ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು | 17-5-2021

>>ನಾರದ ಪ್ರಕರಣ: ಟಿಎಂಸಿ ನಾಯಕರಿಗೆ ಜಾಮೀನು >> ಉದ್ಯಮಿ ಕಲ್ರಾ ಮೂರು ದಿನಗಳ ಕಾಲ ಪೊಲೀಸ್ ವಶಕ್ಕೆ >> ದೇಶದ್ರೋಹ ಪ್ರಕರಣ ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಿದ ಆಂಧ್ರದ ಟಿವಿ ವಾಹಿನಿಗಳು >> ಐಟಿ ನಿಯಮ ಉಲ್ಲಂಘಿಸುವುದಿಲ್ಲ ಎಂದ ವಾಟ್ಸಾಪ್
ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು | 17-5-2021
Published on

ನಾರದ ಪ್ರಕರಣ: ಟಿಎಂಸಿಯ ನಾಲ್ವರು ಮುಖಂಡರಿಗೆ ಸಿಬಿಐ ನ್ಯಾಯಾಲಯದಿಂದ ಮಧ್ಯಂತರ ಜಾಮೀನು

ನಾರದ ಪ್ರಕರಣದಲ್ಲಿ ಕೇಂದ್ರೀಯ ತನಿಖಾ ದಳದಿಂದ (ಸಿಬಿಐ) ಬಂಧನಕ್ಕೊಳಗಾಗಿದ್ದ ಅಖಿಲ ಭಾರತ ತೃಣಮೂಲ ಕಾಂಗ್ರೆಸ್‌ ಪಕ್ಷದ ಮುಖಂಡರಾದ ಮದನ್‌ ಮಿತ್ರಾ, ಫಿರ್ಹಾದ್‌ ಹಕೀಮ್‌ ಅಲಿಯಾಸ್‌ ಬಾಬಿ ಹಕೀಮ್‌, ಸುಬ್ರತಾ ಮುಖರ್ಜಿ ಮತ್ತು ಸೋವನ್‌ ಚಟರ್ಜಿ ಅವರಿಗೆ ಸಿಬಿಐ ವಿಶೇಷ ನ್ಯಾಯಾಲಯ ಸೋಮವಾರ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.

Firhad Hakim, Subrata Mukherjee, Madan Mitra and Sovan Chatterjee
Firhad Hakim, Subrata Mukherjee, Madan Mitra and Sovan Chatterjee

ಫಿರ್ಹಾದ್‌ ಹಕೀಮ್‌ ಮತ್ತು ಸುಬ್ರತಾ ಮುಖರ್ಜಿ ಅವರು ಮಮತಾ ಸರ್ಕಾರದಲ್ಲಿ ಸಚಿವರಾಗಿದ್ದು, ಮದನ್‌ ಮಿತ್ರಾ ಶಾಸಕರಾಗಿದ್ದಾರೆ. ಚಟರ್ಜಿ ಕೋಲ್ಕತ್ತಾ ಮಾಜಿ ಮೇಯರ್‌ ಆಗಿದ್ದರು. ಟಿಎಂಸಿಯ ನಾಲ್ವರೂ ನಾಯಕರನ್ನು ಅವರ ನಿವಾಸದಲ್ಲಿ ಸಿಬಿಐ ಬಂಧಿಸಿತ್ತು. ತಮ್ಮ ಬೆಂಬಲಿಗರನ್ನು ಬಂಧಿಸಿದ ಸುದ್ದಿ ತಿಳಿಯುತ್ತಿದ್ದಂತೆಯೇ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕೋಲ್ಕತ್ತಾ ಸಿಬಿಐ ಕಚೇರಿಯ ಎದುರು ಬೆಂಬಲಿಗರೊಂದಿಗೆ ಧರಣಿ ನಡೆಸುವ ಮೂಲಕ ಪ್ರತಿಭಟನೆ ದಾಖಲಿಸಿದರು. ಬಂಧಿತರನ್ನು ಕಸ್ಟಡಿಗೆ ನೀಡುವಂತೆ ಸಿಬಿಐ ಕೇಳಿಲ್ಲ. ಬದಲಿಗೆ ನ್ಯಾಯಾಂಗ ಬಂಧನಕ್ಕೆ ನೀಡುವಂತೆ ಕೋರಿತ್ತು. ಆದರೆ, ಅವರನ್ನು ವಶಕ್ಕೆ ಪಡೆಯಲು ಇದು ಕಾರಣವಲ್ಲ ಎಂದು ಹೇಳಿರುವ ವಿಶೇಷ ಸಿಬಿಐ ನ್ಯಾಯಾಧೀಶ ಅನುಪಮ್ ಮುಖರ್ಜಿ ಅವರು ಜಾಮೀನು ಮಂಜೂರಾತಿ ಆದೇಶ ಹೊರಡಿಸಿದರು.

