಲಯದ ಮೆಟ್ಟಿಲೇರಿದ ಬಳಿಕ ಪ್ರಕರಣವನ್ನು ಸಿಬಿಐಗೆ ವಹಿಸಲಾಗಿತ್ತು.
1996ರಲ್ಲಿ ಸಿಬಿಐ ಇದೊಂದು ಆತ್ಮಹತ್ಯೆಯೇ ಹತ್ಯೆಯೇ ಎಂದು ನಿರ್ಧರಿಸಲು ಸಾಧ್ಯವಾಗುತ್ತಿಲ್ಲ ಎಂದು ವರದಿ ಸಲ್ಲಿಸಿತು. ಆದರೆ ವರದಿಯನ್ನು ಒಪ್ಪದ ನ್ಯಾಯಾಲಯ ಮರು ತನಿಖೆಗೆ ಆದೇಶಿಸಿತ್ತು. ಒಂದು ವರ್ಷದ ಬಳಿಕ ಇದೊಂದು ಹತ್ಯೆ ಎಂದು ತೀರ್ಮಾನಕ್ಕೆ ಸಿಬಿಐ ಬಂದಿತಾದರೂ ಯಾವುದೇ ಪುರಾವೆಗಳಿಲ್ಲದ ಪ್ರಕರಣ ಮುಂದುವರೆಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿತ್ತು. ಆದರೆ ನ್ಯಾಯಾಲಯ ಮತ್ತೆ ಇದನ್ನೂ ತಿರಸ್ಕರಿಸಿತು. ಸಿಬಿಐ ಮೂರನೇ ಸುತ್ತಿನ ತನಿಖೆ ಆರಂಭಿಸಿತು. ಹತ್ತು ವರ್ಷಗಳ ಬಳಿಕ (ಕೊಲೆಯಾಗಿ ಹದಿನಾರು ವರ್ಷಗಳ ಬಳಿಕ) 2008ರಲ್ಲಿ ಮೊದಲ ಬಾರಿಗೆ ಫಾದರ್ ಥಾಮಸ್ ಕೊಟ್ಟೂರ್, ಫಾದರ್ ಜೋಸ್ ಪೂತ್ರುಕಾಯಿಲ್ ಹಾಗೂ ಸಿಸ್ಟರ್ ಸೆಫಿ ಅವರನ್ನು ಬಂಧಿಸಲಾಯಿತು. ಕೇರಳ ಹೈಕೋರ್ಟ್ 2009ರಲ್ಲಿ ಆರೋಪಿಗಳಿಗೆ ಜಾಮೀನು ನೀಡಿತ್ತು. ಈ ವರ್ಷ ಹೈಕೋರ್ಟ್ ನ್ಯಾ. ವಿ ಜಿ ಅರುಣ್ ಅವರಿದ್ದ ಪೀಠ ವಿಚಾರಣೆ ಪೂರ್ಣಗೊಳ್ಳಲು ದೀರ್ಘ ವಿಳಂಬವಾಗುತ್ತಿದ್ದು, ದಿನಂಪ್ರತಿ ಆಧಾರದಲ್ಲಿ ವಿಚಾರಣೆ ನಡೆಸುವಂತೆ ನಿರ್ದೇಶಿಸಿದ್ದರು.
ಶಿಕ್ಷಣ ಮತ್ತು ಬಿಸಿಯೂಟ ಪಡೆಯಲು ಮಕ್ಕಳು ತೊಂದರೆ ಎದುರಿಸುತ್ತಿದ್ದಾರೆ ಎಂಬುದನ್ನು ಗಂಭೀರವಾಗಿ ಪರಿಗಣಿಸಿರುವ ಗುಜರಾತ್ ಹೈಕೋರ್ಟ್ ಸ್ವಯಂಪ್ರೇರಿತವಾಗಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ದಾಖಲಿಸಿಕೊಂಡಿದೆ. ಶಾಲೆಗಳಲ್ಲಿ ಮಕ್ಕಳನ್ನು ದಾಖಲಿಸಿರುವ ಕುಟುಂಬಗಳ ಅಧ್ಯಯನ ನಡೆಸಿದ ಅಹಮದಾಬಾದ್ ಐಐಎಂ ಮತ್ತು ಯುನಿಸೆಫ್ ವರದಿಯನ್ನು ಆಧರಿಸಿ ಈ ಪ್ರಕರಣ ದಾಖಲಾಗಿದೆ.