ಆಮ್ಲಜನಕ ಸಾಂದ್ರಕ ದಾಸ್ತಾನು ಪ್ರಕರಣ: ಉದ್ಯಮಿ ಕಲ್ರಾ ಮೂರು ದಿನಗಳ ಪೊಲೀಸ್‌ ವಶಕ್ಕೆ

ಆಮ್ಲಜನಕ ಸಾಂದ್ರಕ ದಾಸ್ತಾನು ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಉದ್ಯಮಿ ನವನೀತ್‌ ಕಲ್ರಾ ಅವರನ್ನು ಮೂರು ದಿನಗಳ ಕಾಲ ಪೊಲೀಸ್‌ ವಶಕ್ಕೆ ಒಪ್ಪಿಸಿ ದೆಹಲಿಯ ಜಿಲ್ಲಾ ನ್ಯಾಯಾಲಯವೊಂದು ಸೋಮವಾರ ಆದೇಶ ಹೊರಡಿಸಿದೆ.

Navneet Kalra
Navneet Kalra

ದೆಹಲಿ ಪೊಲೀಸರು ಕಲ್ರಾ ಅವರನ್ನು ಐದು ದಿನಗಳ ಕಾಲ ತಮ್ಮ ವಶಕ್ಕೆ ಒಪ್ಪಿಸುವಂತೆ ಕೋರಿದ್ದರು. ಆದರೆ ಸಾಕೇತ್‌ ಜಿಲ್ಲಾ ನ್ಯಾಯಾಲಯದ ಚೀಫ್‌ ಮೆಟ್ರೊಪಾಲಿಟನ್‌ ನ್ಯಾಯಾಧೀಶೆ ಅರ್ಚನಾ ಬೆನಿವಾಲ್‌ ಮೂರು ದಿನಗಳ ಕಾಲ ಕಲ್ರಾ ಅವರನ್ನು ಪೊಲೀಸ್‌ ಕಸ್ಟಡಿಗೆ ಒಪ್ಪಿಸಿ ಆದೇಶ ನೀಡಿದರು.
ಕಲ್ರಾ ಅವರನ್ನು ಗುರುಗ್ರಾಮದ ತಮ್ಮ ಭಾವಮೈದುನನ ತೋಟದ ಮನೆಯಿಂದ ಭಾನುವಾರ ಬಂಧಿಸಲಾಗಿತ್ತು. ಕಳೆದ ವಾರ ದೆಹಲಿ ಹೈಕೋರ್ಟ್‌ ಕಲ್ರಾ ಅವರಿಗೆ ಜಾಮೀನು ನೀಡಲು ನಿರಾಕರಿಸಿತ್ತು.

ಆಂಧ್ರ ಸರ್ಕಾರ ದಾಖಲಿಸಿರುವ ದೇಶದ್ರೋಹ ಪ್ರಕರಣ ಪ್ರಶ್ನಿಸಿ ಸುಪ್ರೀಂ ಕದ ತಟ್ಟಿದ ಟಿವಿ 5, ಎಬಿಎನ್‌ ಸುದ್ದಿ ವಾಹಿನಿಗಳು

ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷದ ಸಂಸದ ಕನಮುರಿ ರಘುರಾಮ ಕೃಷ್ಣಂ ರಾಜು ಅವರ ಭಾಷಣಗಳನ್ನು ಪ್ರಸಾರ ಮಾಡಿದ್ದಕ್ಕಾಗಿ ತಮ್ಮ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿರುವ ಆಂಧ್ರಪ್ರದೇಶ ಸರ್ಕಾರದ ಕ್ರಮವನ್ನು ಆಂಧ್ರಪ್ರದೇಶ ಮೂಲದ ಸುದ್ದಿವಾಹಿನಿಗಳಾದ ಟಿವಿ 5 ಮತ್ತು ಎಬಿಎನ್‌ ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿವೆ. ಅಡ್ವೊಕೇಟ್‌ ಆನ್‌ ರೆಕಾರ್ಡ್‌ ವಕೀಲರಾದ ವಿಪಿನ್‌ ನಾಯರ್‌ ಮತ್ತು ಗುಂಟೂರ್‌ ಪ್ರಮೋದ್‌ ಕುಮಾರ್‌ ಅವರ ಮೂಲಕ ಭಾನುವಾರ ತಡರಾತ್ರಿ ಅರ್ಜಿ ಸಲ್ಲಿಸಲಾಗಿದೆ.

ABN News, TV5 News, Supreme Court
ABN News, TV5 News, Supreme Court

ಆಡಳಿತಾರೂಢ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ತನ್ನನ್ನು ಗುರಿಯಾಗಿಸಿದ್ದು, ಪ್ರಸಾರವನ್ನು ಸ್ಥಗಿತಗೊಳಿಸಲಾಗಿತ್ತು. ಇದರಿಂದ ಟೆಲಿಕಾಂ ವ್ಯಾಜ್ಯ ಪರಿಹಾರ ಮತ್ತು ಮೇಲ್ಮನವಿ ನ್ಯಾಯಮಂಡಳಿಗೆ (ಟಿಡಿಎಸ್‌ಎಟಿ) ಮೊರೆ ಹೋಗಬೇಕಾಯಿತು. ನ್ಯಾಯಮಂಡಳಿಯ ಆದೇಶದ ಹೊರತಾಗಿಯೂ ವಾಹಿನಿಗೆ ಆಂಧ್ರಪ್ರದೇಶದಲ್ಲಿ ನಿರ್ಬಂಧ ಇದೆ ಎಂದು ಎಬಿಎನ್‌ ಆಂಧ್ರಜ್ಯೋತಿ ದೂರಿದೆ. ಇದೇ ವೇಳೆ “ರಾಜು ಅವರ ಭಾಷಣಗಳಿಗಾಗಿ ಮೊದಲೇ ಸಮಯ ನಿಗದಿಪಡಿಸಿ ಕಾರ್ಯಕ್ರಮ ಪ್ರಸಾರ ಮಾಡಿದ್ದು ತನ್ನ ಮೇಲಿರುವ ಏಕೈಕ ಆರೋಪ” ಎಂದು ಟಿವಿ 5 ಆಕ್ಷೇಪ ವ್ಯಕ್ತಪಡಿಸಿದೆ. ಆಂಧ್ರ ಮುಖ್ಯಮಂತ್ರಿ ಜಗನ್‌ಮೋಹನ್‌ರೆಡ್ಡಿ ಅವರ ಕಟು ಟೀಕಾಕಾರರಾದ ರಾಜು, ಸಿಬಿಐ ಜಗನ್‌ ಅವರಿಗೆ ನೀಡಿರುವ ಜಾಮೀನನ್ನು ಹಿಂತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದ್ದರು. ಅದಾದ ಕೆಲ ದಿನಗಳಲ್ಲೇ ರಾಜ್ಯ ಸರ್ಕಾರ ಕೆಲ ಸಮುದಾಯಗಳ ವಿರುದ್ಧ ದ್ವೇಷ ಭಾಷಣ ಮಾಡಿದ್ದಾರೆ ಮತ್ತಿತರ ಆರೋಪಗಳಡಿ ಅವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿ ಬಂಧಿಸಿತ್ತು.