ನ್ಯಾಯಮೂರ್ತಿಗಳಾದ ಜೆ ಬಿ ಪಾರ್ಡಿವಾಲಾ ಮತ್ತು ಇಲೇಶ್ ಜೆ ವೊರಾ ಅವರಿದ್ದ ಪೀಠ “ಈ ಬಗ್ಗೆ ಸರ್ಕಾರ ಕೂಡಲೇ ಗಮನ ಹರಿಸಬೇಕು. ಇಂತಹ ಸನ್ನಿವೇಶದಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ಮೇಲಿನದನ್ನು ಅರಿತುಕೊಳ್ಳಲು ನಾವು ಯೋಗ್ಯರು ಎಂದು ಭಾವಿಸುತ್ತೇವೆ” ಎಂದು ಹೇಳಿದೆ. ವರದಿಯ ಪ್ರಕಾರ ಶೇ 85ರಷ್ಟು ಪೋಷಕರು ತಮ್ಮ ಮಕ್ಕಳಿಗೆ ಬಿಸಿಯೂಟ ದೊರೆಯಿತ್ತಿಲ್ಲ ಎಂದು ಹೇಳಿದ್ದಾರೆ. 2020ರ ಮಾರ್ಚ್‌ನಿಂದ ಶೇ 30ರಷ್ಟು ಮಕ್ಕಳು ಯಾವುದೇ ಔಪಚಾರಿಕ ಕಲಿಕೆಯಲ್ಲಿ ತೊಡಗಲು ಸಾಧ್ಯವಾಗಿಲ್ಲ. ಲಾಕ್‌ಡೌನ್ ಅವಧಿಯಲ್ಲೂ ಶಾಲಾ ಶುಲ್ಕ ಕಟ್ಟುವಂತೆ ಶೇ 54 ರಷ್ಟು ಪೋಷಕರಿಗೆ ಹೇಳಲಾಗಿದೆ. ಕೆಲವು ಪೋಷಕರು ತಮ್ಮ ಮಕ್ಕಳನ್ನು ಬೇರೆ ಶಾಲೆಗಳಿಗೆ ವರ್ಗಾಯಿಸಲು ಅಥವಾ ಶಾಲೆ ಬಿಡಿಸಲು ಮುಂದಾಗಿದ್ದಾರೆ. ಶೇ 54ರಷ್ಟು ಕುಟುಂಬಗಳಲ್ಲಿ ಮಾತ್ರ ಕೇಬಲ್/ ಡಿಟಿಎಚ್ ವ್ಯವಸ್ಥೆ ಇರುವ ಟಿವಿಗಳಿವೆ. ಶೇ 2ಕ್ಕಿಂತ ಕಡಿಮೆ ಜನರು ಲ್ಯಾಪ್‌ಟಾಪ್ ಮತ್ತು ವೈ-ಫೈ ಸಂಪರ್ಕವನ್ನು ಹೊಂದಿದ್ದಾರೆ. ಶೇಕಡಾ 12 ಕ್ಕಿಂತ ಕಡಿಮೆ ಕುಟುಂಬಗಳಿಗೆ ಅಂತರ್ಜಾಲ ಬಳಸುವುದು ಗೊತ್ತು ಎಂದು ಅಧ್ಯಯನದಲ್ಲಿ ತಿಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪರಿಸ್ಥಿತಿ ಗಂಭೀರವಾಗಿದೆ ಎಂದು ವಿವರಿಸಿದ ಗುಜರಾತ್ ಹೈಕೋರ್ಟ್ ಶಿಕ್ಷಣ ಇಲಾಖೆ, ಮಧ್ಯಾಹ್ನದ ಬಿಸಿಯೂಟ ಯೋಜನೆಗಳ ಆಯುಕ್ತರಿಗೆ ನೋಟಿಸ್ ನೀಡಲು ನಿರ್ದೇಶಿಸಿದೆ.
ಕಾನೂನು ವೃತ್ತಿಯಲ್ಲಿ ಇರುವ ವಿಕಲಚೇತನ ವಕೀಲರು, ದಾವೆದಾರರಿಗೆ ಇತರರಿಗೆ ಸಮಾನವಾಗಿ ಒಟ್ಟಾಗಿ ಕೆಲಸ ಮಾಡುವ ವಾತಾವರಣ ಕಲ್ಪಿಸುವ ಸಂಬಂಧ ಡಿಜಿಟಲ್ ವ್ಯವಸ್ಥೆ ಸೇರಿದಂತೆ ಎಲ್ಲ ರೀತಿಯ ಮೂಲಸೌಲಭ್ಯ ಕಲ್ಪಿಸುವ ಸಂಬಂಧ ಇ-ಸಮಿತಿಯ ಮುಖ್ಯಸ್ಥರಾದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಅವರು ಎಲ್ಲಾ ಹೈಕೋರ್ಟ್‌ಗಳ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆದಿದ್ದಾರೆ.
ಸಂವಿಧಾನದ 14ನೇ ವಿಧಿಯ ಅನ್ವಯ ವಿಕಲಚೇತನ ವಕೀಲರು ಮತ್ತು ದಾವೆದಾರರಿಗೆ ಸಮಾನತೆಯ ಹಕ್ಕು ದೊರೆತಿದ್ದು, ಸಂವಿಧಾನದ 19 (1) (ಜಿ)ನೇ ವಿಧಿಯ ಅನ್ವಯ ಇಚ್ಛೆಯ ವೃತ್ತಿಯಲ್ಲಿ ತೊಡಗುವುದು ಇದರ ನೈಸರ್ಗಿಕ ಮುಂದುವರಿಕೆಯಾಗಿದೆ ಎಂದು ನ್ಯಾ. ಚಂದ್ರಚೂಡ್ ಹೇಳಿದ್ದಾರೆ.