ಹೊಸ ಗೌಪ್ಯತಾ ನೀತಿ ಮೇ 15 ರಿಂದ ಜಾರಿ; ಐಟಿ ನಿಯಮ ಉಲ್ಲಂಘಿಸುವುದಿಲ್ಲ ಎಂದು ದೆಹಲಿ ಹೈಕೋರ್ಟ್‌ಗೆ ತಿಳಿಸಿದ ವಾಟ್ಸಾಪ್‌

ತನ್ನ ನೂತನ ಗೌಪ್ಯತಾ ನೀತಿಯನ್ನು ಮುಂದೂಡುವುದಿಲ್ಲ ಎಂದು ದೆಹಲಿ ಹೈಕೋರ್ಟ್‌ಗೆ ತಿಳಿಸಿರುವ ವಾಟ್ಸಾಪ್‌ ಮೇ 15 ರಿಂದ ಅದು ಜಾರಿಗೆ ಬಂದಿದೆ ಎಂದು ವಿವರಿಸಿದೆ. ಇದೇ ವೇಳೆ ಮಾಹಿತಿ ತಂತ್ರಜ್ಞಾನ ನಿಯಮಗಳನ್ನು ಹೊಸ ಗೌಪ್ಯತಾ ನೀತಿ ಉಲ್ಲಂಘಿಸುವುದಿಲ್ಲ ಎಂದು ಕೂಡ ಅದು ಹೇಳಿದೆ.

Delhi high Court, WhatsApp
Delhi high Court, WhatsApp

ಮತ್ತೊಂದೆಡೆ ಪ್ರಕರಣದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಕೋರಿದ ಅರ್ಜಿದಾರರ ಪರ ವಕೀಲರು “ಹೊಸ ನೀತಿಗೆ ಒಪ್ಪಿಗೆ ನೀಡದ ವಾಟ್ಸಾಪ್‌ ಖಾತೆಗಳನ್ನು ಡಿಲೀಟ್‌ ಮಾಡಬಾರದು. ಖಾತೆಗಳ ದತ್ತಾಂಶವನ್ನು ಸಂರಕ್ಷಿಸಬೇಕು” ಎಂದರು. ಇದಕ್ಕೆ ವಾಟ್ಸಾಪ್‌ ಪರ ವಕೀಲರಾದ ಕಪಿಲ್‌ ಸಿಬಲ್‌ ಮತ್ತು ಅರವಿಂದ್‌ ದಾತಾರ್‌ ಅವರಿಂದ ಆಕ್ಷೇಪ ವ್ಯಕ್ತವಾಯಿತು. ಆದರೆ ನ್ಯಾಯಾಲಯ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಮಧ್ಯಂತರ ಪರಿಹಾರ ಸೂಚಿಸಲಿಲ್ಲ. ಬದಲಿಗೆ ವಿಚಾರಣೆಯನ್ನು ಜೂನ್ 3ಕ್ಕೆ ಮುಂದೂಡಿದೆ. ಕೆಲ ತಿಂಗಳುಗಳ ಹಿಂದೆ ವಾಟ್ಸಾಪ್‌ ಜಾರಿಗೆ ತರಲು ಮುಂದಾದ ಗೌಪ್ಯತಾ ನೀತಿ ವಿವಾದಕ್ಕೆ ತುತ್ತಾಗಿ ದೇಶಾದ್ಯಂತ ಸಂಚಲನ ಸೃಷ್ಟಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

Kannada Bar & Bench
kannada.barandbench.com